news18-kannada Updated:October 12, 2020, 2:06 PM IST
ಖುಷ್ಬೂ ಸುಂದರ್
ನವದೆಹಲಿ (ಅ. 12): ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಹಾಗೂ ಪಂಚಭಾಷಾ ನಟಿ ಖುಷ್ಬೂ ಸುಂದರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ನೀಡಿದ ಖುಷ್ಬೂ, ನನಗೆ ಪಕ್ಷದಲ್ಲಿ ಗುರುತರವಾದ ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದಗಳು. ಕಾಂಗ್ರೆಸ್ ಪಕ್ಷದಲ್ಲಿ ಮೇಲಿನ ಹುದ್ದೆಗಳಲ್ಲಿ ಇರುವವರು ತಳಮಟ್ಟದ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತಿರುವವರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆಯಿದ್ದು, ಈ ಪಕ್ಷದೊಂದಿಗಿನ ನನ್ನ ಸಂಬಂಧವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದು ಬರೆದಿದ್ದಾರೆ.
ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ನಟಿ ಎನಿಸಿಕೊಂಡಿದ್ದ ಖುಷ್ಬೂ 2014ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಇದೀಗ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಮೆರೆದಿದ್ದ ಖುಷ್ಬೂ ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಖುಷ್ಬೂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ಧೋನಿ ಮಗಳಿಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದ 16 ವರ್ಷದ ಯುವಕನ ಬಂಧನ
ಬಿಜೆಪಿಗೆ ಸೇರ್ಪಡೆಯಾಗುವ ವಿಚಾರದ ಬಗ್ಗೆ ಕಳೆದ ವಾರ ಪ್ರತಿಕ್ರಿಯೆ ನೀಡಿದ್ದ ಖುಷ್ಬೂ ಆ ರೀತಿಯ ಯಾವುದೇ ಯೋಚನೆಯಿಲ್ಲ. ಟ್ವಿಟ್ಟರ್ನಲ್ಲಿ ಯಾರೋ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದಿದ್ದರು. ನಿನ್ನೆ ರಾತ್ರಿಯೇ ಚೆನ್ನೈನಿಂದ ದೆಹಲಿಗೆ ಹೊರಟಿದ್ದ ಖುಷ್ಬೂ ಇಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದ್ದಾರೆ.
ಕನ್ನಡದ ರಣಧೀರ, ಅಂಜದ ಗಂಡು, ಶಾಂತಿ ಕ್ರಾಂತಿ, ಜೀವನದಿ, ಮ್ಯಾಜಿಕ್ ಅಜ್ಜಿ ಮುಂತಾದ ಸುಮಾರು 20 ಸಿನಿಮಾಗಳಲ್ಲಿ ನಟಿಸಿರುವ ಖುಷ್ಬೂ ಸುಂದರ್ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ಇದುವರೆಗೂ 200 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅನೇಕ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 2010ರಲ್ಲಿ ಡಿಎಂಕೆ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಖುಷ್ಬೂ ಬಳಿ ಕಾಂಗ್ರೆಸ್ ಸೇರ್ಪಡೆಯಾದರು. ಒಂದು ಕಾಲದಲ್ಲಿ ನಾಯಕರಿಗಿಂತ ಬಹುಬೇಡಿಕೆಯ ನಟಿಯಾಗಿದ್ದ ಖುಷ್ಬೂ ಅವರ ಹೆಸರಿನಲ್ಲಿ ತಮಿಳುನಾಡಿನಲ್ಲಿ ದೇವಸ್ಥಾನವನ್ನೂ ನಿರ್ಮಿಸಲಾಗಿದೆ. ನಟಿಯೊಬ್ಬರ ಹೆಸರಿನಲ್ಲಿ ನಿರ್ಮಾಣವಾಗಿರುವ ಭಾರತದ ಏಕೈಕ ದೇವಸ್ಥಾನ ಇದಾಗಿದೆ.
Published by:
Sushma Chakre
First published:
October 12, 2020, 2:05 PM IST