ಕೇರಳದ ಚಿನ್ನದ ಸ್ಮಗ್ಲಿಂಗ್ಗೂ ದಾವೂದ್ ಇಬ್ರಾಹಿಂಗೂ ನಂಟು; ಶಾಕಿಂಗ್ ವಿಚಾರ ಬಿಚ್ಚಿಟ್ಟ ಎನ್ಐಎ
Kerala Gold Smuggling Case: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕೇರಳದ ಚಿನ್ನದ ಸ್ಮಗ್ಲಿಂಗ್ ಪ್ರಕರಣಕ್ಕೂ ಸಂಬಂಧವಿದೆ ಎಂಬ ಆಘಾತಕಾರಿ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಎನ್ಐಎ ಕೊಚ್ಚಿ ವಿಶೇಷ ಕೋರ್ಟ್ಗೆ ಮಾಹಿತಿ ನೀಡಿದೆ.
ತಿರುವನಂತಪುರಂ (ಅ. 15): ಜುಲೈ 5ರಂದು ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ 15 ಕೋಟಿ ರೂ. ಮೌಲ್ಯದ ಚಿನ್ನದ ಸ್ಮಗ್ಲಿಂಗ್ ಪ್ರಕರಣದ ತನಿಖೆಗೆ ಸಾಕಷ್ಟು ತಿರುವುಗಳು ಸಿಕ್ಕಿವೆ. ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕೇರಳದ ಚಿನ್ನದ ಸ್ಮಗ್ಲಿಂಗ್ ಪ್ರಕರಣಕ್ಕೂ ಸಂಬಂಧವಿದೆ ಎಂಬ ಆಘಾತಕಾರಿ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈ ಕುರಿತು ಕೊಚ್ಚಿ ವಿಶೇಷ ಕೋರ್ಟ್ಗೆ ಮಾಹಿತಿ ನೀಡಿದೆ. ಕೇರಳ ಗೋಲ್ಡ್ ಸ್ಮಗ್ಲಿಂಗ್ನ ಆರೋಪಿಗಳು ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ನೆಟ್ವರ್ಕ್ ಹೊಂದಿರುವ ತಾಂಜೇನಿಯಾಗೆ ಸಾಕಷ್ಟು ಬಾರಿ ತೆರಳಿದ್ದರು ಎಂಬುದಕ್ಕೆ ದಾಖಲೆಗಳು ಸಿಕ್ಕಿವೆ ಎಂದು ಎನ್ಐಎ ತಿಳಿಸಿದೆ.
ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ 15 ಕೋಟಿ ರೂ. ಮೌಲ್ಯದ ಚಿನ್ನದ ಸ್ಮಗ್ಲಿಂಗ್ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ)ಗೆ ವಹಿಸಿತ್ತು. ಜುಲೈ 5ರಂದು ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಗೃಹೋಪಯೋಗಿ ವಸ್ತುಗಳ ಜೊತೆಗೆ ಡಿಪ್ಲೋಮೆಟಿಕ್ ಬ್ಯಾಗ್ನಲ್ಲಿ ಇರಿಸಿಕೊಂಡು ಬಂದಿದ್ದ, ಯುಎಇಯ ಧೂತವಾಸ ಕಚೇರಿಯ ವಿಳಾಸವಿದ್ದ ಸೀಲ್ ಆಗಿದ್ದ ಬ್ಯಾಗ್ನಲ್ಲಿ 30 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. 15 ಕೋಟಿ ರೂ. ಮೌಲ್ಯದ ಈ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆದರೆ, ಕೇರಳದಲ್ಲಿರುವ ಯುಎಇಯ ಧೂತವಾಸ ಹಾಗೂ ಭಾರತದಲ್ಲಿರುವ ಯುಎಇ ರಾಯಭಾರಿ ಕಚೇರಿ ಆ ಚಿನ್ನಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.
ಕೇರಳದ ಚಿನ್ನದ ಸ್ಮಗ್ಲಿಂಗ್ ದಂಧೆಯಲ್ಲಿ ಫೈಸಲ್ ಫರೀದ್, ಸ್ವಪ್ನ ಸುರೇಶ್, ಸಂದೀಪ್ ನಾಯರ್ ಮತ್ತು ಸರಿತ್ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳೆಂದು ಪರಿಗಣಿಸಲಾಗಿದೆ. ಸ್ವಪ್ನ ಸುರೇಶ್ ಮತ್ತು ಸರಿತ್ ಅವರಿಬ್ಬರೂ ಕೂಡ ಯುಎಇ ರಾಜತಾಂತ್ರಿಕ ಕಚೇರಿ ಜೊತೆ ಈ ಹಿಂದೆ ಕೆಲಸ ಮಾಡಿದವರು. ಅದೇ ಪ್ರಭಾವ ಇಟ್ಟುಕೊಂಡು ಅಧಿಕೃತ ಪಾರ್ಸಲ್ಗಳ ಮೂಲಕ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರೆನ್ನಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿ ವಿಶೇಷ ಕೋರ್ಟ್ಗೆ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದರು.
ಆ ಜಾಮೀನು ಅರ್ಜಿ ವಿಚಾರಣೆ ವೇಳೆ ಕೇರಳದ ಗೋಲ್ಡ್ ಸ್ಮಗ್ಲಿಂಗ್ ದಂಧೆಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಡಿ-ಕಂಪನಿಗೂ ಸಂಬಂಧ ಇರಬಹುದು ಎಂದು ಎನ್ಐಎ ಹೇಳಿದೆ. ಚಿನ್ನದ ಸ್ಮಗ್ಲಿಂಗ್ ದಂಧೆಯ ಆರೋಪಿಗಳಾದ ಶರಾಫುದ್ದೀನ್ ಮತ್ತು ರಮೀಜ್ ಹಲವು ಬಾರಿ ತಾಂಜೇನಿಯಾಗೆ ಭೇಟಿ ನೀಡಿದ್ದರು. ರಮೀಜ್ ತಾಂಜೇನಿಯಾದಲ್ಲಿ ವಜ್ರದ ವ್ಯಾಪಾರ ನಡೆಸಲು ಲೈಸೆನ್ಸ್ ಪಡೆಯಲು ಪ್ರಯತ್ನಿಸಿದ್ದ. ಹಾಗೇ, ತಾಂಜೇನಿಯಾದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಲೈಸೆನ್ಸ್ ಪಡೆಯಲು ಕೂಡ ಪ್ರಯತ್ನಿಸಿದ್ದ. ಹಾಗೇ, ವಿಚಾರಣೆ ವೇಳೆ ತಾವು ತಾಂಜೇನಿಯಾದಿಂದ ಚಿನ್ನವನ್ನು ತಂದು ಯುಎಇಯಲ್ಲಿ ಮಾರಾಟ ಮಾಡಿದ್ದಾಗಿಯೂ ಅವರು ಒಪ್ಪಿಕೊಂಡಿದ್ದಾರೆ ಎಂದು ಎನ್ಐಎ ತಿಳಿಸಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ