ತಿರುವನಂತಪುರಂ (ಜೂನ್ 04); ಸ್ಫೋಟಕ ತುಂಬಿದ ಅನಾನಸ್ ತಿಂದು ಮೃತಪಟ್ಟ ಗರ್ಭಿಣಿ ಆನೆ ಹತ್ಯೆಯ ತನಿಖೆಯಲ್ಲಿ ಮೂವರು ಶಂಕಿತರನ್ನು ಗುರುತಿಸಲಾಗಿದೆ. ಇವರನ್ನು ಕೇಂದ್ರೀಕರಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಘಟನೆ ತನಿಖೆ ನಡೆಸಲಿದ್ದು, ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಜಿಲ್ಲಾ ಅರಣ್ಯ ಅಧಿಕಾರಿ ಇಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಶಿಕ್ಷೆ ನೀಡಿಯೇ ತೀರುತ್ತೇವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸ್ಟೋಟಕ ತುಂಬಿದ್ದ ವಸ್ತುವನ್ನು ತಿಂದು ಗರ್ಭಿಣಿ ಆನೆಯೊಂದು ಮೃತಪಟ್ಟಿತ್ತು. ಈ ಘಟನೆಗೆ ಪ್ರಸ್ತುತ ಇಡೀ ದೇಶದ ಪರಿಸರ ಮತ್ತು ವನ್ಯಜೀವಿ ಪ್ರಿಯರು ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರವೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡುವ ಮೂಲಕ ಪ್ರಕರಣದ ಕುರಿತು ಮಾತನಾಡಿರುವ ಕೇರಳದ ಸಿಎಂ ಪಿಣರಾಯಿ ವಿಜಯನ್, "ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ದುರಂತ ಘಟನೆಯಲ್ಲಿ ಗರ್ಭಿಣಿ ಆನೆಯೊಂದು ಪ್ರಾಣ ಕಳೆದುಕೊಂಡಿದೆ. ನಿಮ್ಮಲ್ಲಿ ಅನೇಕರ ನೋವು ನಮ್ಮನ್ನು ತಲುಪಿದೆ. ನಿಮ್ಮ ಕಾಳಜಿ ನಮಗೆ ವ್ಯರ್ಥವಾಗಿದೆ. ನಾವು ನಿಮಗೆ ಭರವಸೆ ನೀಡಲು ಬಯಸುತ್ತೇವೆ. ಈ ಪ್ರಕರಣದಲ್ಲಿ ನ್ಯಾಯವು ಮೇಲುಗೈ ಸಾಧಿಸುತ್ತದೆ.
ಮಾನವ-ವನ್ಯಜೀವಿ ಸಂಘರ್ಷದ ಹೆಚ್ಚುತ್ತಿರುವ ಘಟನೆಗಳ ಹಿಂದಿನ ಕಾರಣಗಳನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ. ಹವಾಮಾನ ಬದಲಾವಣೆಯು ಸ್ಥಳೀಯ ಸಮುದಾಯಗಳು ಮತ್ತು ಪ್ರಾಣಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು" ಎಂದು ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ .
ಅಲ್ಲದೆ, ಈ ಪ್ರಕರಣ ತನಿಖೆ ಚುರುಕುಗೊಂಡಿದ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ. ಆದರೆ, ಕೆಲವರು ಈ ದುರಂತವನ್ನು ದ್ವೇಷದ ಅಭಿಯಾನಕ್ಕೆ ಬಳಸುತ್ತಿದ್ದಾರೆ. ತಪ್ಪಾದ ವಿವರಣೆಗಳು ಮತ್ತು ಅರ್ಧ-ಸತ್ಯಗಳ ಮೇಲೆ ನಿರ್ಮಿಸಲಾದ ಸುಳ್ಳುಗಳನ್ನು ಬಳಸಿ ಸತ್ಯವನ್ನು ತೊಡೆದುಹಾಕುವ ಕೆಲಸ ನಡೆಯುತ್ತಿದೆ. ಇದು ನಿಜಕ್ಕೂ ದುಖಃದ ಸಂಗತಿಯಾಗಿದ್ದು, ಕೂಡಲೇ ಇದನ್ನು ನಿಲ್ಲಿಸಿ. ಕೇರಳ ಯಾವಾಗಲೂ ಅನ್ಯಾಯದ ವಿರುದ್ಧದ ಆಕ್ರೋಶವನ್ನು ಗೌರವಿಸುವ ಸಮಾಜವಾಗಿದೆ" ಎಂದು ಕಿವಿಮಾತು ಹೇಳಿದ್ದಾರೆ.
"ಅರಣ್ಯ ಇಲಾಖೆ ಗುರುವಾರ ಒಬ್ಬ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದೆ. ಆನೆ ಬೆಲ್ಲ ಲೇಪಿತ ಪಟಾಕಿಯನ್ನು ತಿಂದಿರಬಹುದು. ಸಾಮಾನ್ಯವಾಗಿ ರೈತರು ಕಾಡುಹಂದಿಗಳ ಸಮಸ್ಯೆ ನಿವಾರಿಸಲು ಇದನ್ನು ಬಳಸುತ್ತಾರೆ. ಹೀಗಾಗೀ ಈವರೆಗೆ ನಂಬಿರುವಂತೆ ಆನೆ ತಿಂದಿರುವುದು ಪೈನಾಪಲ್ ಅಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೀಗ ಪೊಲೀಸ್ ವಿಚಾರಣೆಗೆ ಒಳಗಾಗಿರುವ ವ್ಯಕ್ತಿ ಆನೆಯನ್ನು ಕೊನೆಯದಾಗಿ ನೋಡಿದ ವ್ಯಕ್ತಿ ಆ ವೇಳೆ ಆತ ಕೃಷಿಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯದ ಮುಖ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಸುರೇಂದ್ರ ಕುಮಾರ್ ಮಾತನಾಡಿ, ಆನೆಗೆ ಪಟಾಕಿಗಳಿಂದ ತುಂಬಿದ ಅನಾನಸ್ ಅನ್ನು ಆಹಾರವಾಗಿ ನೀಡಿರುವುದು ಕೇವಲ ಒಂದು ಸಾಧ್ಯತೆಯಾಗಿದ್ದು, ಅದನ್ನು ತಳ್ಳಿಹಾಕಲಾಗಿಲ್ಲ. ಆದರೆ, ಈ ಕುರಿತು ನಮ್ಮಲ್ಲಿ ಇನ್ನೂ ಸಾಕಷ್ಟು ಪುರಾವೆಗಳಿಲ್ಲ ಎಂದು ನ್ಯೂಸ್ 18 ಗೆ ತಿಳಿಸಿದ್ದಾರೆ.
ಹಣ್ಣನ್ನು ಅಗಿಯುವಾಗ ಆನೆಯ ಬಾಯಿಯೊಳಗೆ ಪಟಾಕಿ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಆನೆಯ ದವಡೆ ಮುರಿದು ಬಿದ್ದಿರುವುದು ಸಹ ಕಂಡುಬಂದಿದೆ. ಈ ಕೃತ್ಯದ ಕ್ರೌರ್ಯ ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರು ಯಾರು? ಎಂಬುದು ಬಯಲಾಗಲಿದೆ.
ಇದನ್ನೂ ಓದಿ : ಇದು ಭಾರತೀಯ ಸಂಸ್ಕೃತಿಯೇ?; ಕೇರಳದ ಆನೆ ಸಾವಿಗೆ ವಿಷಾದಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸಚಿವ ಜಾವಡೇಕರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ