ನವದೆಹಲಿ, (ಫೆ. 25): ಬೆಂಗಳೂರಿಗೆ ಕುಡಿಯುವ ನೀರನ್ನು (Drinking Water) ನೀಡಲು ರೂಪಿಸಿರುವ ಮೇಕೆದಾಟು ಯೋಜನೆ (Mekedatu) ಜಾರಿಗೆ ಆಗ್ರಹಿಸಿ ನಾವು ದೆಹಲಿಯಲ್ಲಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿದ್ದೆವು. ಆಗ ಬಿಜೆಪಿಯ ನಾಯಕರಾದ ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮತ್ತಿತರರ ಜೊತೆ ಮಾತನಾಡಿದ್ದೆವು. ಆಗ ಅವರು ಕೂಡ ನಮ್ಮ ಜತೆ ಪ್ರತಿಭಟನೆ ಮಾಡಿದ್ದರು. ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೆ. ಅಂದು ನಮ್ಮ ಜತೆ ಹೋರಾಟ ಮಾಡಿದವರು ಇಂದು ಯೋಜನೆ ಜಾರಿ ವಿಚಾರದಲ್ಲಿ ಮೌನವಾಗಿರುವುದೇಕೆ? ಈವರೆಗೂ ಯಾಕೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President D.K. Shivakumar) ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ನಾಯಕರಿಂದ ಮೇಕೆದಾಟು ಯೋಜನೆಗೆ ವಿರೋಧ
ದೆಹಲಿಯಲ್ಲಿ ಶುಕ್ರವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಜಲ ಸಂಪನ್ಮೂಲ ಸಚಿವನಾಗಿದ್ದ ಸಮಯದಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಸಲ್ಲಿಸಿದ್ದೆ. ಅದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ತದನಂತರ ಸಂಸತ್ತಿನ ಉಭಯ ಸದನಗಳಲ್ಲಿ ತಮಿಳುನಾಡಿನ ಸಂಸದರು ಪ್ರತಿಭಟನೆ ಮಾಡಿದ್ದರು. ನಾನು ದೆಹಲಿಗೆ ಬಂದು ಬಿಜೆಪಿಯ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿದ್ದೆ. ಆಗ ಬೆಂಬಲಿಸಿದ್ದ ಬಿಜೆಪಿ ನಾಯಕರು ಈಗ ಮೇಕೆದಾಟು ಯೋಜನೆಗೆ ವಿರೋಧಿಸುತ್ತಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ಯಾವುದೇ ಅನ್ಯರಾಜ್ಯಗಳ ಅನುಮತಿ ಬೇಕಾಗಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಇದನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ವಿಳಂಬ ಏಕೆ ಎಂದು ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ಮತ್ತೆ ಮೇಕೆದಾಟು ಪಾದಯಾತ್ರೆ
ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂದು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಜನವರಿ 9ರಿಂದ ಪಾದಯಾತ್ರೆ ಆರಂಭಿಸಿ ನಾಲ್ಕು ದಿನ ನಡೆದಿದ್ದೆವು, ಆದರೆ ಕೊರೊನಾ ಮೂರನೇ ಅಲೆ ಆರಂಭವಾಯಿತು ಜೊತೆಗೆ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು ಎಂದು ರಾಮನಗರದಲ್ಲಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದ್ದೆವು. ಈಗ ಫೆಬ್ರವರಿ 27ರಿಂದ ರಾಮನಗರದಿಂದ ಪಾದಯಾತ್ರೆ ಮಾಡೋಣ ಎಂದು ನಿರ್ಧರಿಸಿದ್ದೇವೆ. ಬೆಂಗಳೂರು ನಗರದಲ್ಲಿ 5 ದಿನದ ಬದಲು ಮೂರೇ ದಿನ ಪಾದಯಾತ್ರೆ ಮಾಡುತ್ತೇವೆ. ಮಾರ್ಚ್ 3ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಭೆ ನಡೆಸಿ ಪಾದಯಾತ್ರೆ ಮುಕ್ತಾಯ ಮಾಡುತ್ತೇವೆ ಎಂದು ತಿಳಿಸಿದರು.
ಜನಪರ ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ ಇದು ಪ್ರತಿಷ್ಠೆಗಾಗಿ ನಡೆಸುತ್ತಿರೋದಲ್ಲ. ಅಂತರ್ಜಲ ಮಟ್ಟ ಹೆಚ್ಚಾಗುತ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸಿಗುತ್ತದೆ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಬಿನಿ, ಕೆಆರ್‌ಎಸ್, ಹೇಮಾವತಿ, ಹಾರಂಗಿ ಮೇಲಿನ ಒತ್ತಡ ಕಡಿಮೆಯಾಗುತ್ತೆ. ಬೇಸಿಗೆಯಲ್ಲಿ ಈ ಅಣೆಕಟ್ಟಿನಲ್ಲಿ ನೀರು ಕಡಿಮೆಯಾದಾಗ ಮೇಕೆದಾಟು ಇಂದ ಬಿಡಬಹುದು. ಇದರಿಂದ ತಮಿಳುನಾಡಿಗೆ ಏನೇನೂ ತೊಂದರೆಯಾಗಲ್ಲ, ರಾಜಕೀಯ ಕಾರಣಕ್ಕೆ ಅವರು ತಕರಾರು ಮಾಡುತ್ತಿದ್ದಾರೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರು ಕೂಡ ತಮಿಳುನಾಡಿಗೆ ಹೋಗುತ್ತೆ. ಎರಡೂ ರಾಜ್ಯಗಳಿಗೆ ಇದರಿಂದ ಅನುಕೂಲ ಇದೆ. ಪರಿಸರ ಅನುಮತಿ ಪತ್ರ ಪಡೆಯಲು ಎರಡೂವರೆ ವರ್ಷ ಬೇಕಾ? ಇದೊಂದು ಜನಪರವಾದ ಯೋಜನೆ, ಹಾಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನು ಓದಿ: ಮತ್ತೊಮ್ಮೆ ಬಿಜೆಪಿ ಸರ್ಕಾರ ಬಂದ್ರೆ ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್; Amit Shah
ಪರಿಸರ ನಾಶ ಆಗೊಲ್ಲ
ಪಾದಯಾತ್ರೆಗೆ ಎಲ್ಲರ ಸಹಕಾರ ಕೇಳುತ್ತಿದ್ದೇವೆ. ಬಿಜೆಪಿಯವರು ಪಾದಯಾತ್ರೆಯನ್ನು ರಾಜಕೀಯ ದುರ್ಬಿನ್ ಮೂಲಕ ನೋಡುತ್ತಾರೆ. ಪಾದಯಾತ್ರೆ ಆರಂಭ ಮಾಡಿದ ಕೂಡಲೇ ಜಾಹಿರಾತು ಕೊಡುತ್ತಾರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಏನೂ ಮಾಡಿಲ್ಲ ಎಂದು ಸುಳ್ಳು ಹೇಳುತ್ತಾರೆ. ಸರಿ ಕಾಂಗ್ರೆಸ್ ಪಕ್ಷ ವಿಸ್ತೃತ ಯೋಜನಾ ವರದಿ ಮಾಡಿ ಕಳಿಸಿಕೊಟ್ಟಿದ್ದೆ, ಕಳೆದ ಎರಡೂವರೆ ವರ್ಷಗಳಲ್ಲಿ ನೀವೇನು ಮಾಡಿದ್ದೀರ ಎಂದು ಪ್ರಶ್ನೆ ಕೇಳಿದ್ರೆ ಅದಕ್ಕೆ ಉತ್ತರವೇ ಇಲ್ಲ. ಪಾದಯಾತ್ರೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ.
ಇದನ್ನು ಓದಿ: ಭಾರತೀಯರ ಸ್ಥಳಾಂತರಕ್ಕೆ ಉಕ್ರೇನ್ ಗಡಿಗೆ ತಂಡ ಕಳುಹಿಸಿದ ಕೇಂದ್ರ; ಸಂಪರ್ಕಿಸಲು ಎಲ್ಲಾ ಫೋನ್ ನಂಬರ್ಸ್ ಇಲ್ಲಿದೆ
ತಮಿಳುನಾಡಿಗೆ ಅವರ ಪಾಲಿನ ನೀರು ಕೊಡುವುದಾಗಿ ಒಪ್ಪಿಕೊಂಡಿದ್ದೇವೆ, ಅಷ್ಟೆ. ಬೇರೇನು ಸಮಸ್ಯೆ? ಎಷ್ಟು ಅರಣ್ಯ ಮುಳುಗಡೆ ಆಗುತ್ತದೋ ಅಷ್ಟೇ ಪ್ರಮಾಣದ ಜಮೀನನ್ನು ನೀಡಲು ನಾವು ಒಪ್ಪಿಕೊಂಡಿದ್ದೇವೆ. ಮೇಧಾ ಪಾಟ್ಕರ್ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಅನ್ನಿಸುತ್ತೆ. ತಮಿಳುನಾಡಿಗೆ ಯೋಜನೆ ಬಗ್ಗೆ ತಕರಾರು ಮಾಡಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ಕಾವೇರಿ ವಿವಾದವನ್ನು ಜೀವಂತವಾಗಿಡಲು ತಮಿಳುನಾಡಿನ ಪಕ್ಷಗಳು ಪ್ರಯತ್ನ ಮಾಡುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ