ಬೆಂಗಳೂರು/ ನವದೆಹಲಿ: ಏಳು ತಿಂಗಳುಗಳ ಬಳಿಕ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 43ನೇ ಸಭೆ ನಡೆಯಿತು. ದೇಶಾದ್ಯಂತ ಕೊರೋನಾ ವೈರಸ್ ಎರಡನೇ ಅಲೆಯ ಸಾಂಕ್ರಾಮಿಕದಿಂದ ತತ್ತರಿಸಿರುವ ಎಲ್ಲ ರಾಜ್ಯಗಳು ಅಗತ್ಯ ಸೇವೆಯಾದ ಕೋವಿಡ್- 19 ಔಷಧ ಸೇರಿದಂತೆ ವೈದ್ಯಕೀಯ ಪರಿಕರಗಳು ಹಾಗೂ ಆರೋಗ್ಯ ಸೇವೆಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿತಗೊಳಿಸುವಂತೆ ಮನವಿ ಮಾಡಿದವು.
ಜಿಎಸ್‌ಟಿ ಮಂಡಳಿ ಶುಕ್ರವಾರ ಕೋವಿಡ್ - 19 ಲಸಿಕೆಗಳು ಮತ್ತು ವೈದ್ಯಕೀಯ ಪರಿಕರಗಳ ಸರಬರಾಜುಗಳ ಮೇಲಿನ ತೆರಿಗೆಯನ್ನು ಬದಲಿಸಲಿಲ್ಲ. ಆದರೆ ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಬಳಸುವ ಔಷಧವನ್ನು ಆಮದು ಮಾಡಿಕೊಳ್ಳುವ ಸುಂಕದಿಂದ ವಿನಾಯಿತಿ ನೀಡಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಉಚಿತ ಕೋವಿಡ್- 19 ಸಂಬಂಧಿತ ಸರಬರಾಜುಗಳ ಮೇಲಿನ ಐಜಿಎಸ್ಟಿ ಮನ್ನಾವನ್ನು ಮುಂದುವರಿಸಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ಕರ್ನಾಟಕದಿಂದ ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಜಿಎಸ್‌ಟಿ ಪರಿಹಾರ ನಷ್ಟದ ಬಾಕಿ ಮೊತ್ತ 11 ಸಾವಿರ ಕೋಟಿ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಪರವಾಗಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿಕೊಂಡರು.
2021 - 22 ನೇ ಸಾಲಿನ ಜಿಎಸ್‌ಟಿ ಪರಿಹಾರದ ನಷ್ಟದ ಹಣವನ್ನು ಕೇಂದ್ರ ಸರ್ಕಾರವೇ ಸಾಲ ಪಡೆದು ರಾಜ್ಯಕ್ಕೆ ನೀಡಬೇಕು. 2020- 21 ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಾಗಿರುವ 11 ಸಾವಿರ ಕೋಟಿ ರೂಪಾಯಿ ಪರಿಹಾರ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು. ಜಿಎಸ್‌ಟಿ ಪರಿಹಾರ ಸೆಸ್ ನಲ್ಲಿ ಬಾಕಿ ಉಳಿದ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಜಿಎಸ್‌ಟಿ ನಷ್ಟ ಪರಿಹಾರ ಒದಗಿಸುವ ಸೌಲಭ್ಯ 2021- 2022ಕ್ಕೆ ಮುಕ್ತಾಯಗೊಳ್ಳಲಿದೆ. 2021- 2022 ರ ನಂತರ ಜಿಎಸ್‌ಟಿ ನಷ್ಟ ಪರಿಹಾರ ಸೌಲಭ್ಯವನ್ನು ಮುಂದುವರಿಸುವ ಕುರಿತು ಚರ್ಚೆ ನಡೆಯಬೇಕು ಎಂದು ಸಭೆಯಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಪ್ರಸ್ತಾವನೆ ಮುಂದೆ ಇಟ್ಟರು.
ಜಿಎಸ್‌ಟಿ ಅನುಷ್ಠಾನದಿಂದ ತಮ್ಮ ಆದಾಯದಲ್ಲಿನ ಕೊರತೆಯನ್ನು ನೀಗಿಸಲು ಕೇಂದ್ರವು 1.58 ಲಕ್ಷ ಕೋಟಿ ರೂ.ಗಳನ್ನು ಸಾಲ ಮಾಡಿ ರಾಜ್ಯಗಳಿಗೆ ಹಸ್ತಾಂತರಿಸಲಿದೆ ಎಂದು ಜಿಎಸ್‌ಟಿ ಸಮಿತಿ ನಿರ್ಧರಿಸಿತು. ಐದು ವರ್ಷಗಳ ಜಿಎಸ್‌ಟಿ ಕೊರತೆ ಪರಿಹಾರದ ಅವಧಿಯನ್ನು 2022 ಮೀರಿದ ರಾಜ್ಯಗಳಿಗೆ ವಿಸ್ತರಿಸಲು ಪರಿಗಣಿಸಲು ಕೌನ್ಸಿಲ್ನ ವಿಶೇಷ ಅಧಿವೇಶನ ಶೀಘ್ರದಲ್ಲೇ ನಡೆಯಲಿದೆ.
ಇದನ್ನು ಓದಿ: Modi-Banerjee: ಪ್ರಧಾನಿ ಮೋದಿಯೊಂದಿಗೆ ಯಾಸ್ ಚಂಡಮಾರುತ ಹಾನಿಯ ಬಗ್ಗೆ 15 ನಿಮಿಷ ಬ್ಯಾನರ್ಜಿ ಚರ್ಚೆ
ತೆರಿಗೆ ಸಂಪರ್ಕ ಸಲಹಾ ಸೇವೆಗಳ ಪಾಲುದಾರರಾದ ಐವೆಕ್ ಜಲನ್ ಅವರು ಮಾತನಾಡಿ, ಫಾರ್ಮ್ ಜಿಎಸ್ಟಿಆರ್ 9 ರಲ್ಲಿ 2020-21ರ ವಾರ್ಷಿಕ ಆದಾಯದ ಸ್ವರೂಪವನ್ನು ವ್ಯಾಪಾರ ಮತ್ತು ಕೈಗಾರಿಕೆಗಳು ಹೆಚ್ಚು ಕಾಯುತ್ತಿದ್ದವು. ಈ ವರ್ಷದಿಂದ ಜಿಎಸ್ಟಿಆರ್ 9 ಸಿ ಫಾರ್ಮ್ನಲ್ಲಿ ಜಿಎಸ್‌ಟಿ ಆಡಿಟ್ ಮತ್ತು ಸಾಮರಸ್ಯ ಹೇಳಿಕೆ ಹಿಂತೆಗೆದುಕೊಳ್ಳಲಾಗಿದೆ ಮತ್ತು ಕೆಲವು ಸಾಮರಸ್ಯ ಕೋಷ್ಟಕಗಳನ್ನು ಸೇರಿಸಲು ಫಾರ್ಮ್ ಜಿಎಸ್ಟಿಆರ್ 9 ಹೆಚ್ಚು ವಿಸ್ತಾರವಾಗಿದೆ. ಇದಲ್ಲದೆ ಇದನ್ನು ಸಿಎಫ್‌ಒ / ಟ್ಯಾಕ್ಸ್ ಹೆಡ್ / ಮ್ಯಾನೇಜ್‌ಮೆಂಟ್ ಸಿಬ್ಬಂದಿ ಸ್ವಯಂ ಪ್ರಮಾಣೀಕರಿಸಬೇಕಾಗಿದೆ. ಜಿಎಸ್ಟಿಆರ್ 9 ಅನ್ನು ಸಲ್ಲಿಸುವ ದಿನಾಂಕವನ್ನು ಡಿಸೆಂಬರ್ 31, 2021 ವರೆಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ