ಸಾಲದ ಸುಳಿಯಲ್ಲಿ ಸಿಲುಕಿದ್ದವನಿಗೆ ಬಂಪರ್ ಲಾಟರಿ; ಕೇರಳದ ದಿನಗೂಲಿ ಕಾರ್ಮಿಕ ಈಗ 12 ಕೋಟಿ ಒಡೆಯ!

Kerala Lottery: ಕೂಲಿ ಕೆಲಸ ಮಾಡುತ್ತಿದ್ದ 55 ವರ್ಷದ ರಾಜನ್ 3 ವಾರಗಳ ಹಿಂದೆ ಕೂತುಪರಂಬದಲ್ಲಿರುವ ಬ್ಯಾಂಕ್​ಗೆ ಸಾಲ ಪಡೆಯಲು ಹೋಗಿದ್ದರು. ಬ್ಯಾಂಕ್​ನಿಂದ ವಾಪಾಸ್ ಬರುವಾಗ ಲಾಟರಿ ಟಿಕೆಟ್ ಖರೀದಿಸಿದ್ದರು.

Sushma Chakre | news18-kannada
Updated:February 12, 2020, 3:40 PM IST
ಸಾಲದ ಸುಳಿಯಲ್ಲಿ ಸಿಲುಕಿದ್ದವನಿಗೆ ಬಂಪರ್ ಲಾಟರಿ; ಕೇರಳದ ದಿನಗೂಲಿ ಕಾರ್ಮಿಕ ಈಗ 12 ಕೋಟಿ ಒಡೆಯ!
ಲಾಟರಿ ಟಿಕೆಟ್​ನಿಂದ ಕೋಟ್ಯಾಧಿಪತಿಯಾದ ಕೇರಳದ ರಾಜನ್
  • Share this:
ಕಣ್ಣೂರು (ಫೆ. 12): ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರವೊಂದು ಬದುಕನ್ನೇ ಬದಲಾಯಿಸಿಬಿಡುತ್ತದೆ. ಅದೃಷ್ಟದ ಕಾರಣದಿಂದ ಯಾವುದೇ ಶ್ರಮವಿಲ್ಲದೆ ರಾತ್ರೋರಾತ್ರಿ ಶ್ರೀಮಂತರಾದ ಉದಾಹರಣೆಗಳೂ ನಮ್ಮ ನಡುವೆ ಇದೆ. ಇದಕ್ಕೆ ಉದಾಹರಣೆಯೆಂಬಂತೆ ಕೇರಳದ ಕೂಲಿ ಕಾರ್ಮಿಕನೋರ್ವ ದಿಢೀರ್ ಎಂದು ಕೋಟ್ಯಾಧಿಪತಿಯಾಗಿದ್ದಾರೆ. ಹೌದು, ಒಂದಲ್ಲಾ ಒಂದು ದಿನ ತನ್ನ ಅದೃಷ್ಟ ಖುಲಾಯಿಸುತ್ತದೆ ಎಂಬ ಆಸೆಯಿಂದ ಲಾಟರಿ ಖರೀದಿ ಮಾಡುತ್ತಿದ್ದ ಕೂಲಿ ಕಾರ್ಮಿಕ ಈಗ 12 ಕೋಟಿ ರೂ.ಗಳ ಒಡೆಯ!

ಕೇರಳದ ಕಣ್ಣೂರಿನ ಪೊರುಣ್ಣನ್ ರಾಜನ್ ಎಂಬ ಕಾರ್ಮಿಕ ಬೇರೆಲ್ಲರಂತೆ ನೂರಾರು ಕನಸು ಹೊತ್ತು ಲಾಟರಿ ಖರೀದಿ ಮಾಡುತ್ತಿದ್ದರು. ಕಳೆದ ಬಾರಿ ಆತನಿಗೆ ಲಾಟರಿಯಲ್ಲಿ 2 ಸಾವಿರ ರೂ. ಬಂದಿತ್ತು. ಆದರೂ ಪ್ರಯತ್ನ ಬಿಡದ ಆತ ಮನೆಯವರಿಗೆ ಹೇಳದೆ ಗುಟ್ಟಾಗಿ ಲಾಟರಿ ಖರೀದಿ ಮಾಡುತ್ತಿದ್ದರು. ಕೊನೆಗೂ ಆತನಿಗೆ ಲಕ್ಷ್ಮೀ ವರ ನೀಡಿದ್ದಾಳೆ.

ನನಗೆ ಲಾಟರಿ ಹೊಡೆಯಬಹುದು ಎಂಬ ಕನಸು ಕಾಣುತ್ತಲೇ ಮಲಗುತ್ತಿದ್ದ ಪೊರುಣ್ಣನ್ ರಾಜನ್ ಬೆಳಗ್ಗೆ ಎದ್ದ ಕೂಡಲೆ ಪೇಪರ್ ನೋಡುತ್ತಿದ್ದರು. ಸೋಮವಾರ ಕೂಡ ಪೇಪರ್ ಹಿಡಿದು ಆಸೆಕಂಗಳಿಂದ ಕ್ರಿಸ್​ಮಸ್​- ಹೊಸ ವರ್ಷದ ಬಂಪರ್ ಲಾಟರಿ ನಂಬರ್ ನೋಡಿದ ರಾಜನ್​ಗೆ ಆಘಾತ, ಅಚ್ಚರಿಗಳೆರಡೂ ಕಾದಿತ್ತು. ಕಣ್ತೆರೆಯುವಷ್ಟರಲ್ಲಿ ರಾಜನ್ 12 ಕೋಟಿ ರೂ.ಗಳ ಒಡೆಯನಾಗಿದ್ದರು.

ಇದನ್ನೂ ಓದಿ: Kerala Lottery: ಲಾಟರಿ ಮಹಾತ್ಮೆ; ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ಕೇರಳದ ಸೇಲ್ಸ್​ಮನ್​ಗಳು!

ಕೂಲಿ ಕೆಲಸ ಮಾಡುತ್ತಿದ್ದ 55 ವರ್ಷದ ರಾಜನ್ 3 ವಾರಗಳ ಹಿಂದೆ ಕೂತುಪರಂಬದಲ್ಲಿರುವ ಬ್ಯಾಂಕ್​ಗೆ ಹೊರಟಿದ್ದರು. ತಾನು ಪಡೆದಿದ್ದ ಸಾಲ ತೀರಿಸಲು ಗಡುವು ಮುಗಿದಿದ್ದರಿಂದ ಬ್ಯಾಂಕ್​ನಲ್ಲಿ ಸಾಲ ಪಡೆಯಲು ರಾಜನ್ ಹೋಗಿದ್ದರು. ಬ್ಯಾಂಕ್​ನಿಂದ ವಾಪಾಸ್ ಬರುವಾಗ ಮತ್ತೆ ಲಾಟರಿ ಟಿಕೆಟ್ ಆಸೆ ಚಿಗುರಿತ್ತು. ಈ ಬಾರಿಯಾದರೂ ಅದೃಷ್ಟ ಖುಲಾಯಿಸಬಹುದು ಎಂಬ ಭರವಸೆಯಿಂದ ಪಯ್ಯನ್ ಏಜೆನ್ಸಿಗೆ ತೆರಳಿ 300 ರೂ. ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಗಂಡ ಹೀಗೆ ಲಾಟರಿಗೆ ದುಡ್ಡು ಹಾಕುವುದು ಹೆಂಡತಿ ರಜನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಹೀಗಾಗಿ, ರಾಜನ್ ಲಾಟರಿಯ ವಿಷಯವನ್ನು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆದರೆ, ಅವರ ನಿರೀಕ್ಷೆ ಕೊನೆಗೂ ಸುಳ್ಳಾಗಲಿಲ್ಲ. ಸಾಲ ಪಡೆಯಲು ಬ್ಯಾಂಕ್​ಗೆ ಹೋಗಿದ್ದ ರಾಜನ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.

ಇದನ್ನೂ ಓದಿ: 2 ತಿಂಗಳಾದರೂ ನನ್ನ ಸೈಕಲ್ ರಿಪೇರಿಯಾಗಿಲ್ಲ; ಕೇರಳ ಪೊಲೀಸರಿಗೆ ದೂರು ನೀಡಿದ 10 ವರ್ಷದ ಬಾಲಕ!

ತಾನು ಕೋಟ್ಯಾಧಿಪತಿಯಾಗಿರುವ ಸುದ್ದಿ ತಿಳಿದು ಸಂತೋಷಗೊಂಡಿರುವ ರಾಜನ್, 'ನಮಗೆ ಹೀಗೆ ಬಂಪರ್ ಲಾಟರಿಯಲ್ಲಿ ಕೋಟ್ಯಂತರ ರೂ. ಬರುತ್ತದೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನಗೀಗ ತುಂಬ ಖುಷಿಯಾಗುತ್ತಿದೆ. ನಾವೀಗ ನಮ್ಮೆಲ್ಲ ಸಾಲವನ್ನೂ ತೀರಿಸಿ, ಮನೆ ಕಟ್ಟಿಕೊಂಡು, ಮಕ್ಕಳನ್ನು ಚೆನ್ನಾಗಿ ಓದಿಸಬಹುದು. ದುಡ್ಡಿಲ್ಲದಿದ್ದರೂ ಲಾಟರಿ ಟಿಕೆಟ್ ಕೊಳ್ಳುವ ಅಭ್ಯಾಸವಿದ್ದ ನನಗೆ ನನ್ನ ಹೆಂಡತಿ ಸದಾ ನನಗೆ ಬೈಯುತ್ತಿದ್ದಳು. ಈಗ ಆಕೆಯೂ ಖುಷಿಯಾಗಿದ್ದಾಳೆ' ಎಂದು ಹೇಳಿದ್ದಾರೆ.(ವರದಿ: ಚಂದ್ರಕಾಂತ್ ವಿಶ್ವನಾಥ್)

 
First published: February 12, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading