ತಿರುವನಂತಪುರಂ: ಸ್ಥಳೀಯ ಹೋಟೆಲ್ನಲ್ಲಿ (Hotel) ಬಿರಿಯಾನಿ (Biriyani) ಆರ್ಡರ್ (Online Order) ಮಾಡಿ ಸೇವಿಸಿದ್ದ 20 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಯುವತಿಯನ್ನು ಪೆರುಂಬಳದ (Perumbala) ಅಂಜು ಶ್ರೀಪಾರ್ವತಿ (Anju Sreeparvathy) ಎಂದು ಗುರುತಿಸಲಾಗಿದೆ. ಡಿಸೆಂಬರ್ 31 ರಂದು ಕಾಸರಗೋಡಿನ (Kasaragod) ರೊಮ್ಯಾನ್ಸಿಯಾ ಎಂಬ ರೆಸ್ಟೋರೆಂಟ್ನಿಂದ ಆನ್ಲೈನ್ (Online) ಮೂಲಕ ಕುಜಿಮಂತಿ (Kuzhimanthi) ಬಿರಿಯಾನಿಯನ್ನು ಆರ್ಡರ್ ಮಾಡಿ ತರಿಸಿಕೊಂಡು ಸೇವಿಸಿದ್ದರು. ನಂತರ ಅಸ್ವಸ್ಥರಾದ ಯುವತಿಯನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಈ ಬಗ್ಗೆ ಯುವತಿಯ ಪೋಷಕರು (Parents) ಪೊಲೀಸರಿಗೆ (Police) ಸಹ ದೂರು ನೀಡಿದ್ದಾರೆ. ಆದರೆ ಶನಿವಾರ ಮುಂಜಾನೆ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದೀಗ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ
ಮೊದಲಿಗೆ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕರ್ನಾಟಕದ ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಕೊನೆಯುಸಿರೆಳೆದಿದ್ದಾರೆ.
ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ ಸಚಿವೆ ವೀಣಾ ಜಾರ್ಜ್
ಮತ್ತೊಂದೆಡೆ ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಬಗ್ಗೆ ಪತ್ತನಂತಿಟ್ಟದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಘಟನೆ ಮತ್ತು ಯುವತಿಗೆ ನೀಡಿದ ಚಿಕಿತ್ಸೆಯ ಬಗ್ಗೆಯೂ ಡಿಎಂಒ ಪರಿಶೀಲಿಸುತ್ತಿದ್ದಾರೆ ಎಂದು ಜಾರ್ಜ್ ತಿಳಿಸಿದ್ದಾರೆ.
ಹೋಟೆಲ್ನ ಪರವಾನಗಿ ರದ್ದುಗೊಳಿಸಲು ಸೂಚನೆ
ಇದೇ ವೇಳೆ ವಿಷಕಾರಿ ಆಹಾರ ಸೇವಿಸಿ ಯುವತಿ ಮೃತಪಟ್ಟಿರುವ ಆರೋಪ ಹಿನ್ನೆಲೆ ಹೋಟೆಲ್ನ ಪರವಾನಗಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ (ಎಫ್ಎಸ್ಎಸ್ಎ) ಅಡಿಯಲ್ಲಿ ರದ್ದುಗೊಳಿಸಲಾಗುವುದು ಎಂದಿದ್ದಾರೆ.
ಕೆಲದಿನಗಳ ಹಿಂದೆ ಕೋಝಿಕ್ಕೋಡ್ನ ಉಪಾಹಾರ ಗೃಹದಲ್ಲಿ ಆಹಾರ ತಿಂದು ನರ್ಸ್ ಸಾವು
ಕೆಲದಿನಗಳ ಹಿಂದೆಯಷ್ಟೇ ಇದೇ ರೀತಿ ಕೋಝಿಕ್ಕೋಡ್ನ ಉಪಾಹಾರ ಗೃಹದಲ್ಲಿ ತಯಾರಿಸಿದ್ದ ಆಹಾರ ಸೇವಿಸಿ ನರ್ಸ್ವೊಬ್ಬರು ಸಾವಿಗೀಡಾಗಿದ್ದರು. ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಈ ನರ್ಸ್ ಕಾರ್ಯ ನಿರ್ವಹಿಸುತ್ತಿದ್ದರು.
ಈ ಮುನ್ನ ಚಿಕನ್ ಷಾವರ್ಮಾ ತಿಂದು 16ರ ಬಾಲಕಿ ಸಾವು
ಈ ಮುನ್ನ ಕಾಸರಗೋಡಿನ ಐಡಿಯಲ್ ಫುಡ್ ಪಾಯಿಂಟ್ ಎಂಬ ಉಪಾಹಾರ ಗೃಹದಲ್ಲಿ ಚಿಕನ್ ಷಾವರ್ಮಾ ತಿಂದ 16 ವರ್ಷದ ದೇವಾನಂದ ಎಂಬ ಬಾಲಕಿ ಸಾವನ್ನಪ್ಪಿದ್ದಳು ಮತ್ತು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: Biriyani: ಬಿರಿಯಾನಿ ಪಾರ್ಸೆಲ್ ತಗೊಂಡು ಹಣ ನೀಡದೇ ಕಿರಿಕ್! ಹೋಟೆಲ್ನಲ್ಲಿದ್ದವ್ರ ಮೇಲೆ ಬಿಸಿ ಎಣ್ಣೆ ಎರಚಿದ ಪಾಪಿಗಳು
ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾದ ರೋಗಿಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ ನಂತರ ಬ್ಯಾಕ್ಟೀರಿಯಾ ಪತ್ತೆಯಾಗಿತ್ತು. ಈ ರೋಗಕಾರಕವು ಕರುಳಿನ ಸೋಂಕನ್ನು ಉಂಟುಮಾಡಬಹುದು, ಇದು ತುಂಬಾ ಸಾಂಕ್ರಾಮಿಕವಾಗಿದೆ ಮತ್ತು ಕಲುಷಿತ ಆಹಾರ ಅಥವಾ ನೀರಿನ ಮೂಲಕ ಹರಡಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಡಿಎಂಒ) ಡಾ.ಎ.ವಿ.ರಾಮದಾಸ್ ತಿಳಿಸಿದ್ದರು.
ಮಾಂಸ ಸಂಪೂರ್ಣ ಬೇಯಿಸದಿದ್ದರೆ ಅನಾರೋಗ್ಯಕ್ಕೆ ಒಳಗಾಗೋ ಸಾಧ್ಯತೆ
ಷಾವರ್ಮಾ ಮಾಂಸವನ್ನು ಗ್ರಿಲ್ನ ಮುಂದೆ ದೀರ್ಘಕಾಲ ಹುರಿಯಲಾಗುತ್ತದೆ ಮತ್ತು ಮಾಂಸವನ್ನು ಸಂಪೂರ್ಣವಾಗಿ ಬೇಯಿಸದಿದ್ದರೆ ಗ್ರಾಹಕರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹೇಳಿದರು. ಇದಲ್ಲದೆ, ಭಕ್ಷ್ಯದಲ್ಲಿ ಬಳಸಿದ ಮೇಯನೇಸ್ ಅಥವಾ ತರಕಾರಿಗಳು ಅಥವಾ ಅದನ್ನು ಬಡಿಸುವ ವ್ಯಕ್ತಿ ಕೂಡ ಬ್ಯಾಕ್ಟೀರಿಯಾವನ್ನು ಹೊತ್ತೊಯ್ಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ