Annamalai IPS - ಕರ್ನಾಟಕ ಸಿಂಗಂ ಅಣ್ಣಾಮಲೈ ತಮಿಳುನಾಡಿನ ಡಿಎಂಕೆ ಭದ್ರಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲಬಲ್ಲರಾ?

ಐಪಿಎಸ್ ಅಧಿಕಾರಿಯಾಗಿ 9 ವರ್ಷದ ಕಿರು ಅವಧಿಯಲ್ಲಿ ಕರ್ನಾಟಕದ ಜನರ ಪಾಲಿಗೆ ಸಿಂಗಂ ಆಗಿಹೋಗಿದ್ದ ಕೆ ಅಣ್ಣಾಮಲೈ ಇದೀಗ ತಮಿಳುನಾಡಿನ ರಾಜಕೀಯ ವ್ಯವಸ್ಥೆ ಬದಲಿಸಹೊರಟಿದ್ದಾರೆ. ಡಿಎಂಕೆ ಭದ್ರಕೋಟೆ ಅರವಕುರಿಚ್ಚಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಇವರಿಗೆ ಗೆಲುವಿನ ಸಾಧ್ಯತೆ ಇದೆಯಾ?

ಕೆ ಅಣ್ಣಾಮಲೈ ಅವರು ಅರವಕುರಿಚ್ಚಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತಾಗಿರುವುದು

ಕೆ ಅಣ್ಣಾಮಲೈ ಅವರು ಅರವಕುರಿಚ್ಚಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತಾಗಿರುವುದು

 • Share this:
  ಕರೂರು, ತಮಿಳುನಾಡು: ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಹೆಸರು ಕರ್ನಾಟಕದಲ್ಲಿ ಚಿರಪರಿಚಿತ. ಎರಡು ವರ್ಷಗಳ ಹಿಂದಿನವರೆಗೂ ಕರ್ನಾಟಕಕ್ಕೆ ಇವರು ಸೂಪರ್ ಹೀರೋ, ಸೂಪರ್ ಕಾಪ್. ಕ್ರಿಮಿನಲ್​ಗಳ ಎದೆ ನಡುಗಿಸುತ್ತಿದ್ದ ಅವರಿಗೆ ಅಭಿಮಾನಿಗಳು ‘ಸಿಂಗಮ್’ ಎಂದೇ ಕರೆಯುತ್ತಿದ್ದರು. 2019ರಲ್ಲಿ ದಿಢೀರನೇ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಅಚ್ಚರಿ ಹುಟ್ಟಿಸಿದ್ದ ಅಣ್ಣಾಮಲೈ ಕೆಲ ತಿಂಗಳ ಬಳಿಕ ಬಿಜೆಪಿ ಸೇರಿ ಮತ್ತೂ ಅಚ್ಚರಿ ಹುಟ್ಟಿಸಿದ್ದರು. ಈಗ ಬಿಜೆಪಿಯ ಗಂಧವೇ ಇಲ್ಲದ ಕರೂರು ಜಿಲ್ಲೆಯ ಅರವಕುರಿಚ್ಚಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದು ಇನ್ನೂ ದೊಡ್ಡ ಅಚ್ಚರಿ ಸೃಷ್ಟಿಸಿದ್ದಾರೆ. ಎರಡು ವರ್ಷದ ಹಿಂದೆ ಕೈಯಲ್ಲಿ ಗನ್ ಹಿಡಿದು ಝಳುಪಿಸುತ್ತಿದ್ದ ಅವರು ಇದೀಗ ಬಿಳಿ ಶರ್ಟು ಮತ್ತು ಧೋತಿ ಧರಿಸಿ ಕ್ಷೇತ್ರಾದ್ಯಂತ ಸಂಚರಿಸುತ್ತಿದ್ಧಾರೆ.

  ಅಣ್ಣಾಮಲೈ ಅವರು ಕರ್ನಾಟಕದಲ್ಲಿ ಸೂಪರ್ ಕಾಪ್ ಅಗಿ ಜನಜನಿತರಾಗಿದ್ದರೆ, ತಮಿಳುನಾಡಿನ ಅವರ ತವರು ಜಿಲ್ಲೆಯಲ್ಲಿ ಸೂಪರ್ ಹೀರೋ ಎಂದೇ ಗುರುತಾಗಿದ್ದಾರೆ. ಬಿಜೆಪಿಯ ಅರಿವೇ ಇಲ್ಲದ ಇಲ್ಲಿಯ ಜನರಿಗೆ ಅಣ್ಣಾಮಲೈ ಅವರೆಂದರೆ ಬಹಳ ಅಭಿಮಾನ. ಇದು ಅವರಿಗೆ ಜನ್ಮ ನೀಡಿದ ನಾಡು. ಇದೊಂದೇ ಕಾರಣಕ್ಕೆ ಅಣ್ಣಾಮಲೈ ಬಿಜೆಪಿ ಸೇರುವ ರಿಸ್ಕ್ ತೆಗೆದುಕೊಂಡರಾ? ದ್ರಾವಿಡ ಪಕ್ಷಗಳ ಭದ್ರಕೋಟೆಯಾಗಿರುವ ಹಾಗೂ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರ ಎದುರಿಗೆ ನಿಲ್ಲುವ ಧೈರ್ಯ ಮಾಡಿದ್ದೇಗೆ?

  ಕೆ ಅಣ್ಣಾಮಲೈ ಅವರು ಐಐಟಿ ಕಾನ್​ಪುರ್​ನಲ್ಲಿ ಓದಿದವರು. 2011ರ ಬ್ಯಾಚ್​ನ ಕರ್ನಾಟಕ ಐಪಿಎಸ್ ಕೇಡರ್ ಆಫೀಸರ್ ಆಗಿದ್ದ ಅವರು ಚಿಕ್ಕಮಗಳೂರು, ಉಡುಪಿ ಜಿಲ್ಲೆಯಲ್ಲಿ ಎಸ್​ಪಿಯಾಗಿದ್ದಾಗ ಖಡಕ್ ಅಧಿಕಾರಿ ಎಂದೇ ಖ್ಯಾತರಾಗಿದ್ದರು. ಅಂತೆಯೇ ಅವರಿಗೆ ಸಿಂಗಮ್ ಬಿರುದು ಕೂಡ ಆಗಲೇ ಅವರಿಗೆ ಸಿಕ್ಕಿದ್ದು. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಅವರ 9 ವರ್ಷಗಳ ಸೇವೆಯಲ್ಲಿ ಬಹುದೊಡ್ಡ ಹೆಸರು ಗಳಿಸಿ ನಂತರ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿ ರಾಜಕಾರಣಕ್ಕಿಳಿದರು.

  ಇದನ್ನೂ ಓದಿ: Sadananda Gowda: ಕೇರಳದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಕಾನೂನು: ಸದಾನಂದಗೌಡ

  ಅವರು ಸ್ಪರ್ಧಿಸಿರುವ ಅರವಕುರಿಚ್ಚಿ ಬಹಳ ಸೂಕ್ಷ್ಮ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ. ಡಿಎಂಕೆಯ ಭದ್ರಕೋಟೆ ಅಷ್ಟೇ ಅಲ್ಲ ಇದು ಭಾರೀ ಚುನಾವಣಾ ಅಕ್ರಮಗಳಿಗೂ ಕುಖ್ಯಾತಿ ಪಡೆದಿದೆ. ಇಂಥ ಕ್ಷೇತ್ರದಲ್ಲಿ ಅಣ್ಣಾಮಲೈ ಸ್ಪರ್ಧಿಸಿರುವುದೇ ದೊಡ್ಡ ವಿಚಾರ. ಅಂಥದ್ದರಲ್ಲಿ ಅವರಿಗೆ ವಾಸ್ತವವಾಗಿ ಗೆಲ್ಲುವ ಅವಕಾಶ ಇದೆಯಾ? ಆದರೆ, ಇದೆಲ್ಲಾ ಗೊತ್ತಿದ್ದರೂ ಅಣ್ಣಾಮಲೈ ಅವರು ಅರವಕುರಿಚ್ಚಿ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ಧಾರೆ.

  “ಇದು ಬಹಳ ಕಠಿಣ ಕ್ಷೇತ್ರ ಎಂದು ನನಗೆ ಗೊತ್ತಿದೆ. ಈ ಮುಂಚೆ ಇಲ್ಲಿ ಹಣವೇ ಪ್ರಧಾನ ಪಾತ್ರ ವಹಿಸುತ್ತಿತ್ತು. ಆ ದೃಷ್ಟಿಕೋನ ಬದಲಿಸಲು ನಾನಿಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ಪ್ರದೇಶದಲ್ಲಿ ಪ್ರಾಮಾಣಿಕ ರಾಜಕಾರಣ ಏನೆಂದು ತೋರಿಸಹೊರಟಿದ್ದೇನೆ. ಅದಕ್ಕಾಗಿಯೇ ನಾನು ಅರವಕುರಿಚ್ಚಿ ಕ್ಷೇತ್ರವನ್ನೇ ಆರಿಸಿಕೊಂಡೆ” ಎಂದು ನ್ಯೂಸ್18ಗೆ ಅಣ್ಣಾಮಲೈ ತಿಳಿಸಿದ್ದಾರೆ.

  ಕೆ ಅಣ್ಣಾಮಲೈ ಅವರಿಗೆ ವೈಯಕ್ತಿಕ ಬೆಂಬಲಿಗರ ಜೊತೆಗೆ ಎಐಎಡಿಎಂಕೆ ಮುಂತಾದ ಬಿಜೆಪಿ ಮಿತ್ರಪಕ್ಷಗಳ ಮುಖಂಡರ ಬಲ ಇದೆ. ಅರವಕುರಿಚ್ಚಿ ಕ್ಷೇತ್ರದ ಪ್ರತಿಯೊಂದು ಮನೆಗೂ ತಮ್ಮ ಬೆಂಬಲಿಗರೊಂದಿಗೆ ತೆರಳುವ ಅಣ್ಣಾಮಲೈ ದಿನಕ್ಕೆ 25-30 ಸಭೆಗಳನ್ನಾದರೂ ನಡೆಸಿ ಯುವಜನರನ್ನ ಸೆಳೆಯುವ ಕೆಲಸ ಮಾಡತ್ತಿದ್ದಾರೆ. ‘ಸಿಂಗಮ್’ ಎನಿಸಿದರೂ ಇವರು ಹೀರೋ ರೀತಿ ಜನರ ಬಳಿ ಹೋಗುವುದಿಲ್ಲ. ಬಹಳ ಸರಳವಾಗಿ ನಡೆದುಕೊಳ್ಳುವ ಇವರ ಭಾಷಣ ಕೂಡ ಅಷ್ಟೇ ಚೊಕ್ಕ ಮತ್ತು ಸರಳವಾಗಿರುತ್ತದೆ. ತಾನು ಚುನಾಯಿತನಾದರೆ ಎನೇನು ಕೆಲಸ ಮಾಡುತ್ತೇನೆ ಎಂದು ಬಹಳ ಸ್ಪಷ್ಟವಾಗಿ ಅವರು ಮತದಾರರಿಗೆ ಮನದಟ್ಟು ಮಾಡುತ್ತಿದ್ದಾರೆ. ಅಂತೆಯೇ ಬಹಳ ಮಂದಿ ಇದೀಗ ಅಣ್ಣಾಮಲೈ ಅವರತ್ತ ಆಕರ್ಷಿತರಾಗುತ್ತಿದ್ಧಾರೆ.

  “ಇಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಆದರೆ ಅಣ್ಣಾಮಲೈ ನಮ್ಮ ಲೋಕಲ್ ಹೀರೋ. ಇಲ್ಲಿ ಬಿಜೆಪಿ ಟಿಕೆಟ್​ನಿಂದ ಸ್ಪರ್ಧಿಸಲು ಯಾರು ತಾನೇ ಐಪಿಎಸ್ ಹುದ್ದೆ ತೊರೆದು ಬರುತ್ತಾರೆ ಹೇಳಿ? ಅವರು ಬಹಳ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. ಎಐಎಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. ಅವರ ಸರಳ ವ್ಯಕ್ತಿತ್ವ, ವಯಸ್ಸು, ಐಪಿಎಸ್ ಹಿನ್ನೆಲೆ ಇವೆಲ್ಲವೂ ಯುವಜನರು ಮತ್ತು ಮಹಿಳೆಯರನ್ನು ಸೆಳೆಯುತ್ತಿವೆ” ಎಂದು 21 ವರ್ಷದ ಯುವಕ ಶಿವಾ ಅಭಿಮಾನ ತೋರ್ಪಡಿಸುತ್ತಾರೆ.

  ಇದನ್ನೂ ಓದಿ: Anil Deshmukh: ಮಹಾರಾಷ್ಟ್ರದ ಗೃಹ ಸಚಿವ‌ ಅನಿಲ್ ದೇಶಮುಖ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪರಮ್ ಬೀರ್ ಸಿಂಗ್

  ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ತಮಿಳುನಾಡಿನಲ್ಲಿ 20 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅದೃಷ್ಟ ಪರೀಕ್ಷೆ ನಡೆಸಿದೆ. ತಮಿಳುನಾಡಿನದಲ್ಲಿ ಅಧಿಕಾರದಲ್ಲಿರುವ ಎಐಎಡಿಎಂಕೆ ಪಕ್ಷ ಕೂಡ ಅರವಕುರಿಚ್ಚಿ ಕ್ಷೇತ್ರದಲ್ಲಿ ಅಣ್ಣಾಮಲೈ ಸಹಾಯಕ್ಕೆ ಎಲ್ಲಾ ರೀತಿಯ ನೆರವಿನ ಹಸ್ತ ಚಾಚಿದೆ. ಇದೂ ಕೂಡ ಅಣ್ಣಾಮಲೈಗೆ ಪ್ಲಸ್ ಪಾಯಿಂಟ್. ಹೀಗಾಗಿ, ಅವರು ಬಹಳ ಉತ್ಸಾಹದಿಂದ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ. ಆದರೆ, ಅಣ್ಣಾಮಲೈ ಬಿಜೆಪಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಪಲ್ಲಪಟ್ಟಿ ಎಂಬ ಗ್ರಾಮದಲ್ಲಿ ಮುಸ್ಲಿಮರ ಜಮಾತ್ ಸಂಘಟನೆಯೊಂದು ಅವರಿಗೆ ಪ್ರವೇಶ ನಿರ್ಬಂಧಿಸಿದೆ. ಈ ಬೆದರಿಕೆಗೆ ಬಗ್ಗದ ಅಣ್ಣಾಮಲೈ, ತಾನು ಎಲ್ಲಿ ಬೇಕಾದರೂ ಪ್ರಚಾರ ಮಾಡುತ್ತೇನೆ. ಯಾರ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ.

  “ಮುಸ್ಲಿಮ್ ಮಹಿಳೆಯರು ನನಗೆ ಮತ ಹಾಕುತ್ತಾರೆ. ಅವರು ನನ್ನ ಜೊತೆ ಇದ್ದಾರೆ. ಇದು ನನಗೆ ಗೊತ್ತು” ಎಂದು ವಿಶ್ವಾಸ ವ್ಯಕ್ತಪಡಿಸುವ ಅವರು, ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ತಾನು ರಾಜಕೀಯ ಮಾತ್ರ ತೊರೆಯುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

  “ಒಮ್ಮೆ ಮಾತ್ರ ಚುನಾವಣೆ ಸ್ಪರ್ಧಿಸಲು ನಾನು ಐಪಿಎಸ್ ತೊರೆಯಲಿಲ್ಲ. ರಾಜಕೀಯದಲ್ಲಿ ಮುಂದುವರಿಯುತ್ತೇನೆ. ತಮಿಳುನಾಡಿನ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಬಿಜೆಪಿ ಇಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ನಾನದನ್ನ ನಿರ್ಮಾಣ ಮಾಡಬಯಸುತ್ತೇನೆ” ಎಂದು 35 ವರ್ಷದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ತಿಳಿಸುತ್ತಾರೆ.

  ವರದಿ: ಡಿ.ಪಿ. ಸತೀಶ್, CNN-News18
  Published by:Vijayasarthy SN
  First published: