ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ನಿಯಮವನ್ನು ಉಲ್ಲಂಘಿಸಿ ಮಹಿಳಾ ಸಹೋದ್ಯೋಗಿ ಗಿನಾ ಕೊಲಾಡಾಂಜಲೊ ಜತೆಗೆ ಲಿಪ್ ಲಾಕ್ ಮಾಡಿರುವ ವಿಚಾರಕ್ಕೆ ತಪ್ಪೊಪ್ಪಿಕೊಂಡು ರಾಜೀನಾಮೆ ನೀಡಿದ್ದಾರೆ.
42 ವರ್ಷದ ಮ್ಯಾಟ್ ಹ್ಯಾನ್ಕಾಕ್ ಮಹಿಳಾ ಸಹೋದ್ಯೋಗಿ ಗಿನಾ ಕೊಲಾಡಾಂಜಲೊ ಜತೆಗೆ ಚುಂಬಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಚುಂಬನದ ವಿಡಿಯೋ ಮತ್ತು ಫೋಟೋ ವೈರಲ್ ಆಯಿತು. ಈ ವಿಚಾರವಾಗಿ ಗದ್ದಲ ಕೂಡ ಉಂಟಾಗಿತ್ತು. ಕೊರೊನಾ ನಿಯಮವನ್ನು ಉಲ್ಲಂಘಿಸಿದ ಆರೋಪವನ್ನು ಮ್ಯಾಟ್ ಹ್ಯಾನ್ಕಾಕ್ ಮೇಲೆ ಹೊರಿಸಲಾಯಿತು.
ವಿವಾದ ಭುಗಿಲೆದ್ದಂತೆ ಮ್ಯಾಟ್ ಹ್ಯಾನ್ಕಾಕ್ ಪ್ರಧಾನಿ ಬೋರಿಸ್ ಜಾನ್ಸನ್ಗೆ ಪತ್ರಬರೆದಿದ್ದು, ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ತ್ಯಾಗ ಮಾಡಿದ ಜನರಿಗೆ ನಾವು ನಿರಾಸೆಗೊಳಿಸಿದಾಗ ಪ್ರಾಮಾನಿಕವಾಗಿರಬೇಕು. ಈ ಕಾರಣಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಕೊರೊನಾ ಸಮಯದಲ್ಲಿ ಸರ್ಕಾರ ವಿಧಿಸಿದ್ದ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ಕ್ಷಮೆ ಕೋರುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೇ 6ರಂದು ಮ್ಯಾಟ್ ಹ್ಯಾನ್ಕಾಕ್ ಮತ್ತು ಸಹೋದ್ಯೋಗಿಯ ಚುಂಬನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಾಧ್ಯಮಗಳು ಈ ಕುರಿತಾಗಿ ವರದಿ ಮಾಡಿದ್ದವು. ಇದೀಗ ಮ್ಯಾಟ್ ಹ್ಯಾನ್ಕಾಕ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದು, ಪಾಕಿಸ್ತಾನ ಮೂಲದ ಕನ್ಸವೇರ್ಟಿವ್ ಪಕ್ಷದ ಸಂಸದ, ಬ್ರಿಟನ್ನ ಮಾಜೀ ಚಾನ್ಸಿಲರ್ ಸಾಜಿದ್ ಜಾವಿದ್ ನೂತನ ಆರೋಗ್ಯ ಕಾರ್ಯದರ್ಶಿಯಾಗು ನೇಮಕ ಗೊಳ್ಳುವ ಸಾಧ್ಯತೆಯಿದೆ.
— Matt Hancock (@MattHancock) June 26, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ