• Home
 • »
 • News
 • »
 • national-international
 • »
 • #MeToo ಅಭಿಯಾನ ಈಗ ಪತ್ರಕರ್ತೆಯರ ಸರದಿ; ಸಂಪಾದಕರು, ಕಾದಂಬರಿಕಾರನಿಂದ ಲೈಂಗಿಕ ದೌರ್ಜನ್ಯದ ಆರೋಪ

#MeToo ಅಭಿಯಾನ ಈಗ ಪತ್ರಕರ್ತೆಯರ ಸರದಿ; ಸಂಪಾದಕರು, ಕಾದಂಬರಿಕಾರನಿಂದ ಲೈಂಗಿಕ ದೌರ್ಜನ್ಯದ ಆರೋಪ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:

  - ರಮೇಶ್ ಹಂಡ್ರಂಗಿ, ನ್ಯೂಸ್ 18 ಕನ್ನಡ

  ಬೆಂಗಳೂರು (ಅ.7): ಹಾಲಿವುಡ್​ನ ಖ್ಯಾತ ನಟಿ ಎಲಿಸ್ಸಾ ಮಿಲಾನೋ ಅವರು ಕಳೆದ ವರ್ಷದ ಅಕ್ಟೋಬರ್​ನಲ್ಲಿ ಆರಂಭಿಸಿದ #MeToo ಅಭಿಯಾನ, ಜಗತ್ತಿನಾದ್ಯಂತ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ವಿರುದ್ಧ ಧೈರ್ಯವಾಗಿ ದನಿ ಎತ್ತಿದ್ದರು.

  ಭಾರತದಲ್ಲೂ ನಟಿಯರು ತಾವು ನಿರ್ದೇಶಕರು ಮತ್ತು ನಿರ್ಮಾಪಕರಿಂದ ಎದುರಿಸಿದ ಲೈಂಗಿಕ ದೌರ್ಜನ್ಯವನ್ನು ಇದೇ ಅಭಿಯಾನದಡಿ ಬಹಿರಂಗಗೊಳಿಸಿದರು. ಇದೀಗ ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ತಾವು ಎದುರಿಸಿದ ಮತ್ತು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಕೆಲ ದಿನಗಳಿಂದ ಟ್ವಿಟರ್​ನಲ್ಲಿ ನೋವು ಹಂಚಿಕೊಂಡು, ಪ್ರಮುಖ ಇಂಗ್ಲಿಷ್​ ಪತ್ರಿಕೆಗಳ ಬಹಳಷ್ಟು ಸಂಪಾದಕರು ಹಾಗೂ ಕಾದಂಬರಿಕಾರರ ಮತ್ತೊಂದು ಮುಖವನ್ನು ಅನಾವರಣ ಮಾಡುತ್ತಿದ್ದಾರೆ. ಬಾಲಿವುಡ್ ಮಾಜಿ ನಟಿ ತನುಶ್ರೀ ದತ್ತಾ ಅವರು ತಮ್ಮ ಅನುಭವವನ್ನು ಹಂಚಿಕೊಂಡಿರುವುದು ಪತ್ರಕರ್ತೆಯರ ಅಭಿಯಾನಕ್ಕೆ ಪ್ರೇರಣೆಯಾಗಿದೆ.

  ಪತ್ರಕರ್ತೆ ಸಂಧ್ಯಾ ಮೆನನ್ ಮೊದಲು ಟೈಮ್ಸ್​ ಆಫ್ ಇಂಡಿಯಾದ ಹೈದರಾಬಾದ್ ಸ್ಥಾನಿಕ ಸಂಪಾದಕರು ಅವರು ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಟ್ವಿಟರ್​ನಲ್ಲಿ​ ಹೇಳಿಕೊಂಡಿದ್ದರು. "2008ರಲ್ಲಿ ನಾವಿಬ್ಬರು ಬೇರೊಂದು ಸಂಸ್ಥೆಯಲ್ಲಿ ಜೊತೆಯಾಗಿ ಕೆಲಸ ಮಾಡುವಾಗ ಅವರು ನನ್ನ ತೊಡೆಯ ಮೇಲೆ ಕೈ ಹಾಕಿ ಅಸಭ್ಯವಾಗಿ ನಡೆದುಕೊಂಡರು. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿ, ಸ್ಥಳದಿಂದ ಹೊರಟುಹೋದೆ. ಮರುದಿನ ಆಫೀಸ್​ನಲ್ಲಿ ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ," ಎಂದು ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ತಾವು ಇತರೆ ಸಂಸ್ಥೆಗಳಲ್ಲಿ ಸಂಪಾದಕರಿಂದ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.


  ಸಂಧ್ಯಾ ಮೆನನ್​ ಅವರು ಟ್ವೀಟ್​ ಮಾಡಿದ ನಂತರ ಪತ್ರಕರ್ತೆಯರಾದ ಸೌಮ್ಯಾ ಮತ್ತು ವಾಣಿ ಸರಸ್ವತಿ ಅವರು ಅದೇ ವ್ಯಕ್ತಿಯಿಂದ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.

  ಪತ್ರಕರ್ತೆಯರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಆ ಸಂಪಾದಕರು "ನನ್ನ ಮೇಲಿನ ಆರೋಪಗಳ ಬಗ್ಗೆ ವಿಚಾರಣೆ ನಡೆಸುವುದಾಗಿ ಸಂಸ್ಥೆ ಹೇಳಿದೆ. ಇದಕ್ಕಾಗಿ ಒಂದು ಸಮಿತಿಯನ್ನೂ ರಚಿಸಿದೆ. ನಾನು ವಿಚಾರಣೆಗೆ ಸಿದ್ಧ," ಎಂದು ಟ್ವಿಟರ್​ನಲ್ಲಿ ಹೇಳಿದ್ದಾರೆ.

  ಅಷ್ಟೇ ಅಲ್ಲದೇ, ಖ್ಯಾತ ಕಾದಂಬರಿಕಾರ ಚೇತನ್​ ಭಗತ್ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಶೀನಾ ಎಂಬುವವರು ಆರೋಪಿಸಿದ್ದಾರೆ. ಚೇತನ್​ ಭಗತ್ ತಮ್ಮೊಂದಿಗೆ ಮಾಡಿರುವ ವಾಟ್ಸಾಪ್​ ಸಂದೇಶಗಳ ಸ್ಕ್ರೀನ್​ ಶಾಟ್​ಅನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ. ಶೀನಾ ಆರೋಪವನ್ನು ಒಪ್ಪಿಕೊಂಡಿರುವ ಚೇತನ್​ ಭಗತ್, "ಸಾಮಾನ್ಯ ಎಂದು ತಮಾಷೆಗೆ ಆಡಿದ ಮಾತುಗಳು ಸಂಬಂಧಿತ ವ್ಯಕ್ತಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ," ಎಂದು ತಪ್ಪೊಪ್ಪಿಕೊಂಡಿದ್ದಾರೆ.
  ಇತ್ತೀಚೆಗೆ ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ನಾನಾ ಪಾಟೇಕರ್ ಅವರು ಚಿತ್ರೀಕರಣದ ವೇಳೆ ಕಿರುಕುಳ ನೀಡಿದ್ದನು ಹೇಳಿಕೊಂಡಿದ್ದರು.

  ಹಾಲಿವುಡ್​ನ ಪ್ರಭಾವಶಾಲಿ ನಿರ್ಮಾಪಕರಾದ ಹಾರ್ವೆ ವೈನ್​ಸ್ಟಿನ್​ ಅವರಿಂದ ನಟಿಯರು ಅನಭವಿಸಿರುವ ಲೈಂಗಿಕ ಕಿರುಕುಳ, ದೌರ್ಜನ್ಯವನ್ನು ಬಹಿರಂಗಗೊಳಿಸಿದ ನಟಿ ಎಲಿಸ್ಸಾ, "ಮಹಿಳೆಯರು ತಾವು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳ ಎದುರಿಸಿದ್ದರೆ #MeToo ಎಂದು ಬರೆದು ತಮ್ಮ ನೋವನ್ನು ಹಂಚಿಕೊಳ್ಳಿ," ಎಂದು ಕಳೆದ ವರ್ಷದ ಅಕ್ಟೋಬರ್​ನಲ್ಲಿ ಟ್ವೀಟ್ ಮಾಡಿದ್ದರು. ಆ ಟ್ವೀಟ್​ಗೆ ಸ್ಪಂದಿಸಿದ ಸಾವಿರಾರು ಮಹಿಳೆಯರು ಯಾರೊಂದಿಗೂ ಹಂಚಿಕೊಳ್ಳಲಾಗದ ತಮ್ಮ ನೋವನ್ನು ಹೊರಹಾಕಿದ್ದರು. ಎಲಿಸ್ಸಾ ಅವರಿಗೆ ಜೊತೆಯಾಗಿ ಏಂಜೆಲಿನಾ ಜೋಲಿ, ಅಶ್ಲೇ ಜುಡ್, ಟೇರಿ ಕ್ರ್ಯೂಸ್, ಲೇಡಿ ಗಾಗಾ ಸೇರಿ ಹಾಲಿವುಡ್​ನ 93 ನಟಿಯರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದರು.

  ಭಾರತದಲ್ಲೂ ಮೀಟು ಅಭಿಯಾನಕ್ಕೆ ಭಾರೀ ಸ್ಪಂದನೆ ವ್ಯಕ್ತವಾಯಿತು. ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸೇರಿ ಹಲವು ನಟಿಯರು, ಚಿತ್ರರಂಗದಲ್ಲಿ ತಾವು ಪುರುಷರಿಂದ ಎದುರಿಸಿದ ಕಿರುಕುಳದ ಬಗ್ಗೆ ನೋವನ್ನು ಹೊರಹಾಕಿದ್ದರು. ಇದೇ ವರ್ಷದ ಕೆಲವು ತಿಂಗಳ ಹಿಂದೆ ಹೈದರಾಬಾದ್​ನಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕನ್ನಡದ ನಟಿ ಶ್ರುತಿ ಹರಿಹರನ್​ ಅವರು, "ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅವಕಾಶ ಕೇಳಲು ನಿರ್ಮಾಪಕರ ಬಳಿಗೆ ಹೋದಾಗ ಅವರು ನನ್ನನ್ನು ಮಂಚಕ್ಕೆ ಕರೆದಿದ್ದರು. ನನಗಾಗ 16 ವರ್ಷ. ಆನಂತರ ತಮಿಳು ಚಿತ್ರರಂಗದಲ್ಲೂ ನನಗೆ ಈ ಅನುಭವವಾಗಿತ್ತು," ಎಂದು ತಾವು ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದರು.

  #MeToo ಎಂಬ ಅಭಿಯಾನ ಮೊದಲು ಆರಂಭವಾಗಿದ್ದು ಸಾಮಾಜಿಕ ಕಾರ್ಯಕರ್ತೆ ತರಾನಅ ಬುರ್ಕೆ ಅವರಿಂದ. ಬಾಲಕಿಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ಖಂಡಿಸಿ ಬುರ್ಕೆ ಅವರು 2006ರಲ್ಲಿ ಮೊದಲ ಬಾರಿಗೆ ಈ ಹೋರಾಟ ಆರಂಭಿಸಿದ್ದರು. ಕಳೆದ ವರ್ಷ ನಟಿ ಎಲಿಸ್ಸಾ ಮಿಲಾನೋ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನಕ್ಕೆ ಹೊಸ ಶಕ್ತಿ ತುಂಬಿದ್ದರು. ಇದೀಗ ಈ ಅಭಿಯಾನ ಭಾರತದಲ್ಲೂ ಸದ್ದು ಮಾಡುತ್ತಿದ್ದು, ಮಹಿಳೆಯರು ಎದುರಿಸಿದ ಲೈಂಗಿಕ ಶೋಷಣೆ ವಿರುದ್ಧ ಪ್ರಬಲ ಅಸ್ತ್ರವಾಗಿದೆ.

  First published: