Lakhimpur Kheri Massacre| ಲಖೀಂಪುರ್‌ ಖೇರಿ ಹತ್ಯಾಕಾಂಡ: ಪೊಲೀಸರಿಗೆ ಛೀಮಾರಿ, ಅ.26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ

ಕೊನೆಯ ನಿಮಿಷದಲ್ಲಿ ವರದಿ ಸಲ್ಲಿಸಿದರೆ ನಾವು ಹೇಗೆ ಓದುವುದು. ಕನಿಷ್ಠ ಒಂದು ದಿನ ಮೊದಲು ಫೈಲ್ ಮಾಡಿ. ನಾವು ವರದಿ ಸಿಗುತ್ತದೆ ಎಂದು ನಿನ್ನೆ ರಾತ್ರಿ 1 ಗಂಟೆವರೆಗೆ ಕಾಯುತ್ತಿದ್ದೆವು ಎಂದು ಉತ್ತರಪ್ರದೇಶ ಪೊಲೀಸರು ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ.

ಲಖೀಂಪುರ್​ ಖೇರಿ ಹಿಂಸಾಚಾರ.

ಲಖೀಂಪುರ್​ ಖೇರಿ ಹಿಂಸಾಚಾರ.

 • Share this:
  ನವ ದೆಹಲಿ (ಅಕ್ಟೋಬರ್​ 20); ಅಕ್ಟೋಬರ್ 3 ರ ಭಾನುವಾರದಂದು ಉತ್ತರ ಪ್ರದೇಶದ ಲಖೀಂಪುರ್​ ಖೇರಿಯಲ್ಲಿ (Lakhimpur Kheri Violence) ನಡೆದ ರೈತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭಿಸಿರುವ ಸುಪ್ರೀಂಕೋರ್ಟ್ (Supreme Court) ಪೊಲೀಸರ ಕರ್ತವ್ಯ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ಹಂತದ ವಿಚಾರಣೆಯನ್ನು ಅಕ್ಟೋಬರ್​ 26ಕ್ಕೆ ಮುಂದೂಡಿದೆ. ಲಖೀಂಪುರ್​ ಖೇರಿಯಲ್ಲಿ ಪ್ರತಿಭಟನಾ ನಿರತ ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಮಗ ಆಶೀಶ್ ಮಿಶ್ರಾ (Ashis Mishra) ಕಾರು ಚಲಾಯಿಸಿದ್ದ ಕಾರಣ 4 ರೈತರು ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ನಡೆದ ಹಿಂಸಾಚಾರದಲ್ಲಿ ಓರ್ವ ಪತ್ರಕರ್ತ ಸೇರಿದಂತೆ 5 ಜನ ಮೃತಪಟ್ಟಿದ್ದರು. ಆದರೂ, ಸಹ ಪೊಲೀಸರು ಪ್ರಮುಖ ಆರೋಪಿ ಆಶೀಶ್ ಮಿಶ್ರಾ ವಿರುದ್ಧ ಎಫ್​ಐಆರ್ (FIR) ದಾಖಲಿಸಿರಲಿಲ್ಲ. ಈ ವೇಳೆ ಸ್ವತಃ ಸುಪ್ರೀಂ ಕೋರ್ಟ್​ ಮಧ್ಯಪ್ರವೇಶಿಸಿ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶ ಪೊಲೀಸರಿಗೆ ಸೂಚನೆ ನೀಡಿತ್ತು. ಅಲ್ಲದೆ, ಪ್ರಕರಣದ ವಿಚಾರಣೆಗೆ ಮುಂದಾಗಿತ್ತು.

  ಸುಪ್ರೀಂ ಕೋರ್ಟ್​ನಲ್ಲಿ ಲಖೀಂಪುರ್ ಹತ್ಯಾಕಾಂಡ:

  ಲಖೀಂಪುರ್​ ಹತ್ಯಾಕಾಂಡ ಪ್ರಕರಣದಲ್ಲಿ ಉತ್ತರಪ್ರದೇಶ ಸರ್ಕಾರ ಮತ್ತು ಪೊಲೀಸರು ಕಾರ್ಯ ವೈಖರಿ ಬಗ್ಗೆ ಇಡೀ ದೇಶ ಕಿಡಿಕಾರಿತ್ತು. ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ಅಕ್ಟೋಬರ್ 8 ರಂದು ಎಂಟು ಜನರ ಕ್ರೂರ ಹತ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಅಲ್ಲದೆ, ವಿಚಾರಣೆಯನ್ನು ಅಕ್ಟೋಬರ್​ 20ಕ್ಕೆ ಮುಂದೂಡಿತ್ತು.

  ಅದರಂತೆ ಇಂದು ವಿಚಾರಣೆ ಆರಂಭವಾಗಿದ್ದು ವಿಚಾರಣೆಯಲ್ಲಿ  ಇಲ್ಲಿಯವರೆಗೆ ಈ ಹತ್ಯಾಕಾಂಡದಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ಕೇಳಲಾಯಿತು. 164 ಸಾಕ್ಷಿಗಳಲ್ಲಿ ಇನ್ನು 44 ಮಂದಿಯನ್ನು ಮಾತ್ರ ಏಕೆ ವಿಚಾರಣೆ ನಡೆಸಿದ್ದಿರಿ?, ಹೆಚ್ಚು ಜನರನ್ನು ಇನ್ನೂ ವಿಚಾರಣೆ ನಡೆಸದಿರಲು ಕಾರಣವೇನು? ಎಂದು ಪ್ರಶ್ನಿಸಲಾಗಿದೆ.

  ಇದಕ್ಕೆ ಉತ್ತರಿಸಿರುವ ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ವಕೀಲ ಹರಿಶ್ ಸಾಲ್ವೆ, "ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಎಷ್ಟು ಜನರನ್ನು ಬಂಧಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ಇದುವರೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ" ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

  ಪೊಲೀಸರ ಕೆಲಸಕ್ಕೆ ಕೋರ್ಟ್ ಆಕ್ಷೇಪ:

  ಕೊನೆ ಕ್ಷಣದಲ್ಲಿ ಪ್ರಕರಣದ ವಿವರಗಳನ್ನು ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, "ಕೊನೆಯ ನಿಮಿಷದಲ್ಲಿ ವರದಿ ಸಲ್ಲಿಸಿದರೆ ನಾವು ಹೇಗೆ ಓದುವುದು. ಕನಿಷ್ಠ ಒಂದು ದಿನ ಮೊದಲು ಫೈಲ್ ಮಾಡಿ. ನಾವು ವರದಿ ಸಿಗುತ್ತದೆ ಎಂದು ನಿನ್ನೆ ರಾತ್ರಿ 1 ಗಂಟೆವರೆಗೆ ಕಾಯುತ್ತಿದ್ದೆವು"  ಎಂದು ಅಸಮಾಧಾನ ಹೊರಹಾಕಿದೆ. ಬಳಿಕ ಅಕ್ಟೋಬರ್ 26ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: Lakhimpur Kheri Violence: ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಲೇಟೆಸ್ಟ್ ಬೆಳವಣಿಗೆಗಳು ಇಲ್ಲಿವೆ!

  ಘಟನೆಯ ಕುರಿತು ಸಿಬಿಐ ಒಳಗೊಂಡಂತೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನು ಕೋರಿ ಇಬ್ಬರು ವಕೀಲರು ಸಿಜೆಐಗೆ ಪತ್ರ ಬರೆದ ನಂತರ ಸುಪ್ರೀಂ ಕೋರ್ಟ್ ಲಖೀಂಪುರ್​ ಖೇರಿ ಪ್ರಕರಣದ ವಿಚಾರಣೆಗೆ ಕೈಗೆತ್ತಿಕೊಂಡಿದೆ.

  ಇದನ್ನೂ ಓದಿ: Lakhimpur Kheri Violence| ಲಖೀಂಪುರ್ ಖೇರಿ ರೈತ ಹತ್ಯಾಕಾಂಡ; ಪೊಲೀಸ್ ವಿಚಾರಣೆಗೆ ಕೊನೆಗೂ ಹಾಜರಾದ ಆಶಿಶ್ ಮಿಶ್ರಾ

  ಒಕ್ಕೂಟ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ಮಾಡುತ್ತಿದ್ದ ಗುಂಪು, ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸಿ ವಾಪಾಸಾಗುತ್ತಿದ್ದಾಗ, ಲಖಿಂಪುರ್ ಖೇರಿಯಲ್ಲಿ ನಾಲ್ಕು ರೈತರ ಮೇಲೆ ಕಾರನ್ನು ಹರಿಸಲಾಗಿತ್ತು. ಈ ಹೇಯ ಘಟನೆಗೆ ರಾಷ್ಟ್ರಾದ್ಯಂತ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಪೊಲೀಸರೆ ಆರೋಪಿ ಆಶಿಶ್​ ಮಿಶ್ರಾ ರಕ್ಷಣೆಗೆ ನಿಂತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿತ್ತು.
  Published by:MAshok Kumar
  First published: