ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪದಗ್ರಹಣ

ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ದೆಹಲಿಯ ಶಾಲಾ ಶಿಕ್ಷಕರು, ವಿವಿಧ ಕ್ಷೇತ್ರಗಳ 50 ಪ್ರತಿನಿಧಿಗಳು ಸಾಕ್ಷಿಯಾದರು. ತಾನು ದೆಹಲಿಯ ಪ್ರತಿಯೊಬ್ಬ ವ್ಯಕ್ತಿಗೂ ಯಾವುದೇ ತಾರತಮ್ಯವಿಲ್ಲದೇ ಕೆಲಸ ಮಾಡುವುದಾಗಿ ಕೇಜ್ರಿವಾಲ್ ಹೇಳಿದರು.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

  • News18
  • Last Updated :
  • Share this:
ನವದೆಹಲಿ(ಫೆ. 16): ಅರವಿಂದ್ ಕೇಜ್ರಿವಾಲ್ ಸತತ 3ನೇ ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಭಾನುವಾರ ಅಧಿಕಾರ ಸ್ವೀಕಾರ ಮಾಡಿದರು. ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಭಿನ್ನ ಕಾರ್ಯಕ್ರಮದಲ್ಲಿ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿನಿಂದಲೂ ರಾಜ್ ನಿವಾಸದಲ್ಲೇ ಮುಖ್ಯಮಂತ್ರಿಗಳು ಪ್ರಮಾಣ ಸ್ವೀಕಾರ ಮಾಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ ಅರವಿಂದ್ ಕೇಜ್ರಿವಾಲ್ ರಾಮಲೀಲಾ ಮೈದಾನದಲ್ಲಿ ಅಧಿಕಾರ ಸ್ವೀಕರಿಸಿದ ಮೊದಲ ದೆಹಲಿ ಸಿಎಂ ಎಂಬ ದಾಖಲೆ ಸೃಷ್ಟಿಸಿದರು. ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗಹ್ಲೋಟ್, ರಾಜೇಂದ್ರ ಪಾಲ್ ಗೌತಮ್ ಮತ್ತು ಇಮ್ರಾನ್ ಹುಸೇನ್ ಅವರೂ ಈ ಸಂದರ್ಭದಲ್ಲಿ ಸಚಿವರಾಗಿ ಪ್ರಮಾಣ ವಚನ ಪಡೆದರು.

ಅರವಿಂದ್ ಕೇಜ್ರಿವಾಲ್ ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಆಮಂತ್ರಣ ಕೊಟ್ಟಿದ್ದರು. ಆದರೆ, ಮೋದಿ ಈ ಕಾರ್ಯಕ್ರಮಕ್ಕೆ ಬರಲಿಲ್ಲ.

“ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಅವರಿಗೆ ಬರಲಾಗಿಲ್ಲ. ಬಹುಶಃ ಅವರು ಬೇರೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರಬಹುದು. ಈ ವೇದಿಕೆ ಮೂಲಕ ದೆಹಲಿಯಲ್ಲಿ ಸುಗಮ ಆಡಳಿತ ಮತ್ತು ಅಭಿವೃದ್ಧಿಗೆ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದ ಪಡೆಯಬಯಸುತ್ತೇನೆ” ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ: ಪೊಲೀಸರು ನಿಮ್ಮ ಶತ್ರುಗಳಲ್ಲ; ಬೇಕಾದರೆ ಟೀಕಿಸಿ, ಆದರೆ ಗೌರವಿಸಲು ಮರೆಯದಿರಿ: ಅಮಿತ್ ಶಾ

ಅರವಿಂದ್ ಕೇಜ್ರಿವಾಲ್ ಈ ಕಾರ್ಯಕ್ರಮಕ್ಕೆ ದೆಹಲಿಯ ಶಾಲಾ ಶಿಕ್ಷಕರನ್ನು ಆಹ್ವಾನಿಸಿದ್ದರು. ಆಡಳಿತಕ್ಕೆ ಕೊಡುಗೆ ನೀಡಿದ ವಿವಿಧ ಕ್ಷೇತ್ರಗಳ 50 ಪ್ರತಿನಿಧಿಗಳನ್ನೂ ಆಮಂತ್ರಿಸಲಾಗಿತ್ತು. ಇವರಲ್ಲಿ ಅಂಗನವಾಡಿ ಕಾರ್ಯಕರ್ತರು, ಡೋರ್ ಡೆಲಿವರಿ ನೌಕರರು, ಸ್ವಚ್ಛ ಕಾರ್ಮಿಕರು, ರೈತರು, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ, ಸಾರ್ವಜನಿಕ ಸಾರಿಗೆಯ ಪ್ರತಿನಿಧಿಗಳೂ ಇದ್ದರು.

“ಚುನಾವಣೆಗಳು ಮುಗಿದುಹೋಗಿವೆ. ನೀವು ಯಾರಿಗೆ ವೋಟು ಮಾಡಿದ್ದೀರಿ ಎಂಬುದು ನನಗೆ ಬೇಕಿಲ್ಲ. ಈಗ ದೆಹಲಿಯ ಪ್ರತಿಯೊಬ್ಬರೂ ನನ್ನ ಕುಟುಂಬದವರೇ ಆಗಿದ್ದಾರೆ. ಯಾವುದೇ ಪಕ್ಷದವರಿರಲಿ, ಯಾವುದೇ ಧರ್ಮೀಯರಾಗಿ, ಯಾವುದೇ ಜಾತಿ ಮತ್ತು ವರ್ಗದವರೇ ಆಗಲಿ ಪ್ರತಿಯೊಬ್ಬರ ಶ್ರೇಯೋಭಿವೃದ್ಧಿ ನನ್ನ ಗುರಿ. ನಾನು ಕೇವಲ ಎಎಪಿಯ ಮುಖ್ಯಮಂತ್ರಿಯಲ್ಲ. ನಾನು ಬಿಜೆಪಿಯ ಮುಖ್ಯಮಂತ್ರಿಯೂ ಹೌದು, ಕಾಂಗ್ರೆಸ್​ನ ಮುಖ್ಯಮಂತ್ರಿಯೂ ಹೌದು, ಪ್ರತಿಯೊಬ್ಬರ ಮುಖ್ಯಮಂತ್ರಿಯೂ ಹೌದು” ಎಂದು ತಿಳಿಸಿದರು.

ಆಮ್ ಆದ್ಮಿ ಪಕ್ಷ ಎಲ್ಲವನ್ನೂ ಉಚಿತವಾಗಿ ನೀಡುತ್ತೇವೆಂದು ಹೇಳಿ ಮತದಾರರನ್ನು ಆಕರ್ಷಿಸಿ ಚುನಾವಣೆ ಗೆದ್ದಿದೆ ಎಂದು ಬಿಜೆಪಿ ಮಾಡಿದ ಟೀಕೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದರು.

ಇದನ್ನೂ ಓದಿ: ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಸುರಕ್ಷತಾ ಕವಾಟ; ಆದರೆ, ಅದನ್ನು ಹತ್ತಿಕ್ಕಲಾಗುತ್ತಿದೆ: ನ್ಯಾ| ಚಂದ್ರಚೂಡ್

“ಕೇಜ್ರಿವಾಲ್ ಎಲ್ಲವನ್ನೂ ಉಚಿತವಾಗಿ ನೀಡುತ್ತಾರೆಂದು ಕೆಲವರು ಹೇಳುತ್ತಾರೆ. ಆದರೆ, ನಮ್ಮ ಪ್ರಕೃತಿಯ ಅನೇಕ ಅಮೂಲ್ಯ ವಸ್ತುಗಳು ನಮಗೆ ಉಚಿತವಾಗಿಯೇ ಲಭ್ಯವಿದೆ. ತಾಯಿಯ ಪ್ರೀತಿಯಾಗಲೀ, ತಂದೆಯ ಆಶೀರ್ವಾದವಾಗಲಿ, ಶ್ರವಣ ಕುಮಾರನ ಬದ್ಧತೆಯಾಗಲೀ ಯಾವುದಕ್ಕೂ ಬೆಲೆ ಕಟ್ಟಲಾಗದು. ಕೇಜ್ರಿವಾಲ್ ತನ್ನ ಜನರನ್ನು ಪ್ರೀತಿಸುತ್ತಾರೆ. ಅವರ ಈ ಪ್ರೀತಿ ಉಚಿತವಾಗಿಯೇ ಇರುತ್ತದೆ” ಎಂದು ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟರು.

ಕೇಜ್ರಿವಾಲ್ ಪದಗ್ರಹಣ ಸಮಾರಂಭಕ್ಕೆ ದೆಹಲಿ ಪೊಲೀಸರು ಬಿಗಿ ಭದ್ರತೆಯ ವ್ಯವಸ್ಥೆ ಮಾಡಿದ್ದರು. ರಾಮಲೀಲಾ ಮೈದಾನದಲ್ಲಿ ಬರೋಬ್ಬರಿ 3,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಫೆ. 8ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನಗಳನ್ನ ಜಯಿಸಿತು. ಬಿಜೆಪಿಗೆ 8 ಸ್ಥಾನಗಳು ಮಾತ್ರ ದಕ್ಕಿದ್ದವು. 2013ರ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೂ ಎಎಪಿ ಮತ್ತು ಕಾಂಗ್ರೆಸ್ ಪಕ್ಷ ಸೇರಿ ಅಧಿಕಾರ ರಚಿಸಿದ್ದವು. ಕೇಜ್ರಿವಾಲ್ ಮೊದಲ ಬಾರಿ ಮುಖ್ಯಮಂತ್ರಿ ಆದರು. ಅದಾದ ಬಳಿಕ ಅವಧಿಗೂ ಮುನ್ನವೇ ಕೇಜ್ರಿವಾಲ್ ರಾಜೀನಾಮೆ ನೀಡಿದರು. 2015ರಲ್ಲಿ ನಡೆದ ಚುನಾವಣೆಯಲ್ಲಿ ಎಎಪಿ 67 ಸ್ಥಾನ ಗೆದ್ದು ಬಹುತೇಕ ಕ್ಲೀನ್ ಸ್ವೀಪ್ ಮಾಡಿತು. ಕೇಜ್ರಿವಾಲ್ ಜಾರಿಗೆ ತಂದ ಅನೇಕ ಕಾರ್ಯಕ್ರಮಗಳು ಜನಪ್ರಿಯತೆ ಗಳಿಸಿದವು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅವರು ಕ್ರಾಂತಿಕಾರಕ ಬದಲಾವಣೆಗಳನ್ನ ತಂದರು ಎನ್ನಲಾಗಿದೆ. 2020ರ ಚುನಾವಣೆಯಲ್ಲಿ ಕೇಜ್ರಿವಾಲ್ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನೇ ಪ್ರಮುಖವಾಗಿ ಮುಂದಿಟ್ಟುಕೊಂಡು ಮತದಾರರ ಬಳಿ ಹೋಗಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: