Kolara: ಕೆರೆ ಸುಂದರೀಕರಣ, ಆದರೆ ಕೊಳಚೆ ನೀರು ಸೇರಿಕೊಳ್ತಿದ್ರೂ ಡೋಂಟ್ ಕೇರ್ ಅಂತಿದ್ದಾರೆ

ಕೆಸಿ ವ್ಯಾಲಿ ಯೋಜನೆ ಮೂಲಕ ಕೋಲಾರ ನಗರದ ಹೃದಯ ಭಾಗದಲ್ಲೆ ಇರುವ ಸುಮಾರು 650 ಎಕರೆಯ ಕೋಲಾರಮ್ಮ ಕೆರೆಗೆ ಹೊಸ ರೂಪ ನೀಡಲು ಜಿಲ್ಲಾಡಳಿತ ಮುಂದಾಗಿದೆ, ಸುಮಾರು 8 ಕೋಟಿ ವೆಚ್ಚದಲ್ಲಿ ಕೆರೆ ಸುಂದರೀಕರಣ ಮಾಡಲು ಕಾಮಗಾರಿ ಆರಂಭವಾಗಿದೆ, ಆದರೆ ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿದ್ದರು ಯಾರೊಬ್ಬರು ತಲೆಕೆಡಿಸಿಕೊಂಡಿಲ್ಲ.

ಕೋಲಾರಮ್ಮ ಕೆರೆ

ಕೋಲಾರಮ್ಮ ಕೆರೆ

  • Share this:
ಬೆಂಗಳೂರು (Bengaluru) ಮಹಾನಗರದಿಂದ ಕೇವಲ 60 ಕಿಲೋ ಮೀಟರ್ ದೂರವಿರುವ ಕೋಲಾರ (Kolar) ನಗರ ಇನ್ನೂ ಅಭಿವೃದ್ಧಿ ಕಾಣದೆ ಮೂಲೆಗುಂಪಾಗಿದೆ. ನಗರದಲ್ಲಿನ ಐದಾರು ಪಾರ್ಕ್ ಗಳಲ್ಲಿ, ಒಂದೂ ಪಾರ್ಕ್ ಅನ್ನು ನಿರ್ವಹಣೆ ಮಾಡಲಾಗದ ಸ್ತಿತಿಗೆ, ಇಲ್ಲಿನ ನಗರಸಭೆ  ತಲುಪಿದ್ದು, ಮೂಲಭೂತ ಸೌಕರ್ಯಗಳು ಸಿಗದೆ ನಗರದ ಜನತೆ ಕಂಗಾಲಾಗಿದ್ದಾರೆ. ಹಾಗೆಯೇ ರಸ್ತೆ, ಪುಟ್ ಪಾತ್ (Foot Path), ಒಳಚರಂಡಿ, ರಾಜಕಾಲುವೆಗಳು ನಿರ್ವಹಣೆ ಇಲ್ಲದೆ, ನಗರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.

ಆದರೆ ಕಳೆದ ವರ್ಷ ಆರಂಭವಾಗಿರೊ ನಗರದ, ಹೃದಯ ಭಾಗದಲ್ಲಿನ ಕೋಲಾರಮ್ಮ ಕೆರೆ ಅಭಿವೃದ್ಧಿ ಕಾಮಗಾರಿಯೂ ಹಳ್ಳ ಹಿಡಿಯುವತ್ತ ಸಾಗಿದೆ, ಕೋಲಾರಮ್ಮ ಕೆರೆ 650 ಎಕರೆ ವಿಸ್ತೀರ್ಣವನ್ನ ಹೊಂದಿದೆ, ಕಳೆದ ವರ್ಷ ಈ ಕೆರೆಯನ್ನ ಸುಂದರೀಕರಣ ಮಾಡುವ ದೃಷ್ಟಿಯಿಂದ, ವಿವಿಧ ಕಾಮಗಾರಿಗಳಿಗಾಗಿ 8 ಕೋಟಿ ಹಣವನ್ನ ಕೆ,ಸಿ ವ್ಯಾಲಿ ಯೋಜನೆಯಿಂದ ಬಿಡುಗಡೆ ಮಾಡಲಾಗಿದ್ದು, ಸಣ್ಣ ನೀರಾವರಿ ಇಲಾಖೆ ಕಾಮಗಾರಿಯನ್ನ ನಡೆಸುತ್ತಿದೆ, ವಾಕಿಂಗ್ ಪಾತ್, ಓಪನ್ ಸ್ಟೇಡಿಯಂ, ಜಿಮ್, ಬೋಟಿಂಗ್ , ಹೊಟೆಲ್ ರ್ಮಾಣ ಆಗಲಿದೆ.

ಕೆರೆಯಲ್ಲಿ ಜೊಂಡು ಗಿಡಗಳ ಹಾವಳಿ

ಇನ್ನು ಕೆರೆಯಲ್ಲಿ ದಟ್ಟವಾಗಿ ಜೊಂಡು ಗಿಡಗಳು ಆವರಿಸಿದ್ದು, ಕೆರೆಯಲ್ಲಿನ ಜೊಂಡು ಗಿಡಗಳನ್ನ ಬೋಟ್ ಸಹಾಯದಿಂದ ಹೊರ ತೆಗೆಯಲಾಗತ್ತಿದೆ,  ಆದರೆ  ಒಂದು ಕಡೆ ಕೆರೆ ಸುಂದರೀಕರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು, ಮತ್ತೊಂದೆಡೆ ಕೆರೆಯ ನೀರು ವೇಗವಾಗಿ ಕಲುಷಿತವಾಗುತ್ತಿದೆ, ಕೋಲಾರ ನಗರಸಭೆ, ಸಣ್ಣ ನೀರಾವರಿ ಇಲಾಖೆ, ಹಾಗು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಹಾಗು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ  ನಿರ್ಲಕ್ಷ್ಯದಿಂದ, ಇಂದು ಕೋಲಾರಮ್ಮ ಕೆರೆ ಗಬ್ಬು ನಾರುತ್ತಿದೆ.

ಡ್ರೈನೇಜ್ ನೀರು, ಕೊಳಚೆ ನೀರು

ಕೋಲಾರಮ್ಮ ಕೆರೆಗೆ ನೀರು ಹರಿಯುವ ಕಾಲುವೆಗಳಲ್ಲಿ ನಗರದ ಡ್ರೈನೇಜ್ ನೀರು, ಕೊಳಚೆ ನೀರು ಕೆರೆಗೆ ಸೇರುತ್ತಿದ್ದು, ನೀರು ಸಂಪೂರ್ಣವಾಗಿ ಕಲುಷಿತವಾಗಿದೆ, ಇನ್ನು ನಗರದ ಸುತ್ತಮುತ್ತಲಿನ ಬೋರ್ ವೆಲ್ ಗಳಲ್ಲಿನ ನೀರು ಕಲುಷಿತಗೊಳ್ಳುವ ಆತಂಕವನ್ನ ನೀರಾವರಿ ಹೋರಾಟಗಾರರು ವ್ಯಕ್ತಪಡಿಸಿದ್ದಾರೆ.

ಹಳ್ಳ ಹಿಡಿಯುತ್ತಾ ಸುಂದರೀಕರಣ ಯೋಜನೆ

ಈಗಾಗಲೇ ಕೆಸಿ ವ್ಯಾಲಿ ಯೋಜನೆ ಮೂಲಕ ಕೊಳಚೆ ನೀರನ್ನ ಸಂಸ್ಕರಿಸಿ ಕೆರೆಗೆ ಹರಿಸಲಾಗಿದ್ದು, ನೀರಿನಲ್ಲಿ ರಾಸಾಯನಿಕ ಅಂಶಗಳು ಬೆರೆತಿದೆ, ಅದರ ಜೊತೆಗೆ ಯು,ಜಿ,ಡಿ, ಕೊಳಚೆ ನೀರು ಬೆರೆಯುತ್ತಿದ್ದು, ಇದೆಲ್ಲದರ ಪರಿಣಾಮ ಕೋಲಾರಮ್ಮ ಕೆರೆ ನೀರು ಸಂಪೂರ್ಣವಾಗಿ ಕಲುಷಿತಗೊಂಡು ಗಬ್ಬು ನಾರುತ್ತಿದೆ,  ಇದರ ಜೊತೆಗೆ ನಗರದಲ್ಲಿ ಕುದುರೆ, ಹಸು, ನಾಯಿಗಳು ಆಕಸ್ಮಿಕವಾಗಿ ಸತ್ತಲ್ಲಿ ಕೆರೆಗೆ ತಂದು ಎಸೆಯಲಾಗುತ್ತಿದೆ.

ಇದನ್ನೂ ಓದಿ: KS Eshwarappa: ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಕೆ.ಎಸ್.ಈಶ್ವರಪ್ಪ ಗರಂ

ಈ ಬಗ್ಗೆ ಸಾರ್ವಜನಿಕರು, ನೀರಾವರಿ ಹೋರಾಟಗಾರರು ಕಿಡಿಕಾರಿದ್ದು, ಮೊದಲ ಕಲುಷಿತಗೊಳ್ಳುತ್ತಿರುವ ಕೆರೆಯನ್ನ ರಕ್ಷಿಸಿ ಎಂದು ಆಗ್ರಹಿಸಿದ್ದಾರೆ, ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲಾರ ನಗರಸಭೆ ಅಧಿಕಾರಿಗಳು, ಡ್ರೈನೇಜ್ ನೀರನ್ನ ಬೇರೆಡೆ ತಿರುಗಿಸಲು ಕಾಮಗಾರಿ ನಡೆಸಲು, ಜಿಲ್ಲಾಧಿಕಾರಿಗಳು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ಸೂಚನೆ ನೀಡಿದ್ದಾರೆ, ನಾವೇನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ, ಅವರೇ ಕಾಮಗಾರಿ ನಡೆಸಬೇಕು ಎಂದು ತಿಳಿಸಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ದಿವ್ಯ ನಿರ್ಲಕ್ಷ್ಯ

ಕೆರೆಗಳಿಗೆ ಸಂಸ್ಕರಣೆ ಮಾಡದ ತ್ಯಾಜ್ಯ ನೀರನ್ನ ಹರಿಸುವಂತಿಲ್ಲ ಎಂಬ ಸ್ಪಷ್ಟವಾದ ಆದೇಶವಿದೆ, ಆದರೆ ಕೋಲಾರಮ್ಮ ಕೆರೆಗೆ ನಿತ್ಯ ಡ್ರೈನೇಜ್ ನೀರು ಹರಿಯುತ್ತಿದ್ದರು, ಈ ಬಗ್ಗೆ ಒಂದು ಬಾರಿಯೂ ಕ್ರಮ ಕೈಗೊಳ್ಳಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿಲ್ಲ, ಕೆರೆ ನೀರು ಕಲುಷಿತವಾಗುತ್ತಿದ್ದರು.

ಇದನ್ನೂ ಓದಿ: Chitradurga: ಮನೆ ಕಳೆದುಕೊಂಡು ಪರದಾಟ, ಸಚಿವ ಶ್ರೀರಾಮುಲು ಕ್ಷೇತ್ರದಲ್ಲಿ ಬೀದಿಗೆ ಬಿದ್ದ ಕುಟುಂಬಗಳು

ನಗರಸಭೆ, ಸಣ್ಣ ನೀರಾವರಿ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಿವ್ಯ ಮೌನಕ್ಕೆ ಶರಣಾಗಿದ್ದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ನಗರ ನಿವಾಸಿಗಳು, ರೈತಪರ ಮುಖಂಡರು ಕಿಡಿಕಾರಿದ್ದಾರೆ.
Published by:Divya D
First published: