ಕೇರಳ ವ್ಯಕ್ತಿಯ ದುರಂತ ಅಂತ್ಯ; ಬೆಂಕಿಯಿಂದ ಹೆಂಡತಿಯನ್ನು ರಕ್ಷಿಸಿ ಪ್ರಾಣ ಬಿಟ್ಟ ಗಂಡ

ಹೆಂಡತಿಯನ್ನು ಬೆಂಕಿಯಿಂದ ರಕ್ಷಿಸಲು ತೆರಳಿದ್ದ ಅನಿಲ್ ದೇಹದ ಶೇ. 90ರಷ್ಟು ಭಾಗ ಸುಟ್ಟುಹೋಗಿತ್ತು. ತಕ್ಷಣ ಅವರಿಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದ ಅನಿಲ್ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Sushma Chakre | news18-kannada
Updated:February 18, 2020, 4:02 PM IST
ಕೇರಳ ವ್ಯಕ್ತಿಯ ದುರಂತ ಅಂತ್ಯ; ಬೆಂಕಿಯಿಂದ ಹೆಂಡತಿಯನ್ನು ರಕ್ಷಿಸಿ ಪ್ರಾಣ ಬಿಟ್ಟ ಗಂಡ
ಹೆಂಡತಿ ಮತ್ತು ಮಗನೊಂದಿಗೆ ಅನಿಲ್ ನಿನಾನ್
  • Share this:
ನವದೆಹಲಿ (ಫೆ. 18): ಉದ್ಯೋಗಕ್ಕಾಗಿ ಕೇರಳದಿಂದ ಅಬುಧಾಬಿಗೆ ಹೋಗಿ ನೆಲೆಸಿದ್ದ ದಂಪತಿಗೆ ಆ ದಿನ ಕರಾಳ ದಿನವಾಗಿತ್ತು. ಗಂಡ-ಹೆಂಡತಿ ಮನೆಯಲ್ಲಿದ್ದಾಗ ಫ್ಲ್ಯಾಟ್​ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಯಿಂದ ಪ್ರೀತಿಯ ಹೆಂಡತಿಯನ್ನು ರಕ್ಷಿಸಿದ ಗಂಡ ತಾನೇ ಬೆಂಕಿಗೆ ಬಲಿಯಾಗಿದ್ದಾರೆ. ಆತನ ಹೆಂಡತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತನ್ನನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಿಟ್ಟ ಗಂಡನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಕಳೆದ ವಾರ ಈ ಘಟನೆ ನಡೆದಿದ್ದು, ಹೆಂಡತಿಯನ್ನು ಬೆಂಕಿಯಿಂದ ರಕ್ಷಿಸಲು ತೆರಳಿದ್ದ ಅನಿಲ್ ದೇಹದ ಶೇ. 90ರಷ್ಟು ಭಾಗ ಸುಟ್ಟುಹೋಗಿತ್ತು. ತಕ್ಷಣ ಅವರಿಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದ ಅನಿಲ್ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Kerala man Anil Ninan burns and Dies after Saving his Wife from Fire Accident in Abu Dhabi
ಹೆಂಡತಿಯೊಂದಿಗೆ ಕೇರಳದ ಅನಿಲ್ ನಿನಾನ್​


ಕೇರಳದ ಅನಿಲ್ ನಿನಾನ್ ಎಂಬ 32 ವರ್ಷದ ವ್ಯಕ್ತಿ ತನ್ನ ಹೆಂಡತಿ ಮತ್ತು 4 ವರ್ಷದ ಮಗನೊಂದಿಗೆ ಅಬುಧಾಬಿಯಲ್ಲಿ ವಾಸವಾಗಿದ್ದರು. ಕಳೆದ ಸೋಮವಾರ ಅಬುಧಾಬಿಯ ಅಪಾರ್ಟ್​ಮೆಂಟ್‍ನ ಕಾರಿಡಾರ್‌ನಲ್ಲಿ ಇರಿಸಿದ್ದ ವಿದ್ಯುತ್ ಬಾಕ್ಸ್‌ನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿತ್ತು. ಕಾರಿಡಾರ್‌ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಆರಿಸಲು ಹೋದ ಅನಿಲ್​ನ ಹೆಂಡತಿಗೆ ಬೆಂಕಿ ತಗುಲಿತ್ತು. ಆಕೆ ಕೂಗಿಕೊಳ್ಳುತ್ತಿದ್ದಂತೆ ಓಡಿಬಂದ ಅನಿಲ್ ತನ್ನ ಹೆಂಡತಿಯನ್ನು ಬೆಂಕಿಯಿಂದ ರಕ್ಷಿಸಿದ್ದರು. ಆದರೆ, ಆ ವೇಳೆ ಅನಿಲ್​ ಮೈಗೆ ಬೆಂಕಿ ಹೊತ್ತಿಕೊಂಡು, ಕಾರಿಡಾರ್ ತುಂಬಾ ವ್ಯಾಪಿಸಿತ್ತು.

ಇದನ್ನೂ ಓದಿ: ನೇಪಾಳದ ರೆಸಾರ್ಟ್​ನಲ್ಲಿ ಉಸಿರುಗಟ್ಟಿ ಕೇರಳದ 8 ಜನ ಸಾವು; ಇಂದು ಅಂತ್ಯ ಸಂಸ್ಕಾರ

ಬೆಂಕಿ ಹೊತ್ತಿಕೊಂಡ ಕಾರಣಕ್ಕೆ ಗಾಯಗೊಂಡಿದ್ದ ಅನಿಲ್ ಮತ್ತು ಆತನ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಬುಧಾಬಿಯ ಮಾಫ್ರಾಕ್ ಆಸ್ಪತ್ರೆಯಲ್ಲಿ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದರು. ಅನಿಲ್​ನ ಹೆಂಡತಿ ಈಗ ಚೇತರಿಸಿಕೊಂಡಿದ್ದು, ಅನಿಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅನಿಲ್ ನಿನಾನ್​ ಸಾವಿಗೆ ಫೇಸ್​ಬುಕ್​ನಲ್ಲಿ ಹಲವರು ಸಂತಾಪ ಸೂಚಿಸಿದ್ದಾರೆ. ಸದ್ಯಕ್ಕೆ ಅನಿಲ್​ನ ಮಗು ದುಬೈನಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದು, ಅನಿಲ್​ನ ಹೆಂಡತಿ ಇನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿಲ್ಲ. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣವೇನೆಂಬ ಬಗ್ಗೆ ಅಬುಧಾಬಿಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 
First published: February 18, 2020, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading