ಮುಂಬೈ (ಸೆಪ್ಟೆಂಬರ್ 11); ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ಮಹಾರಾಷ್ಟ್ರದ ಶಿವಸೇನೆ ಸರ್ಕಾರದ ನಡುವಿನ ಜಟಾಪಟಿ ಇದೀಗ ತಾರಕಕ್ಕೇರಿದೆ. ಈ ನಡುವೆ ಕಂಗನಾ ಅಭಿಮಾನಿಗಳು ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಕಳೆದ ಎರಡು ಮೂರು ದಿನಗಳಿಂದ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ ಎಂಬುದು ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಶಿವಸೇನೆ ನಾಯಕ ಸಂಜಯ್ ರೌತ್ ಅವರಿಗೂ ಸಹ ಓರ್ವ ಕಂಗನಾ ರನೌತ್ ಅಭಿಮಾನಿ ಬೆದರಿಕೆ ಕರೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಗುರುವಾರ ತಡರಾತ್ರಿ ಈತ ದಕ್ಷಿಣ ಕೋಲ್ಕತ್ತಾದಿಂದ ಬೆದರಿಕೆ ಮಾಡಿದ್ದು ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರ ಸಂಜೆ ವೇಳೆಗೆ ಶಿವಸೇನೆ ಮುಖಂಡ ಸಂಜಯ್ ರೌತ್ ಅವರಿಗೆ ಕರೆ ಮಾಡಿದ್ದ ಕಂಗನಾ ಅಭಿಮಾನಿ, "ಕಂಗನಾ ವಿಚಾರದಲ್ಲಿ ನೀವು ತಲೆ ಹಾಕದೆ ಇರುವುದು ಒಳ್ಳೆಯದು. ಇಲ್ಲದಿದ್ದರೆ ಮುಂದಿನ ಪರಿಣಾಮಗಳು ಬೀಕರವಾಗಿರಲಿದೆ" ಎಂದು ಬೆದರಿಕೆ ಹಾಕಿದ್ದರು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕೋಲ್ಕತ್ತಾದ ಟೋಲಿಗಂಗೆ ಎಂಬಲ್ಲಿ ವಾಸವಿರುವ ನಿವಾಸಿ ಪಲಾಶ್ ಬೋಸ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. "ಮುಂಬೈ ಪೊಲೀಸರ ತಂಡ ಈಗಾಗಲೇ ಈತನನ್ನು ಬಂಧಿಸಿ ಈತನನ್ನು ಮುಂಬೈನಲ್ಲೇ ರಿಮಾಂಡ್ ಮಾಡುವ ಸಂಬಂಧ ಅಲಿಪೋರ್ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದಾರೆ" ಎಂದು ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಕಲಬುರ್ಗಿಯಲ್ಲಿ 6 ಕೋಟಿ ಮೌಲ್ಯದ 1200 ಕೆ.ಜಿ ಗಾಂಜಾ ಪತ್ತೆ; ಬಂಧಿತ ಆರೋಪಿ ಬಿಜೆಪಿ ಕಾರ್ಯಕರ್ತನೇ?
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ಕಾರ್ಯವೈಖರಿಯ ಕುರಿತು ಹಲವು ದಿನಗಳಿಂದ ನಟಿ ಕಂಗನಾ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಪರಿಣಾಮ ಕಂಗನಾ ರನೌತ್ ಮತ್ತು ಶಿವಸೇನೆ ಮುಖಂಡರು ನಡುವೆ ಈ ಸಂಬಂಧ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಈ ನಡುವೆ ಶಿವಸೇನಾ ಮುಖಂಡರ ಕುರಿತು ಆರೋಪ ಮಾಡಿದ್ದ ನಟಿ ಕಂಗನಾ, ಸೇನಾ ಮುಖಂಡರು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದಿದ್ದರು. ಅಲ್ಲದೆ, ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ