ಕೀಕಿ ಚಾಲೆಂಜ್​ನಲ್ಲಿ ಸತ್ತವನು ಬದುಕಿ ಬಂದ ಕತೆ!

news18
Updated:August 7, 2018, 11:22 AM IST
ಕೀಕಿ ಚಾಲೆಂಜ್​ನಲ್ಲಿ ಸತ್ತವನು ಬದುಕಿ ಬಂದ ಕತೆ!
news18
Updated: August 7, 2018, 11:22 AM IST
ನ್ಯೂಸ್​18 ಕನ್ನಡ

ಕೊಚ್ಚಿ (ಆ. 7): ಬೆಳಗೆದ್ದು ಕಾಫಿ ಕಪ್​ ಹಿಡಿದು ಡೈನಿಂಗ್​ ಟೇಬಲ್​ ಮೇಲೆ ಕುಳಿತು ಪೇಪರ್​ ತೆರೆಯುತ್ತೀರಿ. ಅದರಲ್ಲಿ ನೀವು ಸತ್ತುಹೋಗಿದ್ದೀರಿ ಎಂದು ನಿಮ್ಮದೇ ಫೋಟೋ ರಾರಾಜಿಸುತ್ತಿದ್ದರೆ, ಆ ಸುದ್ದಿಯನ್ನು ನೀವೇ ಓದುತ್ತಿದ್ದರೆ ಹೇಗನಿಸಬಹುದು? ಕುಳಿತ ಖುರ್ಚಿಯೇ ಕುಸಿದಂತಾಗುವುದು ನಿಜ ತಾನೇ?

ಇದೇನಪ್ಪಾ.. ಹೀಗೂ ಆಗುತ್ತಾ! ಅಂತ ಆಶ್ಚರ್ಯಪಡಬೇಡಿ. ಕೆಲವೊಮ್ಮೆ ನಮ್ಮ ಸುತ್ತಮುತ್ತಲೂ ನಡೆಯುವ ಬೆಳವಣಿಗೆಗಳಿಗೆ ನಾವು ಯಾವ ರೀತಿ ಸ್ಪಂದಿಸಬೇಕೆಂಬುದೇ ಗೊತ್ತಾಗುವುದಿಲ್ಲ. ಇಂಥದ್ದೇ ಸಂದರ್ಭ ಕೇರಳ ಮೂಲದ ಜವಾಹರ ಸುಭಾಷ್​ ಚಂದ್ರ ಅವರಿಗೂ ಎದುರಾಗಿತ್ತು.

ಇತ್ತೀಚೆಗೆ ಎಲ್ಲೆಡೆ ಕ್ರೇಜ್​ ಹುಟ್ಟಿಸಿದ್ದ ಕೀಕಿ ಚಾಲೆಂಜ್​ ಅನ್ನು ಪೊಲೀಸರು ನಿರ್ಬಂಧಿಸಿದ್ದರು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತನ್ನು ಹಾಕಿದ್ದರು. ರಾಜಸ್ಥಾನದ ಜೈಪುರ ಪೊಲೀಸರು ಇದೇರೀತಿ ಜಾಹೀರಾತು ಮೂಲಕ ಅಭಿಯಾನ ಮಾಡುವ ಭರದಲ್ಲಿ ಒಂದು ಯಡವಟ್ಟು ಮಾಡಿದ್ದಾರೆ. ಕೀಕಿ ಚಾಲೆಂಜ್​ ಸ್ವೀಕರಿಸಿ ಹುಡುಗನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಜಾಹೀರಾತಿನಲ್ಲಿ ತೋರಿಸಿರುವ ಜೈಪುರ ಪೊಲೀಸರು ಸಾವನ್ನಪ್ಪಿದ ಹುಡುಗನ ಫೋಟೋವನ್ನು ಟ್ವಿಟ್ಟರ್​ನಲ್ಲಿ ಹಾಕಿದ್ದಾರೆ. ಆ ಮೂಲಕ ಜನರಿಗೆ ಎಚ್ಚರಿಕೆ ಕೊಡಲು ಹೋಗಿದ್ದಾರೆ.

ಆಗಿದ್ದೇ ಬೇರೆ!:
ಪೊಲೀಸರ ಉದ್ದೇಶವೇನೋ ಒಳ್ಳೆಯದೇ ಆಗಿತ್ತು. ಆದರೆ, ಆ ಪೊಲೀಸರು ಬಳಸಿಕೊಂಡ ಫೊಟೋ ಕೇರಳದ ಯುವಕ ಜವಾಹರ ಸುಭಾಷ್​ಚಂದ್ರ ಅವರದ್ದು. ವಾಸ್ತವವಾಗಿ ಅವರು ಸತ್ತಿರಲೇ ಇಲ್ಲ!. ಕೀಕಿ ಚಾಲೆಂಜ್​ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲದ ಇವರಿಗೆ ಯಾರೋ ಗೆಳೆಯರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆ ಟ್ವಿಟ್ಟರ್​ನ ಫೋಟೋ ಬಂದಿದೆ. ಜಾಲತಾಣದಲ್ಲಿ ಆ ಫೋಟೋ ವೈರಲ್​ ಆಗುತ್ತಿದ್ದಂತೆ ಸುಭಾಷ್​ಚಂದ್ರ ಅವರಿಗೆ ಸಂಬಂಧಿಕರು, ಗೆಳೆಯರಿಂದ ಫೋನ್​ ಕರೆಗಳು ಬರಲಾರಂಭಿಸಿವೆ. ದುಬೈನಲ್ಲಿ ಉದ್ಯೋಗದಲ್ಲಿರುವ ಸುಭಾಷ್​ಗೆ ಮೊದಲು ಫೋನ್​ ಮಾಡಿ ಬದುಕಿರುವ ಬಗ್ಗೆ ಖಾತರಿಪಡಿಸಿಕೊಂಡಿದ್ದೇ ಆತನ ಹೆಂಡತಿಯಂತೆ!.

 
Loading...


ನಾನಿನ್ನೂ ಜೀವಂತವಾಗಿದ್ದೇನೆ:
ನಾನು ಜೀವಂತವಾಗಿದ್ದೇನೆ. ನಾನು ನನ್ನ ಜೀವನದಲ್ಲಿ ಎಂದೂ ಕೀಕಿ ಚಾಲೆಂಜಿನಂತಹ ಸವಾಲುಗಳನ್ನು ಸ್ವೀಕರಿಸಿಲ್ಲ. ನನ್ನ ಫೋಟೋಗೆ ಹಾರ ಹಾಕಿ ಎಲ್ಲೆಡೆ ಪ್ರಚಾರ ಮಾಡುತ್ತಿರುವುದನ್ನು ನೋಡಿ ಮೊದಲ ಆಘಾತವಾದರೂ ಅದರಿಂದ ಜನರಲ್ಲಿ ಜಾಗೃತಿ ಮೂಡುತ್ತಿದೆಯಲ್ಲ ಎಂದು ಖುಷಿಯಾಗುತ್ತಿದೆ. 10 ವರ್ಷ ಹಿಂದಿನ ನನ್ನ ಫೋಟೋವನ್ನು ಬಳಸಿಕೊಂಡಿದ್ದಾರೆ. ನನ್ನ ಭಾವ ಜಾಹೀರಾತು ಫೋಟೋಗ್ರಾಫರ್​ ಆಗಿದ್ದರಿಂದ ಅವರು ತೆಗೆದ ಫೋಟೋ ಅದು. ಅದು ಬಹುಶಃ ವೆಬ್​ಸೈಟ್​ನಲ್ಲಿ ಟಪ್​ಲೋಡ್​ ಆಗಿದ್ದಿರಬಹುದು. ಅಲ್ಲಿಂದ ಪೊಲೀಸರು ತೆಗೆದುಕೊಂಡಿರಬಹುದು ಎಂದು ಜವಾಹರ್​ ಸುಭಾಷ್​ಚಂದ್ರ ದಿನಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಪೊಲೀಸರ ಸ್ಪಷ್ಟೀಕರಣ:
ಘಟನೆಯಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾದ ವ್ಯಕ್ತಿಯ ಫೋಟೋವನ್ನು ಜೈಪುರ ಪೊಲೀಸರು ವೆಬ್​ಸೈಟ್​ ಒಂದರಿಂದ ಖರೀದಿಸಿದ್ದರು ಎನ್ನಲಾಗಿದೆ. ಇದೇನೂ ಕಾನೂನುಬಾಹಿರವಲ್ಲ. ವೆಬ್​ಸೈಟ್​ನವರು ಮಾಡಿದ ಯಡವಟ್ಟಿನಿಂದ ಹೀಗಾಗಿದೆ ಎಂದು ಜೈಪುರದ ಪೊಲೀಸ್​ ಆಯುಕ್ತರು ಸ್ಪಷ್ಟೀಕರಣ ನೀಡಿದ್ದಾರೆ ಎಂದು ಡೆಕ್ಕನ್​ ಕ್ರೋನಿಕಲ್​ ಪತ್ರಿಕೆ ವರದಿ ಮಾಡಿದೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ