Kerala Police: ಅಪರಾಧ ನಡೆದಾಗ ಪೊಲೀಸರು ಸಾಮಾನ್ಯವಾಗಿ ಬೇರೆ ಜನರನ್ನು ಕರೆಯಿಸಿ ಅವರಿಗೆ ದೊರೆತ ಮಾಹಿತಿಯನ್ನು ಬಳಸಿಕೊಂಡು ಘಟನೆಯನ್ನು ಮರುಸೃಷ್ಟಿಸಿಕೊಂಡು ಪರೀಕ್ಷಿಸುತ್ತಾರೆ. ಆದರೆ ಕೇರಳದಲ್ಲಿ ನಡೆದಂತಹ ಒಂದು ಪ್ರಕರಣದ ಮರುಸೃಷ್ಟಿಗೆ ನಾಗರಹಾವನ್ನು ಬಳಸಿಕೊಂಡಿದ್ದಾರೆ. ಕೇರಳದಲ್ಲಿ ಮೇ 2020 ರಲ್ಲಿ ನಡೆದ ಪ್ರಕರಣದಲ್ಲಿ 25 ವರ್ಷದ ಉತ್ತರಾ ಎಂಬಾಕೆಯನ್ನು ಅವಳ ಗಂಡನಾದ ಸೂರಜ್ ನಿದ್ರೆ ಮಾತ್ರೆಯನ್ನು ತಿನ್ನಿಸಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿತ್ತು. ನಿದ್ರೆ ಮಾತ್ರೆಯನ್ನು ತಿನ್ನಿಸಿ ನಂತರ ಒಂದು ನಾಗರಹಾವನ್ನು ಆ ಕೋಣೆಯಲ್ಲಿ ಬಿಟ್ಟು ಪ್ರಕರಣದ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದನೆಂದು ತಿಳಿದು ಬಂದಿತ್ತು.
ಕೊಲೆಯ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರ ತಂಡವು ಜೀವಂತ ಹಾವು ಮತ್ತು ಒಂದು ಹೆಣ್ಣು ಗೊಂಬೆಯನ್ನು ಬಳಸಿ ಅಪರಾಧವನ್ನು ಮರುಸೃಷ್ಟಿ ಮಾಡಿದ್ದಾರೆ. ಒಂದು ಸುದ್ದಿ ಮಾಧ್ಯಮದ ಪ್ರಕಾರ, ಕಳೆದ ವರ್ಷ ಅರಿಪ್ಪಾದ ಕೊಲ್ಲಂ ಜಿಲ್ಲೆಯ ಅರಣ್ಯ ಇಲಾಖೆಯ ಅಡಿಯಲ್ಲಿರುವ ರಾಜ್ಯ ತರಬೇತಿ ಕೇಂದ್ರದಲ್ಲಿ ಹಾವು ಮತ್ತು ಹೆಣ್ಣು ಗೊಂಬೆಯನ್ನು ಬಳಸಿಕೊಂಡು ಅಪರಾಧದ ಸ್ಥಳದ ಮರುಸೃಷ್ಟಿ ಮಾಡಲಾಗಿದ್ದು, ಇದರ ವೀಡಿಯೋವನ್ನು ಬಿಡುಗಡೆ ಮಾಡಲಾಗಿದೆ. ನ್ಯಾಯಾಲಯಕ್ಕೆ ಈ ವೀಡಿಯೋವನ್ನು ಸಲ್ಲಿಸಲಾಗಿದ್ದು, ಈ ಪ್ರಕರಣದಲ್ಲಿ ವೀಡಿಯೊ ತುಂಬಾ ಪ್ರಮುಖವಾದ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಘಟನೆಯ ಮರುಸೃಷ್ಟಿ ವಿಡಿಯೋದಲ್ಲಿ, ನಾಗರಹಾವನ್ನು ಹಾಸಿಗೆಯ ಮೇಲೆ ಮಲಗಿರುವ ಗೊಂಬೆಯ ಮೇಲೆ ಬಿಡಲಾಯಿತು. ಕೋಣೆಯಲ್ಲಿ ಯಾರು ಇಲ್ಲದಿದ್ದರೂ ಸಹ ಹಾವು ಗೊಂಬೆಯನ್ನು ಕಚ್ಚುವುದಿಲ್ಲ ಎಂದು ಮಹೀಂದ್ರ ವನ್ಯಜೀವಿ ಪ್ರತಿಷ್ಠಾನದ ಅಧ್ಯಕ್ಷ ಮನೀಶ್ ಕುಮಾರ್ ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. “ನಾವು ಎರಡು ಅಥವಾ ಮೂರು ಬಾರಿ ಹಾವನ್ನು ಗೊಂಬೆಯ ಮೇಲೆ ಹಾಕಿದೆವು, ಆದರೂ ಅದು ಏನು ಮಾಡಲಿಲ್ಲ ಮತ್ತು ಅದು ಬೇರೆ ಕಡೆಗೆ ಹೋಯಿತು”, ಎಂದು ಮನೀಶ್ ತಿಳಿಸಿದರು.
ಹಾವನ್ನು ಕಚ್ಚುವಂತೆ ಪ್ರಚೋದಿಸಲು ತಂಡವು ಗೊಂಬೆಯ ಕೈಗೆ ಹಸಿ ಕೋಳಿ ಮಾಂಸದ ತುಂಡನ್ನು ಸುತ್ತಿದರೂ, ನಾಗರಹಾವು ಕಚ್ಚಲಿಲ್ಲ. ನಾಗರಹಾವು ಸಾಮಾನ್ಯವಾಗಿ ರಾತ್ರಿಯಲ್ಲಿ ಸಕ್ರಿಯವಾಗಿರುವುದಿಲ್ಲ ಎಂದು ಮನೀಶ್ ತಿಳಿಸಿದ್ದಾರೆ. ಹಾವು ಅಂತಿಮವಾಗಿ ಹಲವಾರು ಪ್ರಯತ್ನಗಳ ನಂತರ ಕಚ್ಚಿದ್ದು, ಅಧಿಕಾರಿಗಳು ಹಾವು ಕಚ್ಚುವಿಕೆಯನ್ನು ಅಳತೆ ಮಾಡಿದ್ದಾರೆ. ಕಳೆದ ವರ್ಷ ಕ್ರೈಂ ಬ್ರ್ಯಾಂಚ್ ನಡೆಸಿದ ತನಿಖೆಯ ನಂತರ, ಅಡೂರಿನ ಖಾಸಗಿ ಬ್ಯಾಂಕ್ ಉದ್ಯೋಗಿಯಾದ ಸೂರಜ್ ಮತ್ತು ನಾಗರಹಾವನ್ನು ಅವರಿಗೆ ತಂದುಕೊಟ್ಟ ಹಾವು ಹಿಡಿಯುವವರನ್ನು ಸೂರಜ್ ಪತ್ನಿ ಉತ್ತರಾಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಾ ಅವರ ಪೋಷಕರು ಮೇ 7 ರಂದು ತಮ್ಮ ಮಗಳ ಸಾವಿನ ಬಗ್ಗೆ ಸಂಶಯವಿದೆ ಎಂದು ಹೇಳಿ ಪೊಲೀಸರ ಮೊರೆ ಹೋಗಿದ್ದರು, ಏಕೆಂದರೆ ಒಂದೆರಡು ತಿಂಗಳ ಹಿಂದೆಯೇ ಆಕೆಯು ಹಾವಿನ ಕಡಿತಕ್ಕೆ ಒಳಗಾಗಿದ್ದಳು ಮತ್ತು ಚೇತರಿಸಿಕೊಂಡಿದ್ದಳು ಎಂದು ಹೇಳಿದ್ದರು. ಆಘಾತಕಾರಿ ಹತ್ಯೆಯು ಹಣಕಾಸಿನ ವಿಚಾರಕ್ಕಾಗಿ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಸೂರಜ್ ವರದಕ್ಷಿಣೆಯಲ್ಲಿ ಚಿನ್ನಾಭರಣಗಳನ್ನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ