ಲಂಡನ್: ಯಾರಿಗೇ ಆದರೂ ತಮ್ಮ ನೆಲದ ಬಗ್ಗೆ ಮಣ್ಣಿನ ಬಗ್ಗೆ ಒಂದು ಪ್ರೀತಿ, ಅಭಿಮಾನ ಇದ್ದೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ (Sports Persons) ತಮ್ಮ ಪಂದ್ಯದಲ್ಲಿ ಪದಕವನ್ನು ಗೆದ್ದಾಗ ತಮ್ಮ ದೇಶದ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ದೇಶಕ್ಕೆ (India) ಹೆಮ್ಮೆ ತರುವ ಅನೇಕ ಕ್ಷಣಗಳನ್ನು ನಾವು ನೋಡಿದ್ದೇವೆ. ತಮ್ಮ ದೇಶದ ಜೊತೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಮಾನ ಮತ್ತು ಹೆಮ್ಮೆ ಇರುತ್ತದೆ. ಆದರೆ ಇತ್ತೀಚೆಗೆ ಈ ಧ್ವಜಗಳು ಕೆಲವೊಮ್ಮೆ ಅಹಿತಕರ ಘಟನೆಗಳಲ್ಲಿ ಕಾಣಿಸಿಕೊಂಡಿದ್ದು ಇದೆ.
ಏನದು ಬೆಳಗಾವಿಯಲ್ಲಿ ನಡೆದ ಘಟನೆ?
ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಗಾಗಿ ಕರ್ನಾಟಕ ಧ್ವಜವು ಸುದ್ದಿಯಲ್ಲಿರುವುದು ನಮಗೆಲ್ಲಾ ಗೊತ್ತೇ ಇದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಕಾಲೇಜು ಉತ್ಸವದಲ್ಲಿ ಕರ್ನಾಟಕದ ಧ್ವಜವನ್ನು ಹಾರಿಸಿದ್ದಕ್ಕಾಗಿ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆದಿರುವಂತಹ ಘಟನೆ ಸುದ್ದಿ ಮಾಧ್ಯಮಗಳಲ್ಲಿ ಜೋರಾಗಿಯೇ ಹರಿದಾಡಿತ್ತು.
ಆ ಘಟನೆಯ ವಿಡಿಯೋದಲ್ಲಿ, ವಿದ್ಯಾರ್ಥಿಗಳ ಗುಂಪೊಂದು ಪದವಿ ಪೂರ್ವ ಕಾಲೇಜಿನೊಳಗೆ ಡಿಜೆ ಸಂಗೀತಕ್ಕೆ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿತ್ತು ಮತ್ತು ಕೆಲವೇ ಸೆಕೆಂಡುಗಳಲ್ಲಿ, ವಿದ್ಯಾರ್ಥಿಯೊಬ್ಬ ಕರ್ನಾಟಕ ಧ್ವಜವನ್ನು ತಂದು ಜನಸಮೂಹದಲ್ಲಿ ಅದನ್ನು ಎತ್ತುತ್ತಿರುವುದು ಕಂಡುಬಂದಿತ್ತು. ಕರ್ನಾಟಕದ ಧ್ವಜವನ್ನು ಎತ್ತಿ ತೋರಿಸಿದ್ದ ವಿದ್ಯಾರ್ಥಿಯನ್ನು ಕೆಲವು ವಿದ್ಯಾರ್ಥಿಗಳು ಅಲ್ಲಿಯೇ ಹಿಡಿದು ತಕ್ಷಣ ಥಳಿಸಿದ್ದು ನಮಗೆಲ್ಲಾ ಗೊತ್ತೇ ಇದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಕನ್ನಡ ಪರ ಸಂಘಟನೆಗಳು ಸಹ ಆಗ್ರಹಿಸಿದ್ದವು.
ತಮ್ಮ ಎಂಎಸ್ ಪದವಿ ಪಡೆಯುವ ಮುಂಚೆ ಕರ್ನಾಟಕದ ಧ್ವಜವನ್ನು ಹರಿಸಿದ ಕನ್ನಡ ಕುವರ
ಆದರೆ ಈಗ ನಾವು ಹೇಳುತ್ತಿರುವ ಸುದ್ದಿ ಮನಸ್ಸಿಗೆ ಮುದ ನೀಡುವಂತದ್ದು ಮತ್ತು ನಮ್ಮ ರಾಜ್ಯದ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಪಡುವಂತೆ ಮಾಡುವಂತದ್ದು ಅಂತ ಹೇಳಬಹುದು. ಹೌದು.. ಲಂಡನ್ ಸಿಟಿ ಯೂನಿವರ್ಸಿಟಿಯ ವಿದ್ಯಾರ್ಥಿಯೊಬ್ಬ ತಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕರ್ನಾಟಕದ ಧ್ವಜವನ್ನು ಹಾರಿಸಿ ನಂತರ ತಮ್ಮ ಪದವಿಯನ್ನು ಸ್ವೀಕರಿಸಿದರು. ಅವರು ವೇದಿಕೆಯ ಮೇಲೆ ಬರುತ್ತಿದ್ದಂತೆ ಅಲ್ಲಿದ್ದ ಗಣ್ಯರಿಗೆ ಒಮ್ಮೆ ನಮಸ್ಕರಿಸಿ ನಂತರ ತಮ್ಮ ಜಾಕೆಟ್ ನಲ್ಲಿ ಇಟ್ಟುಕೊಂಡ ಕನ್ನಡದ ಬಾವುಟವನ್ನು ಹೊರ ತೆಗೆದು ವೇದಿಕೆಯ ಮಧ್ಯೆ ನಿಂತು ಬಾವುಟವನ್ನು ತೋರಿಸಿದ್ದನ್ನು ಈ ವಿಡಿಯೋದಲ್ಲಿ ನಾವು ನೋಡಬಹುದು. ಈ 25 ಸೆಕೆಂಡಿನ ವಿಡಿಯೋ ಕ್ಲಿಪ್ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋಗೆ 6,000ಕ್ಕೂ ಹೆಚ್ಚು ಲೈಕ್ ಗಳು ಸಹ ಲಭಿಸಿವೆ ಅಂತ ಹೇಳಬಹುದು.
ಇದನ್ನೂ ಓದಿ: Maternity Leave: ವಿವಾಹಿತ ವಿದ್ಯಾರ್ಥಿನಿಯರಿಗೆ ಬಂಪರ್ ಸವಲತ್ತು! ಸಿಗುತ್ತೆ 60 ದಿನ ಹೆರಿಗೆ ರಜೆ!
ವಿಡಿಯೋ ಹಂಚಿಕೊಂಡು ಶೀರ್ಷಿಕೆ ಏನಂತ ಬರೆದ್ರು ಆದಿಶ್?
ವಿಶ್ವವಿದ್ಯಾಲಯದ ಎಂಎಸ್ ಮ್ಯಾನೇಜ್ಮೆಂಟ್ ಪದವೀಧರ ಆದಿಶ್ ಆರ್ ವಾಲಿ ಅವರು ಪದವಿ ಪಡೆಯುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನಾನು ಸಿಟಿ ಯೂನಿವರ್ಸಿಟಿ ಆಫ್ ಲಂಡನ್ - ಬೇಯೀಸ್ ಬಿಸಿನೆಸ್ ಸ್ಕೂಲ್ ನಿಂದ ಮ್ಯಾನೇಜ್ಮೆಂಟ್ ನಲ್ಲಿ ಎಂ ಎಸ್ ಪದವಿ ಪಡೆದಿದ್ದೇನೆ. ಯುಕೆಯ ಲಂಡನ್ ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ನಮ್ಮ ಕರ್ನಾಟಕ ರಾಜ್ಯದ ಧ್ವಜವನ್ನು ಹಾರಿಸಿದ ಹೆಮ್ಮೆಯ ಕ್ಷಣ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: PM Modi Metro Ride: ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಯುವತಿಗೆ ಪ್ರಧಾನಿ ಮೋದಿ ಪ್ರಯಾಣಿಸಿದ ಮೆಟ್ರೋ ಚಲಾಯಿಸೋ ಭಾಗ್ಯ!
ಅಂತರ್ಜಾಲದಲ್ಲಿ ಈ ವಿಡಿಯೋ ಟ್ವಿಟರ್ ಬಳಕೆದಾರರಿಂದ ಅನೇಕ ರೀತಿಯ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಪದವಿ ಪಡೆದ ನಂತರ ಅನೇಕ ಜನರು ಆದಿಶ್ಗೆ ತಮ್ಮ ಪ್ರಶಂಸೆಗಳನ್ನು ಕಳುಹಿಸಿದ್ದಾರೆ. ತವರು ರಾಜ್ಯದ ಬಗ್ಗೆ ಅವರಿಗಿದ್ದ ಪ್ರೀತಿ, ಅಭಿಮಾನವನ್ನು ತುಂಬಾನೇ ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ