ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರ ಮತ್ತು BJP High Command ಸಮ್ಮತಿ ಇದೆಯಾ: ಕಾಂಗ್ರೆಸ್​​ ಸಂಸದರ ಪ್ರಶ್ನೆ

ತಮ್ಮ ಪಕ್ಷದ ಸರ್ಕಾರ ಮತ್ತು ಸಚಿವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದನ್ನು ಅವರೇ ಹೇಳುತ್ತಿದ್ದಾರೆ. ಬಿಜೆಪಿಯವರೇ ಈ ರೀತಿ ಹೇಳುತ್ತಿದ್ದಾರೆ ಎಂದರೆ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರ ನಡೆಸಲು ನ್ಯಾಷನಲ್ ಪರ್ಮಿಟ್ ಸಿಕ್ಕಿದೆಯಾ ಎಂದು ಪ್ರಶ್ನಿಸಿದ್ದಾರೆ.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ನವದೆಹಲಿ, ಮಾ. 28: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಇಲಾಖೆಯ ಕಾಮಗಾರಿಗಳಲ್ಲಿ ಶೇಕಡಾ 40ರಷ್ಟು ಕಮಿಷನ್ ಪಡೆದಿದ್ದಾರೆ ಎಂಬ ವಿಷಯ ಇವತ್ತು ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತಿನಲ್ಲಿ ಭಾರೀ ಸದ್ದು ಮಾಡಿದೆ. ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡ ಕಾಂಗ್ರೆಸ್ ಸಂಸದರು (Congress MPs) ಭ್ರಷ್ಟಾಚಾರ ಎಸಗಿರುವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಈಶ್ವರಪ್ಪ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ (Corruption) ಬಗ್ಗೆ ಕೇಂದ್ರ ಸರ್ಕಾರ (Union Government) ಮತ್ತು ಬಿಜೆಪಿ ಹೈಕಮಾಂಡ್ (BJP High Command) ನಾಯಕರಿಗೆ ಸಮ್ಮತಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸಂಸದರಿಂದ ಸುದ್ದಿಗೋಷ್ಠಿ
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಸಂಸದರಾದ ನಾಸಿರ್ ಹುಸೇನ್, ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಮತ್ತು ಡಿ.ಕೆ. ಸುರೇಶ್ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಶೇಕಡಾ 40ರಷ್ಟು ಕಮಿಷನ್ ಪಡೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಸಭಾ ಸದಸ್ಯ ಜಿ.ಸಿ.‌ ಚಂದ್ರಶೇಖರ್ ಅವರು ಮಾತನಾಡಿ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಭ್ರಷ್ಟಾಚಾರದ ಬಿಸಿ ತಟ್ಟಿದೆ. ತಮ್ಮ ಪಕ್ಷದ ಸರ್ಕಾರ ಮತ್ತು ಸಚಿವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದನ್ನು ಅವರೇ ಹೇಳುತ್ತಿದ್ದಾರೆ. ಬಿಜೆಪಿಯವರೇ ಈ ರೀತಿ ಹೇಳುತ್ತಿದ್ದಾರೆ ಎಂದರೆ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರ ನಡೆಸಲು ನ್ಯಾಷನಲ್ ಪರ್ಮಿಟ್ ಸಿಕ್ಕಿದೆಯಾ ಎಂದು ಪ್ರಶ್ನಿಸಿದರು.

ಇದನ್ನು ಓದಿ: ಕನ್ನಡಿಗ ಅಬ್ದುಲ್ ಖಾದರ್, ನೀರಜ್​ ಚೋಪ್ರಾ ಸೇರಿದಂತೆ ಹಲವರಿಗೆ ಪದ್ಮ ಪ್ರಶಸ್ತಿ ಪ್ರದಾನ

ಬಿಜೆಪಿ ಭ್ರಷ್ಟಾಚಾರಕ್ಕೆ ಮೌನ
ದೇಶದ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ED), ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ಮತ್ತು ಆದಾಯ ತೆರಿಗೆ (IT) ಇಲಾಖೆಯ ನಿಯಮಗಳು ಬಿಜೆಪಿ ನಾಯಕರಿಗೆ ಸಂಬಂಧಿಸುವುದಿಲ್ಲ. ಬಿಜೆಪಿ ನಾಯಕರು ಎಂಥದೇ ಭ್ರಷ್ಟಾಚಾರ ನಡೆಸಿದರೂ ಈ‌ ಸಂಸ್ಥೆಗಳು ದೂರು ದಾಖಲಿಸಿಕೊಳ್ಳುವುದಿಲ್ಲ.‌ ಬಿಜೆಪಿ ಒಂಥರಾ ವಾಷಿಂಗ್ ಮಿಷನ್ ಇದ್ದಂತೆ. ಇತರೆ ಪಕ್ಷದ ಭ್ರಷ್ಟರು ಬಿಜೆಪಿ ಸೇರಿದರೆ ವಾಷಿಂಗ್ ಮಷಿನಲ್ಲಿ ಹಾಕಿ ತೆಗೆದಂತೆ ಶುಭ್ರವಾಗಿ ಬಿಡುತ್ತಾರೆ. ಬಿಜೆಪಿಯಲ್ಲಿ ಎಲ್ಲದಕ್ಕೂ ಅನುಮತಿ ಸಿಗಲಿದೆ ಎಂದು ವ್ಯಂಗ್ಯ ಮಾಡಿದರು.

ಇದನ್ನು ಓದಿ: West Bengal ವಿಧಾನಸಭೆಯಲ್ಲಿ ಕೋಲಾಹಲ; ಐವರ ಅಮಾನತು

ಸುಳ್ಳು ಜಾತಿ ಪತ್ರ ಪಡೆದ ಬಿಜೆಪಿ ಶಾಸಕನ ಮಗಳು
ಕರ್ನಾಟಕದಲ್ಲಿ ಶಾಸಕ ರೇಣುಕಾಚಾರ್ಯ ತಮ್ಮ ಮಗಳಿಗೆ ಎಸ್ಸಿ-ಎಸ್ಟಿ ಪ್ರಮಾಣ ಪತ್ರ ಮಾಡಿಸಿದ್ದಾರೆ. ಆ ಪ್ರಮಾಣ ಪತ್ರದ ಮೇಲೆ 80 ಲಕ್ಷ ಸಾಲ ಪಡೆದಿದ್ದಾರೆ. ಸಾಮಾನ್ಯ ಜನರು ಇಂತಹ ಕೃತ್ಯವನ್ನು ಮಾಡಿದರೆ ಜೈಲು ಸೇರುತ್ತಿದ್ದರು. ಆದರೆ ಬಿಜೆಪಿ ನಾಯಕರಿಗೆ ಕಾನೂನು ಅನ್ವಯಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ಮಾತನಾಡಿ ಕರ್ನಾಟಕದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಜೆಪಿ‌ ಕಾರ್ಯಕರ್ತರೇ ತಮ್ಮ ಸರ್ಕಾರ ಶೇಕಡಾ 40ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ. ತಮ್ಮ ಇಲಾಖೆಯ ಕಾಮಗಾರಿಗೆ ಲಂಚ ಪಡೆದಿರುವ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ನಾವು ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಬೂತ್ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ.‌ ರಾಜ್ಯದ ಭ್ರಷ್ಟಾಚಾರ ನೋಡಿಕೊಂಡು ಪ್ರಧಾನಿ ಮೋದಿ ಸುಮ್ಮನೆ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Published by:Seema R
First published: