ಮಹಿಳೆಯರ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ನಿತ್ಯಾನಂದನಿಗಾಗಿ ಹುಡುಕಾಟ ನಡೆಸುತ್ತಿದೆ. ಆತನ ವಿರುದ್ಧ ಭಾರತದಲ್ಲಿ ಹತ್ತಾರು ಪ್ರಕರಣಗಳ ವಿಚಾರಣೆ ಬಾಕಿ ಇವೆ. ಆದರೆ, ಆತ ಮಾತ್ರ ಕೈಲಾಸ ಎಂಬ ದೇಶದಲ್ಲಿ ಗಣೇಶ ಚತುರ್ಥಿಯ ದಿನವಾದ ಇಂದು ಕೈಲಾಸದ ರಿಸರ್ವ್ ಬ್ಯಾಂಕ್ ತನ್ನ ನೋಟನ್ನು ಬಿಡುಗಡೆ ಮಾಡಿದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಭಾರತದಲ್ಲಿದ್ದ ಹತ್ತಾರು ಪ್ರಕರಣಗಳಿಂದ ಹೆದರಿದ್ದ ನಿತ್ಯಾನಂದ ನೇಪಾಳದ ಮೂಲಕ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದರೂ ಅವರು ಎಲ್ಲಿದ್ದಾರೆ ಎಂಬ ಕುರಿತು ಯಾರಿಗೂ ಖಚಿತ ಮಾಹಿತಿ ದೊರೆತಿರಲಿಲ್ಲ.
ಈ ನಡುವೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ನಿತ್ಯಾನಂದ ತಾನು ಒಂದು ದ್ವೀಪವನ್ನೇ ಕೊಂಡುಕೊಂಡಿದ್ದು ಅಲ್ಲಿ ಕೈಲಾಸ ಎಂಬ ದೇಶವನ್ನು ನಿರ್ಮಿಸಲಿದ್ದೇನೆ. ಈಗಾಗಲೇ ಲಕ್ಷಾಂತರ ಜನ ಇಲ್ಲಿಗೆ ಆಗಮಿಸಲು ಅಂತರ್ಜಾಲದ ಮೂಲಕ ವೀಸಾಗೆ ಮನವಿ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರು.
ಕೈಲಾಸ ಎಂಬುದು ಸ್ವತಂತ್ಯ್ರ ದೇಶವಾಗಿದ್ದು, ಇಲ್ಲಿಗೆ ನಾನೇ ಪ್ರಧಾನಿ. ಇಲ್ಲಿ ಪೊಲೀಸ್ ಕೋರ್ಟ್ ವ್ಯವಸ್ಥೆ ಇರಲಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಶಿಕ್ಷಣ ಮತ್ತು ವೈದ್ಯಕೀಯ ಉಚಿತವಾಗಿ ನೀಡಲಾಗುವುದು ಎಂದು ಹೇಳಿಕೊಳ್ಳುತ್ತಿದ್ದರು. ಈ ದೇಶಕ್ಕೆ ಕರೆನ್ಸಿ ಸಹ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.
ಅದರಂತೆ ಇಂದು ಕರೆನ್ಸಿ ಬಿಡುಗಡೆ ಮಾಡಿರುವುದಾಗಿ ಸ್ವತಃ ನಿತ್ಯಾನಂದ ತಿಳಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಬರಹವೊಂದನ್ನು ಪ್ರಕಟಿಸಿರುವ ಅವರು, "ಕೈಲಾಸದಲ್ಲಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ, ಕೈಲಾಸದ ರಿಸರ್ವ್ ಬ್ಯಾಂಕ್ ಅನ್ನು ಗಣಪತಿ, ಪರಮಾಶಿವ ಮತ್ತು ಗುರುಗಳ ಪಾದಕ್ಕೆ ಸಮರ್ಪಿಸುತ್ತಿದ್ದೇವೆ. ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ, ಜಗತ್ಗುರು ಮಹಾಸನ್ನೀಧನಂ ಅವರ ದೈವಿಕ ಪವಿತ್ರ ಭಗವಾನ್ ನಿತ್ಯಾನಂದ ಪರಮಾಶಿವಂ!
ಕೈಲಾಸಾ ಮತ್ತು ಅದರ ಸನ್ಯಾಸಿಗಳ ತಂಡವು 100 ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನವನ್ನು ಮಾಡಿದೆ. ಅಲ್ಲದೆ, ಕೈಲಾಸಾದ ಕರೆನ್ಸಿಗಳನ್ನು ಆಚರಣಾತ್ಮಕವಾಗಿ ಇಂದು ಬಿಡುಗಡೆ ಮಾಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ