ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭೆ ವಿಸರ್ಜನೆ: ಕೆಸಿಆರ್ ಪ್ರಸ್ತಾವಕ್ಕೆ ರಾಜ್ಯಪಾಲರದ್ದೂ ಒಪ್ಪಿಗೆ


Updated:September 6, 2018, 5:16 PM IST
ಅವಧಿಗೂ ಮುನ್ನವೇ ತೆಲಂಗಾಣ ವಿಧಾನಸಭೆ ವಿಸರ್ಜನೆ: ಕೆಸಿಆರ್ ಪ್ರಸ್ತಾವಕ್ಕೆ ರಾಜ್ಯಪಾಲರದ್ದೂ ಒಪ್ಪಿಗೆ
  • Share this:
- ನ್ಯೂಸ್18 ಕನ್ನಡ

ನವದೆಹಲಿ(ಸೆ. 06): ತೆಲಂಗಾಣದಲ್ಲಿ ನಿರೀಕ್ಷೆಯಂತೆ ಅವಧಿಗೂ ಮುನ್ನವೇ ಚುನಾವಣೆ ನಡೆಯಲಿದೆ. ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಲು ನಿರ್ಧರಿಸಿದ್ಧಾರೆ. ಚುನಾವಣಾ ಆಯೋಗ ಒಪ್ಪಿಕೊಂಡರೆ ಡಿಸೆಂಬರ್​ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡ್ ರಾಜ್ಯಗಳ ಜೊತೆಯಲ್ಲೇ ತೆಲಂಗಾಣ ಚುನಾವಣೆಯೂ ನಡೆಯಲಿದೆ. 2019ರ ಮೇ ತಿಂಗಳವರೆಗೂ ತೆಲಂಗಾಣ ವಿಧಾನಸಭೆಯ ಅಧಿಕಾರಾವಧಿ ಇತ್ತು. ಈಗ ಹೆಚ್ಚೂಕಡಿಮೆ ಏಳೆಂಟು ತಿಂಗಳ ಮುನ್ನವೇ ಚುನಾವಣೆಗೆ ಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ:

ಜ್ಯೋತಿಷಿಗಳ ಮಾತು ಕೇಳಿ ವಿಧಾನಸಭೆ ವಿಸರ್ಜಿಸುವ ನಿರ್ಧಾರ ಕೈಗೊಂಡರೇ ಕೆಸಿಆರ್?

ಸಿಎಂ ಕೆಸಿಆರ್ ನೇತೃತ್ವದಲ್ಲಿ ಇಂದು ನಡೆದ ತೆಲಂಗಾಣ ಸಂಪುಟ ಸಭೆಯಲ್ಲಿ ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ತೀರ್ಮಾನ ಕೈಗೊಳ್ಳಲಾಯಿತು. ಅದಾದ ನಂತರ ಚಂದ್ರಶೇಖರ್ ರಾವ್ ಅವರು ರಾಜ್ಯಪಾಲ ಇಎಸ್​ಎಲ್ ನರಸಿಂಹನ್ ಅವರನ್ನು ಭೇಟಿಯಾಗಿ ಈ ಕುರಿತು ಮಾಹಿತಿ ನೀಡಿದರೆನ್ನಲಾಗಿದೆ. ಸಿಎಂ ಪ್ರಸ್ತಾವನೆಗೆ ರಾಜ್ಯಪಾಲರೂ ಒಪ್ಪಿಕೊಂಡಿದ್ಧಾರೆ. ಇದರೊಂದಿಗೆ ತೆಲಂಗಾಣ ವಿಧಾನಸಭೆಯು ವಿಸರ್ಜನೆಯಾಗುವುದು ಖಚಿತವಾಗಿದೆ. ನಾಳೆ ಶುಕ್ರವಾರದಂದು ವಿಧಾನಸಭೆಯನ್ನು ಅಧಿಕೃತವಾಗಿ ವಿಸರ್ಜಿಸುವ ಸಾಧ್ಯತೆ ಇದೆ.

ಕಾಂಗ್ರೆಸ್ ಅಡ್ಡಿ:
ಡಿಸೆಂಬರ್​ನಲ್ಲಿ ನಡೆಯಲಿರುವ ಬೇರೆ ರಾಜ್ಯಗಳ ಚುನಾವಣೆಗಳ ಜೊತೆ ತೆಲಂಗಾಣ ಚುನಾವಣೆಯನ್ನೂ ನಡೆಸಬೇಕೆನ್ನುವುದು ಕೆಸಿಆರ್ ಇಚ್ಛೆಯಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಇದಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆ ಇದೆ. ಬೇರೆ ರಾಜ್ಯಗಳೊಟ್ಟಿಗೆ ತೆಲಂಗಾಣ ಚುನಾವಣೆ ನಡೆಸಬಾರದೆಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ ಮಾಡಲಿದೆ ಎಂದು ಕಾಂಗ್ರೆಸ್ ಮುಖಂಡ ಎಂ. ಶಶಿಧರ್ ರೆಡ್ಡಿ ತಿಳಿಸಿದ್ದಾರೆ. ನಕಲಿ ಮತದಾರರ ಪಟ್ಟಿ ತಯಾರಿಸಲಾಗಿದೆ ಎಂಬುದು ಕಾಂಗ್ರೆಸ್ ಆರೋಪ. ಹೀಗಾಗಿ, ಚುನಾವಣೆಯನ್ನು ಈಗಲೇ ನಡೆಸಬಾರದೆಂದು ಕಾಂಗ್ರೆಸ್ ವಾದಿಸುತ್ತಿದೆ. ಒಂದು ವೇಳೆ, ತನ್ನ ಮನವಿಯನ್ನು ಚುನಾವಣಾ ಆಯೋಗ ಪುರಸ್ಕರಿಸದೇ ಇದ್ದರೆ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧರಿಸಿದೆ.ಕೆಸಿಆರ್ ಮತ್ತು ಸಂಖ್ಯೆ ಆರರ ಗುಟ್ಟು:
ಕಳೆದ ಭಾನುವಾರವೇ ವಿಧಾನಸಭೆ ವಿಸರ್ಜನೆ ಕುರಿತು ನಿರ್ಧಾರ ಪ್ರಕಟಿಸಬೇಕಿದ್ದ ಕೆಸಿಆರ್​ ಸಂಪುಟ ಸಭೆ ನಡೆಸಿದರಾದರೂ ಆ ಬಗ್ಗೆ ಒಂದು ಮಾತನ್ನು ಆಡಲಿಲ್ಲ. ಜ್ಯೋತಿಷಿಗಳ ಪ್ರಕಾರ, ಕೆ.ಸಿ.ಚಂದ್ರಶೇಖರ್ ಅವರು ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರಂತೆ. ಸಂಖ್ಯೆ 6 ಚಂದ್ರಶೇಖರ್ ರಾವ್​ ಅವರಿಗೆ ಅದೃಷ್ಟದ ಅಂಕಿಯಂತೆ. ಹೀಗಾಗೆ 6ನೇ ತಾರೀಖಿನಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದರೆನ್ನಲಾಗಿದೆ. ಹೀಗಾಗಿ, ಇಂದು ಅವರು ಸಂಪುಟ ಸಭೆ ಕರೆದು ವಿಧಾನಸಭೆ ವಿಸರ್ಜಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಂಬಿಕಸ್ಥ ಜ್ಯೋತಿಷಿಗಳು ಮತ್ತು ವಾಸ್ತು ತಜ್ಞರ ಸಲಹೆ ತೆಗೆದುಕೊಳ್ಳುತ್ತಾರಂತೆ. ಅವರ ಹತ್ತಿರದವರೊಬ್ಬರು ಹೇಳುವ ಪ್ರಕಾರ, ಜ್ಯೋತಿಷಿಗಳ ಸಲಹೆಯಂತೆ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸುವ ತೀರ್ಮಾನ ಮಾಡಿದ್ದಾರಂತೆ.

ಕೆಸಿಆರ್ ಲೆಕ್ಕಾಚಾರ ಏನು?
1999ರಿಂದಲೂ ಲೋಕಸಭೆ ಚುನಾವಣೆ ಜೊತೆ ಆಂಧ್ರದ ಚುನಾವಣೆ ನಡೆಯುತ್ತಾ ಬರುತ್ತಿದೆ. ಆದರೆ, ಈ ಬಾರಿ ಈ ಸಂಪ್ರದಾಯಕ್ಕೆ ಕೆಸಿಆರ್ ಬ್ರೇಕ್ ಹಾಕಲು ಅವರದ್ದೇ ಕಾರಣ ಮತ್ತು ಲೆಕ್ಕಾಚಾರವಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆಯನ್ನ ತಳ್ಳಿಹಾಕಲಾಗುವುದಿಲ್ಲ. ತೆಲಂಗಾಣದಲ್ಲಿ ಟಿಆರ್​ಎಸ್ ಪಕ್ಷಕ್ಕೆ ಪ್ರಮುಖ ಎದುರಾಳಿ ಆಗಿರುವುದು ಕಾಂಗ್ರೆಸ್ ಪಕ್ಷವೇ. ಹೀಗಾಗಿ, ಜನರು ರಾಹುಲ್ ಗಾಂಧಿ ಪರವಾಗಿ ನಿಂತು ಕಾಂಗ್ರೆಸ್​ಗೆ ವೋಟ್ ಹಾಕಿದರೆ ಟಿಆರ್​ಎಸ್​ಗೆ ಕಷ್ಟವಾಗಬಹುದು ಎಂಬುದು ಕೆಸಿಆರ್ ಲೆಕ್ಕಾಚಾರ. ಇನ್ನು, ತೆಲಂಗಾಣದಲ್ಲಿ ಬಿಜೆಪಿ ದುರ್ಬಲವಾಗಿರುವ ಹಿನ್ನೆಲೆಯಲ್ಲಿ, ಡಿಸೆಂಬರ್​ನಲ್ಲಿ ಉತ್ತರ ಭಾರತದ ನಾಲ್ಕು ರಾಜ್ಯಗಳೊಂದಿಗೆ ತೆಲಂಗಾಣದ ಚುನಾವಣೆ ನಡೆದರೆ ಕೆಸಿಆರ್​ಗೆ ಅಪಾಯದ ಪರಿಸ್ಥಿತಿ ಬರುವುದಿಲ್ಲ ಎಂಬುದೂ ಕೆಸಿಆರ್ ಅವರ ಮನಸಿನಲ್ಲಿದೆ.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ