HOME » NEWS » National-international » KANGANA RANAUT TO FACE DRUGS PROBE AMID ROW WITH MAHARASHTRA GOVERNMENT MAK

ಡ್ರಗ್ಸ್‌ ಮಾಫಿಯಾ ಜೊತೆಗೆ ನಂಟು?; ಮುಂಬೈ ಪೊಲೀಸರ ತನಿಖೆ ಎದುರಿಸಲಿದ್ದಾರೆ ನಟಿ ಕಂಗನಾ

ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ನಡುವೆ ಇಷ್ಟು ದಿನ ಮಾತಿನ  ಚಕಮಕಿಗಷ್ಟೇ ಸೀಮಿತವಾಗಿದ್ದ ವಿವಾದ ಇದೀಗ ಡ್ರಗ್ಸ್‌ ಮಾಫಿಯಾ ವಿಚಾರಣೆ ಹಂತಕ್ಕೆ ತೆರಳಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ನಟಿ ಪೊಲೀಸರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಪೊಲೀಸರ ವಿಚಾರಣೆ ನಂತರ ಈ ಪ್ರಕರಣ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

news18-kannada
Updated:September 11, 2020, 10:12 PM IST
ಡ್ರಗ್ಸ್‌ ಮಾಫಿಯಾ ಜೊತೆಗೆ ನಂಟು?; ಮುಂಬೈ ಪೊಲೀಸರ ತನಿಖೆ ಎದುರಿಸಲಿದ್ದಾರೆ ನಟಿ ಕಂಗನಾ
ನಟಿ ಕಂಗನಾ.
  • Share this:
ಮುಂಬೈ (ಸೆಪ್ಟೆಂಬರ್‌ 11); ಇಡೀ ದೇಶದ ಗಮನ ಸೆಳೆದಿರುವ ಹಾಗೂ ಹಲವು ನಟಿಯರ ಬಂಧನಕ್ಕೂ ಕಾರಣವಾಗಿರುವ ಡ್ರಗ್ಸ್‌ ಮಾಫಿಯಾದ ಉರುಳು ಇದೀಗ ಬಾಲಿವುಡ್‌ ನಟಿ ಕಂಗನಾ ರನೌತ್‌ ಕೊರಳಿಗೂ ಸಿಕ್ಕಿಕೊಳ್ಳುವುದು ಬಹುತೇಕ ಖಚಿತವಾಗಿದೆ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಸಂಬಂಧ ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಕ್ಷರಶಃ ಯುದ್ಧವನ್ನೇ ಘೋಷಿಸಿದ್ದ, ಮುಂಬೈಯನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿದ್ದ ಕಂಗನಾ ರನೌತ್‌ ಅವರನ್ನು ಮುಂಬೈ ಪೊಲೀಸರು ಯಾವುದೇ ಸಮಯದಲ್ಲಿ ಡ್ರಗ್ಸ್‌ ಮಾಫಿಯಾ ಜೊತೆಗಿನ ನಂಟಿನ ಕುರಿತು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಖಾಸಗಿ ಚಾನೆಲ್ ಒಂದಕ್ಕೆ ನಟಿ ಕಂಗನಾ ಅವರ ಮಾಜಿ ಬಾಯ್‌ಫ್ರೆಂಡ್‌ ಅಧ್ಯಾಯನ್ ಸುಮನ್ ‌ 2016ರಲ್ಲಿ ನೀಡಿದ್ದ ಸಂದರ್ಶನದಿಂದಾಗಿ ಕಂಗನಾ ಇದೀಗ ಪೊಲೀಸ್‌ ಸಂಕಷ್ಟ ಎದುರಿಸುವಂತಾಗಿದೆ.

ನಟ ಅಧ್ಯಾಯನ್ ಸುಮನ್‌ ನೀಡಿರುವ ಸಂದರ್ಶನವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಈ ಸಂದರ್ಶನದ ಆಧಾರದ ಮೇಲೆ ಡ್ರಗ್ಸ್ ಮಾಫಿಯಾ ಮತ್ತು ನಟಿಗೆ ಇರುವ ಸಂಪರ್ಕದ ಕುರಿತು ತನಿಖೆ ನಡೆಸಲು ಅನುಮತಿ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಗೃಹ ಸಚಿವಾಲಯಕ್ಕೆ ಇಂದು ಪತ್ರ ಬರೆದಿದ್ದರು. ಗೃಹ ಇಲಾಖೆ ಪೊಲೀಸರ ಮನವಿಗೆ ಒಪ್ಪಿಗೆ ಸೂಚಿಸುತ್ತಿದ್ದಂತೆ ತನಿಖೆಯನ್ನು ಆರಂಭಿಸಲಾಗಿದೆ. ಹೀಗಾಗಿ ಶೀಘ್ರದಲ್ಲಿ ನಟಿಯನ್ನು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮುಂಬೈನ ಬಾಂದ್ರಾದಲ್ಲಿರುವ ಕಂಗನಾ ಅವರ ಕಚೇರಿ ಕಾನೂನು ಬಾಹೀರವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಆ ಕಟ್ಟಡವನ್ನು ತೆರವುಗೊಳಿಸಿದ ಕೇವಲ ಎರಡು ದಿನದ ನಂತರದ ಈ ಬೆಳವಣಿಗೆ ನಡೆದಿದೆ ಎಂಬುದು ಉಲ್ಲೇಖಾರ್ಹ.

ಈ ಕುರಿತು ಮಾಹಿತಿ ನೀಡಿರುವ ಗೃಹ ಸಚಿವ ಅನಿಲ್ ದೇಶ್‌ಮುಖ್, “ಕ್ವೀನ್ ಚಿತ್ರದ ನಾಯಕಿ ಕಂಗನಾ ರನೌತ್ ಮಾದಕ ವಸ್ತುಗಳನ್ನು ಬಳಸಿರುವ ಕುರಿತು ನಟ ಅಧ್ಯಾಯನ್ ಸುಮನ್ ನೀಡಿರುವ ಮಾಹಿತಿ ಆಧರಿಸಿ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ” ಎಂದಿದ್ದಾರೆ.

ಅಧ್ಯಾಯನ್ ಸುಮನ್ ನಟಿ ಕಂಗನಾ ಜೊತೆ ಡೇಟಿಂಗ್‌ನಲ್ಲಿದ್ದರು. ಈ ವೇಳೆ 2016ರಲ್ಲಿ ಅವರು ಖಾಸಗಿ ಚಾನೆಲ್‌ ಒಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ "ಪಾರ್ಟಿ ವೇಳೆ ನಟಿ ಕಂಗನಾ ರನೌತ್‌ ತಮ್ಮನ್ನು ಡ್ರಗ್ಸ್ ಬಳಸುವಂತೆ ಒತ್ತಾಯಿಸಿದ್ದರು" ಎಂದು ಆರೋಪಿಸಿದ್ದರು. ಈ ಆರೋಪದ ಮೇಲೆ ತನಿಖೆ ನಡೆಯಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ನೀವು ಓರ್ವ ಮಹಿಳೆಯಾಗಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮೌನವೇಕೆ?; ಸೋನಿಯಾ ಗಾಂಧಿಗೆ ಕಂಗನಾ ಪ್ರಶ್ನೆ

ಅಧ್ಯಾಯನ್ ಅವರ ಹೇಳಿಕೆಯನ್ನು ಆಧರಿಸಿ ಇಂದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಆದರೆ, ಈ ಕುರಿತು ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅಧ್ಯಾಯನ್, “ದಯವಿಟ್ಟು ಈ ವಿಚಾರದಲ್ಲಿ ನನ್ನ ಹೆಸರು ಎಳೆದು ತರಬೇಡಿ. 2016 ರಲ್ಲಿ ಈ ವಿಚಾರವನ್ನು ನಾನು ಮಾಧ್ಯಮಗಳ ಎದುರು ಹೇಳಿದಾಗ ನನ್ನನ್ನು ಅಪಹಾಸ್ಯ ಮಾಡಲಾಗಿತ್ತು. ಈಗ ನನ್ನ ಬಳಿ ಹೇಳಿಕೊಳ್ಳಲು ಏನೂ ಉಳಿದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆ ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ನಡುವೆ ಇಷ್ಟು ದಿನ ಮಾತಿನ  ಚಕಮಕಿಗಷ್ಟೇ ಸೀಮಿತವಾಗಿದ್ದ ವಿವಾದ ಇದೀಗ ಡ್ರಗ್ಸ್‌ ಮಾಫಿಯಾ ವಿಚಾರಣೆ ಹಂತಕ್ಕೆ ತೆರಳಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ನಟಿ ಪೊಲೀಸರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಪೊಲೀಸರ ವಿಚಾರಣೆ ನಂತರ ಈ ಪ್ರಕರಣ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.
Published by: MAshok Kumar
First published: September 11, 2020, 10:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories