ಶಬರಿಮಲೆ, ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ (Sabarimala Ayyappa Swami) ದರ್ಶನಕ್ಕೆ ಆಗಮಿಸುವ ಭಕ್ತರು ಸಿನಿಮಾ ತಾರೆಯರು, ಕ್ರೀಡಾ ತಾರೆಯರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಯಾವುದೇ ವ್ಯಕ್ತಿಯ ಫೋಟೋ, ಬ್ಯಾನರ್, ಫೋಟೋಗಳನವ್ನು ತರುವಂತಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಆದೇಶಿಸಿದೆ. ಜೊತೆಗೆ ಭಕ್ತರು ಸೋಪಾನಮ್ (Sopanam) ಅಥವಾ ದೇವಾಲಯದ ಪವಿತ್ರ ಮೆಟ್ಟಿಲುಗಳ ಮುಂಭಾಗದಲ್ಲಿ ಸಂಗೀತ ವಾದ್ಯಗಳನ್ನು (musical instruments) ನುಡಿಸುವಂತಿಲ್ಲ ಎಂದು ಸೂಚನೆ ನೀಡಿದೆ. ಗರ್ಭಗುಡಿ ತೆರೆಯುವ ವೇಳೆ ಶಬರಿಮಲೆ ಸೋಪಾನಂನ ಮುಂಭಾಗದಲ್ಲಿ ತಾಳವಾದ್ಯ ವಾದಕ ಶಿವಮಣಿ (Shivamani) ಅವರಿಗೆ ಡ್ರಮ್ ಬಾರಿಸಲು ಅನುಮತಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್, ಯಾವುದೇ ಯಾತ್ರಿಕರಿಗೆ ಸೋಪಾನದ ಮುಂದೆ ಸಂಗೀತ ವಾದ್ಯಗಳನ್ನು ನುಡಿಸಲು ಅನುಮತಿ ಇಲ್ಲ ಎಂದು ಹೇಳಿದೆ.
ಸೆಲೆಬ್ರಿಟಿಗಳು, ರಾಜಕಾರಣಿಗಳ ಪೋಸ್ಟರ್ ತರುವಂತಿಲ್ಲ
ದೇಗುಲಕ್ಕೆ ಬರುವ ಭಕ್ತರು ಸೆಲೆಬ್ರಿಟಿಗಳು, ರಾಜಕಾರಣಿಗಳ ಪೋಸ್ಟರ್ಗಳು ಹಾಗೂ ಬೃಹತ್ ಫೋಟೋಗಳನ್ನು ಸನ್ನಿಧಾನಕ್ಕೆ ತರುತ್ತಿದ್ದಾರೆ ಎಂಬುದಾಗಿ ನ್ಯಾಯಾಲಯಕ್ಕೆ ಭಕ್ತರೊಬ್ಬರು ಬರೆದ ಪತ್ರದಲ್ಲಿ ತಿಳಿಸಿದ್ದು, ಇತರ ಭಕ್ತರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಿದ್ದರು. ಯಾತ್ರಾರ್ಥಿಗಳು ಸನ್ನಿಧಾನಕ್ಕೆ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್ಗಳು ಮತ್ತು ಬೃಹತ್ ಛಾಯಾಚಿತ್ರಗಳನ್ನು ತರುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ದಾಖಲಿಸಲಾದ ಪ್ರಕರಣದಲ್ಲಿ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಪ್ರತಿ ನಿಮಿಷಕ್ಕೆ 70 ರಿಂದ 80 ಭಕ್ತರು ಹದಿನೆಂಟು ಮೆಟ್ಟಿಲುಗಳನ್ನೇರಿ ಸಾಗಿದಾಗ ಮಾತ್ರವೇ ಭಕ್ತರಿಗೆ ದೇವರ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಪೋಸ್ಟರ್ಗಳು ಹಾಗೂ ಚಿತ್ರಗಳನ್ನು ಹಿಡಿದು ಭಕ್ತರು ಸಾಗಿದಾಗ ಇನ್ನೊಬ್ಬ ಭಕ್ತರಿಗೆ ಅದು ತೊಂದರೆಯನ್ನುಂಟು ಮಾಡುತ್ತದೆ ಎಂಬುದಾಗಿ ನ್ಯಾಯಾಲಯ ಈ ಅಂಶಕ್ಕೆ ಮಹತ್ವವನ್ನು ನೀಡಿದೆ.
ವೃತಕ್ಕೆ ಭಂಗ ತರುವ ಕಾರ್ಯ
ಶಬರಿಮಲೆಗೆ ದರ್ಶನಕ್ಕಾಗಿ ಬರುವ ಭಕ್ತರು ಕೆಲವೊಂದು ನೀತಿ ನಿಯಮಗಳಿಗೆ ಒಳಪಟ್ಟಿರುತ್ತಾರೆ ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ. ಯಾತ್ರಾರ್ಥಿಗಳು ವೃತಾ ನಿಷ್ಠರಾಗಿ ದೇಗುಲಕ್ಕೆ ಬರುವಾಗ ಅವರ ವೃತಕ್ಕೆ ಭಂಗವನ್ನುಂಟು ಮಾಡುವ ಕೃತ್ಯಗಳು ಜರುಗಬಾರದು ಹಾಗೂ ದೇವರ ಪೂಜೆಗೂ ಅಡ್ಡಿಯುಂಟಾಗಬಾರದು ಎಂದು ಪೀಠ ತಿಳಿಸಿದೆ.
ಇದನ್ನೂ ಓದಿ: Ayyappa Swamy: ಅಯ್ಯಪ್ಪನ ಪ್ರಸಿದ್ಧ ಪ್ರಸಾದವೇ ವಿಷವಾಯ್ತಾ? ಇನ್ಮುಂದೆ ಭಕ್ತರಿಗೆ ಸಿಗಲ್ವಾ 'ಅರವಣ ಪಾಯಸಂ'?
ದೇವಸ್ಯ ಮಂಡಳಿಗೆ ಸೂಚನೆ ನೀಡಿದ ನ್ಯಾಯಾಲಯ
ತಿರುವಾಂಕೂರ್ ದೇವಸ್ಯ ಬೋರ್ಡ್ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದಾಗಿ ನ್ಯಾಯಾಲಯ ತಿಳಿಸಿದ್ದು, 18 ಮೆಟ್ಟಿಲುಗಳನ್ನೇರಿ ಸನ್ನಿಧಾನಕ್ಕೆ ಬರುವ ಭಕ್ತರು ಹಾಗೂ ಸೋಪಾನದ ಮುಂದೆ ದರ್ಶನ ಕೈಗೊಳ್ಳುವ ಭಕ್ತರು ಸೆಲೆಬ್ರಿಟಿಗಳು, ರಾಜಕಾರಣಿಗಳ ಪೋಸ್ಟರ್ಗಳನ್ನು ತರದಂತೆ ದೇವಸ್ಥಾನ ಮಂಡಳಿ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕಿದೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಈ ಕುರಿತು ತಿಳಿಸಬೇಕಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಭಕ್ತರು ಕಟ್ಟುಪಾಡುಗಳು ಹಾಗೂ ನಿಯಮಗಳಿಗೆ ಬದ್ಧರಾಗಿರಬೇಕು
ಅಯ್ಯಪ್ಪ ದೇವರಿಗೆ ಗೌರವ ಹಾಗೂ ಆರಾಧನೆಯನ್ನು ಸಲ್ಲಿಸುವ ಪ್ರತಿಯೊಬ್ಬ ಆರಾಧಕರು ಶಬರಿಮಲೆಯಲ್ಲಿ ಈ ಹಿಂದೆ ಇರುವ ಕಟ್ಟುಪಾಡುಗಳು ಹಾಗೂ ನಿಯಮಗಳಿಗೆ ಬದ್ಧರಾಗಿರಬೇಕು ಹಾಗೂ ಅದೇ ರೀತಿಯಲ್ಲಿ ಪೂಜೆಗಳನ್ನು ನೆರವೇರಿಸುವ ಹಕ್ಕಿಗೆ ಬದ್ಧರಾಗಿದ್ದಾರೆ ಎಂದು ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿದೆ.
ಸೋಪಾನಂ ಅಧಿಕಾರಿಗೆ ಶೋಕಾಸ್ ನೋಟೀಸ್ ಜಾರಿ
ಶಬರಿಮಲೆಯಲ್ಲಿ ಪ್ರಸ್ತುತ ರೂಢಿಯಲ್ಲಿರುವ ಪದ್ಧತಿಯಂತೆ ನಿಯಮಿತ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಆಚರಣೆಗಳು ತ್ವರಿತವಾಗಿ ನಡೆಯುವಂತೆ ನೋಡಿಕೊಳ್ಳಲು ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಕರ್ತವ್ಯ ಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಯಾತ್ರಿಕರು ಸಂಗೀತ ಉಪಕರಣಗಳನ್ನು ನುಡಿಸದಂತೆ ಸಂಬಂಧಿತ ಅಧಿಕಾರಿಗಳು ತಡೆಯೊಡ್ಡಬೇಕು ಹಾಗೂ ಇದಕ್ಕೆ ಅನುಮತಿ ನೀಡಬಾರದು ಎಂದು ಟಿಡಿಬಿ ತಿಳಿಸಿದೆ.
ಇದನ್ನೂ ಓದಿ: Sabarimala: ಅಯ್ಯಪ್ಪ ಶಬರಿಮಲೆಯಲ್ಲೇ ಯಾಕೆ ನೆಲೆಸಿದ? ಮಣಿಕಂಠನ ಕುರಿತು ಕುತೂಹಲಕಾರಿ ಕಹಾನಿ ಇಲ್ಲಿದೆ
ಡ್ರಮ್ ವಾದನ ಘಟನೆಗೆ ಸಂಬಂಧಿಸಿದಂತೆ ಸೋಪಾನಂ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮಂಡಳಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ದೇವಸ್ಯ ಮಂಡಳಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ