ನನ್ನದು ಶ್ರೀರಾಮನ ಮಾವನ ಊರು, ನಮ್ಮ ಕಡೆ ಬೀಗರನ್ನು ಬೈಗುಳದಿಂದ ಸ್ವಾಗತಿಸುತ್ತೇವೆ; ಯುವತಿಯ ಪ್ರಶ್ನೆಗೆ ಕನ್ಹಯ್ಯಾ ಉತ್ತರ

ಲಾಹೋರ್ ಜಿಲ್ಲೆಯಲ್ಲಿ ಒಂದು ರಾಮಾಯಣ ಪ್ರಚಲಿತದಲ್ಲಿದೆ. ಅದು ಲಾಹೋಲಿ ಭಾಷೆಯಲ್ಲಿದೆ. ಆ ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುವುದಿಲ್ಲ, ಬದಲಿಗೆ, ಸೀತೆ ರಾವಣನ ಮಗಳು! ಮತ್ತು ರಾಮ ಸೀತೆಯನ್ನು ಪ್ರೇಮಿಸಿ ಮದುವೆಯಾಗುತ್ತಾನೆ. ಈ ಕಾರಣದಿಂದ ರಾಮ ರಾವಣರ ನಡುವೆ ಯುದ್ಧ ನಡೆಯುತ್ತದೆ.

HR Ramesh | news18
Updated:August 11, 2019, 6:09 PM IST
ನನ್ನದು ಶ್ರೀರಾಮನ ಮಾವನ ಊರು, ನಮ್ಮ ಕಡೆ ಬೀಗರನ್ನು ಬೈಗುಳದಿಂದ ಸ್ವಾಗತಿಸುತ್ತೇವೆ; ಯುವತಿಯ ಪ್ರಶ್ನೆಗೆ ಕನ್ಹಯ್ಯಾ ಉತ್ತರ
ಕನ್ದಯ್ಯಾ ಕುಮಾರ್
HR Ramesh | news18
Updated: August 11, 2019, 6:09 PM IST
ಮಂಗಳೂರು: ಆರೋಗ್ಯಕರ ಚರ್ಚೆಗೆ ಪ್ರಜಾಪ್ರಭುತ್ವದಲ್ಲಿ ಮುಕ್ತ ಅವಕಾಶವಿದೆ. ಅಂತಹ ಒಂದು ಆರೋಗ್ಯಕರ ಚರ್ಚೆಗೆ ಶನಿವಾರ ಬಿ.ವಿ.ಕಕ್ಕಿಲಾಯ ಸ್ಮರಣೋತ್ಸವದ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮ ಸಾಕ್ಷಿಯಾಯಿತು. ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸಿಪಿಐ ಯುವನಾಯಕ ಕನ್ಹಯ್ಯಾ ಕುಮಾರ್ ಅವರಿಗೆ ಕಾನೂನು ವಿದ್ಯಾರ್ಥಿನಿ ಸೀಮಾ ಭಾಸ್ಕರ್​ ಅವರು, ಒಂದು ರಾಷ್ಟ್ರ, ಜೈ ಶ್ರೀರಾಮ್​ ವಿಚಾರವಾಗಿ ಕೇಳಿದ ಪ್ರಶ್ನೆಗೆ ಕನ್ಹಯ್ಯಾ ಅವರು ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಂವಾದದಲ್ಲಿ ಸಭಿಕರ ಸಾಲಿನಿಂದ ಎದ್ದ ಯುವತಿ ಜೈಶ್ರೀರಾಮ್​ ಎಂದು ಘೋಷಣೆ ಕೂಗಿ, ಮಾತು ಆರಂಭಿಸಿದರು. "ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ನೀವು ಒಮ್ಮೆಯಾದರೂ ಜೈ ಹಿಂದ್, ಜೈ ಶ್ರೀರಾಮ್ ಹೇಳಿಬಿಡಿ. ನೀವೇಕೆ ಏಕರಾಷ್ಟ್ರದ ವಿರುದ್ಧ ಇದ್ದೀರಿ, ಅದನ್ನೂ ವಿವರಿಸಿ,"? ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಕನ್ಹಯ್ಯಾ ಕುಮಾರ್ ಅವರು, "ನೀವು ಏಕದ ಕುರಿತು ಹೇಳುತ್ತಿದ್ದೀರಿ. ಏಕೆ ‘ಏಕೈಕ’ವನ್ನು ಪ್ರಚಾರ ಮಾಡೋದಿಲ್ಲ. ಅದನ್ನೇಕೆ ಒಪ್ಪಿಕೊಳ್ಳುವುದಿಲ್ಲ ಎಂದು ಕೇಳುತ್ತಿದ್ದೀರಿ. ಆದರೆ ನಾನೇನು ಮಾಡಲಿ? ನಾನು ಹುಟ್ಟಿದ್ದು ಇಬ್ಬರ ಸಹಬೋಗದಿಂದ.  ನನ್ನ ಅಪ್ಪ ಮತ್ತು ಅಮ್ಮ ಇಬ್ಬರು ಮದುವೆಯಾಗಿದ್ದರಿಂದ ನಾನು ಹುಟ್ಟಿದೆ. ಯಾರೋ ಒಬ್ಬರಿಂದ ನಾನು ಹುಟ್ಟುವುದು ಅಸಾಧ್ಯವಿತ್ತು. ಅಲ್ಲಿ ಅಪ್ಪ ಮತ್ತು ಅಮ್ಮ ಇಬ್ಬರಿದ್ದರು.

ಏಕರಾಷ್ಟ್ರದ ಪರಿಕಲ್ಪನೆಯನ್ನು ನಾನೇಕೆ ಬೆಂಬಲಿಸುವುದಿಲ್ಲ ಎಂದು ನೀವು ಕೇಳುತ್ತಿದ್ದೀರಿ. ರಾಷ್ಟ್ರ ಯಾವತ್ತಿಗೂ ಒಂದೇ. ಭಾರತ ಇರುವುದು ಒಂದೇ, ಇದರಲ್ಲಿ ಸಂದೇಹವಿಲ್ಲ. ಆದರೆ, ಈ ಏಕಭಾರತವನ್ನು ಪ್ರತಿನಿಧಿಸುವ ಒಂದು ಸಂವಿಧಾನ ಏನಿದೆ, ಅದರಲ್ಲಿ 300ಕ್ಕಿಂತ ಹೆಚ್ಚು ವಿಧಿಗಳಿವೆ. ಮತ್ತು ನೀವು ಹೇಳುತ್ತಿರುವ ಏಕರಾಷ್ಟ್ರವನ್ನು ಪ್ರತಿನಿಧಿಸಲು ಇರುವ ಒಂದು ಸಂಸತ್ತು ಏನಿದೆ, ಅದರಲ್ಲೂ ಎರಡು ಸದನಗಳಿವೆ. ಒಂದು ಲೋಕಸಭೆ ಮತ್ತೊಂದು ರಾಜ್ಯಸಭೆ. ಮತ್ತು ಅದಕ್ಕೆ ಚುನಾಯಿತರಾಗಿ ಹೋಗುವುದು ಯಾರೋ ಒಬ್ಬರಲ್ಲ, ಪೂರಾ 545 ಸದಸ್ಯರು!. ಆದ್ದರಿಂದ ನಾವು ಪ್ರತಿಪಾದಿಸುವ ಏಕತೆ ಏನಿದೆ, ಅದು ವಿವಿಧತೆಯನ್ನು ಪ್ರತಿನಿಧಿಸುವಂಥದ್ದು. ಅಲ್ಲಿ ವೈವಿಧ್ಯತೆ ಇದೆ. ನೀವು ಜೈ ಶ್ರೀರಾಮ್ ಘೋಷಣೆ ಕುರಿತು ಎಂದು ಹೇಳಿದಿರಿ. ಖಂಡಿತವಾಗಿ ನೀವು ಹಾಗೆ ಘೋಷಣೆ ಹಾಕಿ, ಅದು ನಿಮ್ಮ ಸ್ವಾತಂತ್ರ್ಯ. ನೀವು ಜೈ ಶ್ರೀರಾಮ್ ಬೇಕಾದರೂ ಅನ್ನಿ, ಜೈ ಹನುಮಾನ್ ಬೇಕಾದರೂ ಅನ್ನಿ. ನಿಮಗೆ ಬೇಕಾದ ಘೋಷಣೆ ಕೂಗುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ಆದ್ದರಿಂದ ನಾನು ನಿಮ್ಮಲ್ಲಿ ಆಗ್ರಹಿಸುತ್ತೇನೆ, ನಿಮಗೆ ನಿಮ್ಮ ಘೋಷಣೆ ಕೂಗುವ ಸ್ವಾತಂತ್ರ್ಯ ನೀಡಿರುವ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿಬಿಡಿ," ಎಂದು ಉತ್ತರಿಸಿದರು.



ಮುಂದುವರೆದು, "ಇನ್ನು ನಾನು ಜೈ ಶ್ರೀರಾಮ್ ಘೋಷಣೆ ಕೂಗುವ ಬಗ್ಗೆ, ನಾನು ಹುಟ್ಟಿದ್ದೇ ಮಿಥಿಲೆಯಲ್ಲಿ. ನನ್ನ ಊರು ಬೇಗುಸರಾಯ್ ಮಿಥಿಲಾ ಪ್ರಾಂತ್ಯಕ್ಕೆ ಸೇರಿದ್ದು, ನಿಮಗೆ ಗೊತ್ತಿರಬಹುದು, ಮಿಥಿಲೆ ಶ್ರೀರಾಮನ ಮಾವನ ಮನೆ. ನಮ್ಮ ಊರಲ್ಲಿ ಪ್ರತಿವರ್ಷ ಸೀತಾ ರಾಮನ ವಿವಾಹ ಮಹೋತ್ಸವ ನಡೆಸುತ್ತಾರೆ. ಅಯೋಧ್ಯೆಯಿಂದ ತರುಣರು ರಾಮನ ವೇಷದಲ್ಲಿ ನಮ್ಮ ಊರಿಗೆ ಮೆರವಣಿಗೆ ಬರುತ್ತಾರೆ. ನಾವು ಹೆಣ್ಣಿನ ಕಡೆಯವರು. ಅವರು ಗಂಡಿನ ಕಡೆಯವರು. ನಮ್ಮ ಪ್ರಾಂತ್ಯದಲ್ಲಿ ಬೀಗರನ್ನು ಬೈಗುಳದ ಮೂಲಕ ಸ್ವಾಗತಿಸುವ ಪದ್ಧತಿ ಇದೆ. ನಾವು ರಾಮನನ್ನು ನಿಂದಿಸುತ್ತಾ ಸ್ವಾಗತ ಕೋರುತ್ತೇವೆ. ರಾಮನನ್ನು ಹಾಸ್ಯ ಮಾಡುತ್ತೇವೆ. ಇದು ನಮ್ಮಲ್ಲಿ ಪಾರಂಪರಿಕವಾಗಿ ನಡೆದು ಬಂದ ರೂಢಿ. ಇದು ನಮ್ಮ ನೆಲದ ಸಂಸ್ಕೃತಿ. ಅದೂ ಅಲ್ಲದೆ ನಾನು ಹುಟ್ಟಿ ಬೆಳೆದ ಸಂಸ್ಕೃತಿಯಲ್ಲಿ ಯಾವ ದೇವರನ್ನೂ ಏಕವಾಗಿ ಸ್ಮರಿಸುವುದಿಲ್ಲ. ರಾಮನನ್ನು ಸೀತಾರಾಮ ಎಂದೂ ಕೃಷ್ಣನನ್ನು ರಾಧಾಕೃಷ್ಣ ಎಂದೂ ಜೋಡಿಯಾಗಿ ಸ್ಮರಿಸುತ್ತೇವೆ, ಪೂಜಿಸುತ್ತೇವೆ. ಇದು ನಾನು ಬೆಳೆದ ನೆಲದ ಪರಂಪರೆ. ನನ್ನ ಪರಿಸರದ ಸಂಸ್ಕೃತಿ. ನೀವೇನಾದರೂ ಪಿಎಚ್​ಡಿ ಸಂಶೋಧನೆ ಮಾಡುವುದಾದರೆ, ಈ ದೇಶದಲ್ಲಿ ಎಷ್ಟು ರಾಮಾಯಣಗಳಿವೆಯೋ ಅವುಗಳ ಮೇಲೆ ಸಂಶೋಧನೆ ಮಾಡಿ. ನನಗೆ ತಿಳಿದಿರುವಂತೆ ಈ ದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ. ನಾನೊಮ್ಮೆ ಹಿಮಾಚಲಕ್ಕೆ ಹೋಗಿದ್ದೆ. ಅಲ್ಲಿ ತ್ರಿಲೋಕನಾಥ ಮಂದಿರವಿದೆ. ನೀವು ಈ ದೇಶವನ್ನು ಸುತ್ತಾಡಬೇಕು. ಆಗ ನಿಮಗೆ ಈ ದೇಶದ ನಿಜ ಸೌಂದರ್ಯ ತಿಳಿಯುತ್ತದೆ. ನಮ್ಮ ದೇಶದ ಅಗಾಧತೆ ಎದುರು ನಾವೆಷ್ಟು ತುಚ್ಛರು ಅನ್ನುವುದು ಅರ್ಥವಾಗುತ್ತದೆ. ಈ ತ್ರಿಲೋಕನಾಥ ಮಂದಿರದಲ್ಲಿ ಭಗವಾನ್ ಬುದ್ಧನ ಮೂರ್ತಿ ಇದೆ. ಅದರ ತಲೆ ಮೇಲೆ ಶಿವನ ಮೂರ್ತಿಯನ್ನು ಇರಿಸಲಾಗಿದೆ. ಈ ಮಂದಿರಕ್ಕೆ ಮೊದಲು ಹಿಂದೂ ಸಾಧು ಬರುತ್ತಾರೆ. ಪ್ರಾರ್ಥನೆ ಸಲ್ಲಿಸುತ್ತಾರೆ. ಅದಾದ ನಂತರ ಬೌದ್ಧ ಬಿಕ್ಕುಗಳು ಬರುತ್ತಾರೆ, ಪ್ರದಕ್ಷಿಣೆ ಮಾಡಿ, ನಮಸ್ಕಾರ ಹಾಕುತ್ತಾರೆ. ಇದು ಈ ದೇಶದ ವೈಶಿಷ್ಟ್ಯ. ಇದು ಹಿಂದೂಸ್ಥಾನದ ವೈಶಿಷ್ಟ್ಯ," ಎನ್ನುವ ಮೂಲಕ ತಮ್ಮ ಊರು ಹಾಗೂ ದೇಶದ ಸಂಸ್ಕೃತಿಯನ್ನು ಬಿಚ್ಚಿಡುತ್ತಾರೆ.

ಇದನ್ನು ಓದಿ: ಲೋಕಸಭಾ ಚುನಾವಣೆ: ಬಿಹಾರ ಬೇಗುಸರಾಯ್​​ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕನ್ನಯ್ಯ ಕುಮಾರ್​​ ಕಣಕ್ಕೆ
Loading...

"ಲಾಹೋರ್ ಜಿಲ್ಲೆಯಲ್ಲಿ ಒಂದು ರಾಮಾಯಣ ಪ್ರಚಲಿತದಲ್ಲಿದೆ. ಅದು ಲಾಹೋಲಿ ಭಾಷೆಯಲ್ಲಿದೆ. ಆ ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುವುದಿಲ್ಲ, ಬದಲಿಗೆ, ಸೀತೆ ರಾವಣನ ಮಗಳು! ಮತ್ತು ರಾಮ ಸೀತೆಯನ್ನು ಪ್ರೇಮಿಸಿ ಮದುವೆಯಾಗುತ್ತಾನೆ. ಈ ಕಾರಣದಿಂದ ರಾಮ ರಾವಣರ ನಡುವೆ ಯುದ್ಧ ನಡೆಯುತ್ತದೆ. ಇದು ಲಾಹೋಲಿ ರಾಮಾಯಣ ಹೇಳುವ ಕಥೆ. ಇದು ಹಿಂದೂಸ್ಥಾನದ ವೈಶಿಷ್ಟ್ಯ. ಇಂಥವನ್ನೆಲ್ಲ ಯಾರು, ಯಾಕಾಗಿ ನಿಮ್ಮ ತಲೆಯೊಳಗೆ ತುಂಬಿದ್ದಾರೋ ನನಗೆ ಗೊತ್ತಿಲ್ಲ. ಈ ದೇಶದಲ್ಲಿ ಜನಿಸುವುದೇ ಒಂದು ಗೌರವದ ವಿಷಯ. ನೀವು ಹಿಮಾಚಲಕ್ಕೆ ಹೋದರೆ ನಿಮಗೆ ಸ್ವಿಟ್ಜರ್​ಲೆಂಡ್​ಗೆ ಹೋದ ಅನುಭವವಾಗುತ್ತದೆ. ಗೋವಾ ಅಥವಾ ಮಂಗಳೂರು ಸಮುದ್ರದ ತೀರಕ್ಕೆ ಬಂದರೆ, ಮಿಯಾಮಿ ಬೀಚ್​ನಲ್ಲಿ ಮಲಗಿದ ಅನುಭವವಾಗುತ್ತದೆ. ಈ ದೇಶದ ಮೈದಾನಗಳಲ್ಲಿ ಅಲೆದಾಡಿದರೆ, ಅವು ಅಮೆರಿಕಾದ ಹಸಿರು ಮೈದಾನಗಳಿಗಿಂತ ಎಷ್ಟು ಅಗಾಧವಾಗಿದೆ ಅನ್ನೋದು ತಿಳಿಯುತ್ತದೆ. ಆದರೂ ಒಟ್ಟಾರೆಯಾಗಿ ಇದು ಒಂದು ದೇಶ. ಇದು ನಮ್ಮ ದೇಶ. ನಿಮ್ಮ ದೇಶ ನಿಮ್ಮದು. ನಿಮ್ಮ ತಾಯಿ ನಿಮ್ಮವಳು. ನೀವು ನಿಮ್ಮ ತಾಯಿಯನ್ನು ಪ್ರೀತಿಸುವುದು ನಿಮ್ಮ ಖಾಸಗಿ ವಿಷಯ. ಹಾಗಂತ ಯಾರಾದರೂ ಯಾವುದೇ ಬಣ್ಣದ ಬಾವುಟ ಹಿಡಿದು ಬಂದು, ಜೈ ಶ್ರೀ ರಾಮ್ ಎಂದೋ, ಇಂಕ್ವಿಲಾಬ್ ಜಿಂದಾಬಾದ್ ಎಂದೋ ಘೋಷಣೆ ಕೂಗುತ್ತಾ ಬಂದು, 'ನೀನು ನಿನ್ನ ತಾಯಿಯನ್ನು ಪ್ರೀತಿಸುವುದೇ ನಿಜವಾದರೆ, ಹೇಗೆ ಪ್ರೀತಿಸುತ್ತೀಯಾ ತೋರಿಸು' ಅಂದರೆ, ಆಗ ನಿಮ್ಮ ಉತ್ತರ ಏನಿರುತ್ತದೆ? ಈ ದೇಶ ನನ್ನದು. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ. ನಾನು ಅದನ್ನು ನನ್ನ ಎದೆಯಲ್ಲಿ ಹೊತ್ತು ತಿರುಗುತ್ತೇನೆ," ಎಂದು ಯುವತಿಯ ಏಕತೆ, ಜೈ ಶ್ರೀರಾಮ್​ ಘೋಷಣೆ ಪ್ರಶ್ನೆಗೆ ಉತ್ತರ ನೀಡಿದರು.
First published:August 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...