ಡಿ.17ಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಲಿರುವ ಕಮಲನಾಥ್; ಜ್ಯೋತಿರಾದಿತ್ಯಗೆ ನಿರಾಸೆ

ಎರಡೂ ರಾಜ್ಯಗಳಲ್ಲಿ ಹಿರಿಯರು ಮತ್ತು ಕಿರಿಯರ ನಡುವೆ ಸಿಎಂ ಪಟ್ಟಕ್ಕಾಗಿ ತೀವ್ರ ಪೈಪೋಟಿ ಇತ್ತು. ಆದರೆ, ಹಿರಿಯರಿಗೇ ಪಟ್ಟ ಕಟ್ಟಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ

Seema.R | news18
Updated:December 14, 2018, 11:30 AM IST
ಡಿ.17ಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಲಿರುವ ಕಮಲನಾಥ್; ಜ್ಯೋತಿರಾದಿತ್ಯಗೆ ನಿರಾಸೆ
ಕಮಲ್​ನಾಥ್
  • News18
  • Last Updated: December 14, 2018, 11:30 AM IST
  • Share this:
ನವದೆಹಲಿ (ಡಿ.13): ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಡ ರಾಜ್ಯಗಳ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ನಂತರ ಯಾರಾರಿಗೆ ಸಿಎಂ ಪಟ್ಟ ಕಟ್ಟಬೇಕೆಂಬ ತಲೆಬಿಸಿಯಲ್ಲಿದ್ದ ಕಾಂಗ್ರೆಸ್ ಇಂದು ಕೊನೆಗೂ ಮಧ್ಯಪ್ರದೇಶಕ್ಕೆ ನಾಯಕನನ್ನು ಆಯ್ಕೆ ಮಾಡಿದೆ. ಮಧ್ಯಪ್ರದೇಶದ ಸಿಎಂ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ಸಿಗ ಕಮಲನಾಥ್ ಅವರನ್ನು ಆರಿಸಲಾಗಿದೆ. ಇದರೊಂದಿಗೆ ಹಿರಿಯರ-ಕಿರಿಯರ ಪೈಪೋಟಿಯಲ್ಲಿ ಹಿರಿಯರೇ ಗೆದ್ದಂತಾಗಿದೆ. ಮಾಜಿ ಸಿಎಂ ಮಾಧವರಾವ್ ಸಿಂಧ್ಯ ಅವರ ಪುತ್ರ ಜ್ಯೋತಿರಾದಿತ್ಯ ಸಿಂಧ್ಯ ಅವರೂ ಸಿಎಂ ಸ್ಥಾನದ ರೇಸ್​ನಲ್ಲಿದ್ದರು. ಗುರುವಾರ ರಾತ್ರಿ ಕಮಲನಾಥ್ ಅವರನ್ನು ಆರಿಸಲು ಕಾಂಗ್ರೆಸ್ ನಿರ್ಧರಿಸಿತು.

9 ಬಾರಿ ಸಂಸದರಾಗಿ, 2014ರಲ್ಲಿ ಹಂಗಾಮಿ ಸ್ಪೀಕರ್​ ಆಗಿ  ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಕಮಲನಾಥ್​ ಮಧ್ಯಪ್ರದೇಶದ 18 ನೇ ಮುಖ್ಯಮಂತ್ರಿಯಾಗಿ ಡಿ.17ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅತ್ತ, ರಾಜಸ್ಥಾನದಲ್ಲೂ ಇದೇ ಸಮಸ್ಯೆ ಇದೆ. ಹಿರಿಯ ಕಾಂಗ್ರೆಸ್ಸಿಗ ಅಶೋಕ್ ಗೆಹ್ಲೋಟ್ ಹಾಗೂ ಕಿರಿಯ ಕಾಂಗ್ರೆಸ್ಸಿಗ ಸಚಿನ್ ಪೈಲಟ್ ಮಧ್ಯೆ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ. ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರಿಗೆ ಮಣೆ ಹಾಕಿದಂತೆ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡುವ ಸಾಧ್ಯತೆ ಇಲ್ಲದೇ ಇಲ್ಲ. ಇವತ್ತು ತಡರಾತ್ರಿ ಅಂತಿಮ ನಿರ್ಧಾರ ಬರುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಅವರು ವೈಯಕ್ತಿಕವಾಗಿ ಸಚಿನ್ ಪೈಲಟ್ ಪರವಾಗಿದ್ದಾರೆನ್ನಲಾಗಿದೆ. ಆದರೆ, ಸೋನಿಯಾ ಗಾಂಧಿ ಅವರು ಇಂದು ಸಂಜೆ ತಮ್ಮ ಮಗ ರಾಹುಲ್ ಗಾಂಧಿ ಅವರ ನಿವಾಸಕ್ಕೆ ತೆರಳಿ ತಮ್ಮ ಸಲಹೆಗಳನ್ನ ನೀಡಿರುವುದು ತಿಳಿದುಬಂದಿದೆ. ರಾಜಸ್ಥಾನದಲ್ಲಿ ಇಬ್ಬರಲ್ಲಿ ಯಾರಿಗೇ ಪಟ್ಟ ಕಟ್ಟಿದರೂ ಅಚ್ಚರಿ ಇಲ್ಲ.

ಮಧ್ಯಪ್ರದೇಶದಲ್ಲಿ ಬಹುಮತ ಪಡೆದ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್​ಗೆ ಬಹುಜನ ಸಮಾಜ ಪಕ್ಷ ಬೆಂಬಲ ನೀಡಿದೆ. 72 ವರ್ಷದ ಕಮಲನಾಥ್​ಗೆ ಈಗಾಗಲೇ ಎಲ್ಲ ಕಾಂಗ್ರೆಸ್ ಶಾಸಕರು ಬೆಂಬಲ ನೀಡಿದ್ದರೆನ್ನಲಾಗಿದೆ. ಅತ್ತ ಜ್ಯೋತಿರಾದಿತ್ಯ ಸಿಂದ್ಯ ಕೂಡ ತಮಗೂ ಅಪಾರ ಬೆಂಬಲವಿದೆ ಎಂದು ಹೈ ಕಮಾಂಡ್​ ಮುಂದೆ ವಾದ ಮಂಡಿಸಿದ್ದರು. ತಾವು ಕೂಡ ಮುಖ್ಯಮಂತ್ರಿಯಾಗುವ ಇರಾದೆ ಹೊಂದಿರುವುದಾಗಿ ಸಿಂದ್ಯ ತಿಳಿಸಿದ್ದರು.


ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕಮಲನಾಥ್​ ಅವರನ್ನು ಚುನಾವಣೆಯ ದೃಷ್ಟಿಯಿಂದಲೇ ದೆಹಲಿ ರಾಜಕಾರಣಕ್ಕೆ ಕೋಕ್​ ಕೊಡಿಸಿ ರಾಜ್ಯ ಮರಳುವಂತೆ ಕಾಂಗ್ರೆಸ್​ ಸೂಚನೆ ನೀಡಿತು. ಅಲ್ಲದೆ ಚುನಾವಣಾ ಸಮಯದಲ್ಲಿ ಅವರು ಪ್ರದರ್ಶಿಸಿದ 'ಮೃದು ಹಿಂದುತ್ವ' ಧೋರಣೆ ಕಾಂಗ್ರೆಸ್​ ಗೆಲುವಿಗೆ ಕಾರಣ ಎಂಬ ಚರ್ಚೆ ಕೂಡ ನಡೆದಿದೆ. ಈ ಹಿನ್ನೆಲೆಯಲ್ಲಿ ಕಮಲನಾಥ್​ಗೆ ಮುಖ್ಯಮಂತ್ರಿಯಾಗಲಿದ್ದು, ಸಿಂಧ್ಯಾ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಈ ಮೊದಲೇ ವರದಿಗಳು ಬಂದಿದ್ದವು.

ಇತ್ತ ರಾಜಸ್ಥಾನದಲ್ಲಿ ಗೆಹ್ಲೋಟ್​ ಅನುಭವ, ಪೈಲಟ್​ ಉತ್ಸಾಹ ಉತ್ತಮ ಕಾರ್ಯನಿರ್ವಹಿಸಿದ್ದು, ಯಾರಿಗಲಿದ್ದಾರೆ ಸಿಎಂ ಎಂಬು ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ.

2019ರ ಲೋಕಸಭಾ ಚುನಾವಣೆಗೆ ಗೆಹ್ಲೋಟ್​ ಅನುಭವ ಪಕ್ಷಕ್ಕೆ ಹೆಚ್ಚಿದ್ದರೆ, ರಾಜಸ್ಥಾನದಲ್ಲಿ ಪೈಲಟ್​ ಮಾಡಿದ ಜಾದುವನ್ನು ಕಡೆಗಣಿಸುವಂತಿಲ್ಲ ಈ ಹಿನ್ನಲೆ ಇಬ್ಬರು ನಾಯಕರ ನಡುವೆ  ಹಣಾಹಣಿ ಏರ್ಪಟ್ಟಿದೆ.

ಇದನ್ನು ಓದಿ: ಐದು ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬಿಜೆಪಿ ಸಖ್ಯ ತೊರೆಯಲು ಮುಂದಾಯಿತಾ ಶಿವಸೇನೆ?

ಆರುಗಂಟೆಗಳ ಕಾಲ ಹೈಕಮಾಂಡ್​ ನಡೆಸಿದ ಸಭೆಯಲ್ಲಿ ರಾಜಸ್ಥಾನದಲ್ಲಿ ಹೊಸದಾಗಿ ಆಯ್ಕೆಯಾದ 99 ಶಾಸಕರಲ್ಲಿ ಮೂರನೇ ಎರಡರಷ್ಟು ಜನ ಸಚಿನ್​ ಪೈಲಟ್​ ಮುಖ್ಯಮಂತ್ರಿಯಾಗುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಕಾಂಗ್ರೆಸ್​ನ ಇಬ್ಬರು ನಾಯಕರಿಗೂ ಬೇಸರವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಹುಲ್​ ಗಾಂಧಿ ಮೇಲಿದೆ. ಈ ಹಿನ್ನಲೆ ರಾಷ್ಟ್ರೀಯ ಮಟ್ಟದಲ್ಲಿ ಒಬ್ಬರನ್ನು ಬಳಸಿ ಕೊಂಡು ಮತ್ತೊಬ್ಬರನ್ನು ರಾಜಸ್ಥಾನದ ಆಡಳಿತ ನೋಡಿಕೊಳ್ಳುವ ಸೂತ್ರಕ್ಕೆ ರಾಹುಲ್​ ಮುಂದಾಗಲಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಆದರೆ, ಈ ಬಗ್ಗೆ ಎಲ್ಲಿಯೂ ರಾಹುಲ್​ ಗಾಂಧಿ ಅಧಿಕೃತವಾಗಿ ತಮ್ಮ ಕಾರ್ಯಕರ್ತರಿಗೆ ಇನ್ನು ಸುದ್ದಿ ನೀಡಿಲ್ಲ. ಈ ಆಯ್ಕೆ ಸಂಪೂರ್ಣವಾಗಿ ಗುಪ್ತವಾಗಿದ್ದು, ರಾಜಸ್ಥಾನದ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಕಾರ್ಯಕರ್ತರು ಸೇರಿದಂತೆ ದೇಶದ ಜನರಲ್ಲಿ ಮೂಡಿದೆ.

First published: December 13, 2018, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading