ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ದೇಶ ಕೊರೊನಾ ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಖಂಡನೀಯವಾಗಿದೆ. ಮುಸ್ಲಿಂ ವ್ಯಕ್ತಿಯೊಬ್ಬರನ್ನು ಜೈಶ್ರೀರಾಮ್ ಮಂತ್ರ ಜಪಿಸುವಂತೆ ಒತ್ತಾಯಿಸಿ ಸಾರ್ವಜನಿಕವಾಗಿ ಥಳಿಸಿರುವ ಘಟನೆ ವರದಿಯಾಗಿದೆ. ಆತನ ಅಪ್ರಾಪ್ತ ಮಗಳು ತಂದೆಯನ್ನು ಬಿಗಿದಪ್ಪಿಕೊಂಡು ತಂದೆಗೆ ಹೊಡೆಯಬೇಡಿ ಎಂದು ಅಂಗಲಾಚುವುದು ಎಂತಹವರ ಮನವನ್ನೂ ಕಲಕುವಂತಿತ್ತು.
ವ್ಯಕ್ತಿಯನ್ನು ಥಳಿಸುತ್ತಿರುವ ಹಾಗೂ ಪುತ್ರಿ ಅಂಗಲಾಚುತ್ತಿರುವ ದೃಶ್ಯಾವಳಿಗಳ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ವೀಡಿಯೊ ನೋಡಿದ ಪ್ರತಿಯೊಬ್ಬರೂ ದೇಶದ ನ್ಯಾಯ ವ್ಯವಸ್ಥೆಯ ಕುರಿತು ಪ್ರಶ್ನಿಸಿದ್ದಾರೆ ಹಾಗೂ ಇದೊಂದು ಖಂಡನೀಯ ಘಟನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಪೊಲೀಸರು 12 ಜನರ ವಿರುದ್ಧ ಕೇಸು ದಾಖಲಿಸಿದ್ದು ಅಫ್ಸರ್ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಮುಂದಿನ ಕ್ರಮವನ್ನು ಪೊಲೀಸರು ತೆಗೆದುಕೊಂಡಿದ್ದಾರೆ.
ಅಫ್ಸರ್ನ ಸಂಬಂಧಿಕರಲ್ಲೊಬ್ಬನ ಮೇಲೆ ನೆರೆಮನೆಯ ಹುಡುಗಿಯೊಬ್ಬಳಿಗೆ ಕಿರುಕುಳ ನೀಡಿದ್ದಕ್ಕಾಗಿ ಬಾರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಅನ್ನು ದಾಖಲಿಸಲಾಗಿತ್ತು. ಹುಡುಗಿಯ ಪೋಷಕರು ಅಪ್ಸರ್ನ ಸಂಬಂಧಿಯ ಮೇಲೆ ಮತಾಂತರದ ಆರೋಪವನ್ನು ಮಾಡಿದ್ದು ‘ಬಲವಂತವಾಗಿ ಮತಾಂತರ’ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ಕುರಿತು ಪೋಷಕರು ಸ್ಥಳೀಯ ರಾಜಕೀಯ ಮುಖಂಡನನ್ನು ಭೇಟಿಯಾಗಿದ್ದು ಪೊಲೀಸರಿಗೆ ಇದೇ ರೀತಿಯಾಗಿ ಕೇಸು ದಾಖಲಿಸುವಂತೆ ಒತ್ತಡ ಹೇರಿದ್ದರು ಎಂಬುದಾಗಿ ತಿಳಿದು ಬಂದಿದೆ.
ಈ ಕುರಿತು ತನಿಖೆಯನ್ನು ನಾವು ಕೈಗೆತ್ತಿಕೊಂಡಿದ್ದು ನಿಖರವಾದ ಸಾಕ್ಷಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದ ಕುರಿತಾಗಿ ಸ್ಥಳೀಯ ಗುಂಪೊಂದು ಬಾರಾ ಪ್ರದೇಶದ ರಾಮ್ ಗೋಪಾಲ್ ಚೌರಾದಲ್ಲಿ ಸೇರಿದ್ದರು. ಆಪಾದಿತನ ಮೇಲೆ ಮತಾಂತರದ ಪ್ರಕರಣವನ್ನು ದಾಖಲಿಸಲು ಬೇಡಿಕೆ ಇರಿಸುವುದಾಗಿ ತೀರ್ಮಾನಿಸಿದ್ದರು ಎನ್ನಲಾಗಿದೆ. ಇದೇ ಸಮಯದಲ್ಲಿ ಅಫ್ಸರ್ ತನ್ನ ಅಪ್ರಾಪ್ತ ಮಗಳೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಪಾದಿತನ ಸಂಬಂಧಿ ಎಂಬುದಾಗಿ ತಿಳಿದು ಗುಂಪು ಅವರನ್ನು ಸುತ್ತುವರೆದಿದೆ. ಆತನನ್ನು ಎಳೆದು ಹೊಡೆಯಲು ಆರಂಭಿಸಿದ್ದು ಸಣ್ಣ ಮಗಳು ತಂದೆಯನ್ನು ಬಿಗಿದಪ್ಪಿ ಅಳುತ್ತಿದ್ದರು ಗುಂಪು ಹಲ್ಲೆ ಮಾಡುವುದನ್ನು ನಿಲ್ಲಿಸಿಲ್ಲ ಎಂಬುದು ವಿಡಿಯೋದಿಂದ ಸ್ಪಷ್ಟವಾಗಿ ತಿಳಿದು ಬಂದಿದೆ. ಈ ಘಟನೆಯನ್ನು ಕೆಲವು ದಾರಿಹೋಕರು ವೀಡಿಯೊ ಮಾಡಿದ್ದು ಅದನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಇನ್ನು ಹಲ್ಲೆ ಮಾಡಿದವರು ಸ್ಥಳೀಯ ವಿವಾಹ ಕಾರ್ಯಕ್ರಮದ ಬ್ಯಾಂಡ್ ತಂಡದವನ ಪುತ್ರನಾಗಿದ್ದು ಆತನ ಜೊತೆ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ರವೀನಾ ತ್ಯಾಗಿ ತಿಳಿಸಿದ್ದಾರೆ.
ಅಫ್ಸರ್ನ ಸಂಬಂಧಿ ಹಾಗೂ ಆತನ ನೆರೆಹೊರೆಯವರೊಂದಿಗೆ ಆಸ್ತಿ ವಿಷಯವಾಗಿ ವಾಗ್ವಾದ ನಡೆದಿದ್ದು ಈ ಕುರಿತು ಕೂಡ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೀಡಿಯೊವನ್ನು ನೋಡಿರುವುದಾಗಿ ಪೊಲೀಸರು ತಿಳಿಸಿದ್ದು ಅಫ್ಸರ್ನ ದೂರಿನ ಅನ್ವಯ ನಾವು ಎಫ್ಐಆರ್ ದಾಖಲಿಸಿದ್ದು ಘರ್ಷಣೆ ನಡೆಸಿದವರ ವಿರುದ್ಧ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ