ಡಾಕು ಸಿಎಂ ಎಂದು ಹೇಳಿ ಸಸ್ಪೆಂಡ್ ಆಗಿದ್ದ ಹೆಡ್​ಮಾಸ್ತರ್; ಅಮಾನತು ಆದೇಶ ರದ್ದುಮಾಡಿ ಮಾನವೀಯತೆ ಮೆರೆದ ಮ.ಪ್ರ. ಸಿಎಂ

ಅವರು ಆ ಹುದ್ದೆಗೆ ಏರಲು ಅದೆಷ್ಟು ಕಷ್ಟಪಟ್ಟಿರಬೇಕು. ಅವರನ್ನು ಅಮಾನತುಗೊಳಿಸಿದರೆ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಬಹುದು,” ಎಂದು ಕಮಲ್​ನಾಥ್ ಹೇಳಿದ್ದಾರೆ.

Vijayasarthy SN | news18
Updated:January 12, 2019, 10:48 PM IST
ಡಾಕು ಸಿಎಂ ಎಂದು ಹೇಳಿ ಸಸ್ಪೆಂಡ್ ಆಗಿದ್ದ ಹೆಡ್​ಮಾಸ್ತರ್; ಅಮಾನತು ಆದೇಶ ರದ್ದುಮಾಡಿ ಮಾನವೀಯತೆ ಮೆರೆದ ಮ.ಪ್ರ. ಸಿಎಂ
ಕಮಲ್ ನಾಥ್ ಅವರ ಫೈಲ್​ ಫೋಟೊ
  • News18
  • Last Updated: January 12, 2019, 10:48 PM IST
  • Share this:
ಭೋಪಾಲ್(ಜ. 12): ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ನಾಣ್ನುಡಿ ಕೇಳಿರುತ್ತೇವೆ. ಯಾವುದೋ ಆವೇಶದಲ್ಲಿ ನಾವಾಡುವ ಮಾತು ತಮ್ಮಿಡೀ ಜೀವನದ ಪಥವನ್ನೇ ಬದಲಿಸಿಬಿಡಬಹುದು. ಮಧ್ಯಪ್ರದೇಶದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕನ ವಿಚಾರದಲ್ಲೂ ಹೀಗೇ ಆಯಿತು. ಯಾವುದೋ ಕಾರ್ಯಕ್ರಮವೊಂದರಲ್ಲಿ ಶಿಕ್ಷಕ ಮುಕೇಶ್ ತಿವಾರಿ ಅವರು ಮಧ್ಯಪ್ರದೇಶ ಸಿಎಂ ಕಮಲನಾಥ್ ಮೊದಲಾದವರ ಹೆಸರುಗಳನ್ನು ಸಂಬೋದಿಸುತ್ತಾ ಡಕಾಯಿತರೆಂದು ಎಂದು ಟೀಕಿಸಿದ್ದರು. ಇವರ ಆ ಟೀಕಾಪ್ರಹಾರದ ವಿಡಿಯೋ ವೈರಲ್ ಆಗಿಹೋಗಿತ್ತು. ಕಾಂಗ್ರೆಸ್ ಮುಖಂಡರೊಬ್ಬರ ದೂರಿನ ಮೇರೆಗೆ ಜಬಲ್​ಪುರ್​ನ ಕಲೆಕ್ಟರ್ ಛಾವಿ ಭಾರದ್ವಜ್ ಅವರು ಮುಕೇಶ್ ತಿವಾರಿ ಅವರನ್ನು ಅಮಾನತು ಮಾಡಿದರು.

ಇಡೀ ಪ್ರಕರಣದ ಬಗ್ಗೆ ಮಾಹಿತಿ ಪಡೆದ ನೂತನ ಮುಖ್ಯಮಂತ್ರಿ ಕಮಲನಾಥ್ ಅವರು ಮಾನವೀಯತೆಯ ನೆಲಗಟ್ಟಿನಲ್ಲಿ ಹೆಡ್​ಮಾಸ್ತರ್ ಮುಕೇಶ್ ತಿವಾರಿ ಅವರನ್ನು ಕ್ಷಮಿಸಿ ಅಮಾನತು ಆದೇಶ ರದ್ದುಗೊಳಿಸಿದರೆಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ

“ವಾಕ್ ಸ್ವಾತಂತ್ರ್ಯ ಇರಬೇಕೆಂಬುದು ನನ್ನ ವಾದ. ಅವರ ವರ್ತನೆಯು ಅವರ ಅಮಾನತಿಗೆ ದಾರಿ ಮಾಡಿಕೊಟ್ಟಿದ್ದು ನಿಜ. ಆದರೆ, ಅವರು ಆ ಹುದ್ದೆಗೆ ಏರಲು ಅದೆಷ್ಟು ಕಷ್ಟಪಟ್ಟಿರಬೇಕು. ಅವರ ಕುಟುಂಬವೇ ಅವರನ್ನು ಅವಲಂಬಿಸಿರಬಹುದು. ಇಂಥ ಪರಿಸ್ಥಿತಿಯಲ್ಲಿ ಅವರನ್ನು ಅಮಾನತುಗೊಳಿಸಿದರೆ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಬಹುದು,” ಎಂದು ಮುಖ್ಯಮಂತ್ರಿ ಕಮಲ್​ನಾಥ್ ಅವರ ಅಂತಃಕರಣ ಮಿಡಿದಿದೆ.

“ನಿಯಮಾವಳಿ ಪ್ರಕಾರ ಅವರ ಅಮಾನತಿಗೆ ಸರಿಯಾದ ಕಾರಣವೇ ಇದೆ. ಆದರೆ, ವೈಯಕ್ತಿಕವಾಗಿ ನಾನು ಅವರನ್ನು ಕ್ಷಮಿಸಲು ಇಚ್ಛಿಸುತ್ತೇನೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು. ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡುವುದು ಒಬ್ಬ ಶಿಕ್ಷಕರ ಕೆಲಸ. ಇನ್ಮುಂದಾದರೂ ಅವರು ತಮ್ಮ ಕರ್ತವ್ಯದತ್ತ ಗಮನ ಹರಿಸುತ್ತಾರೆಂದು ಆಶಿಸುತ್ತೇನೆ,” ಎಂದು ಕಾಂಗ್ರೆಸ್​ನ ಮುಖಂಡರೂ ಆಗಿರುವ ಕಮಲನಾಥ್ ಹೇಳಿದರೆಂದು ಇಂಡಿಯನ್ ಎಕ್ಸ್​ಪ್ರೆಸ್ ಉಲ್ಲೇಖಿಸಿದೆ.
First published:January 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ