ರೈತ ಹೋರಾಟಕ್ಕೆ ಭಾಗಿಯಾದ ಕಾರಣಕ್ಕೆ ಸಿಎಂ ಅರವಿಂದ ಕೇಜ್ರಿವಾಲ್ ಗೃಹ ಬಂಧನ; ಎಎಪಿ ಆರೋಪ

ಅರವಿಂದ ಕೇಜ್ರಿವಾಲ್ ಹೋರಾಟನಿರತ ರೈತರನ್ನು ಭೇಟಿಯಾಗಿದ್ದ ದೃಶ್ಯ.

ಅರವಿಂದ ಕೇಜ್ರಿವಾಲ್ ಹೋರಾಟನಿರತ ರೈತರನ್ನು ಭೇಟಿಯಾಗಿದ್ದ ದೃಶ್ಯ.

ಭಾರತ್​ ಬಂದ್ ವೇಳೆ ಎಎಪಿ ಮತ್ತು ಇತರೆ ಪಕ್ಷದ ಕಾರ್ಯಕರ್ತರ ನಡುವೆ ನಡೆಯಬಹುದಾದ ಯಾವುದೇ ಸಂಭಾವ್ಯ ಅಹಿತಕರ ಘಟನೆಯನ್ನು ತಡೆಯುವ ಉದ್ದೇಶದಿಂದಲೇ ಅರವಿಂದ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

 • Share this:

  ನವ ದೆಹಲಿ (ಡಿಸೆಂಬರ್​ 08); ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ದೇಶದ ರೈತರು ಕಳೆದ 13 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ದೆಹಲಿಯ ಎಎಪಿ ಸರ್ಕಾರ ಮತ್ತು ಸಿಎಂ ಅರವಿಂದ ಕೇಜ್ರಿವಾಲ್​ ಈ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಅಲ್ಲದೆ, ಸ್ವತಃ ಕೇಜ್ರಿವಾಲ್​ ದೆಹಲಿ ಗಡಿಯಲ್ಲಿದ್ದ ಪ್ರತಿಭಟನಾ ನಿರತ ರೈತರನ್ನು ನಿನ್ನೆ ಭೇಟಿಯಾಗಿ ನೈತಿಕ ಬಲ ತುಂಬಿದ್ದರು, ಬೆಂಬಲದ ವಾಗ್ದಾನ ನೀಡಿದ್ದರು. ಆದರೆ, ರೈತರಿಗೆ ಬೆಂಬಲ ಸೂಚಿಸಿದ ಏಕೈಕ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನೇ ಗೃಹಬಂಧನದಲ್ಲಿರಿಸಲಾಗಿದೆ ಎಂದು ಆಮ್​ ಆದ್ಮಿ ಪಕ್ಷ ಇಂದು ಆರೋಪಿಸಿದೆ. 


  ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಆಮ್​ ಆದ್ಮಿ ಪಕ್ಷ, "ನಿನ್ನೆ ದೆಹಲಿಯ ಸಿಂಗು ಗಡಿಯಲ್ಲಿ ಪ್ರತಿಭಟನಾನಿರತ ರೈತರನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಏಕೈಕ ಕಾರಣಕ್ಕೆ ದೆಹಲಿಯ ಪೊಲೀಸರು ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಿದ್ದಾರೆ. ಅವರನ್ನು ನಿವಾಸದಿಂದ ಹೊರಗೆ ಬಿಡುತ್ತಿಲ್ಲ, ನಿವಾಸದೊಳಗೆ ಪ್ರವೇಶಿಸಲು ನಮಗೂ ಅವಕಾಶ ನೀಡುತ್ತಿಲ್ಲ" ಎಂದು ಕಿಡಿಕಾರಲಾಗಿದೆ.  ನಿನ್ನೆ ರೈತರನ್ನು ಭೇಟಿ ಮಾಡಿದ ನಂತರ ಸುದ್ದಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಅರವಿಂದ ಕೇಜ್ರಿವಾಲ್​, "ನಮ್ಮ ಪಕ್ಷ ರೈತ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದೆ. ಹೀಗಾಗಿ ನಮ್ಮ ಸರ್ಕಾರದಿಂದ ರೈತರಿಗೆ ಮುಜುಗರವಾಗುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ. ಈ ಹಿಂದೆ ರೈತರನ್ನು ಬಂಧಿಸಲು ಕ್ರೀಡಾಂಗಣಗಳನ್ನು ಜೈಲುಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರದಿಂದ ನಮಗೆ ಮನವಿ ಬಂದಿತ್ತು.


  ಆದರೆ, ನಾನು ಈ ಮನವಿಯನ್ನು ನಾನು ಸಾರಾಸಗಟಾಗಿ ತಳ್ಳಿ ಹಾಕಿದ್ದೆ. ಅಲ್ಲದೆ, ರೈತರಿಗೆ ಅಗತ್ಯವಾದ ಎಲ್ಲಾ ಅನುಕೂಲಗಳನ್ನೂ ನಾವು ಮಾಡಿದ್ದೇವೆ. ನಾವು ಎಂದಿಗೂ ರೈತರ ಸೇವಕರು. ಅಲ್ಲದೆ, ರೈತರನ್ನು ಬೆಂಬಲಿಸುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ತಿಳಿಸಿದ್ದರು.


  ಇದನ್ನೂ ಓದಿ : ಈ ಹಿಂದೆ ಕಾಂಗ್ರೆಸ್​ ತರಲು ಬಯಸಿದ್ಧಅದೇ ಕೃಷಿ ಮಸೂದೆಯನ್ನು ಇಂದು ವಿರೋಧಿಸುತ್ತಿರುವುದೇಕೆ?; ಸಚಿವ ರವಿಶಂಕರ್ ಪ್ರಶ್ನೆ


  ಭಾರತ್​ ಬಂದ್ ಕುರಿತು ಮಾತನಾಡಿದ್ದ ಅರವಿಂದ ಕೇಜ್ರಿವಾಲ್, "ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಎಎಪಿ ಭಾಗವಹಿಸಲಿದೆ. ಇಡೀ ದೇಶವು ಈ ಹೋರಾಟದಲ್ಲಿ ಶಾಂತಿಯುತವಾಗಿ ಭಾಗವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ರೈತರನ್ನು ಬೆಂಬಲಿಸುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ" ಎಂದಿದ್ದರು. ಇದೇ ಕಾರಣಕ್ಕೆ ಅರವಿಂದ ಕೇಜ್ರಿವಾಲ್​ ಇಂದೂ ಸಹ ರೈತ ಹೋರಾಟದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಎಎಪಿ ಕಾರ್ಯಕರ್ತರು ಟೀಕಿಸಿದ್ದಾರೆ.


  ಆದರೆ, ಈ ಆರೋಪವನ್ನು ನಿರಾಕರಿಸಿರುವ ದೆಹಲಿ ಪೊಲೀಸರು, "ಭಾರತ್​ ಬಂದ್ ವೇಳೆ ಎಎಪಿ ಮತ್ತು ಇತರೆ ಪಕ್ಷದ ಕಾರ್ಯಕರ್ತರ ನಡುವೆ ನಡೆಯಬಹುದಾದ ಯಾವುದೇ ಸಂಭಾವ್ಯ ಅಹಿತಕರ ಘಟನೆಯನ್ನು ತಡೆಯುವ ಉದ್ದೇಶದಿಂದಲೇ ಅರವಿಂದ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆ.

  Published by:MAshok Kumar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು