ಕಾಬೂಲ್: ಅಪ್ಘಾನಿಸ್ತಾನ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಕಾಬೂಲ್ನಲ್ಲಿ ಪ್ರಬಲ ಬಾಂಬ್ ಒಂದು ನಿನ್ನೆ ರಾತ್ರಿ ಸ್ಫೋಟಗೊಂಡು ಎಂಟು ಮಂದಿ ಸಾವನ್ನಪ್ಪಿದ್ದು 18 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕಾಬೂಲ್‌ನ (Kabul Blast) ಶಿಯಾ ವಸತಿ ಪ್ರದೇಶದಲ್ಲಿ ನಡೆದ ಕಾಬೂಲ್ ಸ್ಫೋಟದ (Afghanistan Taliban Updates) ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (IS) ಶುಕ್ರವಾರ ಹೊತ್ತುಕೊಂಡಿದೆ. ತಾಲಿಬಾನ್‌ನ ಅತಿದೊಡ್ಡ ಭದ್ರತಾ ಸವಾಲಾಗಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯನ್ನು ಗುರುತಿಸಲಾಗಿದೆ. ಅತ್ಯಂತ ಜನನಿಬಿಡ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ನಗರದ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಮಾಹಿತಿ ನೀಡಿದ್ದಾರೆ.
ಮೊಹರಂನ ಮೊದಲ 10 ದಿನಗಳ ಸ್ಮರಣಾರ್ಥವಾಗಿ ಹಲವಾರು ಜನರು ಸೇರಿದ್ದರು ಎಂದು ವರದಿಯಾಗಿದೆ. ಸ್ಫೋಟದಿಂದ ಬೆಚ್ಚಿಬಿದ್ದ ಜನರು ನಂತರ ಗಾಯಾಳುಗಳಿಗೆ ಸಹಾಯ ಮಾಡಲು ಹಲವರು ಧಾವಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಚಿತ್ರಗಳು ಮತ್ತು ವೀಡಿಯೊಗಳಲ್ಲಿದೆ.
ತನ್ನ ಚಟುವಟಿಕೆಗಳನ್ನು ಹೆಚ್ಚಿಸಿಕೊಂಡ ಉಗ್ರ ಸಂಘಟನೆ
ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಪುನಃ ವಶಪಡಿಸಿಕೊಂಡಾಗಿನಿಂದ ತನ್ನ ಚಟುವಟಿಕೆಗಳನ್ನು ಹೆಚ್ಚಿಸಿಕೊಂಡಿದೆ. ಇಸ್ಲಾಮಿಕ್ ಸ್ಟೇಟ್ (ಐಎಸ್), ಕಠಿಣ ಉಗ್ರಗಾಮಿ ಗುಂಪು ಶುಕ್ರವಾರ ದಾಳಿ ನಡೆಸಿದ್ದು ತಾನೇ ಎಂದು ಘೋಷಿಸಿಕೊಂಡಿದೆ.
ಗುಂಡಿನ ಚಕಮಕಿಯೂ ನಡೆದಿತ್ತು
ಶುಕ್ರವಾರ ನಡೆದ ಸ್ಫೋಟದ ನಂತರ ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಐದು ಜನರು ಸಾವನ್ನಪ್ಪಿದರು. ಘರ್ಷಣೆಯಲ್ಲಿ ಇಬ್ಬರು ತಾಲಿಬಾನ್ ಪೊಲೀಸರು ಮತ್ತು ಮೂವರು ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ವರದಿ ಮಾಡಿದೆ.
ಇದನ್ನೂ ಓದಿ: Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್
ಕಾಬೂಲ್ ಪೊಲೀಸ್ ಮುಖ್ಯಸ್ಥರ ತಾಲಿಬಾನ್ ವಕ್ತಾರ ಖಾಲಿದ್ ಜದ್ರಾನ್, ಪೊಲೀಸರು ಬಂದೂಕುಧಾರಿಗಳ ಅಡಗುತಾಣದ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಪಶ್ಚಿಮ ಕಾಬೂಲ್‌ನ ನೆರೆಹೊರೆಯಲ್ಲಿ ಕನಿಷ್ಠ ಮೂವರನ್ನು ಕೊಂದಿದ್ದಾರೆ ಎಂದು ಹೇಳಿದರು. ಬಂದೂಕುಧಾರಿಗಳು ಐಎಸ್ ಸದಸ್ಯರು ಎಂದು ಜದ್ರಾನ್ ಕೂಡ ಹೇಳಿದ್ದರು.
ಏನಿದು ಇಸ್ಲಾಮಿಕ್ ಸ್ಟೇಸ್ ಉಗ್ರ ಸಂಘಟನೆ?
ಐಎಸ್ ಸಂಘಟನೆಯು 2014 ರಿಂದ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಲಿಬಾನ್ ಮತ್ತು ಐಎಸ್ ಎರಡೂ ಇಸ್ಲಾಂ ಧರ್ಮದ ತೀವ್ರ ಅನುಯಾಯಿಗಳಾಗಿದ್ದು ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲು ಗಮನಹರಿಸಿದೆ. ಆದರೆ ಐಎಸ್ ವಿಶ್ವದ ಇತರ ಭಾಗಗಳಲ್ಲಿ ಜಾಗತಿಕ ಜಿಹಾದ್‌ಗೆ ಕರೆ ನೀಡಿದೆ.
ಸಂಘಟನೆ ವಿಸ್ತರಿಸಲು ಪ್ಲಾನ್ ರೂಪಿಸುತ್ತಿದೆ ಐಎಸ್
ಜುಲೈ 2021 ರಲ್ಲಿ ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್‌ಎಸ್‌ಸಿ) ವರದಿಯು ಇರಾಕ್ ಮತ್ತು ಲೆವಂಟ್-ಖೋರಾಸನ್‌ನಲ್ಲಿರುವ ಐಎಸ್ ನಾಯಕರು ಯುಎಸ್ ಮತ್ತು ಅಫ್ಘಾನ್ ತಾಲಿಬಾನ್ ನಡುವಿನ ಶಾಂತಿ ಒಪ್ಪಂದವನ್ನು ತಿರಸ್ಕರಿಸಲು ಬಯಸಿದ್ದಾರೆ ಎಂದು ಉಲ್ಲೇಖಿಸಿತ್ತು. ಅಲ್ಲದೇ ಐಎಸ್ ಸಂಘಟನೆಯು ತಾಲಿಬಾನ್ ಮತ್ತು ಇತರ ಉಗ್ರಗಾಮಿಗಳನ್ನು ತನ್ನತ್ತ ಆಕರ್ಷಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: GST On Rice: ಅಕ್ಕಿ ಮೇಲಿನ ಜಿಎಸ್ಟಿ ಉಳಿಸಲು ತಮಿಳುನಾಡಿನಲ್ಲಿ ಹೊಸ ಉಪಾಯ!
ಇತ್ತೀಚಿಗೆ ತಾಲಿಬಾನ್ ಮತ್ತು ಐಎಸ್ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ತಾಲಿಬಾನ್ ಯೋಧರು ಸೇರಿದಂತೆ ಐವರು ಮೃತಪಟ್ಟಿದ್ದರು. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಸ್ಮರಣೆಯ ಆಚರಣೆಗಾಗಿ ಜನರು ತಯಾರಿ ನಡೆಸುತ್ತಿರುವಾಗಲೇ ಈ ಈ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ