Hekmatyar- ಅಫ್ಘನ್ ಬಂಡುಕೋರರಿಗೆ ಆಶ್ರಯ ಕೊಡಬೇಡಿ: ಭಾರತಕ್ಕೆ ‘ಕಾಬೂಲ್ ಹಂತಕ’ ಎಚ್ಚರಿಕೆ

ಗುಲ್ಬುದ್ದೀನ್ ಹೆಕ್​ಮತ್ಯಾರ್

ಗುಲ್ಬುದ್ದೀನ್ ಹೆಕ್​ಮತ್ಯಾರ್

ಭಾರತ ಈ ಹಿಂದೆ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದ ಸೋವಿಯತ್ ಒಕ್ಕೂಟ ಮತ್ತು ಅಮೆರಿಕಕ್ಕೆ ಬೆಂಬಲ ಕೊಟ್ಟು ದೊಡ್ಡ ತಪ್ಪು ಮಾಡಿದೆ. ಈಗಲೂ ಆ ಪ್ರಮಾದ ಮುಂದುವರಿಸಿದಿದ್ದರೆ ಒಳ್ಳೆಯದು ಎಂದು ಅಫ್ಘಾನಿಸ್ತಾನದ ಉಗ್ರ ಮುಖಂಡ ಹೆಟ್​ಮತ್ಯಾರ್ ಎಚ್ಚರಿಕೆ ಕೊಟ್ಟಿದ್ದಾರೆ.

  • News18
  • 5-MIN READ
  • Last Updated :
  • Share this:

    ನವದೆಹಲಿ, ಸೆ. 03: ಅಫ್ಘಾನಿಸ್ತಾನದಲ್ಲಿ ನಿರೀಕ್ಷಿಸಿದಂತೆ ಇವತ್ತು ತಾಲಿಬಾನ್ ಸರಕಾರ ರಚನೆಯಾಗುವ ಸಾಧ್ಯತೆ ಇಲ್ಲ. ಆದರೆ, ಹೊಸ ಸರ್ಕಾರದ ರೂಪುರೇಖೆ ಬಗ್ಗೆ ಬಹುತೇಕ ಅಂತಿಮ ನಿರ್ಧಾರ ಆಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಮುಲ್ಲಾ ಅಬ್ದುಲ್ ಗನಿ ಬರಾದರ್ ಅವರು ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಆದರೆ, ಪರಮೋಚ್ಚ ಅಧಿಕಾರವು ಹೈಬತುಲ್ಲಾ ಅಖುಂದಜಾದ (Haibatullah Akhundzada) ಅವರಲ್ಲೇ ಇರಲಿದೆ. ತಾಲಿಬಾನ್ ರಾಜಕೀಯ ವಿಭಾಗದ ಮುಖ್ಯಸ್ಥರಾಗಿರುವ ಅಬ್ದುಲ್ ಗನಿ ಬರಾದರ್ (Abdul Ghani Baradar) ಅವರ ಜೊತೆ ತಾಲಿಬಾನ್ ಸಂಸ್ಥಾಪಕ ಮುನ್ನಾ ಒಮರ್ ಮಗ ಮುಲ್ಲಾ ಮೊಹಮ್ಮದ್ ಯಾಕೂಬ್ ಹಾಗೂ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್​ಜಯ್ ಅವರೂ ಪ್ರಮುಖ ಹುದ್ದೆಗಳಲ್ಲಿ ಇರಲಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.


    ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ನಿರ್ಗಮಿತ ಅಧ್ಯಕ್ಷ ಅಶ್ರಫ್ ಗನಿ ಅಹ್ಮದ್​ಜೈ (Ashraf Ghani Ahmedzai) ಮೊದಲಾದವರೂ ನೂತನ ತಾಲಿಬಾನ್ ಸರ್ಕಾರದ ಭಾಗವಾಗಲಿದ್ದಾರೆ ಎಂಬ ಮಾತೂ ಇದೆ. ಹಾಗೆಯೇ, ಕಾಬೂಲ್ ಹಂತಕ (Kabul Butcher) ಎಂದೇ ಕುಖ್ಯಾತರಾಗಿರುವ ಹಿಜ್ಬ್-ಎ-ಇಸ್ಲಾಮೀ ಎಂಬ ಉಗ್ರ ಪಡೆಯ ಸಂಸ್ಥಾಪಕ ಗುಲ್ಬುದ್ದೀನ್ ಹೆಕ್​ಮತ್ಯಾರ್ (Gulbuddin Hekmatyar) ಕೂಡ ಹೊಸ ಸರ್ಕಾರದ ಭಾಗವಾಗಲು ಪ್ರಯತ್ನಿಸುತ್ತಿದ್ದಾರೆ. 1996ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಈತನದ್ದು ಬಹಳ ಆರ್ಭಟ ನಡೆದಿತ್ತು. 1992ರಿಂದ ನಾಲ್ಕು ವರ್ಷಗಳವರೆಗೆ ಕಾಬೂಲ್​ನಲ್ಲಿ ಈತನ ಉಗ್ರ ಪಡೆಗಳು ಸಾವಿರಾರು ನಾಗರಿಕರನ್ನ ಬಲಿತೆಗೆದುಕೊಂಡಿದ್ದರು. ಹೀಗಾಗಿಯೇ ಈತನನ್ನು ಕಾಬೂಲ್ ಹಂತಕ ಎನ್ನಲಾಗುತ್ತಿದೆ. 1993 ಮತ್ತು 1996ರಲ್ಲಿ ಇವರು ಎರಡು ಬಾರಿ ಅಫ್ಘಾನಿಸ್ತಾನದ ಪ್ರಧಾನ ಮಂತ್ರಿಯೂ ಆಗಿದ್ದರು. ಈಗ ತಾಲಿಬಾನ್ ಸರ್ಕಾರದ ಭಾಗವಾಗಲು ತುದಿಗಾಲಿನಲ್ಲಿದ್ದಾರೆ.


    ಇದೇ ವೇಳೆ, ಹೆಕ್​ಮತ್ಯಾರ್ ಅವರು ಭಾರತಕ್ಕೆ ಕೆಲ ಎಚ್ಚರಿಕೆಯ ಸಂದೇಶಗಳನ್ನೂ ನೀಡಿದ್ಧಾರೆ. ನ್ಯೂಸ್18 ವಾಹಿನಿ ಜೊತೆ ನೀಡಿದ ಸಂದರ್ಶನದಲ್ಲಿ ಈತ ಅಫ್ಘಾನಿಸ್ತಾನದ ನೂತನ ಸರ್ಕಾರವನ್ನು ವಿರೋಧಿಸುವ ಶಕ್ತಿಗಳಿಗೆ ಆಶ್ರಯ ಕೊಡಬೇಡಿ ಎಂದು ಭಾರತಕ್ಕೆ ತಾಕೀತು ಮಾಡಿದ್ದಾರೆ. ಆದರೆ, ಕಾಶ್ಮೀರ ವಿಚಾರದಲ್ಲಿ ತಲೆಹಾಕುವ ಆಸಕ್ತಿ ತಮಗಿಲ್ಲ ಎಂದು ಹೇಳಿದರಾದರೂ, ಅಫ್ಘಾನ್ ಬಂಡುಕೋರರಿಗೆ ಭಾರತ ಆಶ್ರಯ ಕೊಟ್ಟರೆ ಆಗ ಕಾಶ್ಮೀರ ವಿಚಾರವನ್ನು ಪರಿಗಣಿಸಬೇಕಾಗಬಹುದು ಎಂದು ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ಧಾರೆ.


    ಇದನ್ನೂ ಓದಿ: Ida Hurricane- ಅಮೆರಿಕದಲ್ಲಿ ಇಡಾ ಚಂಡಮಾರುತ ಅಬ್ಬರ; ನ್ಯೂಯಾರ್ಕ್​ನಲ್ಲಿ 41 ಸಾವು


    “ಅಫ್ಘನ್ ನೆಲವನ್ನು ಅತಿಕ್ರಮಿಸಿದ ಶಕ್ತಿಗಳಿಗೆ (ಸೋವಿಯತ್ ಒಕ್ಕೂಟ ಮತ್ತು ಅಮೆರಿಕ) ಜೋಡಿತವಾಗಿರುವ ಗುಂಪುಗಳನ್ನ ಬೆಂಬಲಿಸಿ ಭಾರತ ಐತಿಹಾಸಿಕ ಪ್ರಮಾದಗಳನ್ನ ಮಾಡಿದೆ. ಅಫ್ಘಾನಿಸ್ತಾನದ ವಿಷಯದಲ್ಲಿ ಭಾರತ ತನ್ನ ಆ ವಿಫಲ ನೀತಿಯನ್ನ ಇನ್ನಾದರೂ ಕೈಬಿಡಬೇಕು” ಎಂದು ಪಾಕ್ ಬೆಂಬಲಿತ ಹಿಜಬ್-ಎ-ಇಸ್ಲಾಮೀ ಸಂಘಟನೆಯ ಮುಖ್ಯಸ್ಥನೂ ಆಗಿರುವ ಹೆಕ್​ಮತ್ಯಾರ್ ಹೇಳಿದ್ದಾರೆ.


    ಇನ್ನೊಂದೆಡೆ, ತಾಲಿಬಾನ್​ನ ನಾಯಕರೊಬ್ಬರು ಪಾಕಿಸ್ತಾನದ ಟಿವಿ ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ, ಕಾಶ್ಮೀರ ವಿಚಾರದ ಬಗ್ಗೆ ಧ್ವನಿ ಎತ್ತುವ ಹಕ್ಕು ತಾಲಿಬಾನ್​ಗೆ ಇದೆ ಎಂದು ಹೇಳಿರುವುದು ತಿಳಿದುಬಂದಿದೆ. ಇದು ಭಾರತಕ್ಕೆ ಒಂದು ರೀತಿಯ ಎಚ್ಚರಿಕೆ ಕರೆಗಂಟೆಯಾಗಿದೆ. ಒಂದು ಮೂಲದ ಪ್ರಕಾರ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳ ಸಂಯೋಜನೆಯು ಭಾರತಕ್ಕೆ ಸಾಕಷ್ಟು ಘಾಸಿಕೊಡುವ ಕಾರ್ಯತಂತ್ರಗಳಿಗೆ ಎಡೆ ಮಾಡಿಕೊಡಬಹುದು ಎನ್ನಲಾಗಿದೆ.


    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

    Published by:Vijayasarthy SN
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು