ಬಾಬ್ರಿ ಮಸೀದಿ: 26 ವರ್ಷಗಳು ಕಳೆದರೂ ಕರಸೇವಕನ ನೆರವಿಗೆ ಯಾರೂ ಬರಲಿಲ್ಲ..!

ನೂರಾರು ಮುಗ್ಧರ ಭಾವನೆಗಳನ್ನೇ ಕೊಂದು ಯಾರಿಗಾಗಿ ಮಂದಿರ-ಮಸೀದಿ ನಿರ್ಮಿಸಲಾಗುತ್ತದೆ ಎಂಬುದು ಇನ್ನೂ ಕೂಡ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

news18
Updated:December 6, 2018, 6:48 PM IST
ಬಾಬ್ರಿ ಮಸೀದಿ: 26 ವರ್ಷಗಳು ಕಳೆದರೂ ಕರಸೇವಕನ ನೆರವಿಗೆ ಯಾರೂ ಬರಲಿಲ್ಲ..!
babari masjid
  • News18
  • Last Updated: December 6, 2018, 6:48 PM IST
  • Share this:
ಡಿಸೆಂಬರ್ 6, 1992..ದೇಶದ ಉದ್ದಗಲದಿಂದ 'ಶ್ರೀರಾಮ' ನಾಮಜಪದೊಂದಿಗೆ ಆರಂಭವಾಗಿದ್ದ ‘ಹಿಂದೂ ಜಾಗೃತಿ ಯಜ್ಞ’ ರಥಯಾತ್ರೆ  ಅಯೋಧ್ಯೆಗೆ ತಲುಪಿತ್ತು. ಅಂದು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕರಸೇವಕರಲ್ಲಿ ನಾನು ಕೂಡ ಒಬ್ಬನಾಗಿದ್ದೆ. ಬೆಳಿಗ್ಗೆ ಹನ್ನೊಂದು, ಹನ್ನೊಂದುವರೆ ಆಗಿರಬಹುದು. ಒಂದೇ ಘೋಷವಾಕ್ಯ ಮೊಳಗಲು ಆರಂಭವಾಯಿತು. 'ಏಕ್​ ದಕ್ಕಾ ಔರ್ ದೊ, ಬಾಬ್ರಿ ಮಸ್ಜಿದ್ ತೋಡ್ ದೋ'...ಎಂಬ ಘೋಷಣೆಯೊಂದಿಗೆ ಕರಸೇವಕರು ಮುನ್ನುಗ್ಗುತ್ತಿದ್ದರು.

ಅದಾಗಲೇ ಎಲ್ಲರೂ ಬಾಬ್ರಿ ಮಸ್ಜಿದ್ ಸುತ್ತಲೂ ನೆರೆದಾಗಿತ್ತು. ಮಸ್ಜಿದ್​ನ ಗುಮ್ಮಟದ ಮೇಲೆ ಭಾಗವ ಧ್ವಜ ಹಾರಿಸಲು ಹತ್ತಿದ್ದ ಮೊದಲಿಗರ ಗುಂಪಿನಲ್ಲಿ ನಾನಿದ್ದೆ. ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದ್ದಂತೆ ಧ್ವಂಸ ಕಾರ್ಯ ಆರಂಭವಾಗಿತ್ತು. ಸ್ವಲ್ಪ ಸಮಯದಲ್ಲೇ ಗುಮ್ಮಟದ ಒಂದು ಭಾಗವು ಕುಸಿಯಲು ಆರಂಭಿಸಿತು. ಅಲ್ಲೇ ಇದ್ದ ನನಗೆ ಆನಂತರ ಏನು ನಡೆಯಿತು ಎಂಬುದು ನೆನಪಿಲ್ಲ. ಇಷ್ಟು ಹೇಳಿ ಅಂಚಲ್ ಸಿಂಗ್ ಮೀನಾ ಒಂದು ಬಾರಿ ನಿಟ್ಟುಸಿರು ಬಿಟ್ಟರು.ಹೌದು, ಗುಮ್ಮಟವನ್ನು ಧ್ವಂಸ ಮಾಡಿದ ನಂತರ ನಡೆದದ್ದೇನು ಎಂಬುದರ ಬಗ್ಗೆ ನನಗೆ ಅರಿವಿಲ್ಲ. ನನಗೆ ಪ್ರಜ್ಞೆ ಬಂದಾಗ ನಾನು ಆಸ್ಪತ್ರೆಯ ಬೆಡ್​ ಮೇಲಿದ್ದೆ. ನಾನು ಸಂಪೂರ್ಣ ಬಳಲಿದ್ದೆ. ದೇಹದ ಅಂಗಗಳು ಕಾರ್ಯಾಚರಿಸುತ್ತಿರಲಿಲ್ಲ. ಇದು ತಿಳಿದಾಗ ಅರ್ಧ ಜೀವ ಹೋದಂತಾಯಿತು. ಕೇವಲ ಬಾಯಿಯಿಂದ ಧ್ವನಿ ಮಾತ್ರ ಬರುತ್ತಿತ್ತೇ ಹೊರತು, ಕೈ ಕಾಲುಗಳನ್ನು ಅಲ್ಲಾಡಿಸಲಾಗುತ್ತಿರಲಿಲ್ಲ.

 

ಕುಟುಂಬದವರು ಅಳುತ್ತಿರುವಾಗ ನಾನು ಕೂಡ ಕಣ್ಣೀರಿಡುತ್ತಿದ್ದೆ. ನಾನು ದೇವರ ಕೆಲಸಕ್ಕಾಗಿ ಹೋಗಿದ್ದೆ, ಆದರೆ ನನಗೆ ಅನ್ಯಾಯವಾಗಿತ್ತು. ನನ್ನ ಬೆರಳುಗಳು ಇಂದು ಶಕ್ತಿಯನ್ನು ಕಳೆದುಕೊಂಡಿದೆ. ಈಗ ನಾನು ಎರಡು ಕಾಲುಗಳ ತ್ರಾಣವನ್ನು ಕಳೆದುಕೊಂಡಿರುವೆ. ನಡೆದಾಡಲು ಆಗುತ್ತಿಲ್ಲ. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದಕ್ಕೂ ಇನ್ನೊಬ್ಬರನ್ನು ಆಶ್ರಯಿಸಬೇಕು. ಇದು ಕಳೆದ 26 ವರ್ಷಗಳಿಂದ ನಡೆದು ಬರುತ್ತಿದೆ. ಅಂದು ಸಂಘಟನೆ ದೇವರು ಎಂದವರೆಲ್ಲಾ ಇಂದಿಲ್ಲ. ಸಂಘಟನೆಗಳ ಸಹಾಯ ಎಂಬುದು ದೂರದ ಮಾತು. ಕೊನೇ ಪಕ್ಷ ಒಂದು ಲೋಟ ನೀರು ಕೊಟ್ಟು ಮಾತನಾಡಿಸಲು ಕೂಡ ಯಾರೂ ಕೂಡ ಬರಲಿಲ್ಲ.

ಇದೀಗ ನನ್ನ ಹೆಂಡತಿ ಮಕ್ಕಳು ನನ್ನನ್ನು ಸಾಕುತ್ತಿದ್ದಾರೆ. ನನಗೋಸ್ಕರ ಸಿಕ್ಕಿದ ಕೆಲಸಗಳನ್ನು ಅವರು ಒಪ್ಪಿಕೊಳ್ಳುತ್ತಾರೆ. ಮುಂದೆ ನಿಂತು ಮನೆಯ ಜವಾಬ್ದಾರಿ ನಿರ್ವಹಿಸಬೇಕಿದ್ದ ನಾನು ಒಂದು ಗ್ಲಾಸ್ ನೀರು ಕೂಡ ಕುಡಿಯಲಾಗದ ಪರಿಸ್ಥಿತಿಯಲ್ಲಿದ್ದೇನೆ. 26 ವರ್ಷಗಳ ಹಿಂದಿನ ಗಾಯಗಳೂ ಇಂದಿಗೂ ಮಾಸಿಲ್ಲ. ನನಗೆ ಒಟ್ಟು ಆರು ಮಕ್ಕಳಿದ್ದಾರೆ. ಅದರಲ್ಲಿ 5 ಹೆಣ್ಣು ಮಕ್ಕಳು, ಒಂದು ಗಂಡು ಮಗು. ನಾವೆಲ್ಲರೂ ಹಲವಾರು ವರ್ಷಗಳಿಂದ ಹೆಂಡತಿಯ ಸಂಪಾದನೆಯನ್ನೇ ನಂಬಿದ್ದೇವೆ.

ಇದು ಎಲ್ಲಿಯತನಕ ಎಂಬುದು ಗೊತ್ತಿಲ್ಲ. ಮುಂದಿನ ಜೀವನದ ಬಗ್ಗೆ ಯಾವುದೇ ಭರವಸೆಗಳು ನನ್ನಲ್ಲಿ ಉಳಿದಿಲ್ಲ. ನಾನು ದೇವರ ಕೆಲಸಕ್ಕಾಗಿ ತೆರಳಿದ್ದೆ, ದೇವರೇ ಕೈ ಬಿಟ್ಟಂತಹ ಪರಿಸ್ಥಿತಿ ನನ್ನದು. ನಾವು ಒಳ್ಳೆದನ್ನು ಬಯಸಿದರೆ ಮಾತ್ರ ಒಳ್ಳೇದು ಸಂಭವಿಸುತ್ತದೆ. ಇದು ಕೂಡ ದೇವರ ಇಚ್ಛೆಯಾಗಿರಬಹುದು. ಯಾವ ನಾಯಕನೂ, ಮಂತ್ರಿಗಳು ಕಾಳಜಿವಹಿಸುವುದಿಲ್ಲ. ಈಗಲೂ ನಾನು ದೇವರನ್ನು ಮಾತ್ರ ನಂಬಿದ್ದೇನೆ ಎಂದೆನ್ನುವಾಗ ಅಂಚಲ್ ಸಿಂಗ್ ಕಣ್ಣಿನ ಹನಿಗಳು ಕೆನ್ನೆಯ ಮೇಲಿತ್ತು.

ನಾನು ಯಾವುದೇ ಹಿಂದೂ-ಮುಸ್ಲಿಂ ಬೇಧಭಾವವನ್ನು ಹೊಂದಿರಲಿಲ್ಲ. ಈಗಲೂ ನನ್ನ ನೆರೆಹೊರೆಯ ಮುಸ್ಲಿಮರು ನನ್ನನ್ನು ನಂಬುತ್ತಾರೆ. ನಾವೆಲ್ಲರೂ ಅನೋನ್ಯರಾಗಿದ್ದೇವೆ. ಹಿಂದೂ ಸಹೋದರರು ನೀಡುವ ಸಹಕಾರದಷ್ಟೇ ಮುಸ್ಲಿಂ ಸ್ನೇಹಿತರು ನನ್ನ ಬೆಂಬಲ್ಲಕ್ಕೆ ನಿಂತಿದ್ದಾರೆ. ಅಂದು ಅಲ್ಲಿಗೆ ನಾನು ಹೋಗಿದ್ದು ದೇವರ ಹೆಸರಿನಲ್ಲಿ ಮಾತ್ರ. ಬೇರೆ ಯಾವುದೇ ವಿಷಯಗಳು ನನಗೆ ಗೊತ್ತಿರಲಿಲ್ಲ.

ಇದೀಗ ವಿಧಿಯಾಟ ಏನೋ, ಇಂದು ನನ್ನ ಕೈಯಲ್ಲಿ ಒಂದು ಫೋನು ಕೂಡ ಇಲ್ಲ. ಈಗ ನನ್ನೊಂದಿಗೆ ಯಾರಾದರೂ ಮಾತನಾಡಬೇಕಿದ್ದರೆ ನನ್ನ ಮುಸ್ಲಿಂ ಗೆಳೆಯ ರಯೀಸ್ ಫೋನ್​ಗೆ ಕರೆ ಮಾಡುತ್ತಾರೆ. ಅಲ್ಲದೆ ನನ್ನ ಬಗ್ಗೆ ಅವನೇ ಕಾಳಜಿವಹಿಸುತ್ತಾನೆ ಎಂದು ಅಂಚಲ್ ಕಣೀರಿಡುತ್ತಾ ಹೇಳಿದರು.ನಾವೆಲ್ಲರೂ ಇಂದು ಅನೋನ್ಯವಾಗಿದ್ದೇವೆ. ಹಿಂದೂ-ಮುಸ್ಲಿಂ ಎಂದು ಇಲ್ಲಿ ಯಾರೂ ಕೂಡ ತಾರತಮ್ಯ ಮಾಡುತ್ತಿಲ್ಲ. ನನ್ನ ಸಹೋದರ ಅಂಚಲ್ ಆರೋಗ್ಯವಾಗಿರಬೇಕೆಂದು ಬಯಸುತ್ತೇನೆ. ಅವರು ಶೀಘ್ರದಲ್ಲೇ ನಡೆದಾಡಬೇಕೆಂಬುದು ನಮ್ಮೆಲ್ಲರ ಪ್ರಾರ್ಥನೆ. ಇದೆಲ್ಲ ದೇವರ ಆಟ, ಎಲ್ಲರಿಗೂ ಒಳ್ಳೆದಾಗಲಿ. ಇಲ್ಲಿ ನಮ್ಮಂತವರಿಗೆ ಮಂದಿರ ಮಸೀದಿ ಬೇಡ, ಬೇಕಿರುವುದು ಮೇಲ್ವರ್ಗದ ಜನರಿಗೆ ಮಾತ್ರ. ಇದಕ್ಕಾಗಿ ಇಷ್ಟೊಂದು ರಾದ್ಧಾಂತಗಳು ನಡೆಯುತ್ತಿದೆ ಎಂದು ರಯೀಸ್ ತಿಳಿಸಿದರು.

ಮಂದಿರ-ಮಸೀದಿ ಗಲಾಟೆಯಲ್ಲಿ ದೇಶದ ಉದ್ದಗಲದಲ್ಲೂ ಅಂಚಲ್​ನಂತಹ ನೂರಾರು ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನೂರಾರು ಮುಗ್ಧರ ಭಾವನೆಗಳನ್ನೇ ಕೊಂದು ಯಾರಿಗಾಗಿ ಮಂದಿರ-ಮಸೀದಿ ನಿರ್ಮಿಸಲಾಗುತ್ತದೆ ಎಂಬುದು ಇನ್ನೂ ಕೂಡ ಯಕ್ಷ ಪ್ರಶ್ನೆಯಾಗಿ ಉಳಿದಿದೆ..ಹೇ ರಾಮ್..!
First published:December 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ