ತಿರುವನಂತಪುರಂ: ಪ್ರಬಲ ಭೂಕಂಪಕ್ಕೆ (Earthquake) ತತ್ತರಿಸಿರುವ ಟರ್ಕಿ (Turkey) ಮತ್ತು ಸಿರಿಯಾದಲ್ಲಿ(Syria) ಮೂರು ನಾಲ್ಕು ದಿನಗಳಿಂದ ಸುಮಾರು 16 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಟರ್ಕಿಯಲ್ಲಿ 12 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಶೋಧ ಕಾರ್ಯಾಚರಣೆ (Rescue operation) ನಡೆಯುತ್ತಿದ್ದು, ಭಾರತ (India) ಸೇರಿದಂತೆ ಹಲವು ರಾಷ್ಟ್ರಗಳು ನೆರವಾಗುತ್ತಿವೆ. 2011ರಲ್ಲಿ ಜಪಾನ್ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯಿಂದ ಸುಮಾರು 20 ಸಾವಿರ ಮಂದಿ ಸಾವನ್ನಪ್ಪಿದ್ದರು. ಇದೀಗ ದಶಕದ ನಂತರ ಸಂಭವಿಸಿರುವ ಘೋರ ಪ್ರಕೃತಿ ವಿಕೋಪವಾಗಿದೆ.
ಕೇರಳ ಸರ್ಕಾರದಿಂದ 10 ಕೋಟಿ ಪರಿಹಾರ
ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿದ ಬೆನ್ನಲ್ಲೇ ಭಾರತ ಸರ್ಕಾರ ಬಹುಬೇಗನೆ ಸ್ಪಂದಿಸಿದ್ದು, ಅಲ್ಲಿಗೆ ಪರಿಹಾರ ಸಾಮಗ್ರಿಗಳ ಜೊತೆಗೆ ನೂರು ಸದಸ್ಯರ ರಕ್ಷಣಾ ತಂಡವನ್ನು ಕಳುಹಿಸಿದೆ. ಇದಕ್ಕೆ ಆಪರೇಷನ್ ದೋಸ್ತ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಭಾರತ ಸರ್ಕಾರದ ರೀತಿಯಲ್ಲೇ ಇದೀಗ ಕೇರಳ (Kerala government) ಕೂಡ ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಸಹಾಯ ಹಸ್ತ ಚಾಚಿದ್ದು, 10 ಕೋಟಿ ರೂಪಾಯಿಯ ಪರಿಹಾರ ಘೋಷಣೆ ಮಾಡಿದೆ. ಇಡೀ ದೇಶದಲ್ಲಿ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ನೆರವಾದ ಮೊದಲ ರಾಜ್ಯವಾಗಿದೆ.
ಸದನದಲ್ಲಿ ಸಿಎಂರಿಂದ ಸಂತಾಪ
ಕೇರಳ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಬುಧವಾರ ಈ ಘೋಷಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ 10 ಕೋಟಿ ರೂಪಾಯಿಗಳನ್ನು ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳಿಗೆ ಪರಿಹಾರ ಕಾರ್ಯಕ್ಕಾಗಿ ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಟರ್ಕಿಯಲ್ಲಿ ಭೂಕಂಪದಲ್ಲಿ ಸಾವನ್ನಪ್ಪಿರುವವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೌರವ ಸಲ್ಲಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದರು.
ಟರ್ಕಿಗೆ ತೆರಳಿದ 6ನೇ ಆಪರೇಷನ್ ದೋಸ್ತ್ ವಿಮಾನ
ಭೂಕಂಪ ಪೀಡಿತ ಟರ್ಕಿ ದೇಶಕ್ಕೆ ನೆರವು ನೀಡಲು ಭಾರತ ಸರ್ಕಾರ ಆಪರೇಷನ್ ದೋಸ್ತ್ ಕಾರ್ಯಾಚರಣೆಯ ಆರಂಭಿಸಿದೆ. ಈಗಾಗಲೆ ರಕ್ಷಣಾ ಸಿಬ್ಬಂದಿ, ವೈದ್ಯ ಮತ್ತು ಅರೆವೈದ್ಯ ತಂಡ ಟರ್ಕಿ ಸೇರಿದೆ. ಇದೀಗ ಭಾರತ 6ನೇ ಸಿ- 17 ಮಿಲಿಟರಿ ವಿಮಾನದ ಮೂಲಕ ರಕ್ಷಣಾ ಸದಸ್ಯರು ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ.
" ಆಪರೇಷನ್ ದೋಸ್ತ್ ಕಾರ್ಯಾಚರಣೆ ಅಡಿಯಲ್ಲಿ ಸಿರಿಯಾ ಮತ್ತು ಟರ್ಕಿಗೆ ಭಾರತ ಸರ್ಕಾರ ಔಷಧಗಳು, ರಕ್ಷಣಾ ತಂಡಗಳು ಸೇರಿದಂತೆ ಸಾಧ್ಯವಾಗುವ ಎಲ್ಲಾ ನೆರವನ್ನು ನೀಡುತ್ತಿದೆ. ಭೂಕಂಪದಿಂದ ಧರೆಗುರುಳಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಭಾರತೀಯ ರಕ್ಷಣಾ ಪಡೆಗಳೂ ಕೈ ಜೋಡಿಸಲಿವೆ " ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ
1.35 ಕೋಟಿ ಜನರಿಗೆ ತೊಂದರೆ
ಟರ್ಕಿ ದೇಶದಲ್ಲಿ ಸುಮಾರು 8.5 ಕೋಟಿ ಜನಸಂಖ್ಯೆ ಇದೆ, ಆ ಪೈಕಿ 1.35 ಕೋಟಿ ಜನರು ಭೂಕಂಪದಿಂದ ಬಾಧಿತರಾಗಿದ್ದಾರೆ. ಪಶ್ಚಿಮದಲ್ಲಿ ಅದಾನದಿಂದ ಪೂರ್ವದ ದಿಯಾರ್‌ಬಕಿರ್‌ವರೆಗೆ ಸರಿಸುಮಾರು 450 ಕಿಮೀ (280 ಮೈಲುಗಳು) ವ್ಯಾಪಿಸಿರುವ ಪ್ರದೇಶದ ಜನರು ಬಾಧಿತರಾಗಿದ್ದಾರೆ ಎಂದು ಟರ್ಕಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿರಿಯಾದಲ್ಲಿ, ಭೂಕಂಪದ ಕೇಂದ್ರದಿಂದ 250 ಕಿಮೀ ದೂರದಲ್ಲಿರುವ ದಕ್ಷಿಣ ಹಮಾದಲ್ಲಿನ ಜನರು ಸಾವನ್ನಪ್ಪಿದ್ದಾರೆ. ಟರ್ಕಿಯ 10 ಪ್ರಾಂತ್ಯಗಳಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸದ್ಯ 3.8 ಲಕ್ಷ ಜನರು ಮಾತ್ರ ಸರ್ಕಾರಿ ನಿರಾಶ್ರಿತ ಕೇಂದ್ರ ಅಥವಾ ಹೋಟೆಲ್ ಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ