105ನೇ ವಯಸ್ಸಿನಲ್ಲಿ 4ನೇ ಕ್ಲಾಸ್​ ಪಾಸಾದ ಕೇರಳದ ಅಜ್ಜಿ; ಶತಾಯುಷಿಯ ಅಂಕ ನೋಡಿದರೆ ಅಚ್ಚರಿ ಪಡ್ತೀರ!

ಮಲೆಯಾಳಂ ಭಾಷೆಯಲ್ಲಿ 75ಕ್ಕೆ 50 ಅಂಕಗಳನ್ನು ಪಡೆದಿರುವ ಭಾಗೀರಥಿ ಅಜ್ಜಿ ಗಣಿತದಲ್ಲಿ ಪೂರ್ತಿ ಅಂಕ ಗಳಿಸುವ ಮೂಲಕ 105ನೇ ವಯಸ್ಸಿನಲ್ಲೇ ತಮ್ಮ ಜ್ಞಾಪಕ ಶಕ್ತಿ ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

Sushma Chakre | news18-kannada
Updated:February 6, 2020, 12:27 PM IST
105ನೇ ವಯಸ್ಸಿನಲ್ಲಿ 4ನೇ ಕ್ಲಾಸ್​ ಪಾಸಾದ ಕೇರಳದ ಅಜ್ಜಿ; ಶತಾಯುಷಿಯ ಅಂಕ ನೋಡಿದರೆ ಅಚ್ಚರಿ ಪಡ್ತೀರ!
4ನೇ ತರಗತಿ ಪಾಸಾದ ಅಜ್ಜಿ ಭಾಗೀರಥಿ
  • Share this:
ಕೊಲ್ಲಂ (ಫೆ. 6): ವಿದ್ಯೆಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ, ವಿದ್ಯೆ ಕದಿಯಲಾಗದ ಸಂಪತ್ತು ಎಂಬ ಮಾತುಗಳನ್ನು ಬಾಲ್ಯದಿಂದಲೂ ಕೇಳಿದ್ದೇವೆ. ಎಷ್ಟೋ ಮಕ್ಕಳಿಗೆ ಮನೆಯಲ್ಲಿ ಎಲ್ಲ ಸೌಕರ್ಯಗಳಿದ್ದರೂ ಓದಲಾಗದೆ ಅರ್ಧಕ್ಕೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡುತ್ತಾರೆ. ಇನ್ನು ಕೆಲವರಿಗೆ ಓದಬೇಕೆಂಬ ಆಸೆಯಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅದು ಸಾಧ್ಯವಾಗುವುದಿಲ್ಲ. ಆದರೆ, ಕೇರಳದ ಅಜ್ಜಿಯೊಬ್ಬರು 105ನೇ ವರ್ಷದಲ್ಲಿ ಫಸ್ಟ್​ ಕ್ಲಾಸ್​ನಲ್ಲಿ 4ನೇ ತರಗತಿ ಪಾಸ್ ಆಗಿದ್ದಾರೆ!

ಕೇರಳದ ಕೊಲ್ಲಂ ಜಿಲ್ಲೆಯ 105 ವರ್ಷದ ಭಾಗೀರಥಿ ಎಂಬ ವೃದ್ಧೆ ತಮ್ಮ ಇಳಿವಯಸ್ಸಿನಲ್ಲಿ 4ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಕೇವಲ ಪಾಸ್ ಅಗಿರುವುದು ಮಾತ್ರವಲ್ಲದೆ ಶೇ. 74.5 ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ಕೇರಳದ ಸಾಕ್ಷರತಾ ಮಿಷನ್ ಹಮ್ಮಿಕೊಂಡಿರುವ ಸಮಾನತೆ ಪರೀಕ್ಷೆಯ 4ನೇ ತರಗತಿ ಪರೀಕ್ಷೆಯಲ್ಲಿ ಭಾಗೀರಥಿ ಅಜ್ಜಿ 275ಕ್ಕೆ 205 ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: ವಯಸ್ಸು 105 ಆದರೂ 4ನೇ ತರಗತಿ ಪರೀಕ್ಷೆ ಬರೆದ ಅಜ್ಜಿ...!

ಬಾಲ್ಯದಲ್ಲೇ ವಿವಾಹವಾಗಿದ್ದರಿಂದ ಭಾಗೀರಥಿ ಅವರ ಓದಿನ ಕನಸು ಕನಸಾಗೇ ಉಳಿದಿತ್ತು. ನಂತರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಂದು ಸಂಸಾರದೊಳಗೆ ಮುಳುಗಿದ ಅವರು ಈಗ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕೇರಳ ಸರ್ಕಾರ ಹಮ್ಮಿಕೊಂಡಿರುವ ಸಾಕ್ಷರತಾ ಮಿಷನ್​ ಯೋಜನೆಯ ಮೂಲಕ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅಜ್ಜಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದನ್ನು ತಿಳಿದು ಮನೆಮಂದಿಯೆಲ್ಲ ಅವರಿಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದ್ದಾರೆ.


ಮಲೆಯಾಳಂ ಭಾಷೆಯಲ್ಲಿ 75ಕ್ಕೆ 50 ಅಂಕಗಳನ್ನು ಪಡೆದಿರುವ ಭಾಗೀರಥಿ ಅಜ್ಜಿ ಗಣಿತದಲ್ಲಿ ಪೂರ್ತಿ ಅಂಕ ಗಳಿಸುವ ಮೂಲಕ 105ನೇ ವಯಸ್ಸಿನಲ್ಲೇ ತಮ್ಮ ಜ್ಞಾಪಕ ಶಕ್ತಿ ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಂಗ್ಲಿಷ್ ಭಾಷೆಯಲ್ಲೂ 50ಕ್ಕೆ 30 ಅಂಕ ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಅರಳಿತು ಪ್ರೀತಿ; ಇಳಿವಯಸ್ಸಿನಲ್ಲಿ ಮದುವೆಯಾದ ಅಜ್ಜ-ಅಜ್ಜಿಯ ಲವ್​ ಸ್ಟೋರಿ ಇಲ್ಲಿದೆ...

ಅಜ್ಜಿ ಭಾಗೀರಥಿಗೆ ಸಿಹಿ
ತಿನ್ನಿಸಿ ಅಭಿನಂದನೆ ಸಲ್ಲಿಸುತ್ತಿರುವ ಕುಟುಂಬಸ್ಥರು


3ನೇ ತರಗತಿಯಲ್ಲಿ ಓದುತ್ತಿದ್ದ ಭಾಗೀರಥಿ ತಾಯಿ ತೀರಿಕೊಂಡ ನಂತರ ತಮ್ಮನನ್ನು ನೋಡಿಕೊಳ್ಳುವ ಸಲುವಾಗಿ ಶಾಲೆಯ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು. 9ನೇ ವಯಸ್ಸಿನಲ್ಲಿ ಮನೆಯಲ್ಲೇ ಉಳಿಯುವಂತಾದ ಅವರಿಗೆ ಅದಾದ ಕೆಲವೇ ವರ್ಷಗಳಲ್ಲಿ ಮದುವೆಯಾಯಿತು. ತಮ್ಮ 30ನೇ ವರ್ಷದಲ್ಲಿ ಗಂಡನನ್ನು ಕಳೆದುಕೊಂಡಾಗ ನಾಲ್ವರು ಹೆಣ್ಣುಮಕ್ಕಳು ಸೇರಿದಂತೆ ತನ್ನ ಆರು ಮಕ್ಕಳನ್ನು ಬೆಳೆಸುವ ಸಂಪೂರ್ಣ ಜವಾಬ್ದಾರಿ ಅವಳ ಹೆಗಲ ಮೇಲೆ ಬಿತ್ತು.

ಕೇರಳ ರಾಜ್ಯದ ಸಾಕ್ಷರತಾ ಅಭಿಯಾನದಡಿ 4ನೇ ತರಗತಿ ತೇರ್ಗಡೆಯಾಗಿರುವ ಭಾಗೀರಥಿ ಅಜ್ಜಿಗೆ 6 ಮಕ್ಕಳು ಹಾಗೂ 16 ಮೊಮ್ಮಕ್ಕಳು ಹಾಗೂ ಮರಿಮಕ್ಕಳಿದ್ದಾರೆ. ಈ ಶತಾಯುಷಿ ಅಜ್ಜಿಯ ಅಕ್ಷರಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
First published: February 6, 2020, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading