ಕಾಶ್ಮೀರದಲ್ಲಿ 120 ದಿನಗಳಿಂದ ಮುಂದುವರೆದ ಅಂತರ್ಜಾಲ ನಿರ್ಬಂಧ; ತಾನಾಗಿಯೇ ನಿಷ್ಕ್ರಿಯಗೊಳ್ಳುತ್ತಿವೆ ವಾಟ್ಸಾಪ್ ಗುಂಪುಗಳು

120 ದಿನಗಳ ವರೆಗೆ ನಿಷ್ಕ್ರೀಯವಾಗಿರುವ ಯಾವುದೇ ವಾಟ್ಸಾಪ್ ಗುಂಪು ತಾನಾಗಿಯೇ ನಿಷ್ಕ್ರಿಯವಾಗುತ್ತದೆ. ಸುರಕ್ಷತೆ ಹಾಗೂ ಮೊಬೈಲ್ ಡೇಟಾವನ್ನು ಮಿತಿಗೊಳಿಸುವ ಸಲುವಾಗಿ ಸಂಸ್ಥೆ ಇಂತಹ ನೀತಿಗಳನ್ನು ರೂಪಿಸಲಾಗಿದೆ ಎಂದು ವಾಟ್ಸಾಪ್ ಸಂಸ್ಥೆ ತಿಳಿಸಿದೆ.

MAshok Kumar | news18-kannada
Updated:December 5, 2019, 3:42 PM IST
ಕಾಶ್ಮೀರದಲ್ಲಿ 120 ದಿನಗಳಿಂದ ಮುಂದುವರೆದ ಅಂತರ್ಜಾಲ ನಿರ್ಬಂಧ; ತಾನಾಗಿಯೇ ನಿಷ್ಕ್ರಿಯಗೊಳ್ಳುತ್ತಿವೆ ವಾಟ್ಸಾಪ್ ಗುಂಪುಗಳು
ಪ್ರಾತಿನಿಧಿಕ ಚಿತ್ರ.
  • Share this:
ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ಅಂತಾರ್ಜಾಲ ಸಂಪರ್ಕವನ್ನು ಕಡಿತಗೊಳಿಸಿ ಇಂದಿಗೆ ನಾಲ್ಕು ತಿಂಗಳಾಗಿವೆ. ಪರಿಣಾಮ ಕಾಶ್ಮೀರಿಗಳ ವಾಟ್ಸಾಪ್ ಗುಂಪುಗಳು ಸ್ವಯಂ ಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತಿದ್ದು ಈ ಕುರಿತು ಅನೇಕರು ಆತಂಕ ಹೊರಹಾಕಿದ್ಧಾರೆ.

ಕಳೆದ ಕೆಲ ದಿನಗಳಿಂದ ಕಣಿವೆ ರಾಜ್ಯದ ಸಾಮಾಜಿಕ ಜಾಲತಾಣಗಳ ಬಳಕೆದಾರರು ತಾವು ದೀರ್ಘಕಾಲದಿಂದ ಭಾಗವಹಿಸಿದ್ದ ವಾಟ್ಸಾಪ್ ಗುಂಪಿನಿಂದ ದಿಢೀರಣೆ ಕಣ್ಮರೆಯಾಗಲಾರಂಭಿಸಿದ್ದಾರೆ. ಆದರೆ, ಏತಕ್ಕಾಗಿ ಇದು ಹೀಗಾಗುತ್ತಿದೆ? ಎಂಬ ಕುರಿತು ಯಾರಿಗೂ ಸಹ ಸರಿಯಾದ ಮಾಹಿತಿ ಇರಲಿಲ್ಲ. ಏಕೆಂದರೆ ತಾವೇ ನಿರ್ಮಿಸಿರುವ ವಾಟ್ಸಾಪ್ ಗುಂಪುಗಳಿಂದ ಯಾರೂ ನಿರ್ಗಮಿಸಲಾರರು ಎಂಬ ಕುರಿತು ಎಲ್ಲರಿಗೂ ಖಚಿತತೆ ಇತ್ತು.

ಆದರೂ, ವಾಟ್ಸಾಪ್ ಬಳಕೆದಾರರು ಹೀಗೆ ಗುಂಪುಗಳಿಂದ ನಿರ್ಗಮಿಸಲು ಕಾರಣ ಏನು? ಎಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ಈ ಕುರಿತು ಸ್ಥಳೀಯ ಸುದ್ದಿ ಮಾಧ್ಯಮಗಳು ಗಮನ ಸೆಳೆದಿದ್ದವು.ಆದರೂ, ಏಕೆ ಹೀಗಾಗುತ್ತಿದೆ ಎಂದು ಫೇಸ್​ಬುಕ್ ಅಥವಾ ವಾಟ್ಸಾಪ್ ಸಂಸ್ಥೆಗಳ ಪ್ರಮುಖರು ಸ್ಪಷ್ಟನೆ ನೀಡಿರಲಿಲ್ಲ. ಆದರೆ, ದೇಶದ ಇತರೆಡೆ ಇರುವ ಕಾಶ್ಮೀರಿ ವಿದ್ಯಾರ್ಥಿಗಳು ತಾವು ವಾಟ್ಸಾಪ್ ಗುಂಪಿನಿಂದ ತಾನಾಗಿಯೇ ನಿರ್ಗಮವಾಗಿರುವ ಮೊಬೈಲ್​ ಸ್ಕ್ರೀನ್ ಶಾಟ್​ಗಳನ್ನು ಟ್ವೀಟರ್​ನಲ್ಲಿ ಪ್ರಕಟಿಸಿದ ನಂತರ ವಾಟ್ಸಾಪ್ ಸಂಸ್ಥೆ ಈ ಸಮಸ್ಯೆಯ ಕುರಿತು ಕೊನೆಗೂ ಮೌನ ಮುರಿದಿದೆ.

ಇದನ್ನೂ ಓದಿ : ಕಾಶ್ಮೀರದ ವಿಶೇಷ ಸವಲತ್ತಿಗೆ ಕತ್ತರಿ; ಏನಿದು ಕಲಂ 370? ಇದರ ಹಿನ್ನೆಲೆ, ಇತಿಹಾಸವೇನು? ರದ್ದುಗೊಳಿಸಿದರೆ ಆಗುವ ಪರಿಣಾಮವೇನು? ಇಲ್ಲಿದೆ ಮಾಹಿತಿ

“120 ದಿನಗಳ ವರೆಗೆ ನಿಷ್ಕ್ರೀಯವಾಗಿರುವ ಯಾವುದೇ ವಾಟ್ಸಾಪ್ ಗುಂಪು ತಾನಾಗಿಯೇ ನಿಷ್ಕ್ರಿಯವಾಗುತ್ತದೆ. ಸುರಕ್ಷತೆ ಹಾಗೂ ಮೊಬೈಲ್ ಡೇಟಾವನ್ನು ಮಿತಿಗೊಳಿಸುವ ಸಲುವಾಗಿ ಸಂಸ್ಥೆ ಇಂತಹ ನೀತಿಗಳನ್ನು ರೂಪಿಸಿದೆ. ಹೀಗಾಗಿ ಕಂಪೆನಿಯ ನಿಯಮದ ಪ್ರಕಾರ 120 ದಿನಗಳ ಕಾಲ ನಿಷ್ಕ್ರೀಯವಾಗಿರುವ ಯಾವುದೇ ವಾಟ್ಸಾಪ್ ಖಾತೆಗಳು ಸ್ವಯಂ ಚಾಲಿತವಾಗಿ ನಿರ್ಗಮಿಸುತ್ತದೆ" ಎಂದು ವಾಟ್ಸಾಪ್ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ತನ್ನ ಅಸಮಾಧಾನವನ್ನು ಹೊರಹಾಕಿರುವ ಸಾಮಾಜಿಕ ಹೋರಾಟಗಾರ ಶೆಹ್ಲಾ ರಶೀದ್, “ವ್ಯಯಕ್ತಿಕವಾಗಿ ಯಾವುದೇ ತಪ್ಪು ಮಾಡದೆ, ದೋಷಗಳಿಲ್ಲದೆ ವಾಟ್ಸಾಪ್ ಬಳಕೆದಾರರ ಖಾತೆಗಳನ್ನು ಏಕೆ ಅಳಿಸಲಾಗುತ್ತಿದೆ? ಸಂಬಂಧಪಟ್ಟವರು ದಯವಿಟ್ಟು ಈ ಕುರಿತು ಗಮನವಹಿಸಿ. ಕಳೆದ 4 ತಿಂಗಳುಗಳಿಂದ ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್ ವ್ಯವಸ್ಥೆ ಇಲ್ಲ. ಹೀಗಿದ್ದ ಮೇಲೆ ಕಂಪೆನಿ ನಿಯಮದ ಹೆಸರಿನಲ್ಲಿ ವಾಟ್ಸಾಪ್ ಗುಂಪುಗಳನ್ನು ನಿಷ್ಕ್ರಿಯಗೊಳಿಸುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ಕಲಂ 370ರ ಅಡಿಯಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ನೀಡುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಅಲ್ಲದೆ, ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿಯೂ ವಿಂಗಡಿಸಿತ್ತು. ಈ ಸಂದರ್ಭದಲ್ಲಿ ರಾಜ್ಯದ ಶಾಂತಿ ಸುವ್ಯವಸ್ಥೆ ಮತ್ತು ಸುರಕ್ಷತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಮೊಬೈಲ್ ಸೇವೆಗಳು ಹಾಗೂ ಅಂತರ್ಜಾಲ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿತ್ತು.ಭಾರತ ಸರ್ಕಾರದ ಈ ನಡೆಯನ್ನು ವಿಶ್ವದ ಅನೇಕ ರಾಷ್ಟ್ರಗಳು ವ್ಯಾಪಕವಾಗಿ ಖಂಡಿಸಿದವು. ಕಾಶ್ಮೀರಿಗಳು ಕೇಂದ್ರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ಹಂತ ಹಂತವಾಗಿ ಅಂತರ್ಜಾಲ ಹಾಗೂ ಮೊಬೈಲ್ ಕರೆ ಸಂಪರ್ಕವನ್ನು ಬಳಕೆಗೆ ಮುಕ್ತವನ್ನಾಗಿಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ಈವರೆಗೆ ಜಮ್ಮು-ಕಾಶ್ಮೀರದಲ್ಲಿ ಅಂತಾರ್ಜಾಲ ವ್ಯವಸ್ಥೆಯನ್ನು ನೀಡಲಾಗಿಲ್ಲ. ಹೀಗಾಗಿ ಕಣಿವೆ ರಾಜ್ಯದ ವಾಟ್ಸಾಪ್​ ಗುಂಪುಗಳು ತಾನಾಗಿಯೇ ನಿಷ್ಕ್ರಿಯವಾಗುತ್ತಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :  ಜಮ್ಮು-ಕಾಶ್ಮೀರ ಬಗ್ಗೆ ಪೋಸ್ಟ್ ಮಾಡುವ ಮುನ್ನ ಎಚ್ಚರ..!
First published: December 5, 2019, 3:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading