Sushma ChakreSushma Chakre
|
news18-kannada Updated:October 12, 2020, 9:32 AM IST
ಖುಷ್ಬೂ ಸುಂದರ್
ಚೆನ್ನೈ (ಅ. 12): ಖ್ಯಾತ ನಟಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಖುಷ್ಬೂ ಇಂದು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಈ ಬಗ್ಗೆ ಮಾತುಕತೆಗಳು ಮುಗಿದಿದ್ದು, ಇಂದು ಕಾಂಗ್ರೆಸ್ಗೆ ಗುಡ್ ಬೈ ಹೇಳುವುದು ಪಕ್ಕಾ ಎನ್ನಲಾಗಿದೆ. ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ನಟಿ ಎನಿಸಿಕೊಂಡಿದ್ದ ಖುಷ್ಬೂ 2014ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಇದೀಗ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಮೆರೆದಿದ್ದ ಖುಷ್ಬೂ ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಖುಷ್ಬೂ ಬಿಜೆಪಿಗೆ ಸೇರುವ ನಿರ್ಧಾರದ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿದೆ.
ಬಿಜೆಪಿ ಪಕ್ಷದ ಹಿರಿಯ ನಾಯಕರು ನೀಡಿರುವ ಮಾಹಿತಿ ಪ್ರಕಾರ, ಖುಷ್ಬೂ ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಇತರೆ ಹಿರಿಯ ನಾಯಕರನ್ನು ಭೇಟಿ ಮಾಡಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಖುಷ್ಬೂ ಅವರೊಂದಿಗೆ ಐಆರ್ ಎಸ್ ಅಧಿಕಾರಿ ಕೂಡ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಬಿಜೆಪಿಗೆ ಸೇರ್ಪಡೆಯಾಗುವ ವಿಚಾರದ ಬಗ್ಗೆ ಕಳೆದ ವಾರ ಪ್ರತಿಕ್ರಿಯೆ ನೀಡಿದ್ದ ಖುಷ್ಬೂ ಆ ರೀತಿಯ ಯಾವುದೇ ಯೋಚನೆಯಿಲ್ಲ. ಟ್ವಿಟ್ಟರ್ನಲ್ಲಿ ಯಾರೋ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದಿದ್ದರು. ಇದೀಗ ಅವರು ಬಿಜೆಪಿ ಸೇರ್ಪಡೆಯಾಗುತ್ತಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಖುಷ್ಬೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ, ಇಂದು ಅವರು ಬಿಜೆಪಿ ಸೇರುತ್ತಾರಾ, ಇಲ್ಲವಾ ಎಂಬ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ. ನಿನ್ನೆ ರಾತ್ರಿಯೇ ಚೆನ್ನೈನಿಂದ ದೆಹಲಿಗೆ ಹೊರಟಿರುವ ಖುಷ್ಬೂ ಅವರ ರಾಜಕೀಯ ನಡೆಯ ಬಗ್ಗೆ ಇಂದು ತಿಳಿಯಲಿದೆ.
ಕನ್ನಡದ ರಣಧೀರ, ಅಂಜದ ಗಂಡು, ಶಾಂತಿ ಕ್ರಾಂತಿ, ಜೀವನದಿ, ಮ್ಯಾಜಿಕ್ ಅಜ್ಜಿ ಮುಂತಾದ ಸುಮಾರು 20 ಸಿನಿಮಾಗಳಲ್ಲಿ ನಟಿಸಿರುವ ಖುಷ್ಬೂ ಸುಂದರ್ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ಇದುವರೆಗೂ 200 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅನೇಕ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 2010ರಲ್ಲಿ ಡಿಎಂಕೆ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಖುಷ್ಬೂ ಬಳಿ ಕಾಂಗ್ರೆಸ್ ಸೇರ್ಪಡೆಯಾದರು. ಒಂದು ಕಾಲದಲ್ಲಿ ನಾಯಕರಿಗಿಂತ ಬಹುಬೇಡಿಕೆಯ ನಟಿಯಾಗಿದ್ದ ಖುಷ್ಬೂ ಅವರ ಹೆಸರಿನಲ್ಲಿ ತಮಿಳುನಾಡಿನಲ್ಲಿ ದೇವಸ್ಥಾನವನ್ನೂ ನಿರ್ಮಿಸಲಾಗಿದೆ. ನಟಿಯೊಬ್ಬರ ಹೆಸರಿನಲ್ಲಿ ನಿರ್ಮಾಣವಾಗಿರುವ ಭಾರತದ ಏಕೈಕ ದೇವಸ್ಥಾನ ಇದಾಗಿದೆ.
Published by:
Sushma Chakre
First published:
October 12, 2020, 9:32 AM IST