ಭಾರೀ ಮಳೆ, ಕಾಡಿನಲ್ಲಿ ಸಿಕ್ಕಾಕೊಂಡ 3 ಗರ್ಭಿಣಿ ಮಹಿಳೆಯರು, ಅಲ್ಲೇ ಮಗುವಿಗೆ ಜನ್ಮ ಕೊಟ್ಟ ಒಬ್ಬ ಮಹಿಳೆ!

ದೇವರನಾಡು ಕೇರಳದಲ್ಲಿ ಮಳೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದೆ. ಇಲ್ಲಿ ಸುರಿದ ಭಾರೀ ಮಳೆಗೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರನ್ನು ಪರಿಹಾರ ಶಿಬಿರಗಳಿಗೆ ಕಳುಹಿಸಲಾಗಿದೆ. ಮಳೆಯಿಂದಾಗಿ 3 ಗರ್ಭಿಣಿಯರು ಕಾಡಿನಲ್ಲಿ ಸಿಲುಕಿದ್ದಾರೆ. ಈ ಪೈಕಿ ಒಬ್ಬ ಮಹಿಳೆ ಕಾಡಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದರೂ.

ಕೇರಳದಲ್ಲಿ ಭಾರೀ ಮಳೆ

ಕೇರಳದಲ್ಲಿ ಭಾರೀ ಮಳೆ

  • Share this:
ತಿರುವನಂತಪುರಂ(ಆ.06): ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ (Kerala Rains) ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾಗಾಗಿ 2 ಸಾವಿರಕ್ಕೂ ಹೆಚ್ಚು ಮಂದಿ ಪರಿಹಾರ ಶಿಬಿರಗಳಲ್ಲಿದ್ದಾರೆ. ಭಾರೀ ಮಳೆಗೆ 3 ಗರ್ಭಿಣಿಯರು (Pregnant) ಕಾಡಿನಲ್ಲಿ ಸಿಲುಕಿಕೊಂಡಿದ್ದಾರೆ. ಅರಣ್ಯ ಇಲಾಖೆ (Forest Department) ಹಾಗೂ ಪೊಲೀಸರ ನೆರವಿನಿಂದ ಅವರನ್ನು ರಕ್ಷಿಸಲಾಗಿದೆ. ಸದ್ಯ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಇದೇ ವೇಳೆ ಮಹಿಳೆಯೊಬ್ಬರು ಕಾಡಿನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಾಹಿತಿ ಪ್ರಕಾರ, ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.

ಏಜೆನ್ಸಿಯ ಪ್ರಕಾರ, ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದ ತಂಡವು ಮೂವರು ಗರ್ಭಿಣಿಯರನ್ನು ಮಾತುಕತೆ ನಡೆಸಿ ಅವರನ್ನು ಚಾಲಕುಡಿ ತಾಲೂಕು ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಘಟನೆಯ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ಪಡೆದು, ಗರ್ಭಿಣಿಯರನ್ನು ರಕ್ಷಿಸಿದ ತಂಡವನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ:  Kerala: ಬೆಟ್ಟದ ಸೀಳಿನಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ಸೇನಾಪಡೆ, ಊಫ್​.. ಬದುಕಿತು ಬಡಜೀವ!

ಭಾರೀ ಮಳೆಯ ಹಿನ್ನೆಲೆಯಲ್ಲಿ ಮಲಂಪುಳ ಅಣೆಕಟ್ಟಿನ 4 ಗೇಟ್‌ಗಳನ್ನು ತೆರೆಯಲಾಗಿದೆ. ಮುಕ್ಕೈಪುಳ, ಕಲ್ಪತಿಪುಳ ಮತ್ತು ಭರತಪುಳ ನದಿಗಳ ದಡದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮಲಂಪುಳ ಅಣೆಕಟ್ಟಿನ ಸಾಮರ್ಥ್ಯ 112.99 ಮೀಟರ್. ಸದ್ಯ ಪರಿಸ್ಥಿತಿ ಅಪಾಯದಿಂದ ಪಾರಾಗಿದೆ. ಆದರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಗೇಟ್‌ಗಳನ್ನು ತೆರೆಯಲಾಗಿದೆ. ನೀರಿನ ಮಟ್ಟ 5 ಸೆಂ.ಮೀ ಏರಿಕೆಯಾಗಿದೆ.

ಆಗಸ್ಟ್ 8 ರವರೆಗೆ ಭಾರೀ ಮಳೆ ಎಚ್ಚರಿಕೆ

ಐಎಂಡಿ ಆಗಸ್ಟ್ 4 ರಿಂದ 8 ರವರೆಗೆ ಕೇರಳದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಅಲ್ಲದೆ ಕೇರಳದ ಸಮುದ್ರ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಕೇರಳದ ಕೊಟ್ಟಾಯಂ ಮತ್ತು ಪತ್ತನಂತಿಟ್ಟದ ಎಲ್ಲಾ ನದಿಗಳ ನೀರಿನ ಮಟ್ಟ ವೇಗವಾಗಿ ಏರುತ್ತಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಆಡಳಿತ ಸಂಪೂರ್ಣ ಜಾಗರೂಕವಾಗಿದೆ. ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತಿದೆ.

2 ಸಾವಿರಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ರವಾನಿಸಲಾಗಿದೆ

ಭಾರೀ ಮಳೆಯಿಂದಾಗಿ ರಾಜ್ಯಾದ್ಯಂತ 2 ಸಾವಿರಕ್ಕೂ ಹೆಚ್ಚು ಮಂದಿ ಪರಿಹಾರ ಶಿಬಿರಗಳಲ್ಲಿದ್ದಾರೆ. ಏಜೆನ್ಸಿ ಪ್ರಕಾರ, ಕೇರಳದಲ್ಲಿ ಭಾರೀ ಮಳೆಯಿಂದಾಗಿ ಇದುವರೆಗೆ ಆರು ಜನರು ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಆಗಸ್ಟ್ 4 ರಂದು ಚಾಲಕುಡಿ ನದಿ ಉಕ್ಕಿ ಹರಿಯುತ್ತಿರುವ ಶೋಲಾಯಾರ್ ಮತ್ತು ಪೆರಿಂಗಲ್ಕುತ್ತು ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿತ್ತು.

ಇದನ್ನೂ ಓದಿ:  Explained: ದಕ್ಷಿಣ ಕೇರಳದಲ್ಲಿ ಭಾರೀ ಮಳೆ ಮತ್ತು ಭೂಕುಸಿತಕ್ಕೆ ಕಾರಣವೇನು ಗೊತ್ತಾ..? ವಿವರ ಇಲ್ಲಿದೆ

ತಗ್ಗು ಪ್ರದೇಶದ ಜನರು ಎಚ್ಚೆತ್ತುಕೊಳ್ಳಬೇಕು ಎಂದ ಸಿಎಂ ವಿಜಯನ್

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಾಲಕುಡಿ ನದಿ ದಡದಲ್ಲಿ ವಾಸಿಸುವ ಜನರು ಹೊರಗೆ ಬರುವಂತೆ ಮನವಿ ಮಾಡಿದ್ದಾರೆ. ಏಕೆಂದರೆ ಇಂದು ಸಂಜೆ ವೇಳೆಗೆ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು. ಮಳೆಯಿಂದಾಗಿ ಇಡುಕ್ಕಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

ಎನ್‌ಡಿಆರ್‌ಎಫ್ ತಂಡಗಳು ಸನ್ನದ್ಧ ಸ್ಥಿತಿಯಲ್ಲಿ

ರಾಜ್ಯದಲ್ಲಿ ಭೂಕುಸಿತ ಮತ್ತು ಪ್ರವಾಹದ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ವಾಯು ಮತ್ತು ನೌಕಾಪಡೆಯನ್ನು ಸಹ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜುಲೈನಲ್ಲಿ ಕೇರಳದಲ್ಲಿ ಮಳೆಯಿಂದಾಗಿ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಕಾಸರಗೋಡು ನದಿಗಳು ಉಕ್ಕಿ ಹರಿಯುತ್ತಿದ್ದವು. ಅಲ್ಲದೆ ಕಣ್ಣೂರಿನಲ್ಲಿ ಹಲವು ಮನೆಗಳು ಕುಸಿದಿವೆ.
Published by:Precilla Olivia Dias
First published: