ಲಕ್ನೊ: ಉತ್ತರ ಪ್ರದೇಶದ ಲಖಿಮಪುರದಲ್ಲಿ (Uttar Pradesh’s Lakhimpur Kheri) ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ (ಪುತ್ರ (Union minister's son Abhishek) ರೈತರ ಮೇಲೆಯೇ ವಾಹನ ಚಲಾಯಿಸಿದ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನ ಐವರು ಸಾವನ್ನಪ್ಪಿದ್ದು, ಎಂಟು ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಘಟನೆಯಿಂದ ಆಕ್ರೋಶಗೊಂಡ ರೈತರು ಸಚಿವರ ಪುತ್ರನ ವಾಹನ ಸೇರಿದಂತೆ ಮೂರು ಗಾಡಿಗಳಿಗೆ ಬೆಂಕಿ ಇಟ್ಟಿದ್ದಾರೆ. ಇಬ್ಬರು ವಾಹನದಡಿ ಸಿಲುಕಿ ಮೃತರಾದ್ರೆ, ಮೂವರು ಗಾಡಿ ಪಲ್ಟಿಯಾಗಿದ್ದರಿಂದ ಸಾವನ್ನಪ್ಪಿದ್ದಾರೆ. ಸಚಿವರ ಪುತ್ರನ ಕಾರು ತಡೆಯಲು ಮುಂದಾಗಿದ್ದ ಮಹಿಳಾ ಪೊಲೀಸ್ ಪೇದೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಗಾಜಿಪುರ ಬಾರ್ಡರ್ ನಿಂದ ಲಖಿಮಪುರದತ್ತ ರೈತ ಮುಂದಾಳು ರಾಕೇಶ್ ಟಿಕಾಯತ್ ಪ್ರಯಾಣ ಬೆಳೆಸಿದ್ದಾರೆ.
ಲಖಿಮಪುರದಲ್ಲಿ ನಡೆದಿದ್ದೇನು?
ಅಜಯ್ ಮಿಶ್ರಾ (Union Minister of State (MoS) for Home Ajay Mishra) ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ (UP Deputy CM Keshav Prasad Maurya) ಕಾರ್ಯಕ್ರಮದಲ್ಲಿ ಭಾಗಿಯಾಗಲು ಲಖಿಮಪುರ ಕೇರಿ ಆಗಮಿಸುತ್ತಿದ್ರು. ಸಚಿವರು ಮತ್ತು ಡಿಸಿಎಂ ಆಗಮನದ ವಿಷಯ ತಿಳಿದ ಧರಣಿನಿರತ ರೈತರು ವಿರೋಧ ವ್ಯಕ್ತಪಡಿಸಲು ಬೆಳಗ್ಗೆ 8ಗಂಟೆಗೆ ಹೆಲಿಪ್ಯಾಡ್ ವಶಕ್ಕೆ ಪಡೆದುಕೊಂಡಿದ್ದರು. ಅಲ್ಲಿಯೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರು. ಮಧ್ಯಾಹ್ನ ಸುಮಾರು 2.30ಕ್ಕೆ ಸಚಿವರು ಮತ್ತು ಡಿಸಿಎಂ ರಸ್ತೆ ಮಾರ್ಗವಾಗಿ ಹೊರಡುತ್ತಿರುವಾಗ ರೈತರು ಕಪ್ಪು ಧ್ವಜ ಪ್ರದರ್ಶಿಸಿ ದಿಕ್ಕಾರ ಕೂಗುತ್ತಾ ರಸ್ತೆಗೆ ಅಡ್ಡಲಾಗಿ ಬಂದಿದ್ದಾರೆ. ಈ ವೇಳೆ ಅಜಯ್ ಮಿಶ್ರಾ ಪುತ್ರ ಅಭಿಷೇಕ್ ರೈತರ ಮೇಲೆಯೇ ವಾಹನ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.
ರೈತರನ್ನು ಕೆರಳಿಸಿದ್ದು ಅಜಯ್ ಮಿಶ್ರಾ ಹೇಳಿಕೆ:
ರೈತರು ಹೆಲಿಪ್ಯಾಡ್ ನಲ್ಲಿ ಜಮಾವಣೆಗೊಂಡ ಹಿನ್ನೆಲೆ ಅಜಯ್ ಮಿಶ್ರಾ ಮತ್ತು ಕೇಶವ್ ಮೌರ್ಯ ಲಖಿಮಪುರ ತಲುಪಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋ ಜನೆಗಳು ಲೋಕಾರ್ಪಣೆ ಮಾಡಿದ ಬಳಿಕ ಸಚಿವರು ರಸ್ತೆ ಮಾರ್ಗವಾಗಿಯೇ ಬನ್ವರಿ ಗ್ರಾಮದತ್ತ ಪ್ರಯಾಣ ಬೆಳೆಸಿದ್ದರು. ಸಚಿವ ಅಜಯ್ ಮಿಶ್ರಾ ಸಹ ಬನ್ವರಿ ಗ್ರಾಮದವರಾಗಿದ್ದು, ಅಲ್ಲಿ ಕೃಷಿಗೆ ಸಂಬಂಧಿಸಿದ ಯೋಜನೆಗೆಳಿಗೆ ಚಾಲನೆ ನೀಡುವವರಿದ್ದರು. ಭದ್ರತಾ ಸಿಬ್ಬಂದಿ ಸಚಿವರಿಗೆ ಗಲಾಟೆ ಉಂಟಾಗುವ ಅಲರ್ಟ್ ನೀಡಿದ್ದರು. ಆದರೂ ಸಚಿವರು ಗ್ರಾಮದತ್ತ ಪ್ರಯಾಣ ಬೆಳೆಸಿದ್ದರು. ವಾರದ ಹಿಂದೆ ಅಜಯ್ ಮಿಶ್ರಾ ನೀಡಿದ್ದ ಹೇಳಿಕೆ ರೈತರನ್ನು ಕೆರಳಿಸಿತ್ತು. ಹೀಗಾಗಿ ರೈತರು ಕಪ್ಪು ಧ್ವಜ ಪ್ರದರ್ಶಿಸಿದ್ದರು.
ಲಖಿಮಪುರದ ಘಟನೆ ಬಳಿಕ ರೈತರು ಪ್ರತಿಭಟನೆ ನಡೆಸುತ್ತಿರುವ ಎಲ್ಲ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಎಷ್ಟು ಜನರು ಮೃತರಾಗಿದ್ದರಂಬುದರ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಸಂಘರ್ಷದಲ್ಲಿ ಸಂಯುಕ್ತ ಮೋರ್ಚಾ ನಾಯಕ ತಜಿಂದರ್ ಸಿಂಗ್ ವಿರ್ಕೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Lakhimpur Kheri ಹಿಂಸಾಚಾರದಲ್ಲಿ ಐವರು ರೈತರ ಸಾವು; ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದ ರಾಹುಲ್ ಗಾಂಧಿ
ಸುಧಾರಿಸಿ, ಇಲ್ಲ ನಾವೇ ಸುಧಾರಣೆ ಮಾಡ್ತೀವಿ:
ಸೆಪ್ಟೆಂಬರ್ 26ರಂದು ಲಖಿಮಪುರದ ಸಪೂರ್ಣನಗರಕ್ಕೆ ಆಗಮಿಸಿದ್ದ ಅಜಯ್ ಮಿಶ್ರಾ ಮುಂದೆಯೇ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವರು, ತಮ್ಮ ವಿರುದ್ಧದ ಪ್ರತಿಭಟನೆ ಬಗ್ಗೆ ಮಾತನಾಡಿದ್ದರು. ಸಂಯುಕ್ತ ಕಿಸಾನ್ ಮೋರ್ಚಾಗೆ ಪ್ರಧಾನಿಗಳನ್ನು ಎದುರಿಸಲು ಆಗುತ್ತಿಲ್ಲ. ಕಪ್ಪು ಧ್ವಜ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ್ದ ಅವರು, ನಾವು ಕಾರಿನಿಂದ ಕೆಳಗೆ ಇಳಿದ್ರೆ ಅವರಿಗೆ ಓಡಿ ಹೋಗಲು ಜಾಗ ಇರುತ್ತಿರಲಿಲ್ಲ ಎಂದು ಬೆದರಿಕೆ ಹಾಕಿದ್ದರು.
ಕೃಷಿ ಕಾನೂನು ಬಗ್ಗೆ ಸುಮಾರು 10 ರಿಂದ 15 ಜನರು ಮಾತನಾಡುತ್ತಾರೆ. ಒಂದು ವೇಳೆ ಕೃಷಿ ಕಾನೂನುಗಳಲ್ಲಿ ತಪ್ಪುಗಳಿದ್ರೆ ಇಡೀ ದೇಶದ್ಯಾಂತ ಪ್ರತಿಭಟನೆಗಳು ನಡೆಯುತ್ತಿದ್ದವು. ಮುಂದೆ ದಿನಗಳಲ್ಲಿ ಸುಧಾರಣೆಯಾಗಿ, ಇಲ್ಲವಾದ್ರೆ ನಮ್ಮನ್ನು ಎದುರಿಸಿ ನಾವೇ ಎರಡು ನಿಮಿಷದಲ್ಲಿ ಸುಧಾರಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು.
- ಮಹಮ್ಮದ್ ರಫೀಕ್ ಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ