ಕೋಲ್ಕತಾ(ನ. 15): ನಿಷೇಧವಾಗಿದ್ದರೂ ಲೆಕ್ಕಿಸದೆ ಪಟಾಕಿ ಹೊಡೆದ ಕಾರಣ ಪೊಲೀಸರು ಕೋಲ್ಕತಾದ ವಿವಿಧೆಡೆಯಿಂದ 15 ಮಂದಿಯನ್ನು ಬಂಧಿಸಿರುವ ಘಟನೆ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿಯಲ್ಲಿ ನಡೆದಿದೆ. ನಿನ್ನೆ ಶನಿವಾರದಂದು ಕಾಳಿಪೂಜೆ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಹಲವೆಡೆ ಜನರು ಸಾಂಪ್ರದಾಯಿಕವಾಗಿ ಪಟಾಕಿ ಹೊಡೆದು ಸಂಭ್ರಮಿಸಿದ್ದರು. ಆದರೆ, ಈ ವರ್ಷ ಮಾಲಿನ್ಯ ಮತ್ತು ಕೋವಿಡ್ ಕಾರಣದಿಂದಾಗಿ ಪಟಾಕಿ ನಿಷೇಧಿಸಿ ಕಲ್ಕತ್ತಾ ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೂ ಹಲವೆಡೆ ಪಟಾಕಿ ಹೊಡೆಯಲಾಯಿತು.
ಸ್ಥಳೀಯ ಪ್ರದೇಶಗಳ ಜನರಿಂದ ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ 15 ಮಂದಿಯನ್ನು ಬಂಧಿಸಿದೆವು ಎಂದು ಕೋಲ್ಕತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ, ನಗರದ ವಿವಿಧೆಡೆಯಿಂದ ನೂರಾರು ಕಿಲೋನಷ್ಟು ಪಟಾಕಿಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ.
ಕೋಲ್ಕತಾದ ಉಲತದಂಗಾ, ಮಾನಿಕತಲ, ಫೂಲ್ಬಗಾನ್ ಪ್ರದೇಶಗಳಲ್ಲಿ ಹೆಚ್ಚಿನ ಬಂಧನ ಮತ್ತು ಪಟಾಕಿ ವಶ ಆಗಿದೆ. ಮಾನಿಕತಲದ ಗೋಡೌನ್ವೊಂದರಲ್ಲೇ 120 ಕಿಲೋ ಪಟಾಕಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಹಾಗೂ ಸ್ಫೋಟಕ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಸತತ 4ನೇ ಅವಧಿಗೆ ನಿತೀಶ್ ಕುಮಾರ್ ಬಿಹಾರದ ಸಿಎಂ; ಬಿಜೆಪಿಯ ಸುಶೀಲ್ ಮೋದಿ ಡಿಸಿಎಂ
ದೇಶದ ಬಹುತೇಕ ರಾಜ್ಯಗಳಲ್ಲಿ ಪಟಾಕಿಗಳ ನಿಷೇಧ ಮಾಡಲಾಗಿದೆ. ಪಟಾಕಿಯಿಂದ ಉಂಟಾಗುವ ವಾಯುಮಾಲಿನ್ಯದಿಂದಾಗಿ ಕೋವಿಡ್ ರೋಗ ಹೆಚ್ಚು ಅಪಾಯಕಾರಿಯಾಗಿ ಹರಡುವ ಅಪಾಯ ಇರುವ ಹಿನ್ನೆಲೆಯಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ಕರ್ನಾಟಕದಂಥ ಕೆಲ ರಾಜ್ಯಗಳಲ್ಲಿ ಪರಿಸರಕ್ಕೆ ಹೆಚ್ಚು ಹಾನಿ ಮಾಡದ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ