ನವದೆಹಲಿ(ಆ.27): ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ (CJI Uday Umesh Lalityu) ಅವರು ಶನಿವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಸಮ್ಮುಖದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ (Chief Justice Of India) ಪ್ರಮಾಣ ವಚನ ಸ್ವೀಕರಿಸಿದರು. ಅವರು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಸಿಜೆಐ ಆಗಿ ನ್ಯಾಯಮೂರ್ತಿ ಎನ್‌ವಿ ರಮಣ ಅವರ ಅವಧಿ ಆಗಸ್ಟ್ 26 ರಂದು ಕೊನೆಗೊಂಡಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಲಲಿತ್ ಅವರಿಗೆ ಸಿಜೆಐ ಆಗಿ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಎಲ್ಲ ಸಮಸ್ಯೆಗಳಿಗೆ Supreme Court ಬೇಕೆಂದರೆ.. ರಾಜ್ಯಸಭೆ, ಲೋಕಸಭೆ ಏತಕ್ಕೆ..?: ಮುಖ್ಯ ನ್ಯಾಯಮೂರ್ತಿ
ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಕೇವಲ 74 ದಿನಗಳ ಕಾಲ ಸುಪ್ರೀಂ ಕೋರ್ಟ್‌ನ ಮುಖ್ಯಸ್ಥರಾಗಿರುತ್ತಾರೆ. ಸಿಜೆಐ ಆಗಿ, ನ್ಯಾಯಮೂರ್ತಿ ಯು. ಯು. ಲಲಿತ್ ಅವರು ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಹಿಮಾ ಕೌಲ್, ನ್ಯಾಯಮೂರ್ತಿ ಎಸ್, ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಕೊಲಿಜಿಯಂನ ಮುಖ್ಯಸ್ಥರಾಗಿರುತ್ತಾರೆ. ಜಸ್ಟಿಸ್ ಬ್ಯಾನರ್ಜಿ ಅವರು ಸೆಪ್ಟೆಂಬರ್ 23 ರಂದು ನಿವೃತ್ತರಾಗಲಿದ್ದು, ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರು ಕೊಲಿಜಿಯಂ ಪ್ರವೇಶಿಸಲಿದ್ದಾರೆ. ನ್ಯಾಯಮೂರ್ತಿ ಯು. ಯು. ಲಲಿತ್ ಅವರು ನವೆಂಬರ್ 8 ರಂದು ಸಿಜೆಐ ಆಗಿ ನಿವೃತ್ತರಾಗಲಿದ್ದಾರೆ.
ತಮ್ಮ ಶಾಂತ ಮತ್ತು ಸರಳ ಸ್ವಭಾವಕ್ಕೆ ಹೆಸರುವಾಸಿ ನ್ಯಾಯಮೂರ್ತಿ ಲಲಿತ್
ಮಾಜಿ ಸಿಜೆಐ ನ್ಯಾಯಮೂರ್ತಿ ಎನ್‌ವಿ ರಮಣ ಅವರು ತಮ್ಮ 16 ತಿಂಗಳ ಅಧಿಕಾರಾವಧಿಯಲ್ಲಿ 29 ಭಾಷಣಗಳು ಮತ್ತು ಅನೇಕ ಹೇಇಕೆಗಳಿಂದ ಸುದ್ದಿಯಲ್ಲಿದ್ದರೆ, ನ್ಯಾಯಮೂರ್ತಿ ಯು. ಯು. ಅವರು ನ್ಯಾಯಾಲಯದ ಹೊರಗಿನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೆಲವೇ ಕೆಲವು ಹೇಳಿಕೆಗಳನ್ನು ನೀಡುತ್ತಾರೆ. ನ್ಯಾಯಾಲಯದಲ್ಲಿಯೂ ಅವರ ಕೆಲವು ವಾದಗಳಷ್ಟೇ ಮುನ್ನೆಲೆಗೆ ಬಂದಿವೆ. ಜಸ್ಟಿಸ್ ಲಲಿತ್ ಅವರು ಶಾಂತವಾಗಿ ತಮ್ಮ ಕೆಲಸವನ್ನು ಮಾಡುತ್ತಾರೆ. ನ್ಯಾಯದ ಮೇಲಿನ ಗೌರವವನ್ನು ಕಾಪಾಡಿಕೊಳ್ಳಲು, ಅವರು ಹತ್ತಾರು ಪ್ರಮುಖ ಪ್ರಕರಣಗಳ ವಿಚಾರಣೆಯಿಂದ ದೂರವಿರಲು ಒಂದು ಕ್ಷಣ ಕೂಡಾ ಯೋಚಿಸಲಿಲ್ಲ. ಐತಿಹಾಸಿಕ ಅಯೋಧ್ಯೆ-ಬಾಬ್ರಿ ಪ್ರಕರಣದ ವಿಚಾರಣೆಯಿಂದಲೂ ಅವರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.
ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದ ಜೊತೆ ನ್ಯಾಯಮೂರ್ತಿ ಲಲಿತ್ ಅವರ ಕುಟುಂಬಕ್ಕೆ ಆಳವಾದ ನಂಟು
ನ್ಯಾಯ ಮತ್ತು ಕಾನೂನು ಕ್ಷೇತ್ರದೊಂದಿಗೆ ಜಸ್ಟಿಸ್ ಲಲಿತ್ ಅವರ ಒಡನಾಟ ಬಾಲ್ಯದಿಂದಲೇ ಇದೆ. ಏಕೆಂದರೆ ಅವರ ಕುಟುಂಬವೇ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಒಂದು ರೀತಿಯಲ್ಲಿ ಅವರಿಗೆ ಕಾನೂನು ಮತ್ತು ನ್ಯಾಯದ ಜ್ಞಾನವು ಪರಂಪರೆಯಿಂದ ಬಂದಿದೆ ಎಂದು ಹೇಳಬಹುದು. ನ್ಯಾಯಮೂರ್ತಿ ಲಲಿತ್ ಅವರ ಅಜ್ಜ ರಂಗನಾಥ್ ಲಲಿತ್ ಗೌರವಾನ್ವಿತ ವಕೀಲರು. ಈ ಪ್ರಯಾಣದಲ್ಲಿ ಅವರ ಮಗ ಆರ್. ಯು. ಲಲಿತ್ ಅವರು ಒಂದು ಹೆಜ್ಜೆ ಮುಂದೆ ಇಟ್ಟರು. ಅವರನ್ನು ವಕೀಲರಿಂದ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ನ್ಯಾಯಮೂರ್ತಿ ಯು. ಯು. ಲಲಿತ್ ಅವರ ಕುಟುಂಬದಲ್ಲಿ ಮೂರನೇ ತಲೆಮಾರಿನ ವಕೀಲರಾಗಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಅವರು ಈಗ ದೇಶದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ತಲುಪಿದ್ದಾರೆ.
ಇದನ್ನೂ ಓದಿ: Supreme Court: ಕರ್ನಾಟಕದಿಂದ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಬಗ್ಗೆ ಸಿಜೆಐ ವ್ಯಂಗ್ಯ
ನ್ಯಾಯಮೂರ್ತಿ ಯು. ಆರ್. ಲಲಿತ್ ಅವರು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನಿವೃತ್ತರಾದಾಗ, ನ್ಯಾಯಮೂರ್ತಿ ಯು. ಯು. ಲಲಿತ್ ಅವರಿಗೆ 19 ವರ್ಷ ವಯಸ್ಸಾಗಿತ್ತು ಮತ್ತು ಅವರ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಪಿತ್ರಾರ್ಜಿತ ವಕೀಲಿ ವೃತ್ತಿಯ ಪರಿಣಾಮ ನ್ಯಾಯಮೂರ್ತಿ ಯು. ಯು. ಲಲಿತ್ ಅವರ ಮೇಲೂ ಇತ್ತು ಮತ್ತು ಶಾಲಾ ಶಿಕ್ಷಣದ ನಂತರ ಅವರು ಅದೇ ಹಾದಿಯಲ್ಲಿ ಮುನ್ನಡೆಯಲು ಪ್ರಾರಂಭಿಸಿದರು. ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿಗೆ ಪ್ರವೇಶ ಪಡೆದರು. 1983 ರಲ್ಲಿ ಕಾನೂನು ಪದವಿ ಪಡೆದ ನಂತರ, ನ್ಯಾಯಮೂರ್ತಿ ಯು. ಯು. ಲಲಿತ್ ಅವರು ಜೂನ್ 1983 ರಲ್ಲಿ ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಅಂದು ಆರಂಭವಾದ ವಕೀಲರ ಪಯಣ ಈಗ ದೇಶದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ತಲುಪಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ