ಐಪಿಎಸ್​ ಅಧಿಕಾರಿಯಾಗಬೇಕೆಂದು ಕನಸು ಕಾಣುತ್ತಿರುವ ಉಗ್ರ ಕಸಬ್ ಕಲ್ಪಿತ ಮಗಳು

ಹತ್ತು ವರ್ಷಗಳು ಉರುಳಿವೆ. ಹಿಂತಿರುಗಿ ನೋಡಿದಾಗ ಒಂದಷ್ಟು ಕಹಿ ಘಟನೆಗಳು ಮಾತ್ರ ಕಾಣಿಸುತ್ತದೆ.

zahir | news18
Updated:November 26, 2018, 7:22 AM IST
ಐಪಿಎಸ್​ ಅಧಿಕಾರಿಯಾಗಬೇಕೆಂದು ಕನಸು ಕಾಣುತ್ತಿರುವ ಉಗ್ರ ಕಸಬ್ ಕಲ್ಪಿತ ಮಗಳು
devika
  • Advertorial
  • Last Updated: November 26, 2018, 7:22 AM IST
  • Share this:
ಮುಂಬೈ: ಅದು 26 ನವೆಂಬರ್ 2008. ಭಾರತದ ಪಾಲಿಗೆ ಕರಾಳ ದಿನ. ಪಾಕಿಸ್ತಾನದ ಹತ್ತು ಉಗ್ರರು ಸಮುದ್ರ ಮಾರ್ಗದ ಮೂಲಕ ನಮ್ಮ ದೇಶದೊಳಗೆ ನುಸುಳಿದ್ದರು. ವಾಣಿಜ್ಯ ನಗರಿ ಮುಂಬೈಯ 7 ಕಡೆ ದಾಳಿ ನಡೆಸಿ, 166 ಜನರನ್ನು ಬಲಿ ತೆಗೆದುಕೊಂಡಿದ್ದರು. ಮುಂಬೈ ದಾಳಿಯನ್ನು ಕೆಚ್ಚೆದೆಯಿಂದ ಎದುರಿಸಿದ ಅಧಿಕಾರಿಗಳು ಹುತಾತ್ಮರಾದರು. ಪಾತಕಿಗಳ ಈ ದಾಳಿಯಿಂದ ನೂರಾರು ಮುಗ್ಥ ಜನರು ಗಾಯಗೊಂಡರು. ಇಂದು ಆ ಗಾಯಗಳು ಮಾಸಿವೆ. ಆದರೆ ಅಂದಿನ ದಿನದ ಭೀಕರತೆ ಈಗಲೂ ಭಾರತೀಯರ ಮನಸಿನಲ್ಲಿ ಹಚ್ಚಳಿಯದೇ ಉಳಿದು ಬಿಟ್ಟಿದೆ.

ಭಯೋತ್ಪಾದಕರ ದಾಳಿ ವೇಳೆ 10 ಉಗ್ರರಲ್ಲಿ  9 ಉಗ್ರರನ್ನು ಹೊಡೆದುರುಳಿಸಲಾಯಿತು. ಈ ಸಂದರ್ಭದಲ್ಲಿ ಮುಂಬೈ ಪೊಲೀಸ್ ಕಾನ್ಸೆಟೇಬಲ್ ತುಕಾರಾಂ ಒಬ್ಳೆ ದೇಶಕ್ಕಾಗಿ ಉಗ್ರನ ಮೇಲೆ ಮುಗಿಬಿದ್ದರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಅಜ್ಮಲ್ ಕಸಬ್​ ಎಂಬ ಉಗ್ರ ಜೀವಂತವಾಗಿ ಸೆರೆ ಹಿಡಿದರು.ಈ ಸಾಹಸದ ನಡುವೆ ಒಬ್ಳೆ ತಮ್ಮ ಜೀವವನ್ನು ತ್ಯಾಗ ಮಾಡಿದರು.

ದೇಶವನ್ನೇ ಬೆಚ್ಚಿ ಬೀಳಿಸಿದ ಈ ದಾಳಿ ನಡೆದು ಈಗ 10 ವರ್ಷಗಳಾಗಿವೆ. ಈ ದಾಳಿಯಲ್ಲಿ ಸೆರೆಸಿಕ್ಕ ಉಗ್ರ ಅಜ್ಮಲ್ ಕಸಬ್​ನನ್ನು ಒಂದಷ್ಟು ವಾದ ಪ್ರತಿವಾದಗಳ ನಂತರ ನವೆಂಬರ್​ 21, 2012 ರಲ್ಲಿ ಗಲ್ಲಿಗೇರಿಸಲಾಯಿತು. ಆದರೆ ಕಸಬ್​ಗೆ ನೇಣಿನ ಕುಣಿಕೆ ಬೀಳಲು ಮುಖ್ಯ ಪಾತ್ರವಹಿಸಿದ ಪುಟ್ಟ ಬಾಲಕಿ ಬಗ್ಗೆ ಯಾರಿಗೂ ಗೊತ್ತಿಲ್ಲ? ಅವರೇನು ಮಾಡುತ್ತಿದ್ದಾರೆ, ಏನು ಓದುತ್ತಿದ್ದಾರೆ? ಯಾರವರು ಎಂಬುದನ್ನು ನಾವಿಂದು ಹೇಳುತ್ತೇವೆ. ಹೌದು, ನಾವು ಹೇಳ ಹೊರಟಿರುವುದು ದೇವಿಕಾ ರೋತಾವನ್ ಎಂಬ ಬಾಲಕಿ ಬಗ್ಗೆ.

ಕಸಬ್​ ಬಂಧನದ ನಂತರ ಕೋರ್ಟಿಗೆ ಪ್ರಮುಖ ಸಾಕ್ಷಿಗಳ ಅನಿವಾರ್ಯತೆಯಿತ್ತು. ಈ ವೇಳೆ ಗೊತ್ತಾಗಿದ್ದೇ 9 ವರ್ಷದ ದೇವಿಕಾ. ಉಗ್ರರ ದಾಳಿಯಲ್ಲಿ ದೇವಿಕಾ ಕಾಲಿಗೆ ಗುಂಡು ತಗುಲಿತ್ತು. ಈ ಭೀಕರ ಘಟನೆಯನ್ನು ದೇವಿಕಾ ಹೇಳುವ ಮುನ್ನ ಈ ದಾಳಿಯ ನಂತರ ಅವಳ ಜೀವನದಲ್ಲಿ ಉಂಟಾದ ಬದಲಾವಣೆಯನ್ನು ತಿಳಿಸಿದ್ದಳು.

ನಾನು, ಕಸಬ್ ವಿರುದ್ಧ ಸಾಕ್ಷಿ ನುಡಿದಿದ್ದೆ. ಆದರೆ ಅನೇಕ ಕಡೆ ನನ್ನ ಫೋಟೋಗಳನ್ನು ನೋಡಿದವರು ನಾನೇ ಕಸಬ್​ನ ಮಗಳೆಂದು ಭಾವಿಸಿದ್ದರು. ನಮಗೆ ಯಾರೂ ಬಾಡಿಗೆ ಮನೆ ನೀಡುತ್ತಿರಲಿಲ್ಲ. ನಾವಿದ್ದ ಸ್ಥಳದಲ್ಲಿ ನನ್ನನ್ನು ಉಗ್ರ ಕಸಬ್​ ಮಗಳು ಎಂದು ಗುರುತಿಸಲಾಗುತ್ತಿತ್ತು. ಯಾರು ಕೂಡ ಅವರ ಮಕ್ಕಳನ್ನು  ನನ್ನೊಂದಿಗೆ ಬೆರೆಯಲು ಬಿಡುತ್ತಿರಲಿಲ್ಲ.

26/11 ದಾಳಿಯ ನಂತರ ನನ್ನ ಜೀವನವೇ ಬದಲಾಗಿತ್ತು. ಅಂದು ನಾನು ಮತ್ತು ಅಪ್ಪ ಇಬ್ಬರೂ ಛತ್ರಪತಿ ಶಿವಾಜಿ ರೈಲ್ವೇ ಟರ್ಮಿನಲ್​ನಿಂದ ಪುಣೆಗೆ ತೆರಳಲು ತೆರಳಿದ್ದೆವು. ಒಂದೆಡೆ ವ್ಯಕ್ತಿಯೊಬ್ಬ ದಾಳಿ ನಡೆಸುತ್ತಿದ್ದನು. ಎಲ್ಲರೂ ಓಡಲು ಆರಂಭಿಸಿದ್ದಾರೆ. ಇದನ್ನು ನೋಡಿದ ಅಪ್ಪ ನನ್ನನ್ನೂ ಅಲ್ಲಿಂದ ಕಾಪಾಡಲು ನಿರ್ಧರಿಸಿದ್ದರು. ಅಪ್ಪ ನನ್ನ ಕೈ ಹಿಡಿದು ಓಡಾಲಾರಂಭಿಸಿದ್ದರು. ಓಡುತ್ತಿದ್ದಂತೆ ನನ್ನ ಕಾಲುಗಳಲ್ಲಿ ಅದೇನೊ ನೋವು ಕಾಣಿಸಿತು. ಸ್ವಲ್ಪ ದೂರದಲ್ಲೇ ನಾನು ಕುಸಿದು ಬಿದ್ದೆ. ನೋಡುತ್ತಿದ್ದಂತೆ ಕಾಲುಗಳಿಂದ ರಕ್ತ ಚಿಮ್ಮುತ್ತಿತ್ತು. ಅದೇಗೋ ಅಪ್ಪ ಅಲ್ಲಿಂದ ಎತ್ತಿಕೊಂಡು ಬಂದು ಜೀವ ಉಳಿಸಿದರು.

ಜೀವ ಉಳಿಯಿತು ನಿಜ. ಆದರೆ ಗುಂಡಿನ ಮೊರೆತ, ಕಿರುಚಾಟ ನನ್ನನ್ನು ಕಾಡುತ್ತಿತ್ತು. ನಿಷ್ಕರುಣೆಯಿಂದ ದಾಳಿ ಮಾಡುತ್ತಿದ್ದ ಉಗ್ರನ ರೂಪ ಕಾಣುತ್ತಿತ್ತು. ಅವನ ಮುಖದಲ್ಲಿ ಯಾವುದೇ ಪಶ್ಚಾತಾಪವಿರಲಿಲ್ಲ. ಎಲ್ಲರ ಮೇಲೂ ದಾಳಿ ಮಾಡುತ್ತಿದ್ದನು. ನಾನು ಗಾಯಗೊಂಡಿದ್ದಕ್ಕಿಂತ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಒಂದು ತಿಂಗಳು ಕಾಲ ಆಸ್ಪತ್ರೆಯಲ್ಲೇ ಉಳಿದೆ. ಹಲವಾರು ಶಸ್ತ್ರ ಚಿಕಿತ್ಸೆಗಳನ್ನು ಮಾಡಿ ಮತ್ತೆ ನಾನು ನಡೆದಾಡುವಂತೆ ಮಾಡಿದರು.ಈ ದಾಳಿಯ ಬಳಿಕ ನನಗೆ ಶಾಲೆಯಲ್ಲಿ ಪ್ರವೇಶ ನಿರಾಕರಿಸಲಾಯಿತು. ನನ್ನ ತಂದೆಯೊಂದಿಗೆ ಯಾರೂ ಕೂಡ ವ್ಯಾಪಾರ ನಡೆಸುತ್ತಿರಲಿಲ್ಲ. ಹೀಗಾಗಿ ನಮ್ಮ ಇಡೀ ಕುಟುಂಬ ರಾಜಸ್ಥಾನಕ್ಕೆ ಸ್ಥಳಾಂತಗೊಂಡಿತು. ಅದೊಂದು ದಿನ ಮುಂಬೈ ಪೊಲೀಸ್​ನಿಂದ ತಂದೆಗೆ ಕರೆ ಮಾಡಿದ್ದರು.

ಪೊಲೀಸರು ತಂದೆಯೊಂದಿಗೆ ನಿಮ್ಮ ಮಗಳು ಕಸಬ್​ನನ್ನು ನೋಡಿದ್ದಾರಲ್ಲವೇ, ಅವಳು ಬಂದು ಸಾಕ್ಷಿ ಹೇಳಬಹುದಾ? ಎಂದು ಕೇಳಿದ್ದರು. ಅದಾಗಲೇ ನನ್ನಂತಹ ಅದೆಷ್ಟೊ ಪುಟಾಣಿಗಳು ಮುಗ್ಧರನ್ನು ಬಲಿ ತೆಗೆದುಕೊಂಡಿದ್ದ ಕಸಬ್​ಗೆ ಶಿಕ್ಷೆಯಾಗಬೇಕೆಂದು ನಾನು ನಿರ್ಧರಿಸಿದ್ದೆ. ಇದೀಗ ನನ್ನ ಮುಖಾಂತರವಾಗಲಿ ಎಂಬುದು ದೇವರ ಇಚ್ಛೆಯಾಗಿತ್ತು ಅನಿಸುತ್ತದೆ. ಪೊಲೀಸರ ಕೋರಿಕೆಗೆ ಅಪ್ಪ ಸಮ್ಮತಿಸಿದರು.

ಆ ಸಮಯದಲ್ಲಿ ನನ್ನ ಕಾಲಿನ ಗಾಯ ಸಂಪೂರ್ಣ ವಾಸಿಯಾಗಿರಲಿಲ್ಲ. ನಾನು ಊರುಗೋಲಿನ ಸಹಾಯದಿಂದ ನ್ಯಾಯಾಲಕ್ಕೆ ಹೋದೆ. ನ್ಯಾಯಾಲಯದ ಸುತ್ತ ಮುತ್ತ ಒಬ್ಬ ಉಗ್ರಗಾಮಿಗೆ ಶಿಕ್ಷೆಯಾಗಲೆಂದು ಅದೆಷ್ಟೋ ಅಮ್ಮಂದಿರು ಕಣ್ಣೀರು ಹಾಕುತ್ತಿದ್ದರು. ನ್ಯಾಯಾಲಯದಲ್ಲಿ ಪ್ರವೇಶಿಸುತ್ತಿದ್ದಂತೆ ನನಗೆ ಕಾಣಿಸಿದ್ದು ಮತ್ತದೇ ಭೀಕರ ಮುಖ. ಹೌದು, ಕಸಬ್ ನ್ಯಾಯಾಧೀಶರ ಹತ್ತಿರದಲ್ಲೇ ಕೂತಿದ್ದ. ಅವನ ಮುಖ ನನ್ನ ಮನದಲ್ಲಿ ಹಚ್ಚಾಗಿದ್ದರಿಂದ ಕೋಪ ಉಕ್ಕಿ ಬಂತು. ನನ್ನಲ್ಲಿದ್ದ ಊರುಗೋಲನ್ನು ಅವನತ್ತ ಎಸೆಯಬೇಕೆಂದು ಅನಿಸಿತು. ಆದರೆ ತಾನೇನು ಮಾಡಿಲ್ಲವೆಂಬತೆ ಕಸಬ್ ಕುಳಿತಿದ್ದನು.

ನ್ಯಾಯಾಲಯದಲ್ಲಿ ಸತ್ಯವನ್ನೇ ಹೇಳುತ್ತೇನೆ...ಸತ್ಯವನ್ನಲ್ಲದೇ ಬೇರೇನು ಹೇಳುವುದಿಲ್ಲ...ಎಂದು ಪ್ರಮಾಣ ಮಾಡಿದೆ. ನನ್ನಲ್ಲಿದ್ದ ಕೋಪ, ಯಾತನೆ ಎಲ್ಲವನ್ನು ಸೇರಿಸಿ ದೈರ್ಯದಿಂದಲೇ ಕಸಬ್​ ದಾಳಿ ಮಾಡುತ್ತಿದ್ದನ್ನು ನೋಡಿರುವುದಾಗಿ ತಿಳಿಸಿದೆ. ಒಂದಷ್ಟು ಪ್ರಶ್ನೆಗಳನ್ನು ಕೇಳಿ ನ್ಯಾಯಾಧೀಶರು ಕಳುಹಿಸಿಕೊಟ್ಟರು. ಆದರೆ ಅನಂತರ ಪ್ರತಿಯೊಬ್ಬರೂ ನಮ್ಮನ್ನು ದೂರ ಮಾಡುತ್ತಿದ್ದರು. ಎಲ್ಲರೂ ನಿಮ್ಮನ್ನು ಭಯೋತ್ಪಾದಕರು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದರು. ಆದರೆ ಅಪರಾಧಿಯೊಬ್ಬನಿಗೆ ಶಿಕ್ಷೆ ವಿಧಿಸಿದ ಖುಷಿ ಮಾತ್ರ ನನ್ನಲ್ಲಿತ್ತು.

ಎಲ್ಲರೂ ದೂರ ಮಾಡುತ್ತಿದ್ದರಿಂದ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಕೂಡ ಕ್ಷೀಣಿಸಿತು. ಇದರ ನಡುವೆ ನಾನು ಕ್ಷಯ ರೋಗಕ್ಕೆ ಒಳಗಾದೆ. ಇಂತಹ ಸ್ಥಿತಿಯಲ್ಲಿ ಕುಟುಂಬವನ್ನು ಮುನ್ನೆಡೆಸುವುದು ತಂದೆಗೆ ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ನಾನು ನಮ್ಮ ಕುಟುಂಬದ ಹೀನಾಯ ಸ್ಥಿತಿಯನ್ನು ಟ್ವೀಟ್ ಮೂಲಕ ಪ್ರಧಾನಿಗೆ ತಿಳಿಸಿದೆವು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ವೇಳೆ ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವಿಸ್​ರನ್ನು ಭೇಟಿಯಾಗುವಂತೆ ತಿಳಿಸಿದರು.

ಮುಖ್ಯಮಂತ್ರಿಗೆ ನಮ್ಮ ಸ್ಥಿತಿಗತಿಯ ಮಾಹಿತಿ ನೀಡಿದ ಬಳಿಕ ಸ್ವಲ್ಪ ಹಣಕಾಸಿನ ಸಹಾಯ ದೊರೆಯಿತು. ಆದರೂ ನಮ್ಮ ಜೀವನದಲ್ಲಿ ಒಂದೂವರೆ ವರ್ಷವನ್ನು ಈ ಒಂದು ಘಟನೆಯಿಂದಲೇ ಕಳೆದಿದ್ದೇವೆ. ಈಗಲೂ ನಮ್ಮ ಕುಟುಂಬ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದೆ.

ಹತ್ತು ವರ್ಷಗಳು ಉರುಳಿವೆ. ಹಿಂತಿರುಗಿ ನೋಡಿದಾಗ ಒಂದಷ್ಟು ಕಹಿ ಘಟನೆಗಳು ಮಾತ್ರ ಕಾಣಿಸುತ್ತದೆ. ಕಾಲಿನ ಗಾಯ ನನ್ನನ್ನು ಸದಾ ಎಚ್ಚರಿಸುತ್ತಿರುತ್ತದೆ. ಈಗ ನಾನು 11ನೇ ತರಗತಿಯಲ್ಲಿ ಓದುತ್ತಿರುವೆ. ಮುಂದೆ ಐಪಿಎಸ್ ಅಧಿಕಾರಿ ಆಗಬೇಕು. ಮುಂಬೈ ದಾಳಿಯ ಮಾಸ್ಟರ್​ಮೈಂಡ್, ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು. ನಮಗಾಗಿ ತಮ್ಮ ಜೀವವನ್ನು ಪಣಕಿಟ್ಟು ಹುತಾತ್ಮರಾದವರ ಆತ್ಮಕ್ಕೆ ನ್ಯಾಯ ಸಿಗಬೇಕು. ಹೀಗೆ ದೇವಿಕಾ ಹೇಳುತ್ತಿದ್ದಂತೆ ಅವಳ ಕಣ್ಣಿನಲ್ಲಿ ಕಿಚ್ಚಿನ ಹೊಳಪು ಕಾಣಿಸುತ್ತಿತ್ತು.

First published:November 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ