ಕುಲಭೂಷಣ್ ಜಾಧವ್​ಗೆ ಎರಡನೇ ಸಲದ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ನಿರಾಕರಿಸಿದ ಪಾಕಿಸ್ತಾನ

ಕುಲಭೂಷಣ್ ಅವರಿಂದ ಸುಳ್ಳು ಹೇಳಿಕೆ ನೀಡಿಸಲು ಪಾಕಿಸ್ತಾನ ವಿಪರೀತ ಒತ್ತಡ ಹಾಕುತ್ತಿರುವಂತಿದೆ ಎಂದು ಆರೋಪಿಸಿರುವ ಭಾರತ ಮತ್ತೊಂದು ಬಾರಿಗೆ ಅವರನ್ನು ಭೇಟಿ ಮಾಡುವ ಅವಕಾಶಕ್ಕಾಗಿ ಕೇಳಿಕೊಂಡಿತ್ತು.

Vijayasarthy SN | news18
Updated:September 12, 2019, 4:27 PM IST
ಕುಲಭೂಷಣ್ ಜಾಧವ್​ಗೆ ಎರಡನೇ ಸಲದ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ನಿರಾಕರಿಸಿದ ಪಾಕಿಸ್ತಾನ
ಕುಲಭೂಷಣ್ ಜಾಧವ್
  • News18
  • Last Updated: September 12, 2019, 4:27 PM IST
  • Share this:
ನವದೆಹಲಿ(ಸೆ. 12): ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆ ಎದುರಿಸುತ್ತಿರುವ ಕುಲಭೂಷಣ್ ಜಾಧವ್ ಅವರಿಗೆ ಮತ್ತೊಮ್ಮೆ ರಾಜತಾಂತ್ರಿಕ ಸಂಪರ್ಕಕ್ಕೆ ಪಾಕಿಸ್ತಾನ ನಿರಾಕರಿಸಿದೆ. ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್ ಫೈಸಲ್ ಅವರು ಈ ವಿಷಯವನ್ನು ತಿಳಿಸಿದ್ದಾಗಿ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಕೋರ್ಟ್​ನ ನಿರ್ದೇಶನದ ಪ್ರಕಾರ ಸೆ. 2ರಂದು ಪಾಕಿಸ್ತಾನವು ಕುಲಭೂಷಣ್ ಜಾಧವ್​ಗೆ ಭಾರತೀಯ ರಾಜತಾಂತ್ರಿಕ ಸಂಪರ್ಕಕ್ಕೆ ಒಮ್ಮೆ ಅವಕಾಶ ಮಾಡಿಕೊಟ್ಟಿತ್ತು. ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಗೌರವ್ ಅಹ್ಲೂವಾಲಿಯಾ ಅವರು ಕುಲಭೂಷಣ್ ಅವರನ್ನು ಜೈಲಿನಲ್ಲಿ ಭೇಟಿಯಾಗಿ ಒಂದು ಗಂಟೆ ಕಾಲ ಮಾತನಾಡಿದ್ದರು. ಭೇಟಿಯಾದ ಸ್ಥಳವನ್ನು ಪಾಕಿಸ್ತಾನ ಗೌಪ್ಯವಾಗಿಟ್ಟಿದೆ.

ಇದನ್ನೂ ಓದಿ: ಕುಸಿಯುತ್ತಿರುವ ಆರ್ಥಿಕತೆ ಸುಧಾರಣೆಗೆ ಅರ್ಥ ತಜ್ಞ ಡಾ.ಮನಮೋಹನ್​ ಸಿಂಗ್​ ಐದು ಸೂತ್ರಗಳು!

ಮೂರು ವರ್ಷಗಳ ಹಿಂದೆ ಬಂಧಿತರಾದಾಗಿನಿಂದ ಕುಲಭೂಷಣ್ ಅವರು ಅದೇ ಮೊದಲ ಬಾರಿಗೆ ಭಾರತದ ಸಂಪರ್ಕಕ್ಕೆ ಸಿಕ್ಕಿದ್ದು. ತನ್ನ ವಿರುದ್ಧ ಮಾಡಿದ ಆರೋಪಗಳಿಗೆ ಪೂರಕವಾಗಿ ಸುಳ್ಳು ಹೇಳಿಕೆಗಳನ್ನು ನೀಡುವ ವಿಪರೀತ ಒತ್ತಡದಲ್ಲಿ ಅವರಿದ್ದಂತಿತ್ತು ಎಂಬುದು ಭಾರತದ ಅಭಿಪ್ರಾಯ. ಇದೇ ಹಿನ್ನೆಲೆಯಲ್ಲಿ ಎರಡನೇ ಬಾರಿ ಅವರನ್ನು ಸಂಪರ್ಕಿಸಲು ಅವಕಾಶ ಮಾಡಿಕೊಡುವಂತೆ ಭಾರತ ಕೇಳಿತ್ತು.

ಕುಲಭೂಷಣ್ ಜಾಧವ್ ಅವರನ್ನ ನ್ಯಾಯಯುತವಾಗಿ ವಿಚಾರಣೆ ನಡೆಸದೇ ಗಲ್ಲು ಶಿಕ್ಷೆಯ ತೀರ್ಪು ನೀಡಲಾಗಿದೆ. ಇದನ್ನು ಮರುಪರಿಶೀಲಿಸುವ ನಿಟ್ಟಿನಲ್ಲಿ ಅವರಿಗೆ ರಾಜತಾಂತ್ರಿಕ ಸಂಪರ್ಕದ ಅವಕಾಶವನ್ನು ಅಂತಾರಾಷ್ಟ್ರೀಯ ಕೋರ್ಟ್ ಮಾಡಿಕೊಟ್ಟಿದೆ ಎಂದು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರ ವಾದವಾಗಿದೆ. ಆದರೆ, ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಮತ್ತೊಮ್ಮೆ ಕುಲಭೂಷಣ್ ಅವರನ್ನ ಭೇಟಿ ಮಾಡಲು ಪಾಕಿಸ್ತಾನವು ಆಸ್ಪದ ಕೊಟ್ಟಿಲ್ಲ.

ಇದನ್ನೂ ಓದಿ: ಕೇಂದ್ರ ಸರ್ಕಾರ ಜನಾದೇಶವನ್ನು ತಪ್ಪಾಗಿ ಬಳಸಿಕೊಳ್ಳುತ್ತಿದೆ; ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಸೋನಿಯಾ

ಭಾರತದ ನಿವೃತ್ತ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದ ಭದ್ರತಾ ಪಡೆಗಳು 2016ರ ಮಾರ್ಚ್ 3ರಂದು ಬಂಧಿಸಿದ್ದವು. ನೌಕಾಪಡೆಯ ಅಧಿಕಾರಿಯಾಗಿ ಕುಲಭೂಷಣ್ ಪಾಕಿಸ್ತಾನದಲ್ಲಿ ಗೂಢಚರ್ಯೆ ಕೆಲಸ ಮಾಡಿಕೊಂಡು ಅನೇಕ ವಿಧ್ವಂಸಕ ಕೃತ್ಯಗಳನ್ನು ಸಂಯೋಜಿಸಿದ್ದರು ಎಂಬುದು ಪಾಕಿಸ್ತಾನದ ಆರೋಪ. ಹಾಗೆಯೇ, ಬಲೂಚಿಸ್ತಾನದಲ್ಲೇ ಇದ್ದ ಅವರನ್ನು ಬಂಧಿಸಲಾಯಿತು ಎಂದು ಪಾಕ್ ಹೇಳಿಕೊಂಡಿತ್ತು. ಆದರೆ, ಕುಲಭೂಷಣ್ ಅವರು ನೌಕಾಪಡೆಯಿಂದ ನಿವೃತ್ತರಾಗಿ ಇರಾನ್ ದೇಶದಲ್ಲಿ ತಮ್ಮದೇ ವೈಯಕ್ತಿಕ ವ್ಯವಹಾರ ನಡೆಸುತ್ತಿದ್ದರು. ಅಲ್ಲಿಂದ ಅವರನ್ನು ಅಚಾನಕ್ಕಾಗಿ ಪಾಕಿಸ್ತಾನೀಯರು ಬಂಧಿಸಿ ಕರೆದೊಯ್ದರು ಎಂಬುದು ಭಾರತದ ವಾದವಾಗಿದೆ.ಇದನ್ನೂ ಓದಿ: ಸಮಸ್ಯೆಗಳನ್ನು ಒಪ್ಪಿಕೊಳ್ಳುವುದು ಉತ್ತಮ ಆರಂಭ; ಮೋದಿ ಸರ್ಕಾರದ ಕಾಲೆಳೆದ ರಾಹುಲ್​ ಗಾಂಧಿ

ಕುಲಭೂಷಣ್ ಅವರನ್ನು ಬಂಧಿಸಿದ ನಂತರ ಅಲ್ಲಿಯ ಮಿಲಿಟರಿ ಕೋರ್ಟ್​ನಲ್ಲಿ ತ್ವರಿತಗತಿಯಲ್ಲಿ ರಹಸ್ಯ ವಿಚಾರಣೆ ನಡೆದಿದೆ. ಅಂತಿಮವಾಗಿ ಅವರು ತಪ್ಪಿತಸ್ಥರೆಂಬ ಅಭಿಪ್ರಾಯಕ್ಕೆ ಬಂದು 2017ರ ಏಪ್ರಿಲ್​ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಕುಲಭೂಷಣ್ ಅವರ ವಿಚಾರಣೆ ಪಾರದರ್ಶಕವಾಗಿ ನಡೆದಿಲ್ಲ. ಅವರಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ ಭಾರತಕ್ಕೆ ಹಸ್ತಾಂತರಿಸಲು ಸಹಾಯ ಮಾಡುವಂತೆ ಭಾರತವು ಅಂತಾರಾಷ್ಟ್ರೀಯ ಕೋರ್ಟ್​ನ ಮೊರೆ ಹೋಯಿತು. ಇದೇ ಜುಲೈ 17ರಂದು ಅಂತಾಷ್ಟ್ರೀಯ ನ್ಯಾಯಾಲಯವು ಕುಲಭೂಷಣ್ ಅವರಿಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿ, ಅವರಿಗೆ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವಂತೆ ಪಾಕಿಸ್ತಾನಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೆ. 2ರಂದು ಪಾಕಿಸ್ತಾನದ ಜೈಲೊಂದರಲ್ಲಿ ಕುಲಭೂಷಣ್ ಜಾಧವ್ ಅವರನ್ನು ಭಾರತದ ರಾಜತಾಂತ್ರಿಕ ಅಧಿಕಾರಿಗಳು ಭೇಟಿ ಮಾಡಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 12, 2019, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading