ಇಂದು ಸಾಮಾಜಿಕ ಮಾಧ್ಯಮ ಅನ್ನೋದು ನಮ್ಮ ದಿನಚರಿಯಲ್ಲಿ ಬೆರೆತುಹೋಗಿದೆ. ಒಂದಿನ ಇಂಟರ್‌ನೆಟ್ ಇಲ್ಲ ಎಂದರೆ ಚಡಪಡಿಸೋದನ್ನು ಕಾಣುತ್ತೇವೆ. ಹಾಗೆಯೇ ಈ ಇಂಟರ್‌ನೆಟ್ (Internet) ಸಾಕಷ್ಟು ಉಪಯೋಗ ಹೊಂದಿದ್ದರೆ ಅದರ ಬಳಕೆಯಿಂದ ಬದುಕನ್ನೇ ಹಾಳು ಮಾಡಿಕೊಂಡವರು ಅನೇಕರಿದ್ದಾರೆ. ಅತಿಯಾದ ಫೋನ್ ಬಳಕೆಯಿಂದ (Phone Usage) ಅದೆಷ್ಟೋ ಜನರ ಸಂಸಾರ ಒಡೆದು ಹೋಗಿದೆ. ತಂದೆ-ತಾಯಿ ಮಕ್ಕಳಿಗೆ, ಮಕ್ಕಳು ಮನೆಯವರಿಗೆ ಸಮಯವನ್ನೇ ನೀಡದ ಪರಿಸ್ಥಿತಿಗಳು ಎದುರಾಗಿವೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಲಿಂಕ್ಡ್ ಇನ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾದ ಅನೇಕ ಜನರು ಸಂಬಂಧಗಳನ್ನು ಬೆಳೆಸಿದ್ದಾರೆ. ಹಾಗೆಯೇ ಗುರುತು ಪರಿಚಯವಿಲ್ಲದ ಜನರನ್ನು ನಂಬಿ ಹಣ, ಸಮಯ ಹಾಗೂ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದಿಂದ ಪರಿಚಯವಾದ ವ್ಯಕ್ತಿಯನ್ನ ನಂಬಿ ಬಂದಿದ್ದಕ್ಕೆ ಮಹಿಳೆಯೊಬ್ಬಳಿಗೆ ಹಿಂಸೆ ಉಡುಗೊರೆಯಾಗಿ ಸಿಕ್ಕಿದೆ. ಅಷ್ಟಕ್ಕೂ ಆಕೆ ರಷ್ಯಾದ ಮಹಿಳೆ.
ಪ್ರೇಮಾಂಕುರವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ!
ರಷ್ಯಾದ ಮಹಿಳೆ ಹಾಗೂ 29 ವರ್ಷದ ಅಘಿಲ್ ಪರಿಚಯವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಕೇರಳ ಮೂಲದ ಅಘಿಲ್ ಕೆಲಸ ಮಾಡುತ್ತಿದ್ದುದು ದೋಹಾದಲ್ಲಿ. ಪರಿಚಯ ಪ್ರೇಮಕ್ಕೆ ತಿರುಗಿದ ಬಳಿಕ ಈ ಸಂಬಂಧ ಭೇಟಿಯವರೆಗೆ ತಲುಪಿತು. ಹಾಗಾಗಿ ಆತನನ್ನು ಭೇಟಿಯಾಗಲು ರಷ್ಯಾದ ಮಹಿಳೆ ದೋಹಾಕ್ಕೆ ಹಾರಿದ್ದಾಳೆ.
ತದನಂತರದಲ್ಲಿ ಅವರಿಬ್ಬರೂ ನೇಪಾಳಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಸಮಯ ಕಳೆದು ನಂತರದಲ್ಲಿ ಆಘಿಲ್ ತವರು ಭಾರತಕ್ಕೆ ಬಂದಿದ್ದಾರೆ.
ಹಿಂಸೆ ನೀಡುತ್ತಿದ್ದನಂತೆ ಕೇರಳದ ಯುವಕ!
ಅಷ್ಟಕ್ಕೂ ಅವರು ಮನೆಗೆ ಭೇಟಿ ನೀಡಿದ ಉದ್ದೇಶವು ಮದುವೆಯಾಗುವುದಾಗಿತ್ತು. ಆದರೆ ಇದು ಬರೀ ಪ್ರೀತಿಯ ಸಂಬಂಧವಾಗಿರಲಿಲ್ಲ. ಬದಲಾಗಿ ಅಘಿಲ್ ಆಕೆಗೆ ಹಿಂಸೆ ನೀಡುತ್ತಿದ್ದನಂತೆ. ಕಳೆದ ವಾರ ಆತನ ವರ್ತನೆಯನ್ನು ಸಹಿಸಲಾಗದೇ ಆ ರಷ್ಯಾದ ಮಹಿಳೆ ಮೊದಲ ಮಹಡಿಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದಾಳೆ. ಬಳಿಕ ಆಕೆಯನ್ನು ಕೋಳಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕೇರಳದ ಅಘಿಲ್ ಅರೆಸ್ಟ್!
ಚೇತರಿಸಿಕೊಳ್ಳುವ ಹಂತದಲ್ಲಿ ರಷ್ಯಾದ ಮಹಿಳೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ನಂತರದಲ್ಲಿ ಮಹಿಳೆಯನ್ನು ಕೋಳಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಕೇರಳ ಮಹಿಳಾ ಆಯೋಗದ ಸೂಚನೆ ಮೇರೆಗೆ ನಗರದ ಸರ್ಕಾರಿ ಮಹಿಳಾ ಮಂದಿರಕ್ಕೆ ಸ್ಥಳಾಂತರಿಸಲಾಗಿತ್ತು. ಸದ್ಯ ಪೊಲೀಸರು ಅಘಿಲ್‌ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.
ಪೊಲೀಸರ ಪ್ರಕಾರ ಸುಮಾರು ಒಂದು ತಿಂಗಳಿನಿಂದ ಆಕೆ ತನ್ನ ಗೆಳೆಯ ಅಘಿಲ್ ಜೊತೆ ವಾಸಿಸುತ್ತಿದ್ದಳು. ಅವರು ಕತಾರ್‌ನಿಂದ ಒಟ್ಟಿಗೆ ಪ್ರಯಾಣ ಬೆಳೆಸಿದ್ದು, ನೇಪಾಳಕ್ಕೆ ಭೇಟಿ ನೀಡಿದ್ದರು. ಈ ಜೋಡಿ ಯಾವಾಗಲೂ ಜಗಳವಾಡುತ್ತಿದ್ದರು ಎನ್ನಲಾಗಿದ್ದು, ಒಂದು ವಾರದ ಹಿಂದೆ ಕಟ್ಟಡದ ಮೊದಲ ಮಹಡಿಯಿಂದ ಆಕೆ ಜಿಗಿದಿದ್ದಾಳೆ.
ತಂತಿಯಿಂದ ಥಳಿಸುವುದು ಸೇರಿದಂತೆ ಅಘಿಲ್ ತನಗೆ ನಿರಂತರ ಕಿರುಕುಳ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆಕೆ ಆರೋಪಿಸಿದ್ದಾಳೆ. ಅಲ್ಲದೇ ಆಕೆಯ ಪಾಸ್‌ಪೋರ್ಟ್ ಬಹುತೇಕ ಹರಿದಿತ್ತು ಎಂದು ವರದಿಯಾಗಿದೆ.
ಮರಳಿ ತಾಯ್ನಾಡಿಗೆ
ರಷ್ಯಾದ ದೂತಾವಾಸವು ಆಕೆಯ ಪೋಷಕರೊಂದಿಗೆ ಸಂಪರ್ಕದಲ್ಲಿತ್ತು. ನಂತರ ಅವರು ತಮ್ಮ ಮಗಳಿಗೆ ಮರಳಲು ಟಿಕೆಟ್ ಕಳುಹಿಸಿದ್ದು ಇಲ್ಲಿನ ಪೊಲೀಸರು ಆಕೆಯನ್ನು ದುಬೈ ವಿಮಾನದಲ್ಲಿ ಕಳುಹಿಸಿದ್ದಾರೆ. ಅಲ್ಲಿಂದ ಆಕೆ ತಾಯ್ನಾಡಿಗೆ ತೆರಳುತ್ತಾಳೆ. ಅಂದಹಾಗೆ ಕೇರಳದಲ್ಲಿರುವ ರಷ್ಯಾದ ಕಾನ್ಸುಲ್ ರತೀಶ್ ನಾಯರ್, ಮಹಿಳೆ ತುಂಬಾ ಆಘಾತಕ್ಕೊಳಗಾಗಿದ್ದಾಳೆ. ಬೇಗನೆ ಮನೆಗೆ ಮರಳಲು ಬಯಸಿದ್ದಾಳೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Crime News: ಹೆತ್ತವರನ್ನೇ ಬರ್ಬರವಾಗಿ ಕೊಂದ 16 ವರ್ಷದ ಬಾಲಕಿ, ಪ್ರಜ್ಞೆ ತಪ್ಪಿಸಿ ಕೊಡಲಿಯಿಂದ ಕೊಚ್ಚಿ ಕೊಲೆ
ಅಲ್ಲದೇ, ಆರೋಪಿಯು ಆಕೆಯ ಇಂಟರ್‌ನಲ್ ಪಾಸ್‌ಪೋರ್ಟ್ಅನ್ನು ಹಾನಿಗೊಳಿಸಿದ್ದಾನೆ. ಆದರೆ ಅಕೆಯ ಅಂತರರಾಷ್ಟ್ರೀಯ ಪಾಸ್‌ಪೋರ್ಟ್ ಹಾಗೇ ಇತ್ತು ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ