ಹಿಂದಿ ಬಾರದ ವೈದ್ಯರು ಸಭೆಯಿಂದ ಹೊರಹೋಗಿ ಎಂದ ಆಯುಷ್ ಅಧಿಕಾರಿ; ತಮಿಳು ನಾಯಕರು ಆಕ್ರೋಶ
ಆಯುಷ್ ಇಲಾಖೆ ಆನ್ಲೈನ್ನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಹಿಂದಿ ಅರ್ಥವಾಗದ ಸಭಿಕರಿಗೆ ಹೊರಹೋಗುವಂತೆ ಸೂಚಿಸಿರುವ ಅಧಿಕಾರಿಯ ಅಮಾನತಿಗೆ ತಮಿಳುನಾಡು ಮುಖಂಡರು ಆಗ್ರಹಿಸಿದ್ಧಾರೆ.
ನವದೆಹಲಿ(ಆ. 22): ಆನ್ಲೈನ್ನಲ್ಲಿ ನಡೆಯುತ್ತಿದ್ದ ತರಬೇತಿ ಕಾರ್ಯಾಗಾರವೊಂದರಲ್ಲಿ ಹಿಂದಿ ಅರ್ಥವಾಗದ ವೈದ್ಯರನ್ನು ಆ ಸಭೆಯಿಂದ ಹೊರ ಹೋಗುವಂತೆ ಆಯುಷ್ ಇಲಾಖೆ ಕಾರ್ಯದರ್ಶಿ ಸೂಚಿಸಿದ ಘಟನೆ ನಡೆದಿದೆ. ಕೇಂದ್ರ ಆಯುಷ್ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೇಚಾ ಅವರ ಈ ವರ್ತನೆ ಹಿಂದಿಯೇತರ ಭಾಷಿಕರನ್ನ ರೊಚ್ಚಿಗೆಬ್ಬಿಸಿದ್ದು, ಮತ್ತೊಮ್ಮೆ ಹಿಂದಿ ಹೇರಿಕೆ ವಿರುದ್ಧ ಸದ್ದು ನಡೆದಿದೆ. ರಾಜೇಶ್ ಕೊಟೇಚಾ ಅವರನ್ನು ಅಮಾನತುಗೊಳಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೊಳಿ ಆಗ್ರಹಿಸಿದ್ದಾರೆ.
ಆಯುಷ್ ಸಚಿವಾಲಯದಿಂದ ಆನ್ಲೈನ್ನಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಈ ಪ್ರಹಸನ ನಡೆದಿದೆ. ಈ ಕಾರ್ಯಾಗಾರದಲ್ಲಿ ತರಬೇತಿ ನೀಡುತ್ತಿದ್ದವರಲ್ಲಿ ಬಹುತೇಕರು ಹಿಂದಿಯಲ್ಲೇ ಮಾತನಾಡುತ್ತಿದ್ದರು. ಹಿಂದಿಯೇತರ ಪ್ರದೇಶಗಳಿಂದ ಬಂದವರಿಗೆ, ಅದರಲ್ಲೂ ತಮಿಳುನಾಡಿನ 37 ಪ್ರತಿನಿಧಿಗಳಿಗೆ ಹಿಂದಿ ಅರ್ಥವಾಗುತ್ತಿರಲಿಲ್ಲ. ಆಯುಷ್ ಇಲಾಖೆ ಕಾರ್ಯದರ್ಶಿ ರಾಜೇಶ್ ಕೊಟೇಚಾ ತಮ್ಮ ಸರದಿ ಬಂದಾಗ, ತನಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ. ಹಿಂದಿಯಲ್ಲಿ ಮಾತನಾಡುತ್ತೇನೆ. ಇಂಗ್ಲೀಷ್ ಬೇಕೆನ್ನುವವರು ಹೊರಹೋಗಬಹುದು ಎಂದು ಹೇಳಿದ್ದರೆನ್ನಲಾಗಿದೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರುವ ಡಿಎಂಕೆ ಸಂಸದೆ ಕನಿಮೊಳಿ, “ತರಬೇತಿ ಕಾರ್ಯಾಗಾರದಲ್ಲಿ ಹಿಂದಿಯೇತರ ಭಾಷಿಕರು ಹೊರಹೋಗಬಹುದು ಎಂದು ಆಯುಷ್ ಸಚಿವಾಲಯ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ಅವರು ಹೇಳಿರುವುದು ಹಿಂದಿ ಹೇರಿಕೆಯಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಖಂಡನಾರ್ಹ” ಎಂದು ಟ್ವೀಟ್ ಮಾಡಿದ್ಧಾರೆ. ಹಾಗೆಯೇ, ಈ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದೂ ಆಗ್ರಹಿಸಿದ್ದಾರೆ.
“ಸರ್ಕಾರ ಈ ಕಾರ್ಯದರ್ಶಿಯನ್ನು ಅಮಾನತುಗೊಳಿಸಬೇಕು. ಶಿಸ್ತಿನ ಕ್ರಮ ಜರುಗಿಸಬೇಕು. ಹಿಂದಿಯೇತರ ಭಾಷಿಕರನ್ನು ಹೊರಗಿಡುವ ಈ ಪ್ರವೃತ್ತಿಯನ್ನು ಎಷ್ಟು ಎಂದು ಸಹಿಸಿಕೊಳ್ಳಬೇಕು?” ಎಂದು ಕನಿಮೊಳಿ ಪ್ರಶ್ನಿಸಿದ್ದಾರೆ.
ಡಿಎಂಕೆ ಸಂಸದೆಯ ಆಕ್ರೋಶಕ್ಕೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಮ್ ಧ್ವನಿಗೂಡಿಸಿದ್ದಾರೆ. “ಇಂಗ್ಲೀಷ್ ಬಾರದು ಎಂದರೆ ಅರ್ಥ ಮಾಡಿಕೊಳ್ಳಬಹುದು. ಆದರೆ, ಹಿಂದಿ ಬಾರದವರನ್ನು ಹೊರಗೆ ಕಳುಹಿಸುವ ಮತ್ತು ಹಿಂದಿಯಲ್ಲಿ ಮಾತನಾಡಬೇಕೆಂದು ಬಲವಂತಪಡಿಸುವ ಈ ದಾರ್ಷ್ಟ್ಯತನವನ್ನು ಒಪ್ಪಿಕೊಳ್ಳಲು ಅಸಾಧ್ಯ” ಎಂದು ಕಾರ್ತಿ ಹೇಳಿದ್ದಾರೆ.
ಈ ಹಿಂದೆ ಏರ್ಪೋರ್ಟ್ನಲ್ಲಿ ಸಿಐಎಸ್ಎಫ್ ಅಧಿಕಾರಿಯೊಬ್ಬರು ತನಗೆ ಹಿಂದಿ ಬಾರದು ಎಂದಾಗ ಭಾರತೀಯಳಾ ಎಂದು ಪ್ರಶ್ನಿಸುವ ಉದ್ದಟತನ ತೋರಿದರು ಎಂದು ಡಿಎಂಕೆ ಸಂಸದೆ ಕನಿಮೊಳಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ತೀವ್ರವಾಗಿ ವಿರೋಧಿಸುತ್ತಿರುವವರಲ್ಲಿ ತಮಿಳುನಾಡಿನವರು ಪ್ರಮುಖವಾಗಿದ್ದಾರೆ. ತಮಿಳುನಾಡಿನಲ್ಲಿ ಹಲವು ದಶಕಗಳಿಂದಲೂ ಹಿಂದಿ ಹೇರಿಕೆ ವಿರುದ್ಧ ಹೋರಾಟಗಳು ನಡೆಯುತ್ತಾ ಬಂದಿವೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ