• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral Video: ಎನ್​ಕೌಂಟರ್ ವೇಳೆ ತಾತನ ಶವದೆದುರು ಮಗುವಿನ ಗೋಳಾಟ; ಮಾನವೀಯತೆ ಮೆರೆದ ಕಾಶ್ಮೀರದ ಪೊಲೀಸ್ ವಿಡಿಯೋ ವೈರಲ್!

Viral Video: ಎನ್​ಕೌಂಟರ್ ವೇಳೆ ತಾತನ ಶವದೆದುರು ಮಗುವಿನ ಗೋಳಾಟ; ಮಾನವೀಯತೆ ಮೆರೆದ ಕಾಶ್ಮೀರದ ಪೊಲೀಸ್ ವಿಡಿಯೋ ವೈರಲ್!

ಉಗ್ರರ ಗುಂಡೇಟಿನಿಂದ ಮಗುವನ್ನು ರಕ್ಷಿಸಿದ ಕಾಶ್ಮೀರ ಪೊಲೀಸ್

ಉಗ್ರರ ಗುಂಡೇಟಿನಿಂದ ಮಗುವನ್ನು ರಕ್ಷಿಸಿದ ಕಾಶ್ಮೀರ ಪೊಲೀಸ್

Viral Video: ಉಗ್ರರ ಗುಂಡಿಗೆ ಬಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ತಾತನ ಎದೆಯ ಮೇಲೆ ಹತ್ತಿ ಕುಳಿತಿದ್ದ 3 ವರ್ಷದ ಮಗು ಜೋರಾಗಿ ಅಳುತ್ತಿತ್ತು. ಆ ಮಗುವನ್ನು ಉಗ್ರರಿಂದ ಕಾಪಾಡಿದ ಕಾಶ್ಮೀರದ ಪೊಲೀಸ್ ಸಿಬ್ಬಂದಿಯ ಫೋಟೋ, ವಿಡಿಯೋಗಳು ಟ್ವಿಟ್ಟರ್​ನಲ್ಲಿ ವೈರಲ್ ಆಗಿವೆ.

  • Share this:

ಶ್ರೀನಗರ (ಜು. 1): ತನ್ನ ಪ್ರೀತಿಯ ತಾತನೊಂದಿಗೆ ಬೆಳಗ್ಗೆ ಕಾರಿನಲ್ಲಿ ಹೋಗುತ್ತಿದ್ದ ಆ 3 ವರ್ಷದ ಮಗುವಿಗೆ ಆ ಕ್ಷಣದ ಖುಷಿಯ ಹೊರತಾಗಿ ಬೇರೇನೂ ಬೇಕಿರಲಿಲ್ಲ. ತಾತನೂ ಅಷ್ಟೇ ಮೊಮ್ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾರಿನಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ತರಲೆಂದು ಹೋಗುತ್ತಿದ್ದರು. ಆದರೆ, ಅದೇ ಅವರ ಕೊನೆಯ ಕ್ಷಣವಾಗಲಿದೆ ಎಂದು ಅವರಿಗೂ ಗೊತ್ತಿರಲಿಲ್ಲ !

ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಸೋಪೋರ್ ಪ್ರದೇಶದಲ್ಲಿ ಉಗ್ರರ ಮೇಲೆ ಸಿಆರ್​ಪಿಎಫ್ ಪಡೆಯ ಸಿಬ್ಬಂದಿ ಎನ್​ಕೌಂಟರ್ ನಡೆಸಿದ್ದಾರೆ. ಸೋಪೋರ್​ನಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದರು. ಅನಿರೀಕ್ಷಿತವಾಗಿ ನಡೆದ ಈ ಘಟನೆ ಎನ್​ಕೌಂಟರ್​ ಕಾರ್ಯಾಚರಣೆಯಾಗಿ ಬದಲಾಗಿತ್ತು. ಉಗ್ರರನ್ನು ಸದೆಬಡಿಯಲು ಸಿಆರ್​ಪಿಎಫ್​ ಸಿಬ್ಬಂದಿ ಕೂಡ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಓರ್ವ ಯೋಧ ಮತ್ತು ನಾಗರಿಕರೊಬ್ಬರು ಸಾವನ್ನಪ್ಪಿದ್ದರು. ಆ ನಾಗರಿಕ ಬೇರಾರೂ ಅಲ್ಲ, ಕಾರಿನಲ್ಲಿ 3 ವರ್ಷದ ಮೊಮ್ಮಗನೊಂದಿಗೆ ತೆರಳುತ್ತಿದ್ದ ಅದೇ ತಾತ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಸೋಪೋರ್​ನಲ್ಲಿ ಇಂದು ಮುಂಜಾನೆ ಉಗ್ರರ ದಾಳಿ; ಓರ್ವ ಸಿಆರ್​ಪಿಎಫ್ ಯೋಧ, ನಾಗರಿಕ ಸಾವು

ಸಿಆರ್​ಪಿಎಫ್​ ಯೋಧರ ಮೇಲೆ ಗುಂಡಿನ ಮಳೆಗರೆಯುತ್ತಿದ್ದ ಉಗ್ರರು ರಸ್ತೆಯಲ್ಲಿ ಬರುತ್ತಿದ್ದ ಕಾರಿನ ಮೇಲೂ ಗುಂಡು ಹಾರಿಸಿದ್ದರು. ಆಗ ಮೊಮ್ಮಗನನ್ನು ಕಾರಿನಿಂದ ಇಳಿಸಿಕೊಂಡು ರಕ್ಷಣೆಗಾಗಿ ಓಡುತ್ತಿದ್ದ ತಾತನ ಎದೆಯನ್ನು ಉಗ್ರರ ಬಂದೂಕಿನ ಗುಂಡು ಸೀಳಿ ಒಳನುಗ್ಗಿತ್ತು. ನಡುರಸ್ತೆಯಲ್ಲಿ ಸತ್ತುಬಿದ್ದಿದ್ದ ತಾತನ ಎದೆಯ ಮೇಲೆ ಕುಳಿತು, ಜೋರಾಗಿ ಅಳುತ್ತಾ 'ತಾತ ಎದ್ದೇಳು, ಅಮ್ಮ ಕಾಯ್ತಾ ಇರ್ತಾರೆ, ಹೋಗೋಣ ಬಾ' ಎಂದು ಕರೆಯುತ್ತಿದ್ದ ಫೋಟೋ, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾತನನ್ನು ಎಷ್ಟು ಕರೆದರೂ ಅಲ್ಲಾಡದಿದ್ದಾಗ ಆ 3 ವರ್ಷದ ಮಗು ಎದ್ದು ರಸ್ತೆಯಲ್ಲಿ ನಡೆಯತೊಡಗಿತ್ತು. ಆ ವೇಳೆ ಬಂದೂಕು ಹಿಡಿದು ಉಗ್ರರ ಮೇಲೆ ಗುಂಡು ಹಾರಿಸುತ್ತಿದ್ದ ಕಾಶ್ಮೀರದ ಪೊಲೀಸ್ ಒಬ್ಬರು ಆ ಮಗುವನ್ನು ಹಿಡಿದು ನಿಲ್ಲಿಸಿ, ಉಗ್ರರ ಗುಂಡಿನಿಂದ ಕಾಪಾಡಿದ್ದಾರೆ. ಆ ಮಗುವನ್ನು ಎತ್ತಿಕೊಂಡು ಕಣ್ಣೀರು ಒರೆಸುತ್ತಿರುವ ಪೊಲೀಸರ ಫೋಟೋವನ್ನು ಕಾಶ್ಮೀರದ ಪೊಲೀಸ್ ಇಲಾಖೆ ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದೆ. ಪೊಲೀಸ್ ಸಿಬ್ಬಂದಿಯ ಮಾನವೀಯತೆಗೆ ಟ್ವಿಟ್ಟಿಗರು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.


ಶ್ರೀನಗರದಿಂದ 50 ಕಿ.ಮೀ. ದೂರದಲ್ಲಿರುವ ಬರಾಮುಲ್ಲ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದ ನಾಲ್ವರು ಯೋಧರು ಗಾಯಗೊಂಡಿದ್ದರು. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಸೋಪೋರ್​ನಲ್ಲಿನ ಮಾಡೆಲ್ ಟೌನ್​ನಲ್ಲಿ ನಾಕಾಬಂಧಿ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಕಾಶ್ಮೀರದ ಪೊಲೀಸರ ಸಮಯಪ್ರಜ್ಞೆಯಿಂದ 3 ವರ್ಷದ ಮಗು ಪ್ರಾಣಾಪಾಯದಿಂದ ಬಚಾವ್ ಆಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು