ಅವಧಿಗೂ ಮುನ್ನ ಚುನಾವಣೆಯ ಬಗ್ಗೆ ಮೌನ ವಹಿಸಿದ ತೆಲಂಗಾಣ ಸಿಎಂ; ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಲು ಕರೆ

news18
Updated:September 2, 2018, 10:45 PM IST
ಅವಧಿಗೂ ಮುನ್ನ ಚುನಾವಣೆಯ ಬಗ್ಗೆ ಮೌನ ವಹಿಸಿದ ತೆಲಂಗಾಣ ಸಿಎಂ; ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಲು ಕರೆ
news18
Updated: September 2, 2018, 10:45 PM IST
ನ್ಯೂಸ್​18 ಕನ್ನಡ

ಹೈದರಾಬಾದ್​ (ಸೆ. 2): ಇಂದು ಸಚಿವ ಸಂಪುಟ ಸಭೆ ಕರೆದಿದ್ದ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವಧಿಗೂ ಮುನ್ನೆವೇ ವಿಧಾನಸಭೆ ವಿಸರ್ಜಿಸುವ ಸಾಧ್ಯತೆ ಇದೆ ಎನ್ನುವ ವದಂತಿಗಳು ಎಲ್ಲೆಡೆ ಹರಿದಾಡುತ್ತಿತ್ತು.

ಆದರೆ, ಅದಕ್ಕೆಲ್ಲ ತೆರೆ ಎಳೆದಿರುವ ಸಿಎಂ ಕೆ.ಸಿ. ರಾವ್​, ರಾಜ್ಯದ ಜನರು ಒಂದಾಗಿ ದೆಹಲಿ ಮೂಲದ ರಾಜಕೀಯ ಪಕ್ಷಗಳನ್ನು ಸೋಲಿಸಿ ಪ್ರಾದೇಶಿಕ ಪಕ್ಷಗಳನ್ನು ಬಲಪಡಿಸೋಣ ಎಂದು ಕರೆನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ತಮಿಳುನಾಡಿನ ರೀತಿಯಲ್ಲೇ ತೆಲಂಗಾಣ ಕೂಡ ರಾಷ್ಟ್ರೀಯ ಪಕ್ಷಗಳನ್ನು ವಿರೋಧಿಸಲು ಒಗ್ಗಟ್ಟಾಗಬೇಕಿದೆ. ಆ ಮೂಲಕ ನಮ್ಮ ಬೇಡಿಕೆ, ಉದ್ದೇಶಗಳನ್ನು ನಾವೇ ಈಡೇರಿಸಿಕೊಳ್ಳಬಹುದಾಗಿದೆ ಎಂದರು.

ಕಾದು ನೋಡಿ ಎಂದ ಸಿಎಂ
ಕೆಲವು ಮಾಧ್ಯಮಗಳು ನಮ್ಮ ಸರ್ಕಾರ ಅವಧಿಗೂ ಮುನ್ನವೇ ಬೀಳಲಿದೆ, ಕೆಸಿಆರ್​ ಸರ್ಕಾರವನ್ನು ವಿಸರ್ಜಿಸಲಿದ್ದಾರೆ ಎಂದು ವರದಿಗಳನ್ನು ಪ್ರಸಾರ ಮಾಡಿವೆ. ತೆಲಂಗಾಣದ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಟಿಆರ್​ಎಸ್​ನ ಎಲ್ಲ ಸದಸ್ಯರೂ ನನಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ. ಆದರೆ, ನಾನೀಗಲೇ ಯಾವ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳುವುದಿಲ್ಲ. ಸ್ವಲ್ಪ ಸರ್​ಪ್ರೈಸ್​ ಇದ್ದರೆ ಚೆನ್ನಾಗಿರುತ್ತದೆ. ಸದ್ಯದಲ್ಲೇ ಮತ್ತೊಂದು ಸಂಪುಟ ಸಭೆ ಕರೆಯಲಿದ್ದೇನೆ. ಆ ಸಭೆಯಲ್ಲಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಭೆಯ ನಂತರ ನಡೆದ ರ್ಯಾಲಿಯಲ್ಲಿ ಸಿಎಂ ಕೆಸಿಆರ್​ ಹೇಳಿದ್ದಾರೆ.
Loading...

ಮುಂದಿನ ಚುನಾವಣೆಗೂ ಮುನ್ನವೇ ಕೆಸಿಆರ್​ ತಮ್ಮ ನಿರ್ಧಾರವನ್ನು ಘೋಷಿಸಬೇಕಾಗಿದೆ. ಅಥವಾ ಬೇರೆ ಪಕ್ಷಗಳ ಜೊತೆ ಸೇರಿ 2019ರ ಚುನಾವಣೆಗೆ ಮೈತ್ರಿಕೂಟ ರಚಿಸಬೇಕಾಗಿದೆ.

ಸಿಎಂ ಕೆ. ಚಂದ್ರಶೇಖರ ರಾವ್​ ನೇತೃತ್ವದಲ್ಲಿ ಇಂದು ಮಧ್ಯಾಹ್ನದಿಂದ ನಡೆದ ಸಂಪುಟ ಸಭೆಯಲ್ಲಿ ಆಶಾ ಕಾರ್ಯಕ್ರಮದಡಿ ಮಹಿಳಾ ಉದ್ಯೋಗಿಗಳ ಸಂಬಳ ಹೆಚ್ಚಳ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತೆಲಂಗಾಣ ಹಣಕಾಸು ಸಚಿವರಾದ ಎಟೆಲಾ ರಾಜೇಂದರ್​ ಮತ್ತು ನೀರಾವರಿ ಸಚಿವ ಟಿ. ಹರೀಶ್​ ರಾವ್​ ತಿಳಿಸಿದ್ದಾರೆ. 6 ಸಾವಿರವಿದ್ದ ತೆಲಂಗಾಣದ ಆಶಾ ಕಾರ್ಯಕರ್ತರ ಮಾಸಿಕ ವೇತನವನ್ನು 7,500ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಅದೇರೀತಿ, ದೇವಸ್ಥಾನಗಳ ಅರ್ಚಕರ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಸಲಾಗಿದೆ.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ತೆಲಂಗಾಣದ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಒಂದುವೇಳೆ ಕೆಸಿಆರ್​ ಸರ್ಕಾರ ನಿಗದಿತ ದಿನಾಂಕಕ್ಕೂ ಮೊದಲೇ ವಿಧಾನಸಭಾ ಚುನಾವಣೆ ನಡೆಸಲು ಮುಂದಾದರೆ ಬೇಗನೇ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ. ಸದ್ಯಕ್ಕೆ ತೆಲಂಗಾಣ ರಾಜ್ಯದ ಜನರಲ್ಲಿ ಕೆಸಿಆರ್​ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಈಗಾಗಲೇ ಕೆಲ ದಿನಗಳಿಂದ ಹಿರಿಯ ಐಎಎಸ್​ ಅಧಿಕಾರಿಗಳನ್ನು ಒಳಗೊಂಡಂತೆ ಅನೇಕ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತಿರುವುದು ನಿಗದಿತ ಸಮಯಕ್ಕಿಂತ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಗೆ ಇಂಬು ಕೊಡುವಂತಿದೆ ಎನ್ನಲಾಗುತ್ತಿದೆ.

 
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...