ನಿರ್ಭಯಾ ಪ್ರಕರಣ: ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆಹೋದ ಅಪರಾಧಿ

ವಿನಯ್​ನ ಕ್ಷಮಾದಾನ ಅರ್ಜಿಯನ್ನು ಕೇಂದ್ರ ಸಚಿವ ಮನೀಷ್ ಸಿಸೋಡಿಯ ತಿರಸ್ಕರಿಸಿದಾಗ ದೆಹಲಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿತ್ತು. ಈ ವೇಳೆ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದು ಸರಿಯೇ? ಎಂದು ವಿನಯ್ ಪರ ವಕೀಲ ಎ.ಪಿ. ಸಿಂಗ್ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.

ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮ

ನಿರ್ಭಯಾ ಅತ್ಯಾಚಾರಿ ವಿನಯ್ ಶರ್ಮ

  • Share this:
ನವದೆಹಲಿ (ಫೆ. 21) ದೇಶವನ್ನು ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲಿಗೇರಲು ಕೇವಲ 10 ದಿನಗಳು ಬಾಕಿ ಇವೆ. ಈ ನಡುವೆ ಗಲ್ಲು ಶಿಕ್ಷೆಯಿಂದ ಪಾರಾಗಲು ದೋಷಿಗಳು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಿರ್ಭಯಾ ಅತ್ಯಾಚಾರಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮ ಇದೀಗ ತಮ್ಮ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿರುವುದನ್ನು ಪ್ರಶ್ನಿಸಿ ಚುನಾವಣಾ ಆಯೋಗದ ಮೆಟ್ಟಿಲೇರಿದ್ದಾರೆ.

ಮಾ. 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಲಿರುವ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮ ಸೋಮವಾರ ಜೈಲಿನ ಗೋಡೆಗೆ ತಲೆಯನ್ನು ಚಚ್ಚಿಕೊಂಡು ಗಾಯಗೊಂಡಿದ್ದ. ಅದೇ ವಿಷಯವನ್ನು ಮುಂದಿಟ್ಟುಕೊಂಡು ಆತನನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ವಕೀಲರು ತಂತ್ರ ರೂಪಿಸಿದ್ದರು.

ತಿಹಾರ್ ಜೈಲಿನಲ್ಲಿರುವ ಅಪರಾಧಿ ವಿನಯ್ ಶರ್ಮ ಸೋಮವಾರ ಬೆಳಗ್ಗೆ ತನ್ನ ಸೆಲ್​ನಲ್ಲಿ ಗೋಡೆಗೆ ತಲೆ ಚಚ್ಚಿಕೊಂಡಿದ್ದ. ಆತನ ತಲೆಗೆ ಸಣ್ಣ ಗಾಯವಾಗಿತ್ತು. ಆತನ ತಾಯಿ ಆತನನ್ನು ನೋಡಲು ಬಂದಾಗಲೇ ವಿನಯ್ ಆಕೆಯನ್ನು ಗುರುತು ಹಿಡಿದಿರಲಿಲ್ಲ. ಹೀಗಾಗಿ, ವಿನಯ್ ಶರ್ಮ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈತನನ್ನು ಗಲ್ಲಿಗೆ ಏರಿಸಬಾರದು ಎಂದು ಒಂದಷ್ಟು ವಕೀಲರು ನ್ಯಾಯಾಂಗ ವ್ಯವಸ್ಥೆಯ ಎದುರು ಮನವಿ ಮಾಡಿದ್ದರು.

ಇದನ್ನೂ ಓದಿ: ನಿರ್ಭಯಾ ಅತ್ಯಾಚಾರ ಪ್ರಕರಣ; ಗಲ್ಲು ಶಿಕ್ಷೆಯಿಂದ ಪಾರಾಗಲು ಮತ್ತೆ ಕೋರ್ಟ್​ ಮೆಟ್ಟಿಲೇರಿದ ಅಪರಾಧಿ

ಅಪರಾಧಿ ವಿನಯ್ ಶರ್ಮ ಗೋಡೆಗೆ ತಲೆ ಚಚ್ಚಿಕೊಂಡು ಆಸ್ಪತ್ರೆ ಸೇರಿದ ಬೆನ್ನಲ್ಲೇ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ವಿನಯ್​ನ ಕ್ಷಮಾದಾನ ಅರ್ಜಿಯನ್ನು ಕೇಂದ್ರ ಸಚಿವ ಮನೀಷ್ ಸಿಸೋಡಿಯ ತಿರಸ್ಕರಿಸಿದಾಗ ದೆಹಲಿಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿತ್ತು. ಈ ವೇಳೆ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದು ಸರಿಯೇ? ಎಂದು ವಿನಯ್ ಪರ ವಕೀಲ ಎ.ಪಿ. ಸಿಂಗ್ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.

ಕ್ಷಮಾದಾನ ಅರ್ಜಿಯ ಮೇಲೆ ಸಚಿವ ಮನೀಷ್ ಸಿಸೋಡಿಯ ಅವರ ಡಿಜಿಟಲ್ ಸಹಿ ಹಾಕಬೇಕಾಗಿತ್ತು. ಆದರೆ, ವಾಟ್ಸಾಪ್​ ಸ್ಕ್ರೀನ್​ಶಾಟ್ ಮೂಲಕ ಕ್ಷಮಾದಾನ ಅರ್ಜಿಯ ತಿರಸ್ಕೃತ ಪ್ರತಿಯನ್ನು ಕಳುಹಿಸಲಾಗಿದೆ. ನಂತರ ಆ ಕ್ಷಮಾದಾನ ಅರ್ಜಿಯನ್ನು ಲೆಫ್ಟಿನೆಂಟ್ ಗವರ್ನರ್, ರಾಷ್ಟ್ರಪತಿಗೆ ಕಳುಹಿಸಲಾಗಿತ್ತು ಎಂದು ಕೂಡ ಎ.ಪಿ. ಸಿಂಗ್ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಎಂಎಲ್​ಎಗಳಿಗೆ ಬೇಕಂತೆ ಏಕಾಂತ; ಶಾಸಕರ ಭವನಕ್ಕೂ ಮಾಧ್ಯಮ ನಿರ್ಬಂಧ, ಸ್ಪೀಕರ್ ಕಾಗೇರಿ ಆದೇಶ

ಗುರುವಾರ ದೋಷಿ ವಿನಯ್ ಶರ್ಮನ ಪರ ವಕೀಲ ಎ.ಪಿ. ಸಿಂಗ್ ದೆಹಲಿಯ ಪಟಿಯಾಲಹೌಸ್ ಕೋರ್ಟ್​ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ವಿನಯ್ ಶರ್ಮನ ಮಾನಸಿಕ ಆರೋಗ್ಯ ಸರಿಯಿಲ್ಲ. ಆರೋಗ್ಯ ಸರಿಯಿಲ್ಲದ ಆತನನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ. ವಿನಯ್ ಜೈಲಿನ ಗೋಡೆಗೆ ಹಣೆ ಚಚ್ಚಿಕೊಂಡು ಗಾಯಗೊಂಡಿದ್ದ. ಹೀಗಾಗಿ, ತಿಹಾರ್ ಜೈಲಿನಿಂದ ವಿನಯ್ ಆರೋಗ್ಯದ ಬಗ್ಗೆ ವರದಿ ತರಿಸಬೇಕು ಎಂದು ವಿನಯ್ ಪರ ವಕೀಲರು ಕೋರ್ಟ್​ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ವಿನಯ್ ಶರ್ಮನ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ. ಆತ ಅನ್ನ, ನೀರು ಬಿಟ್ಟು ಉಪವಾಸ ಕುಳಿತಿದ್ದಾನೆ. ಇತ್ತೀಚೆಗೆ ವಿಚಿತ್ರವಾಗಿ ವರ್ತಿಸತೊಡಗಿದ್ದಾನೆ ಎಂದು ವಿನಯ್ ಪರ ವಕೀಲರು ಕಳೆದ ವಾರ ನ್ಯಾಯಾಲಯದ ಮುಂದೆ ಹೇಳಿದ್ದರು. ಗಲ್ಲುಶಿಕ್ಷೆಯಿಂದ ಬಚಾವಾಗಲು ನಾನಾ ರೀತಿಯ ಪ್ರಯತ್ನ ಪಟ್ಟಿದ್ದ ನಾಲ್ವರು ಅಪರಾಧಿಗಳಿಗೆ ಇದುವರೆಗೂ 4 ಬಾರಿ ಡೆತ್ ವಾರೆಂಟ್ ಹೊರಡಿಸಲಾಗಿದೆ. ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದ ವಿನಯ್ ಶರ್ಮನ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪಟಿಯಾಲ ನ್ಯಾಯಾಲಯ ಹೊಸ ಡೆತ್​ ವಾರೆಂಟ್ ಹೊರಡಿಸಿತ್ತು.

ಇದನ್ನೂ ಓದಿ: ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಯ ಹೈಡ್ರಾಮ; ಗೋಡೆಗೆ ತಲೆ ಚಚ್ಚಿಕೊಂಡ ಅಪರಾಧಿ

2012ರಲ್ಲಿ ದೆಹಲಿಯಲ್ಲಿ ಆರು ಜನರು ಸೇರಿ ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಕೆಲ ದಿನಗಳ ಬಳಿಕ ಆಕೆ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಇವರು ತಪ್ಪೆಸಗಿದ್ದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಒಬ್ಬಾತ ಅಪ್ರಾಪ್ತನಾಗಿದ್ದರಿಂದ ಬಾಲಾಪರಾಧ ನ್ಯಾಯಾಲಯದಲ್ಲಿ ಆತನ ವಿಚಾರಣೆ ನಡೆದು 3 ವರ್ಷ ಆತನನ್ನು ಪರಿವರ್ತನಾ ಗೃಹದಲ್ಲಿರಿಸಿ ಬಿಡುಗಡೆಗೊಳಿಸಲಾಗಿದೆ. ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದ. ಉಳಿದ ದೋಷಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇವರು ಸಲ್ಲಿಸಿದ್ದ ಮೇಲ್ಮನವಿಗಳೆಲ್ಲವೂ ತಿರಸ್ಕೃತಗೊಂಡಿವೆ.
First published: