HOME » NEWS » National-international » KOTAK MAHINDRA MAKES LATE ENTRY IN RACE FOR FUNDING CASH STARVED LAKSHMI VILAS BANK SNVS

ಹಣಕಾಸು ಬಿಕ್ಕಟ್ಟಿನಲ್ಲಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ ಖರೀದಿಗೆ ಕೋಟಕ್ ಮಹೀಂದ್ರ ಪ್ರಯತ್ನ

ಕೆಟ್ಟ ಸಾಲಗಳಿಂದ ಜರ್ಝರಿತವಾಗಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್​ನ ಉಳಿವಿಗೆ ಆರ್​ಬಿಐ ಶತ ಪ್ರಯತ್ನ ಮಾಡುತ್ತಿದೆ. ಆರ್​ಬಿಐ ಮಾರ್ಗದರ್ಶನದಲ್ಲಿ ಈಗಾಗಲೇ ಕೆಲವು ಹಣಕಾಸು ಸಂಸ್ಥೆಗಳು ಎಲ್​ವಿಬಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ.

Vijayasarthy SN | news18
Updated:March 9, 2020, 8:23 PM IST
ಹಣಕಾಸು ಬಿಕ್ಕಟ್ಟಿನಲ್ಲಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ ಖರೀದಿಗೆ ಕೋಟಕ್ ಮಹೀಂದ್ರ ಪ್ರಯತ್ನ
ಕೋಟಕ್ ಮಹೀಂದ್ರ ಬ್ಯಾಂಕ್
  • News18
  • Last Updated: March 9, 2020, 8:23 PM IST
  • Share this:
ನವದೆಹಲಿ(ಮಾ. 09): ದೇಶದ ಹಣಕಾಸು ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ. ಕೆಟ್ಟ ಸಾಲಗಳು (ವಸೂಲಾತಿಯಾಗದ ಸಾಲ) ಬ್ಯಾಂಕ್​ಗಳನ್ನು ಕಂಗೆಡಿಸಿವೆ. ಈ ದುಸ್ಥಿತಿಗೆ ದೇಶದ ಆರ್ಥಿಕ ಮುಗ್ಗಟ್ಟು, ಅಧಿಕಾರಿಗಳ ಭ್ರಷ್ಟಾಚಾರ ಇತ್ಯಾದಿ ಕಾರಣಗಳಿರಬಹುದೆಂದು ಶಂಕಿಸಲಾಗಿದೆ. ಪಿಎಂಸಿ ಬ್ಯಾಂಕ್ ಹಗರಣ, ಯೆಸ್ ಬ್ಯಾಂಕ್ ಹಗರಣಗಳು ದೇಶದ ಜನರ ಕಂಗೆಡಿಸಿವೆ. ಹಣಕಾಸು ವಲಯಕ್ಕೆ ಪುನಶ್ಚೇತನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಹರಸಾಹಸ ನಡೆಸಿದೆ. ಈ ಮಧ್ಯೆ ಕೆಟ್ಟ ಸಾಲಗಳಿಂದ ಜರ್ಝರಿತವಾಗಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್​ನ ಉಳಿವಿಗೆ ಆರ್​ಬಿಐ ಶತ ಪ್ರಯತ್ನ ಮಾಡುತ್ತಿದೆ. ಆರ್​ಬಿಐ ಮಾರ್ಗದರ್ಶನದಲ್ಲಿ ಚೆನ್ನೈ ಮೂಲದ ಲಕ್ಷ್ಮೀ ವಿಳಾಸ್ ಬ್ಯಾಂಕ್​ನಲ್ಲಿ ಬಂಡವಾಳ ಹೂಡಲು ಕೋಟಕ್ ಮಹೀಂದ್ರ ಚಿಂತನೆ ನಡೆಸಿದೆ. ಈಗಾಗಲೇ ಕೆಲವು ಹಣಕಾಸು ಸಂಸ್ಥೆಗಳು ಎಲ್​ವಿಬಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ. ಈಗ ಕೋಟಕ್ ಪ್ರವೇಶದೊಂದಿಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್​ಗೆ ಪುಷ್ಟಿ ಸಿಗಬಹುದು ಎಂಬ ವಿಶ್ವಾಸ ಅದರ ಗ್ರಾಹಕರಿಗೆ ಸಿಕ್ಕಿದೆ.

ಲಕ್ಷ್ಮೀ ವಿಲಾಸ್ ಬ್ಯಾಂಕ್​ನ ಬಹುಸಂಖ್ಯೆಯ ಪಾಲನ್ನು ಖರೀದಿಸಲು ಕೋಟಕ್ ಮಹೀಂದ್ರ ಬ್ಯಾಂಕ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಆರ್​ಬಿಐಗೆ ಒಂದು ಪ್ರಸ್ತಾವನೆಯನ್ನೂ ಕಳುಹಿಸಿದೆ. ಇದೇ ವೇಳೆ, ಕೋಟಕ್ ಮಹೀಂದ್ರದಂತೆ ಬೇರೆ ಕೆಲ ಸಂಸ್ಥೆಗಳೂ ಕೂಡ ಆರ್​ಬಿಐಗೆ ಪ್ರಸ್ತಾವನೆ ಸಲ್ಲಿಸಿವೆ. ಎಲ್ಲಾ ಆಸಕ್ತ ಸಂಸ್ಥೆಗಳೊಂದಿಗೆ ಆರ್​ಬಿಐ ಮಾತುಕತೆ ನಡೆಸುತ್ತಿದೆ ಎಂದು ಮನಿ ಕಂಟ್ರೋಲ್ ಜಾಲತಾಣ ವರದಿ ಮಾಡಿದೆ.

 ಇದನ್ನೂ ಓದಿ: ಯೆಸ್ ಬ್ಯಾಂಕ್ ಸಂಸ್ಥಾಪಕರಿಗೆ DHFL​ನಿಂದ 600 ಕೋಟಿ ಲಂಚ: ಸಿಬಿಐ ಆರೋಪ; ಮುಂಬೈನ 7 ಕಡೆ ದಾಳಿ

ಚೆನ್ನೈ ಮೂಲದ ಲಕ್ಷ್ಮೀ ವಿಲಾಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಬೆಳಕಿಗೆ ಬಂದು ಹಲವು ತಿಂಗಳಾಗಿವೆ. ಕಳೆದ ವರ್ಷದ ಏಪ್ರಿಲ್​ನಲ್ಲಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಸಂಸ್ಥೆ (ಐಎಚ್​ಎಫ್​ಸಿ) ಲಕ್ಷ್ಮೀ ವಿಲಾಸ ಬ್ಯಾಂಕನ್ನು ತನ್ನಲ್ಲಿ ವಿಲೀನಗೊಳಿಸುವುದಾಗಿ ತಿಳಿಸಿತ್ತು. ಆದರೆ, ಇದಕ್ಕೆ ಆರ್​ಬಿಐ ಒಪ್ಪಿಗೆ ನೀಡಲಿಲ್ಲ.

“ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಮತ್ತು ಇಂಡಿಯಾಬುಲ್ಸ್ ಕಮರ್ಷಿಯಲ್ ಕ್ರೆಡಿಟ್ ಸಂಸ್ಥೆಗಳು ಲಕ್ಷ್ಮೀ ವಿಲಾಸ್ ಬ್ಯಾಂಕ್ ಜೊತೆ ವಿಲೀನಗೊಳ್ಳುವ ಅರ್ಜಿಯನ್ನು ಅನುಮೋದನೆ ಮಾಡಲು ಸಾಧ್ಯವಿಲ್ಲ ಎಂದು ಆರ್​ಬಿಐ ತಿಳಿಸಿದೆ” ಎಂದು ಲಕ್ಷ್ಮೀ ವಿಳಾಸ್ ಬ್ಯಾಂಕ್ ಪ್ರಕಟಣೆ ಹೊರಡಿಸಿತು. ಆದರೆ, ಆರ್​ಬಿಐನ ಈ ನಿರ್ಧಾರಕ್ಕೆ ಏನು ಕಾರಣ ಎಂಬುದು ತಿಳಿದುಬಂದಿಲ್ಲ.

ಆರ್ಥಿಕ ದುಸ್ಥಿತಿಯಲ್ಲಿರುವ ಬ್ಯಾಂಕುಗಳಿಗೆ ಪುನಶ್ಚೇತನ ನೀಡಲು ಆರ್​ಬಿಐ ಪ್ರಾಂಪ್ಟ್ ಕರೆಕ್ಟಿವ್ ಆ್ಯಕ್ಷನ್ (ದೋಷ ಪರಿಹಾರಾತ್ಮಕ ಕ್ರಮ) ಎಂಬ ಮಾರ್ಗದರ್ಶಿ ಸೂತ್ರ ಅಳವಡಿಸಿದೆ. ಅದರಂತೆ, ಎರಡು ವರ್ಷಗಳಿಂದ ಕೆಟ್ಟ ಸಾಲ, ಹಣದ ಕೊರತೆ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ಲಕ್ಷ್ಮೀ ವಿಲಾಸ್ ಬ್ಯಾಂಕಿಗೆ ಪುನಶ್ಚೇತನ ನೀಡಲು ಆರ್​ಬಿಐ ಈ ಸೂತ್ರದಡಿ ಕ್ರಮ ತೆಗೆದುಕೊಳ್ಳುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: March 9, 2020, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories