Kerala Rain: ತೌಕ್ತೆ ಚಂಡಮಾರುತ; ಭಾರೀ ಮಳೆ​ಯಿಂದ ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಣೆ

ಚಂಡಮಾರುತ

ಚಂಡಮಾರುತ

Cyclone Tauktae : ಕೇರಳದಲ್ಲಿ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಕಾಸರಗೋಡು, ಮಲಪ್ಪುರಂ ಸೇರಿ ಕೇರಳದ 8 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್​ ಘೋಷಿಸಿದೆ.

  • News18
  • 4-MIN READ
  • Last Updated :
  • Share this:

ಬೆಂಗಳೂರು (ಮೇ 14): ಭಾರತದಲ್ಲಿ ಈ ವರ್ಷದ ಮೊದಲ ಚಂಡಮಾರುತ ನಾಳೆ ಅಬ್ಬರಿಸಲಿದ್ದು, ನಾಳೆ ಕೇರಳವನ್ನು ಪ್ರವೇಶಿಸಲಿದೆ. ಈ ಚಂಡಮಾರುತಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಡಲಾಗಿದೆ. ನಾಳೆಯಿಂದ 2 ದಿನಗಳ ಕಾಲ ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್​ ಮಾಡಲಾಗಿದೆ. ನಾಳೆ ಕೇರಳಕ್ಕೆ ಪ್ರವೇಶಿಸಲಿರುವ ತೌಕ್ತೆ ಚಂಡಮಾರುತ ಮೇ 16ರಂದು ಕರ್ನಾಟಕದಲ್ಲಿ ಅಬ್ಬರಿಸಲಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರಂ, ಕಾಸರಗೋಡು, ಕಣ್ಣೂರು, ವಯನಾಡ್, ಕೋಳಿಕೋಡ್, ಮಲಪ್ಪುರಂ, ಕೊಲ್ಲಂ, ಪಥನಾಂತಿಟ್ಟ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.


ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಮೇ 17ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು, ನಾಳೆ ಮತ್ತು 17ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ಮೇ 16ರಂದು ಅರಬ್ಬಿ ಸಮುದ್ರದಲ್ಲಿ ಈ ವರ್ಷದ ಮೊದಲ ಚಂಡಮಾರುತ ಅಪ್ಪಳಿಸಲಿದ್ದು, ಇದಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಡಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಂಡಮಾರುತ ಅಬ್ಬರಿಸಲಿದೆ. ಹೀಗಾಗಿ, ಮುಂದಿನ 1 ವಾರಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಶನಿವಾರ ಮತ್ತು ಭಾನುವಾರ ನಾಳೆ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ತೌಕ್ತೆ ಚಂಡಮಾರುತ ಅಬ್ಬರ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಮೇ 16ರಂದು ಗಂಟೆಗೆ 40ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.


ಅರಬ್ಬಿ ಸಮುದ್ರದ ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿಯುವ ಹಿನ್ನೆಲೆಯಲ್ಲಿ ಮೇ 16ರಂದು ಕರ್ನಾಟಕಕ್ಕೆ ಚಂಡಮಾರುತ ಅಪ್ಪಳಿಸಲಿದೆ. ತೌಕ್ತೆ ಚಂಡಮಾರುತ ಎಂಬುದು ಮಯನ್ಮಾರ್ ಹೆಸರಾಗಿದೆ. ಲಕ್ಷದ್ವೀಪ, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಹೆಚ್ಚಾಗಿರಲಿದೆ. ಕರ್ನಾಟಕದಲ್ಲಿ ಮೇ 15 ಮತ್ತು 16 ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ , ಚಿಕ್ಕಮಗಳೂರು, ಹಾಸನ, ಹಾಗೂ ಕೊಡಗು ಜಿಲ್ಲೆಗಳ ಕೆಲವು ಕಡೆ ಇಂದು ಮತ್ತು 17ರಂದು ಭಾರೀ ಮಳೆಯಾಗುವ ಸಾಧ್ಯತೆ‌. ನಾಳೆ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯವಾದ ಕೇರಳ, ಅಸ್ಸಾಂ, ಸಿಕ್ಕಿಂ, ಪಶ್ಚಿಮ ಬಂಗಾಳ, ಮೇಘಾಲಯದಲ್ಲೂ ಇಂದು ಮಳೆ ಹೆಚ್ಚಾಗಲಿದೆ. ಜೂನ್ 1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದ 8 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್​ ಘೋಷಿಸಿದ್ದು, ಕೇರಳ ಸರ್ಕಾರದಿಂದ ಕಂಟ್ರೋಲ್ ರೂಂ ಅನ್ನು ಕೂಡ ತೆರೆಯಲಾಗಿದೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು