ಕೊಚ್ಚಿ (ಏಪ್ರಿಲ್ 29); ಇತ್ತೀಚೆಗೆ ಅಂತ್ಯವಾಗಿದ್ದ ಪಂಚರಾಜ್ಯ ಚುನಾವಣೆಗಳ ಪೈಕಿ ಕೇರಳ ಸಹ ಅತ್ಯಂತ ಗಮನ ಸೆಳೆದಿತ್ತು. ಕೇರಳದ ಮತದಾರರ ಮಟ್ಟಿಗೆ ಎಲ್‌ಡಿಎಫ್ ಹಾಗೂ ಯುಡಿಎಫ್ ಒಂದೊಂದು ಅವಧಿಗೆ ಅಧಿಕಾರ ಅನುಭವಿಸುವುದು ಕಾಮನ್. ಇದೇ ಕಾರಣಕ್ಕೆ ಈ ಭಾರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತರೂಢ ಎಲ್‌ಡಿಎಫ್ ಸೋಲನುಭವಿಸಲಿದೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಏರಲಿದೆ ಎಂದು ಚುನಾವಣೆಗೆ ಮುನ್ನವೇ ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸಿದ್ದರು. ಆದರೆ, ಚುನಾವಣಾ ಫಲಿತಾಂಶಕ್ಕೆ ಇನ್ನೂ ಎರಡು ದಿನ ಬಾಕಿ ಇದ್ದಂತೆ ಇಂದು ಸಮೀಕ್ಷೆಗಳು ಹೊರಬಿದ್ದಿದ್ದು, ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ತಿಳಿಸಿವೆ.
ರಿಪಬ್ಲಿಕ್-ಸಿಎನ್ಎಕ್ಸ್ ಚುನಾವಣಾ ಸಮೀಕ್ಷೆಯ ಪ್ರಕಾರ ಎಲ್‌ಡಿಎಫ್ 72-80 ಸ್ಥಾನಗಳನ್ನು ಪಡೆದು ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಆದರೆ ಕಾಂಗ್ರೆಸ್-ಯುಡಿಎಫ್ ಮೈತ್ರಿ 58-64 ಸ್ಥಾನಗಳನ್ನು ಪಡೆಯುವ ಮೂಲಕ ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಬಿಜೆಪಿ - ಎನ್‌ಡಿಎ ಮೈತ್ರಿ ಸುಮಾರು 1 ರಿಂದ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಿಎನ್‌ಎಕ್ಸ್ ಸಮೀಕ್ಷೆ ವ್ಯಾಖ್ಯಾನಿಸಿದೆ.
ಇದಲ್ಲದೆ, ಆಕ್ಸಿಸ್ ಮೈ ಇಂಡಿಯಾ 2021 ಸಮೀಕ್ಷೆಯ ಪ್ರಕಾರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಮತ್ತೆ ಅಧಿಕಾರಕ್ಕೆ ಏರಲಿದೆ. ಆಕ್ಸಿಸ್ ಮೈ ಇಂಡಿಯಾ ಭವಿಷ್ಯವಾಣಿಯಂತೆ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಮೈತ್ರಿ ಸುಮಾರು 104-120 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್-ಯುಡಿಎಫ್ ಕೇವಲ 20-36 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಎನ್‌ಡಿಎ ಮೈತ್ರಿಗೆ ಆಕ್ಸಿಸ್ ಮೈ ಇಂಡಿಯಾ 0-2 ಸ್ಥಾನಗಳನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ವ್ಯಾಖ್ಯಾನಿಸಿದೆ.
ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಐದು ರಾಜ್ಯಗಳ ಜೊತೆಗೆ ಕೇರಳ ಸಹ ಚುನಾವಣೆಯನ್ನು ಎದುರಿಸಿತ್ತು. 15 ನೇ ವಿಧಾನಸಭೆಗೆ 140 ಸದಸ್ಯರನ್ನು ರಾಜ್ಯಕ್ಕೆ ಆಯ್ಕೆ ಮಾಡಲು ಏಪ್ರಿಲ್ 6 ರಂದು ಕೇರಳದಲ್ಲಿ ಮತದಾನ ನಡೆಯಿತು. ಎಲ್‌ಡಿಎಫ್, ಯುಡಿಎಫ್ ಹಾಗೂ ಎನ್‌ಡಿಎ ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಸಹ ಎಲ್‌ಡಿಎಫ್ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
2016 ರ ವಿಧಾನಸಭಾ ಚುನಾವಣೆಯಲ್ಲಿ, ವಿಧಾನಸಭೆಯಲ್ಲಿ ಒಟ್ಟು ಮೂರನೇ ಎರಡರಷ್ಟು ಸ್ಥಾನಗಳನ್ನು ಎಲ್‌ಡಿಎಫ್ ಗೆದ್ದುಕೊಂಡಿತ್ತು. ಆದರೆ ಕಾಂಗ್ರೆಸ್-ಯುಡಿಎಫ್ 47 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಮಾತ್ರ ಸಫಲಾಗಿತ್ತು. ಉಳಿದ ಸ್ಥಾನವನ್ನು ಸ್ವತಂತ್ರ ಪಿಸಿ ಜಾರ್ಜ್ ಗೆದ್ದಿತ್ತು. ನಂತರ ಅವರು ಕೇರಳ ಜನಪಕ್ಷಂ (ಜಾತ್ಯತೀತ) ಪಕ್ಷವನ್ನು ರಚಿಸಿದರು.
ಇದನ್ನೂ ಓದಿ: West Bengal Exit Poll Results 2021: ಸಮೀಕ್ಷೆಯಲ್ಲೂ ದೀದಿ- ಮೋದಿ ಫೈಟ್; ಟಿಎಂಸಿಯತ್ತ ಮತದಾರನ ಹೆಚ್ಚಿನ ಒಲವು!
ಈ ವರ್ಷ ಎಲ್‌ಡಿಎಫ್ ಮುಖಂಡ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಧಿಕಾರಾವಧಿಯಲ್ಲಿ ಮತ್ತೊಂದು ಅವಧಿಗೆ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್-ಯುಡಿಎಫ್ ಕೂಡ ಅಧಿಕಾರವನ್ನು ಮರಳಿ ಪಡೆಯುವ ಆಶಯದಲ್ಲಿದೆ. ಮತ್ತು ಈ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಸ್ಥಾನಗಳನ್ನು ಗೆಲ್ಲದಿರಬಹುದು ಆದರೆ, ಸ್ಪಾಯ್ಲರ್ ಆಗಿ ಕಾರ್ಯನಿರ್ವಹಿಸುವ ಮೂಲಕ ವಿಜೇತರನ್ನು ನಿರ್ಧರಿಸುವಲ್ಲಿ ಇದು ದೊಡ್ಡ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.
ಕೇರಳದಲ್ಲಿ ಒಟ್ಟು 2.74 ಕೋಟಿ ಮತದಾರರಿದ್ದು, ಈ ಪೈಕಿ ಶೇ.75.38 ರಷ್ಟು ಮತದಾರರು ಕೇರಳ ವಿಧಾನಸಭಾ ಚುನಾವಣೆಯಲ್ಲಿ 2021 ರಲ್ಲಿ ಮತ ಚಲಾಯಿಸಿದ್ದಾರೆ. ಕೇರಳದ ಜೊತೆಗೆ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೂ ಭಾನುವಾರ ಮತ ಎಣಿಕೆ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ