ವಿದೇಶೀ ನೆರವು ಬೇಡ ಅಂತೀರಾ; 20 ಸಾವಿರ ಕೋಟಿ ರೂ ನಷ್ಟ ಯಾರು ತುಂಬಿಕೊಡ್ತಾರೆ? ಕೇಂದ್ರಕ್ಕೆ ಕೇರಳ ಪ್ರಶ್ನೆ


Updated:August 22, 2018, 7:43 PM IST
ವಿದೇಶೀ ನೆರವು ಬೇಡ ಅಂತೀರಾ; 20 ಸಾವಿರ ಕೋಟಿ ರೂ ನಷ್ಟ ಯಾರು ತುಂಬಿಕೊಡ್ತಾರೆ? ಕೇಂದ್ರಕ್ಕೆ ಕೇರಳ ಪ್ರಶ್ನೆ

Updated: August 22, 2018, 7:43 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 22): ಪ್ರವಾಹ ಸಂಕಷ್ಟಕ್ಕೆ ಸಿಲುಕಿರುವ ಕೇರಳ ರಾಜ್ಯಕ್ಕೆ ಯುಎಇ ಸೇರಿದಂತೆ ಅನೇಕ ರಾಷ್ಟ್ರಗಳು ಧನಸಹಾಯ ಮಾಡಲು ಮುಂದಾಗಿದ್ದರೂ ಕೇಂದ್ರ ಸರಕಾರ ಮಾತ್ರ ರೆಡ್ ಸಿಗ್ನಲ್ ಕೊಟ್ಟಿದೆ. ಯಾವುದೇ ವಿದೇಶೀ ದೇಣಿಗೆ ಪಡೆಯಬಾರದೆಂಬ ನಿಯಮವಿದೆ ಎಂಬುದು ಕೇಂದ್ರದ ಸಬೂಬು. ಇದು ಕೇರಳ ಸರಕಾರಕ್ಕೆ ಇರಿಸುಮುರುಸು ತಂದಿದೆ. ಪ್ರವಾಹದಿಂದ 25 ಸಾವಿರ ಕೋಟಿ ರೂ ನಷ್ಟವಾಗಿದ್ದು, ಯಾರು ತಮಗೆ ಸಹಾಯ ಮಾಡುತ್ತಾರೆ. ಈ ನಷ್ಟವನ್ನ ಯಾರು ಭರಿಸಿಕೊಡುತ್ತಾರೆ ಎಂಬುದು ಕೇರಳದ ಪ್ರಶ್ನೆಯಾಗಿದೆ. 2,600 ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟ ಕೇರಳಕ್ಕೆ ಕೇಂದ್ರ ಕೊಟ್ಟಿದ್ದು 600 ಕೋಟಿ ರೂ ಮಾತ್ರ. ಕೇರಳಕ್ಕೆ ಆಗಿರುವ ಅಪಾರ ನಷ್ಟಕ್ಕೆ ಕೇಂದ್ರ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ಬೇರೆ ರಾಷ್ಟ್ರಗಳ ಸಹಾಯಕ್ಕೂ ಅಡ್ಡಗಾಲು ಹಾಕುತ್ತಿವೆ ಎಂದು ಕೇರಳ ಸಿಎಂ ಪಿಣರಯಿ ವಿಜಯನ್, ಹಣಕಾಸು ಸಚಿವ ಥಾಮಸ್ ಐಸಾಕ್ ಹಾಗೂ ಮಾಜಿ ಸಿಎಂ ಊಮ್ಮೆನ್ ಚಾಂಡಿ ಮತ್ತಿತರರು ವ್ಯಗ್ರಗೊಂಡಿದ್ದಾರೆ. ಕೇರಳಕ್ಕೂ ಅರಬ್ ನಾಡಿಗೂ ಅವಿನಾಭಾವ ಸಂಬಂಧವಿದೆ. ಅರಬ್ ನಾಡಿನ ಅಭಿವೃದ್ಧಿಯಲ್ಲಿ ಕೇರಳಿಗರ ಕೊಡುಗೆ ಅಪಾರವಿದೆ. ಅರಬ್ ರಾಷ್ಟ್ರಗಳು ತಮ್ಮ ನೆರವಿಗೆ ಬರುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂಬುದು ಕೇರಳದ ವಾದ.

ಸಂಯುಕ್ತ ಅರಬ್ ಸಂಸ್ಥಾನ ರಾಷ್ಟ್ರವು ಕೇರಳಿಗರಿಗೆ 700 ಕೋಟಿ ರೂ ನೆರವಿನ ಪ್ಯಾಕೇಜ್ ಕೊಡಲು ಮುಂದಾಗಿತ್ತು. ಬೇರೆ ಅರಬ್ ರಾಷ್ಟ್ರಗಳಿಂದಲೂ ಹಣದ ನೆರವು ಹರಿದುಬರುವ ಸಾಧ್ಯತೆ ಇತ್ತು. ಥಾಯ್ಲೆಂಡ್​ ದೇಶ ಕೂಡ ಧನಸಹಾಯಕ್ಕೆ ಮುಂದಾಗಿತ್ತು. ಆದರೆ, ವಿದೇಶದಿಂದ ದೇಣಿಗೆ ಪಡೆಯಬಾರದೆಂಬ ರೂಢಿಗತ ನಿಯಮವನ್ನು ಮುಂದಿಟ್ಟು ಕೇಂದ್ರ ಸರಕಾರವು ವಿದೇಶಿ ನೆರವನ್ನು ನಯವಾಗಿ ತಿರಸ್ಕರಿಸಿದೆ. ದೇಶದಲ್ಲಿ ಉದ್ಭವಿಸುವ ಪ್ರಾಕೃತಿಕ ವಿಕೋಪಗಳನ್ನ ನಿರ್ವಹಿಸುವ ಸಾಮರ್ಥ್ಯ ನಮ್ಮ ದೇಶಕ್ಕಿದೆ. ಹೀಗಾಗಿ ವಿದೇಶೀ ನೆರವಿನ ಅಗತ್ಯವಿರುವುದಿಲ್ಲ ಎಂಬುದು ಕೇಂದ್ರದ ವಾದ. ಕೇರಳಕ್ಕೆ ಧನಸಹಾಯ ಮಾಡಲು ಬೇರೆ ರಾಷ್ಟ್ರಗಳಿಂದ ಅಧಿಕೃತವಾಗಿ ಯಾವುದೇ ಕೋರಿಕೆ ಬಂದಿಲ್ಲ ಎಂಬುದೂ ಕೇಂದ್ರ ಸ್ಪಷ್ಟನೆ. ಮೂಲಗಳ ಪ್ರಕಾರ, 2007ರಿಂದಲೂ ಭಾರತವು ಬೇರಾವುದೇ ರಾಷ್ಟ್ರ ಅಥವಾ ಬಹುರಾಷ್ಟ್ರೀಯ ಸಂಸ್ಥೆಯಿಂದ ನೆರವನ್ನು ಪಡೆದಿಲ್ಲವಂತೆ. ಉತ್ತರಾಖಂಡ್ ಮೊದಲಾದೆಡೆ ಭೀಕರ ಪ್ರವಾಹ ಪರಿಸ್ಥಿತಿ ಬಂದಾಗಲೂ ಕೇಂದ್ರ ಸರಕಾರವು ವಿದೇಶೀ ನೆರವನ್ನು ತಿರಸ್ಕರಿಸಿತ್ತೆನ್ನಲಾಗಿದೆ. ಈ ಸಂಪ್ರದಾಯವನ್ನು ಸದ್ಯ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಅಷ್ಟೇ. ವಿದೇಶೀ ನೆರವನ್ನು ತಿರಸ್ಕರಿಸುವುದು ಕೇಂದ್ರದ ಅಂತಿಮ ನಿಲುವೂ ಅಲ್ಲ. ಅಗತ್ಯಬಿದ್ದಾಗ ನೆರವು ಪಡೆದುಕೊಳ್ಳಲು ಮುಂದಾಗಬಹುದು ಎನ್ನಲಾಗುತ್ತಿದೆ.

ಕೇಂದ್ರದ ನೀತಿ ನಿಯಮಗಳಿಗಿಂತ ಹೆಚ್ಚಾಗಿ ಜನರ ಸಂಕಷ್ಟಕ್ಕೆ ಪರಿಹಾರ ಒದಗಿಸುವುದು ಮುಖ್ಯ. ಜನರ ಸಹಾಯಕ್ಕೋಸ್ಕರ ನೀತಿ ನಿಯಮಗಳಿರಬೇಕು. ವಿದೇಶೀ ದೇಣಿಗೆ ಪಡೆಯಲು ಅಡ್ಡಿ ಇರುವ ನಿಯಮಗಳಲ್ಲಿ ಬದಲಾವಣೆ ತಂದು ಕೇರಳಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇರಳದ ವಿಪಕ್ಷ ಮುಖಂಡ ಊಮ್ಮೆನ್ ಚಾಂಡಿ ಅವರು ಕೇಂದ್ರವನ್ನು ಆಗ್ರಹಿಸಿದ್ದಾರೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...